ವಿವಿ ಕಾಲೇಜಿನಲ್ಲಿ ಯುವ ಜನರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕಲಾವಿದ ಉಜ್ವಲ್ ಯು ವಿ ಅಭಿಮತ
ಮಂಗಳೂರು: ನಾವು ಜೀವನದಲ್ಲಿ ಯಾವುದಾದರೂ ಕಲೆ ಅಥವಾ ಸಾಹಿತ್ಯವನ್ನು ಅಳವಡಿಸಿಕೊಂಡಾಗ ಅದು ನಮ್ಮ ಜೀವನವನ್ನು ಬದಲಿಸುತ್ತದೆ, ಬದುಕನ್ನು ನೋಡುವ ದೃಷ್ಟಿಕೋನವನ್ನೇ ಬದಲಾಗುತ್ತದೆ, ಎಂದು ರಂಗಭೂಮಿ ಕಲಾವಿದ, ‘ಕಲಭಿ’ ವ್ಯವಸ್ಥಾಪಕ ಟ್ರಸ್ಟಿ ಉಜ್ವಲ್ ಯು ವಿ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಗುರುವಾರ ಆಯೋಜಿಸಿದ್ದ ʼಎ ಟಾಲ್ಕ್ ವಿತ್ ಯಂಗ್ ಮೈಂಡ್ಸ್ʼ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು 'ನೀನಾಸಂʼ ಜೊತೆಗಿನ ತಮ್ಮ ಅನುಭವವನ್ನು ಹಂಚಿಕೊಂಡರಲ್ಲದೆ, “ಕಲಾವಿದ ಜ್ಞಾನಿಯೂ ಆಗಿರುತ್ತಾನೆ. ಆದರೆ ಜೀವನ ಮತ್ತು ಜ್ಞಾನ ಸಂಪಾದನೆ ಎರಡು ಜೊತೆ ಜೊತೆಗೂ ಸಾಗಬೇಕು" ಎಂದರು.
ಕಟೀಲು ಮೇಳದ ಜನಪ್ರಿಯ ಯಕ್ಷಗಾನ ಕಲಾವಿದ, ಎಲ್ & ಟಿ ಸಂಸ್ಥೆಯ ಉದ್ಯೋಗಿ ಪುನೀತ್ ರಾಜ್ ತಮ್ಮ ಬದುಕಿನ ಏರಿಳಿತಗಳನ್ನು ಮನೋಜ್ಞವಾಗಿ ವಿವರಿಸಿದರು. “ಬದುಕಿನಲ್ಲಿ ಏರಿಳಿತಗಳು ಮತ್ತು ತಿರುವುಗಳು ಸಹಜ. ಕಲಾವಿದರು ಸೆಲೆಬ್ರಿಟಿಗಳಾಗಲು ಸಾಧ್ಯವಾಗದೇ ಇರಬಹುದು. ಆದರೆ ನಮ್ಮ ಜೀವನ ನಮ್ಮ ಕೈಯಲ್ಲಿದೆ. ಪ್ರಯತ್ನ ಮತ್ತು ಬದ್ಧತೆ ಮುಖ್ಯ” ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ 150 ವರ್ಷದ ಇತಿಹಾಸ ಮತ್ತು ಭವ್ಯತೆಯ ಬಗ್ಗೆ ಹೆಮ್ಮೆ ಪಡಬೇಕು. ಬದುಕಿನಲ್ಲಿ ಸಿಹಿ-ಕಹಿ ಎರಡೂ ಇದ್ದರೂ ಧನಾತ್ಮಕ ಯೋಚನೆಯಿರಲಿ, ಎಂದು ಕಿವಿಮಾತು ಹೇಳಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಯತೀಶ್ ಕುಮಾರ್, ನಮ್ಮ ಸುತ್ತಮುತ್ತಲಿನ ಧನಾತ್ಮಕತೆಯನ್ನು ನಾವೂ ಅಳವಡಿಸಿಕೊಳ್ಳಬೇಕು, ಎಂದರು.
ಕಾರ್ಯಕ್ರಮದ ಭಾಗವಾಗಿ ಮನೋರಂಜನಾ ಕಾರ್ಯಕ್ರಮಗಳು ನಡೆದವು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು, ಸೌಮ್ಯ ಬಿ ಕೆ ಪ್ರಾರ್ಥಿಸಿದರು. ಪ್ರೀತಿಕಾ ಸ್ವಾಗತಿಸಿ, ವೈಶಾಲಿ ಧನ್ಯವಾದ ಸಮರ್ಪಿಸಿದರು. ತರಗತಿ ಪ್ರತಿನಿಧಿಗಳಾದ ಸ್ವಾತಿ ಶೆಟ್ಟಿ, ದೀಪಿಕಾ ಎಂ ಬಿ, ದೀಪಿಕಾ, ಶಶಾಂಕ್ ಮೊದಲಾದವರು ವೇದಿಕೆಯಲ್ಲಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ