ನಿಟ್ಟೆ: ‘ವಿದ್ಯಾರ್ಥಿದೆಸೆಯಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಾಹ ಸಿಕ್ಕರಷ್ಟೇ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುವಾಗಲು ಸಾಧ್ಯ. ಕ್ರೀಡೆಯೆಂಬುದು ಸ್ನೇಹಕ್ಕಾಗಿ ಹಾಗೂ ವಿನೋದಕ್ಕಾಗಿಯೂ ಆಡಬಹುದು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ನಿರಾಸೆಯೆಂಬ ಅಂಶ ನಮ್ಮೊಳಗೆ ಸೇರುವುದಿಲ್ಲ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ವಿಜಯ ಆಳ್ವ ಅಭಿಪ್ರಾಯಪಟ್ಟರು.
ಅವರು ಏ.28 ರಂದು ಎನ್.ಇ.ಟಿ ಕ್ಯಾಂಪಸ್‍ನ ಬಿ.ಸಿ.ಆಳ್ವಾ ಕ್ರೀಡಾ ಸಂಕೀರ್ಣದಲ್ಲಿ ನಡೆದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 36ನೇ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆನೀಡಿ ಮಾತನಾಡಿದರು. ‘ಸ್ಪರ್ಧೆ ಅಂದಮೇಲೆ ಸೋಲು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸುವ ಮುಕ್ತ ಮನೋಭಾವ ನಮ್ಮದಾಗಬೇಕು. ಕ್ರೀಡೆಯಿಂದ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವೂ ಉತ್ತಮಗೊಳ್ಳುತ್ತದೆ’ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 'ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿನ ವಿವಿಧ ಕ್ರೀಡಾಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಕೋವಿಡ್-19 ನಂತಹ ಕ್ಲಿಷ್ಟಕರ ಸಂದರ್ಭದಲ್ಲೂ ನಿಟ್ಟೆ ವಿದ್ಯಾಸಂಸ್ಥೆ ಕ್ರೀಡೆಗೆ ಉತ್ತಮ ಪ್ರೋತ್ಸಾಹ ನೀಡಿದೆ. ಇದರೊಂದಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಹಲವಾರು ಕ್ರೀಡಾಕೂಟಗಳನ್ನು ಆಯೋಜಿಸಲು ನಿರ್ದೇಶಿಸಿ ಕ್ರೀಡೆಗೆ ಬೆಂಬಲ ನೀಡಿರುವುದು ಶ್ಲಾಘನೀಯ' ಎಂದರು. ವೇದಿಕೆಯಲ್ಲಿ ಉಪಪ್ರಾಂಶುಪಾಲ ಡಾ. ಶ್ರೀನಿವಾಸ ರಾವ್ ಬಿ.ಆರ್, ಕ್ಯಾಂಪಸ್‍ನ ರೆಜಿಸ್ಟ್ರಾರ್ ಪ್ರೊ. ಯೋಗೀಶ್ ಹೆಗ್ಡೆ ಉಪಸ್ಥಿತರಿದ್ದರು.
ಕಾರ್ಯಕ್ರದಲ್ಲಿ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕೇತರ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಈ ಪಥಸಂಚಲನ ಸ್ಪರ್ಧೆಯಲ್ಲಿ ಎಂ.ಸಿ.ಎ ವಿಭಾಗ ಪ್ರಥಮ ಬಹುಮಾನ, ಇನ್ಫೋರ್ಮೇಶನ್ ಸೈನ್ಸ್ ವಿಭಾಗ ದ್ವಿತೀಯ ಹಾಗೂ ಕಂಪ್ಯೂಟರ್ ಸೈನ್ಸ್ ತೃತೀಯ ಬಹುಮಾನ ಗಳಿಸಿದೆ.
ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಪೂಜಾರಿ ಸ್ವಾಗತಿಸಿದರು. ಕ್ರೀಡಾಧಿಕಾರಿ ಶ್ಯಾಮ್‍ಸುಂದರ್ ವಂದಿಸಿದರು. ದೈಹಿಕ ಶಿಕ್ಷಣ ಸಲಹೆಗಾರ್ತಿ ಸೌಜನ್ಯ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ.ರೋಶನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ