|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾಮಾಜಿಕ ನ್ಯಾಯದಿಂದ ಸುಸ್ಥಿರ ಅಭಿವೃದ್ಧಿ

ಸಾಮಾಜಿಕ ನ್ಯಾಯದಿಂದ ಸುಸ್ಥಿರ ಅಭಿವೃದ್ಧಿ

ಔಪಚಾರಿಕ ಉದ್ಯೋಗದ ಬೆಳವಣಿಗೆಯಿಂದ ಸಾಮಾಜಿಕ ನ್ಯಾಯ

ಫೆಬ್ರವರಿ 20- ವಿಶ್ವ ಸಾಮಾಜಿಕ ನ್ಯಾಯದ ದಿನ

ಅನೌಪಚಾರಿಕ ಉದ್ಯೋಗದಿಂದ ಔಪಚಾರಿಕ ಉದ್ಯೋಗ ಸಾಮಾಜಿಕ ಪ್ರಗತಿಯ ಸಂಕೇತ 




-ಡಾ.ಎ.ಜಯ ಕುಮಾರ ಶೆಟ್ಟಿ


ನಿರಂತರ ಸಾಮಾಜಿಕ ನ್ಯಾಯ ಮತ್ತು ನ್ಯಾಯಯುತ ಜಾಗತೀಕರಣದ ಬದ್ಧತೆಯ ಕಡೆಗೆ ವಿಶ್ವಸಂಸ್ಥೆಯ ಒಂದು ಹೆಜ್ಜೆಯಾಗಿ "ವಿಶ್ವ ಸಾಮಾಜಿಕ ನ್ಯಾಯದ ದಿನ" ದ ಆಚರಣೆಯನ್ನು 2009 ರಿಂದ, ಪ್ರತಿ ಫೆಬ್ರವರಿ 20 ರಂದು ಜಾಗತಿಕವಾಗಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಸಾಮಾಜಿಕ ನ್ಯಾಯದ ಅನ್ವೇಷಣೆಯು ಸಾಮಾಜಿಕ ಅಭಿವೃದ್ಧಿ ಮತ್ತು ಮಾನವ ಘನತೆಯನ್ನು ಉತ್ತೇಜಿಸುವ ಉದ್ದೇಶದ ಭಾಗವಾಗಿದೆ.


ಬಡತನ ಹಾಗೂ ಅಸಮಾನತೆ ನಿವಾರಣೆ-ಪ್ರಗತಿಗೆ ಪೂರಕ:

ಆರ್ಥಿಕ ಬಡತನ ಹಾಗೂ ಸಾಮಾಜಿಕ ಅಸಮಾನತೆ ಎಲ್ಲಿಯೇ ಇರಲಿ ಅದು ಅಭಿವೃದ್ದಿಗೆ ಮಾರಕ ಎಂಬ ಸತ್ಯದ ಅರಿವಿನ ಪಲವೇ ಈ ದಿನಾಚರಣೆ. ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಆವಶ್ಯ. ಸಾಮಾಜಿಕ ನ್ಯಾಯವು ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಮೃದ್ದ ಸಹಬಾಳ್ವೆಗೆ ಆಧಾರವಾಗಿರುವ ತತ್ವವಾಗಿದೆ. ಗಂಭೀರ ಸಾಮಾಜಿಕ ಸಮಸ್ಯೆಯಾದ ಸಾಮಾಜಿಕ ಅಸಮಾನತೆಯನ್ನು ತೊಡೆದುಹಾಕುವ ಪ್ರಯತ್ನಗಳಿಗೆ ಉತ್ತೇಜನ ನೀಡಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಆಶಯದಿಂದ ಪ್ರತಿ ವರ್ಷ ಫೆಬ್ರವರಿ 20 ರಂದು ಸಾಮಾಜಿಕ ನ್ಯಾಯದ ವಿಶ್ವ ದಿನವನ್ನು ಆಚರಿಸಲಾಗುತ್ತದೆ. ಆಚರಣೆಯು ಉದ್ಯೋಗ, ಸಾಮಾಜಿಕ ರಕ್ಷಣೆ, ಸಾಮಾಜಿಕ ಸಂವಾದ ಮತ್ತು ಮೂಲಭೂತ ತತ್ವಗಳು ಮತ್ತು ಕೆಲಸದಲ್ಲಿ ಹಕ್ಕುಗಳ ಮೂಲಕ ಎಲ್ಲರಿಗೂ ನ್ಯಾಯಯುತ ಫಲಿತಾಂಶಗಳನ್ನು ಖಾತರಿಪಡಿಸುತ್ತದೆ.


ಜಾಗತಿಕ ಪ್ರಗತಿಗಾಗಿ ಸಾಮಾಜಿಕ ಅಭಿವೃದ್ಧಿ

ಇಂದು ಜಗತ್ತಿನಲ್ಲಿ ಅನೇಕ ಸಾಮಾಜಿಕ ನ್ಯಾಯದ ಸಮಸ್ಯೆಗಳಿವೆ. ಸಾಮಾಜಿಕ ನ್ಯಾಯದ ವಿಶ್ವ ದಿನವು ತಾರತಮ್ಯ, ಬಡತನ, ಲಿಂಗ ಸಮಾನತೆ ಮತ್ತು ಎಲ್ಲರಿಗೂ ನ್ಯಾಯದ ಪ್ರವೇಶದಂತಹ ಸಮಸ್ಯೆಗಳನ್ನು ನಿಭಾಯಿಸಲು ಪ್ರಯತ್ನಗಳನ್ನು ಉತ್ತೇಜಿಸುವ ಅಗತ್ಯವನ್ನು ಗುರುತಿಸುತ್ತದೆ.


ವಿಶ್ವಸಂಸ್ಥೆಯ ಮಾಜಿ ಕಾರ್ಯದರ್ಶಿ-ಜನರಲ್ ಬಾನ್ ಕಿ-ಮೂನ್ ಪ್ರಕಾರ, “ಜಗತ್ತಿನಾದ್ಯಂತ ಬಡವರು ಮತ್ತು ಶ್ರೀಮಂತರ ನಡುವಿನ ಅಂತರವು ವಿಸ್ತಾರವಾಗಿದೆ ಮತ್ತು ಬೆಳೆಯುತ್ತಿದೆ. ಎಲ್ಲರಿಗೂ ಅವಕಾಶವನ್ನು ಹೆಚ್ಚಿಸಲು ಜಾಗತಿಕ ಒಗ್ಗಟ್ಟಿನ ಶಕ್ತಿಯನ್ನು ಎತ್ತಿ ಹಿಡಿಯಲು ಸಾಮಾಜಿಕ ನ್ಯಾಯದ ವಿಶ್ವ ದಿನವನ್ನು ಆಚರಿಸಲಾಗುತ್ತದೆ”. 

ಕುಟುಂಬದ ಆಸ್ತಿಯಂತೆ ಉದ್ಯೋಗ, ಶಿಕ್ಷಣ, ಆರ್ಥಿಕ, ರಾಜಕ್ಯ ಅವಕಾಶಗಳು ಜಾತಿ-ಮತ ಬೇಧಗಳಿಲ್ಲದೆ ಸಮಾನವಾಗಿ ತನ್ನ ಪ್ರಜೆಗಳಿಗೆ ಹಂಚಿಕೆಯಾಗಬೇಕು. ಅವಕಾಶವಂಚಿತರಿಗೆ ಸಮಾನ ಅವಕಾಶಗಳನ್ನು ಕೊಡಮಾಡುವ ವ್ಯವಸ್ಥಿತ ಪ್ರಯತ್ನಗಳು ಸಹ್ಯ ಪ್ರಗತಿಗೆ ಅಗತ್ಯ ಹಾಗೂ ಪೂರಕ ಅಂಶ.


ಪ್ರತಿ ಸಮಾಜದಲ್ಲಿಯೂ ಐಕ್ಯತೆ, ಸಾಮರಸ್ಯ, ಸೌಹಾರ್ದತೆ, ಮಾನವ ಹಕ್ಕುಗಳ ನ್ಯಾಯವಿದ್ದರೆ ಸಮಾಜದ ಅಭಿವೃದ್ಧಿಯಾಗುತ್ತದೆ. ಇದರಿಂದ ದೇಶ ಬೆಳೆಯುತ್ತದೆ. ದೇಶದ ಅಭಿವೃದ್ದಿಯಾದರೆ ವಿಶ್ವವೇ ಪ್ರಗತಿಪಥದಲ್ಲಿರುತ್ತದೆ ಎಂಬುದು ವಿಶ್ವಸಂಸ್ಥೆಯ ಅಭಿಪ್ರಾಯ.


ಸಾಮಾಜಿಕ ನ್ಯಾಯದ ನಾಲ್ಕು ತತ್ವಗಳು:

"ಸಾಮಾಜಿಕ ನ್ಯಾಯ" ಎಂಬ ಪದವು ಮೊದಲು ಆರ್ಥಿಕ ಸಂಪನ್ಮೂಲಗಳಿಗೆ ಮಾತ್ರ ಅನ್ವಯಿಸಲಾಗಿತ್ತು ಆದರೆ ಇಂದು ಮಾನವ ಹಕ್ಕುಗಳೊಂದಿಗೆ ಹೊಂದಿಕೊಂಡಿದೆ. ಸಂಪನ್ಮೂಲಗಳ ವಿತರಣೆ, ಜನರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಮತ್ತು ಸೇವೆಗಳು ಮತ್ತು ಅವಕಾಶಗಳಿಗೆ ಪ್ರವೇಶ ಇವೆಲ್ಲವೂ ಸಾಮಾಜಿಕ ನ್ಯಾಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಾಮಾಜಿಕ ನ್ಯಾಯದ ನಾಲ್ಕು ಪರಸ್ಪರ ಸಂಬಂಧಿತ ತತ್ವಗಳಿವೆ; ನ್ಯಾಯ (ಇಕ್ವಿಟಿ), ಪ್ರವೇಶಾಧಿಕಾರ, ಭಾಗವಹಿಸುವಿಕೆ ಮತ್ತು ಹಕ್ಕುಗಳು.


ಸಮಾನ ಪ್ರವೇಶಾಧಿಕಾರ: ಜನರಿಗೆ ಬದುಕು ಸಹ್ಯವಾಗಲು ಆರೋಗ್ಯಕರ ಸಮಾಜವು ಸೇವೆಗಳು ಮತ್ತು ಸಂಪನ್ಮೂಲಗಳನ್ನು ನೀಡಬೇಕು. ಇವುಗಳಲ್ಲಿ ಶಿಕ್ಷಣ, ಆರೋಗ್ಯ ರಕ್ಷಣೆ, ವಸತಿ ಮತ್ತು ಆಹಾರ ಸೇರಿವೆ. ಆದಾಗ್ಯೂ ಅನೇಕ ಸಮಾಜಗಳಲ್ಲಿ, ಅಸಮಾನ ಪ್ರವೇಶವಿದೆ. ಶಿಕ್ಷಣವು ಪರಿಣಾಮಗಳಿಗೆ ಒಂದು ಪ್ರಮುಖ ಉದಾಹರಣೆಯಾಗಿದೆ. ಒಂದು ನಿರ್ದಿಷ್ಟ ವರ್ಗದ ಜನರು ಮಾತ್ರ ಉತ್ತಮ ಶಾಲೆಗಳನ್ನು ಪಡೆಯಲು ಸಾಧ್ಯವಾದರೆ, ಕಡಿಮೆ-ವೇತನದ ಉದ್ಯೋಗದಲ್ಲಿರುವವರು ಉತ್ತಮ ಶಿಕ್ಷಣ ಸೌಲಭ್ಯದಿಂದ ಸಹಜವಾಗಿ ವಂಚಿತರಾಗುತ್ತಾರೆ. ಇದು ಆ ಮಕ್ಕಳು ಬೆಳೆಯಲು ಮತ್ತು ಕೆಲವು ಉದ್ಯೋಗಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರೂ ಸಮಾನ ಪ್ರವೇಶಾಧಿಕಾರವನ್ನು ಹೊಂದಿದಾಗ ಮಾತ್ರ ಆರೋಗ್ಯಪೂರ್ಣ ಅಭಿವೃದ್ಧಿ ಸಾಧ್ಯ.


ನ್ಯಾಯಯುತ ಸಮಾಜ: ಸಾಮಾಜಿಕ ನ್ಯಾಯವು ಸಮಾನತೆಯ ಬಗ್ಗೆ ಮಾತ್ರ ಕಾಳಜಿವಹಿಸಿದರೆ, ಅದು ನ್ಯಾಯಯುತ ಸಮಾಜಕ್ಕೆ ಕಾರಣವಾಗುವುದಿಲ್ಲ. ಹೆಚ್ಚು ಸಹಾಯದ ಅಗತ್ಯವಿರುವ ವ್ಯಕ್ತಿಗೆ ಅನುಕೂಲವಾಗುವಂತೆ ವ್ಯವಸ್ಥೆಯ ಒದಗಣೆ ಮುಖ್ಯವಾಗುತ್ತದೆ.


ಭಾಗವಹಿಸುವಿಕೆಯ ಅವಕಾಶ: ಸಮಾಜವು ಪ್ರತಿಯೊಬ್ಬರೂ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು. 


ಮಾನವ ಹಕ್ಕುಗಳು:  ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಒಂದೇ ನಾಣ್ಯದ ಎರಡು ಮುಖಗಳು. ಸಮಾಜವು ನ್ಯಾಯಯುತವಾಗಿರಲು, ಅದು ಪ್ರತಿಯೊಬ್ಬರ ನಾಗರಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು. ಈ ಹಕ್ಕುಗಳು ಬದುಕುವ ಹಕ್ಕು, ವಾಕ್ ಸ್ವಾತಂತ್ರ್ಯದ ಹಕ್ಕು, ಮತದಾನದ ಹಕ್ಕು, ನ್ಯಾಯಯುತ ವಿಚಾರಣೆಯ ಹಕ್ಕು ಇತ್ಯಾದಿಗಳನ್ನು ಒಳಗೊಂಡಿವೆ.  


2022 ರ ಘೋಷವಾಕ್ಯ: ಔಪಚಾರಿಕ ಉದ್ಯೋಗದ ಮೂಲಕ ಸಾಮಾಜಿಕ ನ್ಯಾಯ 

ಬಡತನ ಮತ್ತು ಅಸಮಾನತೆಯನ್ನು ಕಡಿಮೆ ಮಾಡಲು 2022 ರ ವಿಶ್ವ ಸಾಮಾಜಿಕ ನ್ಯಾಯ ದಿನದ ಪೂರ್ವಾಪೇಕ್ಷಿತವಾಗಿ ಉದ್ಯೋಗದ ಔಪಚಾರಿಕೀಕರಣದ ಮೇಲೆ ಕೇಂದ್ರೀಕರಿಸಲಾಗುತ್ತದೆ. ಇತ್ತೀಚೆಗಿನ ದಶಕಗಳಲ್ಲಿ ಜಾಗತೀಕರಣ, ಡಿಜಿಟಲ್ ಆರ್ಥಿಕತೆ, ಔದ್ಯೋಗೀಕರಣ, ಹೊಸದಾಗಿ ಅವತರಿಸುತ್ತಿರುವ ಉದ್ಯೋಗ ಉದ್ಯಮಗಳು  ಸಹಜವಾಗಿ ಹೊಸ ಅವಕಾಶ ಹಾಗೂ ಆಯಾಮವನ್ನು ಸೃಷ್ಟಿಸಿ ಸಂಚಲನ ಮೂಡಿಸಿದೆ. ಅದರೊಂದಿಗೆ ಒಲಗೊಳ್ಳುವ ಹಾಗೂ ಸಾಮಾಜಿಕ ನ್ಯಾಯ ಒದಗಿಸಿ ಸುಸ್ಥಿರ ಬೆಳವಣಿಗೆಯನ್ನು ಸಾಕ್ಷಾತ್ಕಾರಗೊಳಿಸುವಲ್ಲಿ ಮಂದಗತಿಯನ್ನು ಕಾಣಬಹುದಾಗಿದೆ. 


ವಿಶ್ವದ ಉದ್ಯೋಗಿಗಳ ಜನಸಂಖ್ಯೆಯ ಶೇಕಡಾ 60 ಕ್ಕಿಂತ ಹೆಚ್ಚು, ಅಂದರೆ 2 ಬಿಲಿಯನ್ ಮಹಿಳೆಯರು, ಪುರುಷರು ಮತ್ತು ಯುವಕರು, ಅನೌಪಚಾರಿಕ ಆರ್ಥಿಕತೆಯಲ್ಲಿ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ. COVID-19 ಸಾಂಕ್ರಾಮಿಕವು ಅನೌಪಚಾರಿಕ ಆರ್ಥಿಕತೆಯಲ್ಲಿ ಕಾರ್ಮಿಕರ ದುರ್ಬಲತೆಯ ಮೇಲೆ ಬೆಳಕು ಚೆಲ್ಲಿದೆ. ಅನೌಪಚಾರಿಕ ಕೆಲಸಗಾರರು ಸಾಮಾನ್ಯವಾಗಿ ಯಾವುದೇ ರೀತಿಯ ಸಾಮಾಜಿಕ ರಕ್ಷಣೆ ಅಥವಾ ಉದ್ಯೋಗ ಸಂಬಂಧಿತ ಪ್ರಯೋಜನಗಳ ಕೊರತೆಯಿಂದಾಗಿ, ಔಪಚಾರಿಕ ಕೆಲಸಗಾರರಿಗೆ ಹೋಲಿಸಿದರೆ ಹೆಚ್ಚು ಬಡವರಾಗಿರುತ್ತಾರೆ. ಹೆಚ್ಚಿನ ಜನರು, ಆದರೆ ಔಪಚಾರಿಕ ಆರ್ಥಿಕತೆಯಲ್ಲಿ ಅವಕಾಶಗಳ ಕೊರತೆಯಿಂದಾಗಿ ಅನೌಪಚಾರಿಕ ಕ್ಷೇತ್ರವನ್ನು ಪ್ರವೇಶಿಸುತ್ತಾರೆ.  


ಔಪಚಾರಿಕ ಉದ್ಯೋಗದ ಬೆಳವಣಿಗೆ ದೀರ್ಘಾವಧಿ ಪ್ರಗತಿಗೆ ಪೂರಕ:

ಉದ್ಯಮದ ವಿಸ್ತರಣೆ ಹಾಗೂ ಪ್ರಗತಿಗೆ ಪೂರಕವಾಗಬಲ್ಲ ಔಪಚಾರಿಕ ಉದ್ಯೋಗ ಉದ್ಯಮಸ್ನೇಹಿ ವಾತಾವರಣವನ್ನೂ ಸೃಷ್ಟಿಸಬಲ್ಲುದು. ಅಲ್ಪಾವಧಿಯಲ್ಲಿ ಅನೌಪಚಾರಿಕ ಉದ್ಯೋಗ ಉದ್ಯಮವಲಯದಲ್ಲಿ ಬಹಳ ಸರಳ ಹಾಗೂ ಲಾಭದಾಯಕ ಅಂತ ಅನ್ನಿಸಿದರೂ ದೀರ್ಘಾವಧಿಯ ಬೆಳವಣಿಗೆಗೆ ಮಾರಕ ಎಂಬ ಸತ್ಯವನ್ನು ಅರಿತುಕೊಳ್ಳಬೇಕಾಗಿದೆ. 


ಸಾಮಾಜಿಕ ಸಮಾನತೆ, ಆರ್ಥಿಕತೆಯ ಸ್ಥಿರತೆ ಹಾಗೂ ಸುಸ್ಥಿರ ಅಭಿವೃದ್ದಿಗೆ ಪೂರಕವಾದ ಔಪಚಾರಿಕ ಉದ್ಯೋಗದ ಪ್ರಮಾಣದ ಹೆಚ್ಚಳಕ್ಕೆ ಅನುಕೂಲಕರವಾದ ಮಾನವ ಅಭಿವೃದ್ದಿ  ಸ್ನೇಹಿ ಪರಿಸರದ ನಿರ್ಮಾಣಕ್ಕೆ ಒತ್ತು ನೀಡಬೇಕಾಗಿದೆ.


ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನ, ಉದ್ಯೋಗ, ಸಾಮಾಜಿಕ ಭದ್ರತೆ, ಲಿಂಗ ಸಮಾನತೆ ಮತ್ತು ಸಾಮಾಜಿಕ ಸಮಾನತೆಯ ಎಲ್ಲ ಹಕ್ಕುಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸುವುದು ಒಂದು ಬಹುಮುಖ್ಯ ಸವಾಲಾಗಿ ಉಳಿದಿದೆ. ಔಪಚಾರಿಕತೆಗೆ ಪರಿವರ್ತನೆಯನ್ನು ಉತ್ತೇಜಿಸುವ ಮೂಲಕ ಬಡತನ ಮತ್ತು ಅಸಮಾನತೆಗಳನ್ನು ಕಡಿಮೆ ಮಾಡಲು ಸಾಧ್ಯ. ಉದ್ಯಮಸ್ನೇಹಿ ವಾತಾವರಣದೊಂದಿಗೆ ಅನೌಪಚಾರಿಕದಿಂದ ಔಪಚಾರಿಕ ಉದ್ಯೋಗಕ್ಕಪರಿವರ್ತನೆಗೆ ಅನುಕೂಲವಾಗುವಂತೆ ಅಗತ್ಯ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಉದ್ಯಮ ಹಾಗೂ ಮಾನವ ಅಭಿವೃದ್ಧಿ ಸ್ನೇಹಿ ಪರಿಸರ ನಮ್ಮದಾಗಲಿ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم