ವಿವಿ ಕಾಲೇಜಿನಲ್ಲಿ ಮಹಿಳಾ ವಿಜ್ಞಾನಿಗಳ ದಿನಾಚರಣೆ

Upayuktha
0

ಮಂಗಳೂರು: ನಗರದ ವಿಶ್ವವಿದ್ಯಾಲಯ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಇತ್ತೀಚೆಗೆ ಅಂತರರಾಷ್ಟ್ರೀಯ ಮಹಿಳಾ ವಿಜ್ಞಾನಿಗಳ ದಿನವನ್ನು ವರ್ಚುವಲ್‌ ಮಾದರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನೇಚರ್ ಕ್ಲಬ್ ವಿಧ್ಯಾರ್ಥಿಗಳು, ಜಗತ್ತಿನೆಲ್ಲೆಡೆ ವಿವಿಧ ವಿಭಾಗಗಳಲ್ಲಿ ಮಹತ್ಸಾಧನೆಗೈದ ಮಹಿಳಾ ವಿಜ್ಞಾನಿಗಳ ಪರಿಚಯ ಮತ್ತು ಅವರ ಸಾಧನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.


ಸಂಘದ ಸದಸ್ಯ ಲೇಖನ್, ಭಾರತೀಯ ಮಹಿಳಾ ವಿಜ್ಞಾನಿಗಳ ಬಗ್ಗೆ ಪರಿಚಯ ನೀಡುತ್ತಾ ಕೇರಳದ ಮಹಿಳಾ ವಿಜ್ಞಾನಿ ಜಾನಕಿ ಅಮ್ಮಾಳ್ ಬಗ್ಗೆ ಪ್ರಸ್ತಾಪಿಸಿದರು. ಮೊದಲೆಲ್ಲಾ ಭಾರತ ಸಿಹಿ ಕಬ್ಬನ್ನು ಆಗ್ನೇಯ ಏಷ್ಯಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಜಾನಕಿ ಅಮ್ಮಾಳ್ ಪ್ರಯೋಗಾಲಯದಲ್ಲಿ ಮಿಶ್ರತಳಿಗಳ ಮೂಲಕ ಹೆಚ್ಚಿನ ಇಳುವರಿ ನೀಡುವ ಸಿಹಿ ಕಬ್ಬಿನ ತಳಿ ವೃದ್ಧಿಪಡಿಸಿದರು. ದೇಶದ ಸಕ್ಕರೆಯ ಸಿಹಿ ಹೆಚ್ಚಿಸಿದ ಜಾನಕಿಯವರು ಪದ್ಮಶ್ರೀ ಪಡೆದ ಮೊದಲ ಮಹಿಳಾ ವಿಜ್ಞಾನಿಯು ಹೌದು, ಎಂದರು.


ಸಂಘದ ಮತ್ತೋರ್ವ ಸದಸ್ಯೆ ಪ್ರಜ್ಞಶ್ರೀ, ಸಿವಿ ರಾಮನ್ ಅವರ ಮೊದಲ ಮಹಿಳಾ ವಿದ್ಯಾರ್ಥಿ ಹಾಗು ವಿಜ್ಞಾನ ವಿಷಯದಲ್ಲಿ ಡಾಕ್ಟರೇಟ್ ಪಡೆದ ಪ್ರಥಮ ಮಹಿಳೆ ಕಮಲ ಸೊಹೊನಿ, ಮಲೇರಿಯಾ ಹಾಗು ಎಪಿಲೆಪ್ಸಿ ನಿರೊಧಕ ವಿರುದ್ಧ ಸದಾಪುಷ್ಫದ ಔಷಧೀಯ ಗುಣಗಳ ಮೇಲೆ ಸಂಶೋಧನೆಗೈದ ಅಸೀಮ ಚಟರ್ಜಿ, ಬಾಹ್ಯಾಕಾಶ ವಿಜ್ಞಾನಿ ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲ್ಲಿಯಮ್ಸ್ ಅವರ ಸಾಧನೆ ಮತ್ತು ಸಂಶೋಧನೆಗಳ ಬಗ್ಗೆ ಮಾಹಿತಿ ಒದಗಿಸಿದರು.


ವಿದ್ಯಾರ್ಥಿಗಳನ್ನು ಅಭಿನಂದಿಸಿದ ನೇಚರ್ ಕ್ಲಬ್‌ ನ ಉಪನಿರ್ದೇಶಕ ಡಾ. ಸಿದ್ಧರಾಜು, ಭಾರತದ ಪ್ರಥಮ ಮಹಿಳಾ ವೈದ್ಯೆ ಡಾಕ್ಟರ್ ಆನಂದಿಬಾಯಿ ಗೋಪಾಲರಾವ್ ಜೋಶಿಯವರ ಸಾಧನೆಯ ಬಗ್ಗೆ ತಿಳಿಸಿದರು. ಪುಣೆಯಲ್ಲಿ ಜನಿಸಿದ ಆನಂದಿಯವರು ತಮ್ಮ 9ನೇ ವರ್ಷಕ್ಕೆ ಮದುವೆಯಾಗಿ 14ನೇ ವರ್ಷಕ್ಕೆ ಒಂದು ಗಂಡು ಮಗುವಿಗೆ ಜನ್ಮ ನೀಡಿದರು. ಹುಟ್ಟಿದ ಮಗು ಒಂದು ವಾರದಲ್ಲೇ ಮರಣ ಹೊಂದಿದಾಗ ಬೇಸರಗೊಂಡ ಆನಂದಿಯವರು, ತನ್ನಂತೆ ವೈದ್ಯಕೀಯ ಸವಲತ್ತುಗಳಿಲ್ಲದ ಕಾರಣ ಬೇರೆ ಯಾರು ಮಕ್ಕಳನ್ನು ಕಳೆದುಕೊಳ್ಳಬಾರದೆಂದು ನಿಶ್ಚಯಿಸಿ, ಮಹಿಳೆಯರಿಗೆ ವೈದ್ಯಕೀಯ ಶಿಕ್ಷಣ ಹಾಗು ವಿದೇಶ ಪ್ರಯಾಣ ಎರಡೂ ನಿಷಿದ್ಧವಾಗಿದ್ದ ಆ ಕಾಲದಲ್ಲಿ, ಎಲ್ಲರನ್ನು ವಿರೋಧಿಸಿ, ಒಂದು ಕ್ರಿಸ್ಚಿಯನ್ ಮಿಷಿನರಿಯ ಸಹಾಯದಿಂದ ಅಮೆರಿಕಾದ ಪೆನ್ಸಿಲ್ವೇನಿಯಾ ಮಹಿಳಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದು ಭಾರತಕ್ಕೆ ಮರಳಿದರು, ಎಂದರು. ಪ್ರಾಂಶುಪಾಲೆ ಡಾ. ಅನಸೂಯ ರೈ ಅಧ್ಯಕ್ಷತೆ ವಹಿಸಿ ಶುಭಕೋರಿದರು.


ಕಾರ್ಯಕ್ರಮ ಸುಮ ಅವರ ದೈವಿಕ ಪ್ರಾರ್ಥನೆಯಿಂದ ಶುರುವಾಯಿತು. ಬ್ರಿಜೇಶ್ ಸ್ವಾಗತಿಸಿದರೆ, ಪ್ರತೀಕಾ ಧನ್ಯವಾದ ಸಲ್ಲಿಸಿದರು. ಚೇತನ್ ರವರು ರಸಪ್ರಶ್ನಾಗುಚ್ಛ ತಯಾರಿಸಿ ಹಂಚಿದರು. ಸಂಘದ ಕಾರ್ಯದರ್ಶಿಯರಾದ ವೇದಾಶಿನಿ ಮತ್ತು ಮೆಲ್ರೀನ್ ಕಾರ್ಯಕ್ರಮ ನಡೆಸಿಕೊಟ್ಟರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top