|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರೀಕ್ಷೆ ಸಂದರ್ಭ ವಿದ್ಯಾರ್ಥಿಗಳ ಏಕಾಗ್ರತೆಗಾಗಿ ಯೋಗ

ಪರೀಕ್ಷೆ ಸಂದರ್ಭ ವಿದ್ಯಾರ್ಥಿಗಳ ಏಕಾಗ್ರತೆಗಾಗಿ ಯೋಗ


ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಓದುವ ಒತ್ತಡ ಹೆಚ್ಚಾಗುತ್ತಿದೆ. ಹೆಚ್ಚು ಅಂಕ ಗಳಿಸಿದರೆ ಮಾತ್ರ ಮುಂದಿನ ಕೋರ್ಸ್‌ಗಳಿಗೆ ಅವಕಾಶ ಗಿಟ್ಟಿಸುವುದು ಸುಲಭವಾಗುತ್ತದೆ.


ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಶೇಕಡಾ 90-95 ಮತ್ತು ಹೆಚ್ಚಿನ ಅಂಕಗಳಿಸುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಶೇಕಡಾ 95 ರಿಂದ 98 ಅಂಕ ಗಳಿಸಿದರೆ ಮಾತ್ರ ಸುಲಭದಲ್ಲಿ ಬೇರೆ ಬೇರೆ ರೀತಿಯ ಐಚ್ಚಿಕ ಕೋರ್ಸ್‌ಗಳಿಗೆ ಪ್ರವೇಶ ದೊರೆಯುವುದು. ಎಲ್ಲಾ ಸಾಧನೆಗೆ ಸಾಕಷ್ಟು ಸಿದ್ಧತೆ, ತಯಾರಿ ನಡೆಸಬೇಕಾಗುತ್ತದೆ. ಹೆಚ್ಚಿನ ಜ್ಞಾನ ಸಂಪಾದನೆಗಾಗಿ ಏಕಾಗ್ರತೆ ಅತ್ಯವಶ್ಯ. ಏಕಾಗ್ರತೆ ಸಂಪಾದಿಸಬೇಕಾದರೆ ಮನಸ್ಸಿನ ಚಂಚಲತೆ ನಿವಾರಣೆಯಾಗಬೇಕು. ‘ಮನಸ್ಸನ್ನು ಜಯಿಸಿದರೆ ಜಗತ್ತನ್ನೇ ಜಯಿಸಬಹುದು’ ಎಂದು ಸ್ವಾಮಿ ವಿವೇಕಾನಂದರು ಹೇಳಿರುವುದು ಇಂಥ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಎಂದು ಅನ್ವಯಿಸಿಕೊಳ್ಳಬೇಕು.


ಏಕಾಗ್ರತೆಯನ್ನು ಸಾಧಿಸಿಕೊಳ್ಳುವುದಕ್ಕೆ ಪ್ರಥಮವಾಗಿ ಮನಸ್ಸನ್ನು ನಿಯಂತ್ರಿಸಿಬೇಕು. ನಾವು ಹೇಳಿದಂತೆ ನಮ್ಮ ಮನಸ್ಸು ಕೇಳಬೇಕೇ ವಿನಾ ಮನಸ್ಸು ಹೇಳಿದಂತೆ ನಾವು ಕೇಳಬಾರದು. ನಾವು ದೇಹದ ಆರೋಗ್ಯಕ್ಕೆ ಒತ್ತು ಕೊಡುವಂತೆ ಮನಸ್ಸಿನ ಆರೋಗ್ಯಕ್ಕೂ ಒತ್ತು ಕೊಡುವುದಿಲ್ಲ ಆದ್ದರಿಂದ ಮಕ್ಕಳು ತಮ್ಮ ಮನಸ್ಸಿನ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕು. ನಮ್ಮ ಮನಸ್ಸನ್ನು ಯಮ, ನಿಯಮ, ಧ್ಯಾನ, ಸತ್ಸಂಗ, ಭಜನೆ, ಪೂಜೆ, ಕರ್ಮಯೋಗ, ಸದ್ವಿಚಾರಗಳು, ಪ್ರಾಣಾಯಾಮ ಇತ್ಯಾದಿಗಳಿಂದ ಶುದ್ದಗೊಳಿಸಬಹುದು. ಏಕಾಗ್ರತೆಗೆ ಶುದ್ದ ಮನಸ್ಸಿರಬೇಕು.

ಇನ್ನಷ್ಟು ಚಿತ್ರಗಳನ್ನು ವೀಕ್ಷಿಸಲು ಈ ಚಿತ್ರದ ಮೇಲೆ ಕ್ಲಿಕ್ ಮಾಡಿ. 👆

ವಿದ್ಯಾರ್ಥಿ ಜೀವನದ ಮುಖ್ಯ ಕರ್ತವ್ಯ ವಿದ್ಯಾರ್ಜನೆ ಮತ್ತು ಜ್ಞಾನ ಸಂಪಾದನೆ.

ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನ ಸಂಪಾದನೆಗಾಗಿ ಏಕಾಗ್ರತೆ ಸಾಧಿಸಲು ಯೋಗ ಬಹಳ ಸಹಕಾರಿಯಾಗುತ್ತದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರ ಬಂದಾಗ ಹೆಚ್ಚು ಓದುತ್ತಾರೆ. ಬ್ರಾಹ್ಮೀ ಮುಹೂರ್ತದಲ್ಲಿ ಬೆಳಿಗ್ಗೆ ಓದುವುದು ಉತ್ತಮ.


ವಿದ್ಯಾರ್ಥಿಗಳು ರಾತ್ರಿ ಕುರ್ಚಿಯಲ್ಲಿ ಕುಳಿತು ಗಂಟೆಗಟ್ಟಲೆ ಓದುತ್ತಾರೆ. ಈ ರೀತಿ ನಿದ್ರೆ ಬಿಟ್ಟು ಓದುವಾಗ ವಿದ್ಯಾರ್ಥಿಗಳಿಗೆ ಆಯಾಸ, ಬಳಲಿಕೆ ಆಗುತ್ತದೆ. ಬಳಲಿಕೆಯಿಂದ ಓದಿಗೆ ಏಕಾಗ್ರತೆ ನಿರಂತರವಾಗಿ ಲಭಿಸುವುದಿಲ್ಲ. ತುಂಬಾ ಹೊತ್ತು ಕುರ್ಚಿಯಲ್ಲಿ ಕುಳಿತು ಹೆಚ್ಚು ಓದುವ ವಿದ್ಯಾರ್ಥಿಗಳು ಎರಡು ಗಂಟೆಗೊಮ್ಮೆ ಸರಳ ಯೋಗದ ಮೂಲಕ ಆಗಾಗ ಲಘು ವಿಶ್ರಾಂತಿ ಪಡೆಯುವುದು ಆವಶ್ಯಕ.


ವಿದ್ಯಾರ್ಥಿಗಳು ಹೆಚ್ಚು ಹೊತ್ತು ಓದುವ ಸಂದರ್ಭದಲ್ಲಿ ವಿಶ್ರಾಂತಿಗಾಗಿ (8 ನಿಮಿಷ)


ಆಚರಿಸಬೇಕಾದ ಯೋಗದ ಸರಳ ಸೂತ್ರಗಳು:

• ಎರಡು ಕೈಗಳ ಬೆರಳುಗಳನ್ನು ಹೆಣೆದು ತಲೆಯ ಮೇಲೆ ಮೇಲಕ್ಕೆ ನೇರವಾಗಿ ಚಾಚಿ ನಿಟ್ಟುಸಿರು ಬಿಡುವುದು.

• ಮಕರಾಸನ ಭಂಗಿಯಲ್ಲಿ 2 ರಿಂದ 3 ನಿಮಿಷ ಯೋಗ.

• ಕುರ್ಚಿಯಲ್ಲಿ ಕುಳಿತುಕೊಂಡು ಬೆನ್ನು ಕುತ್ತಿಗೆ ನೇರ ಮಾಡಿ ಸುಖ ಪ್ರಾಣಾಯಾಮ 3 ರಿಂದ 6 ಬಾರಿ.


• ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಂಡು ಉಸಿರನ್ನು ಗಮನಿಸುವ ಸರಳ ಧ್ಯಾನ ಮಾಡಬೇಕು (ಸ್ವಲ್ಪ ಹೊತ್ತು)

• ನೆಲದ ಮೇಲೆ ನೆಟ್ಟಗೆ ಅತ್ತಿಂದಿತ್ತ ನಾಲ್ಕು ಸುತ್ತು ನಡೆಯುವುದು. ಓದಿದ ವಿಷಯವನ್ನೇ ಮನಸ್ಸಿನಲ್ಲೇ ಮೆಲುಕು ಹಾಕುತ್ತಾ ನಡೆಯಬಹುದು.

ಈ ರೀತಿ ಸರಳ ಸೂತ್ರಗಳನ್ನು ಮೇಲೆ ತಿಳಿಸಿರುವಂತೆ ಅಭ್ಯಾಸ ಮಾಡುವುದರಿಂದ ಮನಸ್ಸಿನ ಚಂಚಲತೆ, ಆಯಾಸ ನಿವಾರಣೆಯಾಗಿ ಮನಸ್ಸು ಪರಿಶುದ್ಧವಾಗುತ್ತದೆ; ನಿರ್ಮಲವಾಗುತ್ತದೆ.

ವಿದ್ಯಾರ್ಥಿಗಳು ದಿನ ನಿತ್ಯ ಆಚರಿಸುವ ಅಗತ್ಯದ ಯೋಗದ ವಿವರಗಳ ಪಟ್ಟಿ

• ಇಷ್ಟ ದೇವರ ಪ್ರಾರ್ಥನೆ, ಓಂಕಾರ ಧ್ಯಾನ.

• ಕ್ರಿಯಗಳಾದ ತ್ರಾಟಕ, ಕಪಾಲಭಾತಿ.

• ಬೆಳಿಗ್ಗೆ ದೇಹದ ಜಡತ್ವ ಹೋಗಲಾಡಿಸಲು ಸರಳ ವ್ಯಾಯಾಮಗಳು, ಹಾಗೂ ಸೂರ್ಯ ನಮಸ್ಕಾರಗಳು.

• ಯೋಗಾಸನ ಪಟ್ಟಿ:-ತಾಡಾಸನ, ವೃಕ್ಷಾಸನ, ಅರ್ಧ ಚಕ್ರಾಸನ, ಉತ್ತಾನಾಸನ, ಕುಳಿತುಕೊಂಡು ವಿಶ್ರಾಂತಿ, ಪದ್ಮಾಸನ, ವಜ್ರಾಸನ, ಶಶಾಂಕಾಸನ, ಉಷ್ಟ್ರಾಸನ, ವಕ್ರಾಸನ, ಸರ್ವಾಂಗಾಸನ, ಶೀರ್ಷಾಸನ, ಹಾಲಾಸನ, ಮಕರಾಸನ, ಭುಜಂಗಾಸನ, ಶವಾಸನ.

• ಸರಳ ಪ್ರಾಣಾಯಾಮ

• ನಾಡೀ ಶುದ್ಧಿ ಪ್ರಾಣಾಯಾಮ

• ಭ್ರಮರೀ ಪ್ರಾಣಾಯಾಮ, ಇವುಗಳಲ್ಲಿ ಶೀರ್ಷಾಸನ ಮತ್ತು ಸೂರ್ಯ ನಮಸ್ಕಾರ ಅತ್ಯಂತ ಪ್ರಮುಖ.  ಹಾಗೆಯೇ ಉದ್ರೇಕಕಾರೀ ಆಹಾರಕ್ಕಿಂತ ಸಾತ್ವಿಕ ಆಹಾರ, ಬ್ರಹ್ಮರ‍್ಯ ಪಾಲನೆಗೆ ಇವುಗಳು ಅಗತ್ಯ.  ಅದರಿಂದ ಮೇಧಾಶಕ್ತಿ ವರ್ಧಿಸುವುದು.

• ಸರಳ ಧ್ಯಾನ.

• ಯೋಗ ಮತ್ತು ಶಾಂತಿ ಮಂತ್ರ.

• ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ದೇಹಕ್ಕೆ ಮಾತ್ರವಲ್ಲ, ಮನಸ್ಸು ಮತ್ತು ಆತ್ಮಕ್ಕೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡಬಹುದು. ನಮ್ಯತೆಯನ್ನು ಹೆಚ್ಚಿಸುವುದು ಮತ್ತು ಸ್ನಾಯುವಿನ ಶಕ್ತಿ ಮತ್ತು ಸ್ವರವನ್ನು ಸುಧಾರಿಸುವುದರ ಹೊರತಾಗಿ, ಕೆಲವು ಯೋಗ ಆಸನಗಳು ಕೊಬ್ಬನ್ನು ಪರಿಣಾಮಕಾರಿಯಾಗಿ ಸುಡಲು ಸಹಾಯ ಮಾಡುತ್ತದೆ. 


ಇಲ್ಲಿ ತಿಳಿಸಿದಂತೆ ಶಿಸ್ತುಬದ್ಧವಾಗಿ, ಕ್ರಮವತ್ತಾಗಿ, ಯೋಗ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳ ಜ್ಞಾನ ಸಂಪಾದಿಸಲು ಅಗತ್ಯವಾದ ಏಕಾಗ್ರತೆಗೆ ಸಹಕಾರಿಯಾಗುತ್ತದೆ; ಇದು ಆರೋಗ್ಯ ಭಾಗ್ಯಕ್ಕೂ ಕಾರಣವಾಗುತ್ತದೆ.

- ಗೋಪಾಲಕೃಷ್ಣ ದೇಲಂಪಾಡಿ

ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್, ‘ಪಾರಿಜಾತ’,

ಮನೆ ಸಂಖ್ಯೆ  2/72.5, ಬಿಷಪ್ ಕಂಪೌಂಡು, ಯೆಯ್ಯಾಡಿ ಪದವು, ಕೊಂಚಾಡಿ ಪೋಸ್ಟ್, 

ಮಂಗಳೂರು – 575 008,

ದೂರವಾಣಿ ಸಂಖ್ಯೆ: ಮೊಬೈಲ್: 9448394987


hit counter

0 Comments

Post a Comment

Post a Comment (0)

Previous Post Next Post