ಆಳ್ವಾಸ್‌ನಲ್ಲಿ ಮಹಿಳಾ ದಿನಾಚರಣೆ; ಸಂಶೋಧನಾ ಕ್ಷೇತ್ರದ ಮಹಿಳಾ ಸಾಧಕಿಯರಿಗೆ ಸನ್ಮಾನ

Upayuktha
0

 

ಮೂಡುಬಿದಿರೆ: ಜಗತ್ತಿನ ಅಭಿವೃದ್ಧಿಯಲ್ಲಿ ಮಹಿಳೆ ಪುರುಷನಷ್ಟೇ ಸರಿ ಸಮಾನಳು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.


ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಕಾಲೇಜಿನ ವಿಮೆನ್ ಡೆವಲಪ್ಮೆಂಟ್ ಸೆಲ್ ವತಿಯಿಂದ ಶುಕ್ರವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. `ಸಂಶೋಧನಾ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಅಪಾರವಾದದ್ದು. ಸಂಸಾರವನ್ನು ಸರಿಯಾಗಿ ಮುನ್ನಡೆಸುವುದರ ಜೊತೆಗೆ ಅನೇಕ ಸಾಧನೆಗಳನ್ನು ಮಾಡುತ್ತಿರುವ ಮಹಿಳೆಯರು ಎಲ್ಲರಿಗೂ ಆದರ್ಶ. ಜೀವನದಲ್ಲಿ ಗಂಡು ಹೆಣ್ಣಿನ ಒಳಗೊಳ್ಳುವಿಕೆಯಿದ್ದಾಗ ಮಾತ್ರ ಯಾವುದೇ ಕಾರ್ಯ ಪರಿಪೂರ್ಣವಾಗುತ್ತದೆ. ಈ ಮೂಲಕ ಸಮಾನತೆಯ ಭಾವದಿಂದ ಅರ್ಥಪೂರ್ಣವಾದ ಬದುಕನ್ನು ನಡೆಸಬೇಕು ಎಂದರು.


ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಾದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ಮಮತಾ ಬಲ್ಲಾಳ್, ನಿಟ್ಟೆಯ ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜ್ ಇಲ್ಲಿನ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಹಾಗೂ ಸಂಶೋಧನಾ ವಿಭಾಗದ ಸಂಯೋಜಕಿ ಡಾ. ಎ ವೀಣಾ ಶೆಟ್ಟಿ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮೈಕ್ರೋಬಯೋಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ಬೀನಾ ಆಂಟನಿ, ಎನಪೋಯ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ. ರೇಖಾ ಪಿ. ಡಿ, ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಪಿ ಅವರನ್ನು ಸನ್ಮಾನಿಸಲಾಯಿತು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಮಮತಾ ಬಲ್ಲಾಳ್, ಪ್ರತಿಯೊಬ್ಬ ಯಶಸ್ವಿ ಸಾಧಕರ ಬೆನ್ನುಲುಬಾಗಿ ಶಿಕ್ಷಣ ಸಂಸ್ಥೆ ಹಾಗೂ ಹೆತ್ತವರು ಇರುತ್ತಾರೆ. ಸಂಶೋಧನಾ ಕ್ಷೇತ್ರವು ಅತ್ಯಂತ ಉತ್ಸಾಹ ಭರಿತವಾದ ಕ್ಷೇತ್ರವಾಗಿದೆ. ಸಂಶೋಧನೆಯಲ್ಲಿ ಪುರುಷರು ಪೂರ್ಣವಾಗಿ ತೊಡಗಿಸಿಕೊಂಡರೆ, ಮಹಿಳೆಯರು ತಮ್ಮ ಮನೆಯ ಪ್ರಯೋಗಾಲಯ (ಜವಬ್ದಾರಿ) ಹಾಗೂ ಸಂಶೋಧನೆಯ ಪ್ರಯೋಗಾಲಯವನ್ನೆರಡನ್ನೂ ಸಮಾನವಾಗಿ ನಿಭಾಯಿಸುವ ಕಾರ್ಯಕ್ಷಮತೆಯನ್ನು ಹೊಂದಿರಬೇಕು. ಕುಟುಂಬದ ಬೆಂಬಲವಿದ್ದಾಗ ಯಾವುದೇ ಹೆಣ್ಣಿಗೆ ತನ್ನ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಕಷ್ಟವೇನಲ್ಲ ಎಂದರು.


ಆಳ್ವಾಸ್ ಸಂಸ್ಥೆಯ ವತಿಯಿಂದ ಮಹಿಳಾ ಸಾಧಕಿಯರನ್ನು ಗೌರವಿಸಲಾಯಿತು ಜತೆಗೆ ಮಹಿಳಾ ನಿಯತಕಾಲಿಕೆ `ಅಥೆನಾ’ದ ಮುಖಪುಟವನ್ನು ಅನಾವರಣಗೊಳಿಸಲಾಯಿತು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯ ಸಂಶೋಧನಾ ಸಂಯೋಜಕ ಡಾ. ರಿಚರ್ಡ್ ಪಿಂಟೋ, ಹಾಗೂ ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಿಂಟೋ, ಆಳ್ವಾಸ್ `ನಿರಾಮಯ’ದ ವೈಧ್ಯಕೀಯ ಅಧೀಕ್ಷಕಿ ಡಾ. ಸುರೇಖಾ ಪೈ ಉಪಸ್ಥಿತರಿದ್ದರು. ವಿಮೆನ್ ಡೆವೆಲಪ್ಮೆಂಟ್ ಸೆಲ್ ಸಂಯೋಜಕಿ ಶಾಝಿಯಾ ಖಾನುಮ್ ಸ್ವಾಗತಿಸಿದರು, ವಿದ್ಯಾರ್ಥಿನಿ ಸಮನ್ ಸೈಯದ್ ಕಾರ್ಯಕ್ರಮ ನಿರೂಪಿಸಿ, ಅಫ್ರಾ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top