ವಿವಿ ಕಾಲೇಜು: ರಕ್ತದಾನ ಅಭಿಯಾನದಲ್ಲಿ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿಯ ಮುಖ್ಯಸ್ಥ ಡಾ. ಶರತ್ ಅಭಿಮತ
ಮಂಗಳೂರು: ಒಬ್ಬ ವ್ಯಕ್ತಿ ರಕ್ತದಾನದ ಮೂಲಕ ಒಮ್ಮೆಗೇ ನಾಲ್ವರ ಜೀವವುಳಿಸಬಲ್ಲ. ನೂತನ ತಂತ್ರಜ್ಞಾನದಡಿಯಲ್ಲಿ ರಕ್ತದಾನ ಅತ್ಯಂತ ಸುರಕ್ಷಿತ. ಈ ಕುರಿತು ಜನಜಾಗೃತಿ ಹೆಚ್ಚಬೇಕಿದೆ, ಎಂದು ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿಯ ಮುಖ್ಯಸ್ಥ ಡಾ. ಶರತ್ ಹೇಳಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಎನ್ಸಿಸಿ ಭೂದಳ ಮತ್ತು ನೌಕಾದಳ, ಕೆಎಆರ್ ಎನ್ಸಿಸಿ ಬಿಎನ್ ಹಾಗೂ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಗುರುವಾರ ಆಯೋಜಿಸಲಾಗಿದ್ದ ರಕ್ತದಾನ ಅಭಿಯಾನ – 2022 ನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಕುರಿತ ಪ್ರಯೋಗಕ್ಕೆ ಎಷ್ಟೋ ಜನರು ಜೀವ ಸವೆಸಿದ್ದಾರೆ. 18 ರಿಂದ 60 ವರ್ಷಗಳ ಒಳಗಿನ ಒಬ್ಬ ಆರೋಗ್ಯವಂತ ಪುರುಷ ವರ್ಷಕ್ಕೆ ನಾಲ್ಕು ಬಾರಿ ಮತ್ತು ಮಹಿಳೆ ಮೂರು ಬಾರಿ ರಕ್ತದಾನ ಮಾಡಬಹುದು. ರಕ್ತದಾನದ ಮೂಲಕ ನಮ್ಮ ವಿಶೇಷ ದಿನಗಳನ್ನು ಆಚರಿಸಿಕೊಳ್ಳುವುದು ಅರ್ಥಪೂರ್ಣ, ಎಂದರು.
5 ಕೆಎಆರ್ ಎನ್ಸಿಸಿ ನೌಕಾದಳ ಘಟಕದ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಭರತ್ ಕುಮಾರ್, ರಕ್ತದಾನದಿಂದ ಹಲವು ಲಾಭಗಳಿವೆ. ರಕ್ತದಾನದಿಂದ ಹೊಸ ರಕ್ತ ದೇಹ ಸೇರುವುದರಿಂದ ರಕ್ತ ತೆಳುವಾಗುತ್ತದೆ. ಇದು ನಮ್ಮ ಆರೋಗ್ಯವನ್ನು, ಮುಖ್ಯವನ್ನು ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ರಕ್ತದಾನ ನಮಗೆ ಮಾನಸಿಕ ಸಂತೃಪ್ತಿಯನ್ನೂ ನೀಡುತ್ತದೆ, ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯಾ ರೈ, ಎನ್ಸಿಸಿ ಘಟಕದ ಕಾರ್ಯವನ್ನು ಶ್ಲಾಘಿಸಿದರು. ಕಾಲೇಜಿನ ಎನ್ಸಿಸಿ ನೌಕಾದಳದ ಮುಖ್ಯಸ್ಥ ಡಾ.ಯತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂದಳದ ಮುಖ್ಯಸ್ಥ ಡಾ. ಎನ್. ಜಯರಾಜ್, ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿ, ಎನ್ಸಿಸಿ ಕೆಡೆಟ್ಗಳು ಉಪಸ್ಥಿತರಿದ್ದರು. ನೂರಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ