
ಮಂಗಳೂರು: ಪ್ರತಿಷ್ಠಿತ ಐಐಟಿ, ಎನ್ಐಟಿ, ಐಐಎಸ್ಇಆರ್ ಮತ್ತು ಐಐಎಸ್ಸಿಗಳಲ್ಲಿ ಎಂ.ಎಸ್ಸಿ, ಪಿಎಚ್.ಡಿ, ಮತ್ತು ಸ್ನಾತಕೋತ್ತರ ಪದವಿ ನಂತರದ ಕೋರ್ಸುಗಳಿಗಾಗಿ ನಡೆಯುವ ಜೆಎಎಂ- 2022 ಪ್ರವೇಶ ಪರೀಕ್ಷೆಯಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಅಂತಿಮ ಬಿ.ಎಸ್ಸಿ ವಿದ್ಯಾರ್ಥಿನಿ ಬೃಂದಾ ಎ ಉತ್ತೀರ್ಣರಾಗಿದ್ದಾರೆ.
ರಾಷ್ಟ್ರಮಟ್ಟದಲ್ಲಿ ನಡೆಯುವ ಪರೀಕ್ಷೆಯಲ್ಲಿ ರಸಾಯನ ಶಾಸ್ತ್ರದಲ್ಲಿ 221 ನೇ ಮತ್ತು ಭೌತಶಾಸ್ತ್ರದಲ್ಲಿ 2175 ರ‍್ಯಾಂಕ್ ಪಡೆದಿರುವ ಬೃಂದಾ ನಗರದ ಕಾವೂರಿನವರು. ಕೆಐಒಸಿಎಲ್ ನಲ್ಲಿ ಮಾಸ್ಟರ್ ಟೆಕ್ನೀಷಿಯನ್ ಆಗಿರುವ ಅನಂತಮೂರ್ತಿ ಎ ಎನ್ ಮತ್ತು ವಿವಿ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರೂ ಆಗಿರುವ ಅನುಪಮಾ ಅನಂತಮೂರ್ತಿ ದಂಪತಿಯ ಮಗಳಾಗಿರುವ ಬೃಂದಾ, ಪದವಿಯ ಬಳಿಕ ಬೆಂಗಳೂರಿನ ಐಐಎಸ್ಸಿಯಲ್ಲಿ ರಸಾಯನಶಾಸ್ತ್ರದಲ್ಲಿ ಪಿ.ಹೆಚ್.ಡಿ ಅಥವಾ ಆರ್ಗ್ಯಾನಿಕ್ ಕೆಮಿಸ್ಟ್ರಿಯಲ್ಲಿ ಎಂ.ಎಸ್ಸಿ ಮಾಡುವ ಉದ್ದೇಶ ಹೊಂದಿದ್ದಾರೆ.
“ಪದವಿಯ ಮೊದಲ ವರ್ಷದಿಂದಲೇ ತಯಾರಿ ಆರಂಭಿಸಿದೆ. ಪ್ರಾಧ್ಯಾಪಕರು ಸೂಚಿಸಿದ ಪುಸ್ತಕಗಳು ಮತ್ತು ಯೂ ಟ್ಯೂಬ್ನಿಂದ ಮಾಹಿತಿ ಕಲೆಹಾಕಲಾರಂಭಿಸಿದೆ. ಕಳೆದ ಡಿಸೆಂಬರ್ನಿಂದ ತೀವ್ರ ತಯಾರಿಯ ಜೊತೆಗೆ, ಕೋಚಿಂಗ್ ಕೂಡ ಪಡೆದೆ. ನೋಟ್ಸ್ ಮಾಡದೆ, ಪ್ರಶ್ನೋತ್ತರದ ಕಡೆಗೆ ಗಮನ ಹರಿಸಿದ್ದು ಸಹಾಯವಾಯಿತು. ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ, ಜೊತೆಗೆ ತರಬೇತಿ ಸರಿಯಾದ ಉತ್ತರ ಆಯ್ಕೆ ಮಾಡುವ ಧೈರ್ಯ ನೀಡಿತು,” ಎನ್ನುವ ಅವರು ʼಸ್ವಯಂʼ ಕಲಿಕಾ ವೇದಿಕೆಯಲ್ಲಿ ಈಗಾಗಲೇ ನಾಲ್ಕು ಕೋರ್ಸ್ಗಳನ್ನು ಪೂರ್ಣಗೊಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ