|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ಘೋಷಣೆ

ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ಘೋಷಣೆ

ಜಮ್ಮುವಿನಲ್ಲಿ ಪತ್ರಿಕಾಗೋಷ್ಟಿ ಹಾಗೂ ಪಂಡಿತರ ಸಂಘಟನೆಯ ಭೇಟಿ



ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಾಶ್ಮೀರದಲ್ಲಿ ದೌರ್ಜನ್ಯಕ್ಕೊಳಗಾದ ಪಂಡಿತರ ಮಕ್ಕಳಿಗೆ ಉಚಿತ ವಸತಿ ಹಾಗೂ ಶಿಕ್ಷಣವನ್ನು ಘೋಷಿಸಲಾಗಿದೆ. ಈ ಬಗೆಗೆ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಹಾಗೂ ನಟ್ಟೋಜ ಫೌಂಡೇಶನ್‍ನ ಟ್ರಸ್ಟಿ ವೈದೇಹಿ ನಟ್ಟೋಜ ಅವರು ಇತ್ತೀಚೆಗೆ ಜಮ್ಮು ಕಾಶ್ಮೀರಕ್ಕೆ ತೆರಳಿ ಅಲ್ಲಿನ ಕಾಶ್ಮೀರಿ ಪಂಡಿತ್ ಸಂಘಟನೆಯನ್ನು ಭೇಟಿಯಾಗಿ ಲಿಖಿತ ಭರವಸೆ ನೀಡಿದ್ದಾರೆ. ಅಲ್ಲದೆ ಜಮ್ಮುವಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ಮಾಹಿತಿಯನ್ನು ಅಲ್ಲಿನ ಮಾಧ್ಯಮಗಳ ಮೂಲಕವೂ ತಿಳಿಸಿಕೊಡಲಾಗಿದೆ.


ನಟ್ಟೋಜ ಫೌಂಡೇಶನ್ ಟ್ರಸ್ಟ್ ತನ್ನ ಆಶ್ರಯದಲ್ಲಿ ಅಂಬಿಕಾ ವಿದ್ಯಾಲಯ (ಸಿಬಿಎಸ್‍ಇ), ವಸತಿಯುಕ್ತ ಹಾಗೂ ದೈನಂದಿನ ಓಡಾಟಕ್ಕನುಗುಣವಾಗಿ ಎರಡು ಪ್ರತ್ಯೇಕ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ಹಾಗೂ ಅಂಬಿಕಾ ಪದವಿ ಮಹಾವಿದ್ಯಾಲಯವನ್ನು ನಡೆಸುತ್ತಿದೆ. ಆರನೆಯ ತರಗತಿಯಿಂದ ತೊಡಗಿ ಪದವಿ ಹಂತದವರೆಗೆ ಯಾವುದೇ ತರಗತಿಯಲ್ಲಿ ಓದಲು ಬಯಸುವ ಕಾಶ್ಮೀರಿ ಪಂಡಿತರ ಮಕ್ಕಳಿಗೆ ಈ ಉಚಿತ ಸೌಲಭ್ಯ ದೊರಕಲಿದೆ. ಜತೆಗೆ ಊಟೋಪಚಾರ ವಸತಿಗಳೂ ಶುಲ್ಕರಹಿತವಾಗಿ ಲಭ್ಯವಾಗಲಿವೆ. ಈ ಮಧ್ಯೆ, ಪುತ್ತೂರಿನ ಕೆಲವು ಸಹೃದಯರೂ ಈ ಯೋಜನೆಗೆ ಕೈಜೋಡಿಸಲಾರಂಭಿಸಿದ್ದಾರೆ. ಕಾಶ್ಮೀರಿ ಪಂಡಿತರ ಮಕ್ಕಳಿಗೆ ತಮ್ಮ ಮನೆಯಲ್ಲಿಯೇ ಉಚಿತವಾಗಿ ಆಶ್ರಯ ಹಾಗೂ ಆಹಾರ ನೀಡಿ ಅಂಬಿಕಾ ಸಂಸ್ಥೆಗಳಲ್ಲಿ ಓದಿಸುವ ಹಿನ್ನೆಲೆಯಲ್ಲಿ ಆಸಕ್ತಿ ತೋರಿದ್ದಾರೆ.


ಜಮ್ಮುವಿನಲ್ಲಿ ನಡೆಸಿದ ಪತ್ರಿಕಾಗೋಷ್ಟಿಗೆ ಮಾಧ್ಯಮ ವಲಯದಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದೆ. ಅನೇಕ ವಾಹಿನಿಗಳು ಹಾಗೂ ಪತ್ರಿಕೆಗಳು ಈ ಉಚಿತ ಶಿಕ್ಷಣದ ಕೊಡುಗೆಗೆ ವ್ಯಾಪಕ ಪ್ರಚಾರ ನೀಡಿವೆ. ಸಂದರ್ಶನವನ್ನೂ ನಡೆಸಿವೆ. ಕಾಶ್ಮೀರಿ ಪಂಡಿತರ ಸಂಘಟನೆಯೂ ಈ ಕೊಡುಗೆಯ ಬಗೆಗೆ ಕೃತಜ್ಞತೆ ಸಲ್ಲಿಸಿದೆ. ಮಾತ್ರವಲ್ಲದೆ ಈಗಾಗಲೇ ನಾಲ್ಕಾರು ಮಂದಿ ಕಾಶ್ಮೀರಿ ಪಂಡಿತರು ಅಂಬಿಕಾ ಸಂಸ್ಥೆಗೆ ತಮ್ಮ ಮಕ್ಕಳನ್ನು ಸೇರ್ಪಡೆಗೊಳಿಸುವ ಬಗೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಇದಲ್ಲದೆ ದೌರ್ಜನ್ಯಕ್ಕೊಳಪಟ್ಟು ನಿರಾಶ್ರಿತರಾಗಿ ಆಗಮಿಸಿದ ಕಾಶ್ಮೀರಿ ಪಂಡಿತರು ಬೆಂಗಳೂರಿನಲ್ಲಿಯೂ ಅನೇಕ ಮಂದಿ ಇದ್ದು, ಅವರ ಮಕ್ಕಳಿಗೂ ಈ ಯೋಜನೆ ಲಭ್ಯವಾಗಲಿದೆ. ಆ ನೆಲೆಯಲ್ಲಿಯೇ ಕರ್ನಾಟಕದಲ್ಲೂ ಅಂಬಿಕಾ ಸಂಸ್ಥೆಯ ಕೊಡುಗೆಯ ಬಗೆಗೆ ಮರು ಪ್ರಕಟಣೆ ನೀಡಲಾಗುತ್ತಿದೆ.


ದೇಶದ ಬಗೆಗೆ, ನೊಂದವರ ಬಗೆಗೆ ಅಪಾರ ಕಾಳಜಿ ಹೊಂದಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್ ಇತ್ತೀಚೆಗಷ್ಟೇ ಬಿಡುಗಡೆಯಾದ 'ಕಾಶ್ಮೀರಿ ಫೈಲ್ಸ್' ಚಿತ್ರವನ್ನು ತನ್ನೆಲ್ಲಾ ವಿದ್ಯಾರ್ಥಿಗಳಿಗೆ ತೋರಿಸಿ ಕಾಶ್ಮೀರದ ಪಂಡಿತರ ಮೇಲಾದ ದೌರ್ಜನ್ಯದ ಕರಾಳ ಸತ್ಯವನ್ನು ಯುವ ಸಮುದಾಯದ ಮುಂದೆ ಅನಾವರಣಗೊಳಿಸಿ ಜಾಗೃತಿ ಮೂಡಿಸಿದೆ.


ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯ ತುಂಬಾ ಆಘಾತಕಾರಿಯಾದದ್ದು. ಹೇಗೆ ದೇಹದ ಯಾವುದೇ ಭಾಗಕ್ಕೆ ಗಾಯವಾದರೂ ನಾವು ತಕ್ಷಣ ಗಮನಹರಿಸುತ್ತೇವೆಯೊ, ಹಾಗೆಯೇ ದೇಶದ ಯಾವುದೇ ಭಾಗದಲ್ಲಿ ದೌರ್ಜನ್ಯ ನಡೆದರೂ ಅದಕ್ಕೆ ಸ್ಪಂದಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಸಾಮಾಜಿಕ ಹಾಗೂ ನೈತಿಕ ಜವಾಬ್ದಾರಿಯ ನೆಲೆಯಿಂದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿವೆ. 

-ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿಗಳು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post