ಮೂಡುಬಿದಿರೆ: ಹಾಸನಾಂಬ ಬಾಲ್‌ಬ್ಯಾಡ್ಮಿಂಟನ್ ಕ್ಲಬ್ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ, ಹಾಸನ ಜಿಲ್ಲೆ ಇದರ ಸಹಯೋಗದೊಂದಿಗೆ ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಆಹ್ವಾನಿತ ಪುರುಷರ ಹೊನಲು ಬೆಳಕಿನ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡ ದಿ.ರಂಗಸ್ವಾಮಿ ಸ್ಮಾರಕ ರಾಜ್ಯ ಮಟ್ಟದ ಬಾಲ್‌ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ರಾಜ್ಯದ 26 ಆಹ್ವಾನಿತ ಪುರುಷರ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಫೈನಲ್ಸ್ನಲ್ಲಿ ಮೂಡಬಿದಿರೆಯ ಆಳ್ವಾಸ್ ತಂಡ ಅತಿಥೇಯ ಹಾಸನಾಂಬ ಬಾಲ್‌ಬ್ಯಾಡ್ಮಿಂಟನ್ ಕ್ಲಬ್ ತಂಡವನ್ನು 35-22, 35-29 ನೇರ ಸೆಟ್‌ಗಳಿಂದ ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡ ತುಮಕೂರಿನ ಗಾಂಧಿನಗರ ಕ್ಲಬ್ ತಂಡವನ್ನು 35-19, 35- 24 ನೇರ ಸೆಟ್‌ಗಳಿಂದ ಹಾಗೂ ಸೆಮಿಫೈನಲ್ಸ್ನಲ್ಲಿ ವಿಜಯನಗರ ಬೆಂಗಳೂರು ತಂಡವನ್ನು 35-22, 35-18 ನೇರ ಸೆಟ್‌ಗಳಿಂದ ಸೋಲಿಸಿ ಫೈನಲ್ ಹಂತಕ್ಕೆ ಅರ್ಹತೆಯನ್ನು ಗಳಿಸಿತ್ತು.
ಇನ್ನೊಂದು ಸೆಮಿಫೈನಲ್ಸ್ ಪಂದ್ಯದಲ್ಲಿ ಹಾಸನಾಂಬ ಬಾಲ್‌ಬ್ಯಾಡ್ಮಿಂಟನ್ ಕ್ಲಬ್ ಬೆಂಗಳೂರಿನ ಸಹ್ಯಾದ್ರಿ ಸ್ಪೋರ್ಟ್ಸ್ ಕ್ಲಬ್ ತಂಡವನ್ನು 35-25, 32-35, 35-32 ಅಂಕಗಳಿಂದ ಮಣಿಸಿ ಫೈನಲ್ ಹಂತಕ್ಕೆ ಪ್ರವೇಶವನ್ನು ಪಡೆದಿತ್ತು. ಅತಿಥೇಯ ಹಾಸನಾಂಬ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ರನ್ನರ್ಸ್ ಅಪ್ ಪ್ರಶಸ್ತಿಯನ್ನು, ಬೆಂಗಳೂರಿನ ವಿಜಯನಗರ ಬಾಲ್‌ಬ್ಯಾಡ್ಮಿಂಟನ್ ಕ್ಲಬ್ ತೃತೀಯ ಸ್ಥಾನವನ್ನು ಹಾಗೂ ಬೆಂಗಳೂರಿನ ಸಹ್ಯಾದ್ರಿ ಬಾಲ್‌ಬ್ಯಾಡ್ಮಿಂಟನ್ ಕ್ಲಬ್ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ