ಶೃಂಗೇರಿ ಸಮೀಪದ ಅಡ್ಡಗದ್ದೆ ಊರಿನ ಒಬ್ಬರು ಮನೆಯಲ್ಲೊಂದು ಇಲಿ ಹಿಡಿದು (ಪರ್ವತ ಅಗೆದಲ್ಲ!!), ಅದನ್ನು ಕೊಲ್ಲದೆ, ಸ್ವತಃ ಅವರೇ ಅದನ್ನು ಗಡಿ ದಾಟಿಸಿ ಬಂದರು. ಬಂದವರು ಒಂದು ಪದ್ಯ ಬರೆಯಲು ಹೇಳಿದರು!!!
ಬರೆದೆ....:
ಗಡಿ ದಾಟಿದ ಇಲಿಗೆ ಭೋಗ ಷಟ್ಪದಿಯಲ್ಲೊಂದು ಪದ್ಯ ಮೆರವಣಿಗೆ!!!
ಖಾತೆ ಲೆಕ್ಕ ಹಾಕಿ ನೋಡೆ
ಪಾತ್ರೆಲಿಟ್ಟ ಸಕ್ರೆ ಬೆಲ್ಲ
ಜಾತ್ರೆಯಿಂದ ತಂದ ಫೋಟ
ಒಂದು ಬಿಡದನೆ/
ಬಾತುರೂಮಿನಲ್ಲಿ ಇದ್ದ
ಟೂತುಪೇಸ್ಟು ಮಂಗ ಮಾಯ
ಪ್ರೀತಿ ಮಡದಿ ಇಲಿಯು ತಿಂದ
ಲೆಕ್ಕ ಕೊಡುತಿರೆ//
ಜಲವು ಬರುವ ಕೊಳವೆ ತಿಂದು
ಬಲದ ರೂಮಿನೊಳಗೆ ನುಗ್ಗಿ
ಹಲವು ಬುಕ್ಕುಗಳನು ಕೊರೆದು
ತಿಂದು ತೇಗಲು/
ಕೆಲವು ನೋಟುಗಳನು ಹರಿದು
ಜಲದ ಪೈಪಿನೊಳಗೆ ಇಡುತ
ಇಲಿಯು ಕೂಡ ಮನುಜನಂತೆ ಮೋಸ ಮಾಡಲು//
ಯಾರು ಏನು ಮಾಡಿಯಾರು?
ಮೂರು ಬಿಟ್ಟ ನನಗೆ ಯಾರು?
ಊರು ತುಂಬ ಕೊಳ್ಳೆ ಹೊಡೆಯೆ
ಯಾರು ಕೇಳ್ವರು?/
ಕಾರು ಬಂಗ್ಲೆ ಕಂತೆ ಹಣವ
ನೀರಿನಂತೆ ಕುಡಿದು ಕುಡಿದು
ಏರುತಿರುವ ಸಚಿವನಾಯ್ತು ಇಲಿಯು ಮನೆಯಲಿ//
ಮನೆಯ ಅಡಿಯೆ ಮನೆಯ ಮಾಡಿ
ಮನಸೊ ಇಚ್ಛೆ ಕಾಡುತಿತ್ತು
ಮನೆಯಲಿದ್ದ ಫುಡ್ಡನೆಲ್ಲ ಮೆಲ್ಲ ಮೆಲ್ಲುತಾ/
ಮನೆಯ ಒಡೆಯ ತಂದ ಬೋನು
ಸನಿಹ ಕಾಕನಂಗ್ಡಿಯಿಂದ
ಕೊನೆಯ ಗತಿಯ ಗೊಳಿಸಿಬಿಡುವೆ
ಎನುತ ಸಿಟ್ಟಲೀ//
ಹೊತ್ತು ನೋಡಿ ಹೊಂಚು ಹಾಕಿ
ಒತ್ತು ಶಾವ್ಗೆ ಇಡಲು ಒಳಗೆ
ಬಿತ್ತು ನೋಡಿ ಇಲಿಯು ಬಲಗೆ ನರಳಿನರಳುತ
ಸತ್ತು ಹೋಗದಂತೆ ಅದನು
ಮತ್ತೆ ಚೀಲದೊಳಗೆ ಕಟ್ಟಿ
ಹೊತ್ತು ತಲೆಯ ಮೇಲೆ ಅದನು
ಎತ್ತಿ ಹೊರಟನು
ಅಡ್ಡಗದ್ದೆಯನ್ನು ದಾಟಿ
ಗುಡ್ಡ ಏರಿ ಕೆಳಗೆ ಇಳಿದು
ದುಡ್ಡು ಕೊಟ್ಟು ತಂದ ಬೋನು ನೆನದು ಖುಷಿಯಲಿ
ಸಡ್ಡು ಹೊಡೆದು ಕಾಡುತಿದ್ದ
ಲಡ್ಡು ತಿಂದ ಇಲಿಯ ಹಿಡಿದ
ಅಡ್ಡಗದ್ದೆ ಊರವಾಸಿ ಮೀಸೆ ತಿರುವುತಾ//
ಮಡಿಯ ರೇಷ್ಮೆ ಪಂಚೆ ಉಟ್ಟು ಕೊಡದಿ ಜಲವ ಹೊತ್ತ ರೀತಿ
ಗಡಿಯ ದಾಟಿ ಊರ ಹೊರಗೆ ಒಡೆಯ ನೆಡೆದನು/
ಕಡೆಯ ಹಲಸು ಮರದ ಬುಡದಿ
ಇಡುತ ಚೀಲ ಗಂಟು ಬಿಚ್ಚಿ
ಕಡುಬು ಮೆಲ್ವ ದೇವ ನೆನೆದು
ಇಲಿಯ ಬಿಟ್ಟನು//
ಅರವಿಂದ ಸಿಗದಾಳ್, ಮೇಲುಕೊಪ್ಪ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ