|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪ್ರೊ. ಪಿ ಸುಬ್ರಾಯ ಭಟ್ ನೂರರ ನೆನಪು

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪ್ರೊ. ಪಿ ಸುಬ್ರಾಯ ಭಟ್ ನೂರರ ನೆನಪು


ಕಾಸರಗೋಡು: “ಪ್ರೊ. ಪಿ. ಸುಬ್ರಾಯ ಭಟ್ ಅವರಂತಹ ಪ್ರಾಧ್ಯಾಪಕರಿಂದಾಗಿ ಕಾಸರಗೋಡು ಸರಕಾರಿ ಕಾಲೇಜಿನ ಕೀರ್ತಿಯು ಕರ್ನಾಟಕದಾದ್ಯಂತ ಪಸರಿಸಿತು. ಸುಬ್ರಾಯ ಭಟ್ ಅವರ ಜನ್ಮಶತಮಾನೋತ್ಸವವು ವರ್ಷವಿಡೀ ಸಂಭ್ರಮದಿಂದ ನಡೆಯುವುದರ ಜತೆಗೆ ಅವರ ಸಾಧನೆಗಳ ದಾಖಲಿಕರಣವು ನಡೆಯಬೇಕು” ಎಂದು ಕಾಸರಗೋಡು ಸರಕಾರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಎ. ಎಲ್. ಅನಂತಪದ್ಮನಾಭ ಅಭಿಪ್ರಾಯ ಪಟ್ಟರು.


ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ವತಿಯಿಂದ ಕನ್ನಡ ವಿಭಾಗದ ಸಭಾಂಗಣದಲ್ಲಿ, ಪ್ರೊ. ಪಿ. ಸುಬ್ರಾಯ ಭಟ್ ಅವರ ನೂರನೆಯ ಜನ್ಮದಿನದ ಬಾಬ್ತು ನಡೆದ 'ಪ್ರೊ. ಪಿ. ಸುಬ್ರಾಯ ಭಟ್- ನೂರರ ನೆನಪುʼ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ಮಧುರೈ ಕಾಮರಾಜ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರೂ ಪ್ರೊ.ಪಿ.ಸುಬ್ರಾಯ ಭಟ್ ಅವರ ಶಿಷ್ಯರೂ ಆದ ಡಾ. ಹರಿಕೃಷ್ಣ ಭರಣ್ಯ ಅವರು ಮಾತನಾಡಿ, “ಪ್ರೊ.ಪಿ.ಸುಬ್ರಾಯ ಭಟ್ ಅವರು ಕಾಸರಗೋಡಿನ ಪಂಡಿತ ಪರಂಪರೆಯ ವಿದ್ವಾಂಸರಲ್ಲಿ ಒಬ್ಬರಾಗಿದ್ದು, ಹಳೆಗನ್ನಡ, ಸಂಸ್ಕೃತ ಭಾಷೆಗಳಲ್ಲಿ ವಿಶೇಷ ನೈಪುಣ್ಯವನ್ನು ಪಡೆದವರಾಗಿದ್ದರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸ್ಥಾಪಕ ಪ್ರಾಧ್ಯಾಪಕರಾಗಿ ಅವರು ಕನ್ನಡಿಗರ ಜತೆ ಸೇರಿ ದುಡಿದುದರ ಫಲವಾಗಿ ವಿಭಾಗವು ಹಂತಹಂತವಾಗಿ ಬೆಳೆಯಲು ಸಾಧ್ಯವಾಯಿತು. ಅದೆಷ್ಟೋ ವಿದ್ಯಾರ್ಥಿಗಳಿಗೆ ಹಳೆಗನ್ನಡದ ಸವಿಯನ್ನು ಉಣಿಸುವಲ್ಲಿ ಸುಬ್ರಾಯ ಭಟ್ಟರು ಸಮರ್ಥರಾಗಿದ್ದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಸಹಕಾರ ಮಾಡುವ ಗುಣವೂ ಅವರಲ್ಲಿತ್ತು.  ಪಂಪ, ರನ್ನ, ಹರಿಹರ, ರಾಘವಾಂಕ ಈ ಮುಂತಾದವರ ಕಾವ್ಯಗಳನ್ನು, ಕಾವ್ಯ ಮೀಮಾಂಸೆಗಳಂತಹ ವಿಷಯಗಳನ್ನು ಅರ್ಥಪೂರ್ಣವಾಗಿ ವಿವರಿಸುವ ಅವರ ಚಾಕಚಕ್ಯತೆಯನ್ನು ಕಂಡು ಕನ್ನಡೇತರರೂ ಅವರ ಪಾಠ ಕೇಳಲು ಆಸಕ್ತರಾಗುತ್ತಿದ್ದರು.” ಎಂದು ಡಾ, ಹರಿಕೃಷ್ಣ ಭರಣ್ಯ ನುಡಿದರು.  


ಪ್ರೊ. ಪಿ. ಸುಬ್ರಾಯ ಭಟ್ ಅವರ ಸುಪುತ್ರ ಕೃಷ್ಣ ಪ್ರಸಾದ್ ಮಾತನಾಡಿ, “ತಂದೆಯವರ ಒಡನಾಟದ ಸವಿಯನ್ನು ಅನುಭವಿಸುವ ಸೌಭಾಗ್ಯ ದೊರಕಿದ್ದು ಕಡಿಮೆಯಾದರೂ ಅವರ ಶಿಷ್ಯರು ತಂದೆಯನ್ನು ಹೆಮ್ಮೆಯಿಂದ ಸ್ಮರಿಸುವಾಗ ಸಂತೋಷವಾಗುತ್ತದೆ. ನುಡಿದಂತೆ ನಡೆಯುವ ಗುಣ ತಂದೆಯವರಿಗಿತ್ತು. ಅವರ ಆದರ್ಶಗಳು ನಮಗೆಲ್ಲ ಮಾದರಿ.” ಎಂದರು. ಬಿ.ಎ ಕನ್ನಡ ತೃತೀಯ ಪದವಿ ವಿದ್ಯಾರ್ಥಿನಿ ಧನ್ಯಶ್ರೀ ಪ್ರೊ. ಪಿ. ಸುಬ್ರಾಯ ಭಟ್ ಅವರ ಬದುಕು ಬರಹಗಳ ಪರಿಚಯ ಮಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಭಾಗದ ಪ್ರಭಾರ ಮುಖ್ಯಸ್ಥ ಡಾ. ರತ್ನಾಕರ ಮಲ್ಲಮೂಲೆ ಮಾತನಾಡಿ, “ಕಾಸರಗೋಡಿನ ಕನ್ನಡ ವಿಭಾಗದ ಮೂಲಕ ಬದುಕು ಕಟ್ಟಿಕೊಂಡು ಹೆಸರು ಸ್ತಾನಮಾನ ಪಡೆದವರು ಅನೇಕ ಮಂದಿಯಿದ್ದಾರೆ. ಈ ವಿಭಾಗವು ಇಂದು ಸ್ನಾತಕೋತ್ತರ ಅಧ್ಯಯನ ಕೇಂದ್ರವಾಗಿ ಸಂಶೋಧನ ವಿಭಾಗವಾಗಿ ಬೆಳೆಯುವುದರ ಮೂಲಕ ಕಾಸರಗೋಡಿನ ಕನ್ನಡಕ್ಕೆ ಹಲವು ರೀತಿಯಲ್ಲಿ ಶಕ್ತಿ ನೀಡಿದೆ. ಆದ ಕಾರಣ ಪ್ರೊ.ಪಿ.ಸುಬ್ರಾಯ ಭಟ್ ಅವರಂತಹ ಸ್ಥಾಪಕ ಪ್ರಾಧ್ಯಾಪಕರನ್ನು ಸ್ಮರಿಸುವ ಹಾಗೂ ಅವರಂತಹ ಅನೇಕ ಮಹನೀಯರು ವಿಭಾಗವನ್ನು ಕಟ್ಟಿ ಬೆಳೆಸಲು ಪ್ರಯತ್ನಿಸಿದ ರೀತಿನೀತಿಯನ್ನು ಅರಿತುಕೊಂಡು ಅದರಂತೆ ನಡೆಯುವ ಹೊಣೆ ನಮಗೆಲ್ಲರಿಗೂ ಇದೆ. ಪಂಡಿತನಾಗಿ ಮಾತ್ರ ವಿದ್ಯಾರ್ಥಿಗಳ ಗುರುವಾಗದೆ, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಸಹಕಾರ ಒದಗಿಸುವುದರ ಮೂಲಕವೂ ಸುಬ್ರಾಯ ಭಟ್ ಅವರು ನಮಗೆ ಸ್ಮರಣೀಯರಾಗುತ್ತಾರೆ. ಅವರ ಜನ್ಮಶತಮಾನೋತ್ಸವವು ಕಾಸರಗೋಡಿಗೆ ಮಾತ್ರ ಸೀಮಿತವಾಗಬಾರದು. ಇದು ಕರ್ನಾಟಕದ ವಿವಿಧ ಭಾಗಗಳಲ್ಲಿ ಒಂದು ವರುಷಗಳ ಕಾಲ ನಡೆಯಬೇಕು. ಜತೆಗೆ ಸುಬ್ರಾಯ ಭಟ್ ಅವರ ಸಾಧನೆಗಳನ್ನು ವಿವಿಧ ಮುಖಗಳಲ್ಲಿ ದಾಖಲಿಸುವ ಕಾರ್ಯ ನಡೆಯಬೇಕಾಗಿದೆ. ಇದಕ್ಕೆ ಸುಬ್ರಾಯ ಭಟ್ ಅವರ ಶಿಷ್ಯರು, ಅಭಿಮಾನಿಗಳು ಮುಂದಾಗಬೇಕಿದೆ. ಈ ಕಾರ್ಯಕ್ರಮವು ಸುಬ್ರಾಯ ಭಟ್ ಅವರ ಜನ್ಮ ಶತಮಾನೋತ್ಸವ ಕಾರ್ಯಚಟುವಟಿಕೆಗಳಿಗೊಂದು ಮುನ್ನುಡಿ” ಎಂದರು. 


ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಸ್ವಾಗತಿಸಿದರು. ಡಾ. ಬಾಲಕೃಷ್ಣ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕುಮಾರಿ ಜ್ಯೋತಿಕ, ದೀಪ್ತಿ ಪ್ರಾರ್ಥನೆ ಹಾಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم