ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ- ದಾಸರ ವಾಣಿಯ ಸ್ವಾರಸ್ಯ

Upayuktha
0

ಪುರಂದರ ದಾಸರ ಅನೇಕ ಉತ್ಕೃಷ್ಟ ರಚನೆಗಳಲ್ಲಿ ಇದೂ ಒಂದು. ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ ಹರಿ ಕೊಡದ ಕಾಲಕ್ಕೆ ಬಾಯಿ ಬಿಡುವಲ್ಯೊ ಪ್ರಾಣಿ.. ಎಂದು ದಾಸರು ನಮ್ಮ ಅವಸ್ಥೆಯನ್ನು ನೋಡಿ ವ್ಯಂಗವಾಡಿದ ಪರಿ ಅನನ್ಯ. ಅಂದಿನ ದಾಸರೆಲ್ಲರ ರಚನೆಗಳು ಬರಿದೆ ಪದ್ಯಗಳಾಗಿರಲಿಲ್ಲ. ಅದು ತಪ್ಪು ದಾರಿ ಹಿಡಿಯುವವರಿಗೆ ಚಾಟಿ ಏಟಿನಂತಿದ್ದವು. ಮಾತ್ರವಲ್ಲ ಸರಿ ದಾರಿಯಲ್ಲಿ ಮುಂದಡೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದವು. ಯಾವುದೇ ಸಾಧಕನಾಗಲಿ ಸಾಮಾನ್ಯ ವ್ಯಕ್ತಿಯೇ ಆಗಲಿ ದಾಸರ ಇಂಥ ರಚನೆಗಳನ್ನು ಉಪೇಕ್ಷಿಸುವಂತೆಯೇ ಇರಲಿಲ್ಲ. ಇದು ನಮ್ಮ ಜೀವನದಲ್ಲಿ ಹಲವಾರು ಬಾರಿ ಅನುಭವಕ್ಕೆ ಬರುತ್ತದೆ. ಅವಕಾಶಗಳು ಪ್ರತಿಯೊಬ್ಬರಿಗೂ ಬರುತ್ತವೆ. ಅಂಥ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವವರೇ ಜಾಣರಾಗುತ್ತಾರೆ.  


ಹರಿ ನಮಗೆ ಕೊಡುವುದಾದರೆ ಅದು ನಮ್ಮ ಕರ್ಮಗಳಿಗನುಸಾರವಾಗಿ. ಸದಾಚಾರ, ಸತ್ಚಿಂತನೆ ಮೊದಲಾದ ಸದ್ಗುಣ ಇರುವವನಿಗೆ ಹರಿ ಕೊಡುವ ಊಟ ರುಚಿಕರವೇ ಆಗಿರುತ್ತದೆ. ಆವಾಗಲೆ ಅದನ್ನು ಸ್ವೀಕರಿಸುವವನಿಗೆ  ಅದರ ರುಚಿ ಗೊತ್ತಾಗುವುದು. ಅದರ ಹೊರತಾಗಿ ಹಳಸಿದ ಮೇಲೆ ಸ್ವೀಕರಿಸಲು ತೊಡಗಿದರೆ ಅದಕ್ಕೆ ಹರಿ ಹೊಣೆಯಾಗಲಾರ. ಆದ್ದರಿಂದ ಹರಿ ಕೊಟ್ಟ ಕಾಲದಲ್ಲಿ ಸ್ವೀಕರಿಸಬೇಕು, ಅನುಭವಿಸಬೇಕು, ತೃಪ್ತನಾಗಬೇಕು.  ಇವತ್ತು ನಾವು ಇದನ್ನು ಮರೆತಿದ್ದರಿಂದ ಬಾಯಿ ಬಾಯಿ ಬಿಡುವಂತಾಗಿರುವುದು ಮಾತ್ರ ಸತ್ಯ. ಉದಾಹರಣೆಗೆ ನಾವು ಸಣ್ಣವರಿರುವಾಗ ಪ್ರತಿಯೊಬ್ಬರು ಬಾಲ್ಯ, ಕೌಮಾರ್ಯ, ಯೌವನ, ವೃದ್ಧಾಪ್ಯ ಮುಂತಾದ ಸ್ಥಿತಿಗಳನ್ನು ಸಹಜವಾಗಿ ಅನುಭವಿಸಿ ಮುಂದೆ ಹೋಗುತ್ತಿದ್ದರು. ವರ್ತಮಾನದಲ್ಲಿ ನಾವಿದನ್ನು ಕಳಕೊಂಡಿದ್ದೇವೆ. ನಮಗೆ ಹರಿ ಕೊಟ್ಟಂಥ ಬಾಲ್ಯವಿದೆ. ಆದರೆ ನಾವದನ್ನು ಅನುಭವಿಸಲಾರೆವು. ಕಾರಣ ಮಗು ಬೆಳೆದು ದೂಡ್ಡವನಾದ ಮೇಲೆ ಅತ್ಯುನ್ನತ ಮಟ್ಟದ ಜ್ಞಾನಿಯಾಗಬೇಕೆಂಬ ಹಂಬಲ. ಅದಕ್ಕಾಗಿ ಮಗುವು ಮಾತನಾಡಲು ಪ್ರಾರಂಭವಾದೊಡನೆಯೇ ಅದಕ್ಕೆ ಒತ್ತಡಗಳನ್ನು ಹೇರುತ್ತೇವೆ. ಏನೇನೋ ಅಸಹಜವಾದದ್ದನ್ನು ಕಲಿಸುತ್ತೇವೆ. ಶಾಲೆಯಲ್ಲಿ ಕಲಿತ ವಿದ್ಯೆಯೇ ಶ್ರೇಷ್ಠ ಎಂಬ ಮನೋಭಾವದಿಂದ ಪ್ರಕೃತಿಯಿಂದ ಕಲಿಯುವ ಯಾವತ್ತೂ ಪಾಠವನ್ನು ಮಕ್ಕಳಿಗೆ ಸಿಗದಂತೆ ಮಾಡುತ್ತೇವೆ. ಜತೆಗೆ ಆಂಗ್ಲ ಮಾಧ್ಯಮವೆಂಬ ವ್ಯಾಮೋಹದಿಂದ ಮಾತೃಭಾಷೆಯನ್ನೂ ಬದಿಗೆ ಸರಿಸಿದಾಗ ಮಗುವು ಬಾಲ್ಯವೆಂಬ ಸ್ಥಿತಿಯನ್ನು ಅನುಭವಿಸದೇ ದಾಟಿ ಬಂದಂತೆಯೇ. ಅಲ್ಲಿಗೆ ಹರಿ ಕೊಟ್ಟ ಬಾಲ್ಯವನ್ನು ಉಣಲಾಗಲಿಲ್ಲ. ಮುಂದೆ ಕೌಮಾರ್ಯ.. ಇಲ್ಲಿ ಕೂಡ ಸಹಜ ಬದುಕಿಲ್ಲ. ಮರ ಹತ್ತುವುದು, ಕಲ್ಲೆಸೆಯುವುದು, ನೀರಾಟಗಳು, ಲಗೋರಿ, ಕಬಡ್ಡಿಯಂಥ ಗ್ರಾಮೀಣ ಆಟಗಳು ಅಂದರೆ ಕೌಮಾರ್ಯದಲ್ಲಿರಬೇಕಾದ ಕುತೂಹಲಗಳನ್ನು, ಚೇಷ್ಟೆಗಳನ್ನು ವಿದ್ಯಾಭ್ಯಾಸ ಎನ್ನುವ ಜಾಲದಲ್ಲಿ ಹೊಸ ಹೊಸ ತರಬೇತಿಗಳ, ಮೊಬೈಲ್ಗಳ ಮಾಯೆಯು ನುಂಗಿದಾಗ ಹರಿ ಕೊಟ್ಟ ಕೌಮಾರ್ಯವನ್ನೂ ಉಣಲಾಗಲಿಲ್ಲ.


ಮುಂದೆ ಯೌವನ. ಇಲ್ಲಿ ಮದುವೆ, ಮಕ್ಕಳ ಜತೆಗೆ ಯೌವನದ ಸುಖವನ್ನು ಅನುಭವಿಸುವಂತೆ ಹರಿ ಅವಕಾಶ ಕೊಟ್ಟಾಗ, ನಾವು ಕೆಲಸ ಕೆಲಸವೆಂದು ಅದ್ಯಾವುದೋ ಬಂಧನದಲ್ಲಿ ವಿಲವಿಲ ಒದ್ದಾಡುತ್ತಿರುವೆವು. ಗಂಡನಿಗೆ ರಾತ್ರಿ ಕೆಲಸ ಹೆಂಡತಿಗೆ ಹಗಲು ಕೆಲಸ ಒಂದು ಕಡೆಯಾದರೆ, ಗಂಡ ಯಾವುದೋ ಊರಿನಲ್ಲಿ ಹೆಂಡತಿ ಯಾವುದೋ ಊರಿನಲ್ಲಿ ಇನ್ನೊಂದು ಕಡೆ. ಯಾವುದೋ ಕಾಣದ ಭವಿಷ್ಯದಲ್ಲಿ ಸುಖ ಸಿಗುವುದೆಂಬ ಕಲ್ಪನೆಯಲ್ಲಿ ಹೋರಾಟದ ಬದುಕು ಬದುಕುವಾಗ ಹರಿ ಕೊಟ್ಟಂಥ  ಯೌವನವೆಂಬ ಬಂಗಾರದಂಥ ಅವಕಾಶವನ್ನೂ ಉಣಲಾಗಲಿಲ್ಲ. ಮತ್ತೆ ನಡು ವಯಸ್ಸು... ಅತ್ತ ಯೌವನವೂ ಅಲ್ಲ ಇತ್ತ ವೃದ್ಧಾಪ್ಯವೂ ಅಲ್ಲ ಎನ್ನುವ ಸ್ಥಿತಿ. ಅಲ್ಲಾದರೂ ನಾವು ತೃಪ್ತಿಯಿಂದ ಇರುವೆವೋ.. ಬಹುಷಃ ಇಲ್ಲ. ಹಿಂದೆ ಯಾವುದನ್ನೂ ಉಣಲಾಗದಿರುವುದರಿಂದ ಹರಿಯ ಕೊಡುಗೆಯ ಮಹತ್ವವನ್ನೇ ಅರಿಯದೇ ಇರುವ ಮನಸ್ಥಿತಿ ನಮ್ಮದಾಗಿರುವುದರಿಂದ, ಜತೆಗೆ ಸಂಸಾರದ ತಾಪತ್ರಯಗಳಿಂದ, ಆರೋಗ್ಯ ಸಮಸ್ಯೆಗಳಿಂದ, ಭವಿಷ್ಯದ ಚಿಂತೆಗಳಿಂದ, ಮಕ್ಕಳ ಮದುವೆ ಮುಂಜಿ ಮುಂತಾದ ಸಂಭ್ರಮಗಳನ್ನೂ ಅನುಭವಿಸಲಾಗದಿದ್ದರೆ ಅದು ನಮ್ಮ ಪ್ರಾರಬ್ಧವಲ್ಲವೇ. ಅಂತು ಆ ಕಾಲದಲ್ಲೂ ಉಣಲಾಗದೆ ದಾಸರ ವಚನವನ್ನು ಸಮರ್ಥಿಸುವಂಥ ನಡೆ ನಮ್ಮದಾಗುತ್ತದೆ. ಮುಂದೆ ವೃದ್ಧಾಪ್ಯ ಇಲ್ಲಂತು ಹರಿ ಕೊಟ್ಟರೆ ಆರೋಗ್ಯ ಕೊಡಬೇಕು. ಅದನ್ನು ಅನುಭವಿಸುವ ಮನಸ್ಥಿತಿಯೂ ಇರಬೇಕು. ಆ ಕಾಲಕ್ಕಾಗುವಾಗ ದಂಪತಿಗಳಲ್ಲಿ ಯಾರಾದರೊಬ್ಬರ ಅಗಲಿಕೆಯೂ ಸಹಜವಾಗಿರುತ್ತದೆ. ಅದರ ನೋವನ್ನುಣ್ಣುವ ಆತ್ಮಸ್ಥೈರ್ಯ ಉಳಿದ ಜೀವಕ್ಕೆ ಖಂಡಿತ ಇರಲಾರದು. ಆವಾಗಲೇ ನಮಗನಿಸುವುದು ಹರಿ ನಮಗೆ ಏನೆಲ್ಲ ಅವಕಾಶಗಳನ್ನು ಕೊಟ್ಟಿದ್ದಾನೆ ಎಲ್ಲವನ್ನೂ ಉಪೇಕ್ಷಿಸಿದ್ದರಿಂದ, ಬರಿದೆ ದುಡ್ಡಿನ ಹಿಂದೆ ಹೋದದ್ದರಿಂದ, ಕೊನೆಗಾಲದಲ್ಲಿ ಬಾಯಿ ಬಾಯಿ ಬಿಡುವಂತಾದುದು ಅದೆಷ್ಟು ಸತ್ಯವೆಂದು. ಆದರೆ ಇದೆಲ್ಲವನ್ನು ಅರಿತುಕೊಳ್ಳುವಾಗ ನಾವು ಹಿಂತಿರುಗಿ ಬರಲಾರದಷ್ಟು ಬಾಳ ಪಯಣದಲ್ಲಿ ಮುಂದೆ ಹೋಗಿರುತ್ತೇವೆ. ಹಾಗೆಂದು ಈಗಿನ ಮಕ್ಕಳಿಗೆ ಈ ವಿಷಯವನ್ನು ಹೇಳಿದರೆ ಕೇಳುವ ಸ್ಥಿತಿಯಲ್ಲಿ ಮಕ್ಕಳೂ ಇರಲಾರರು ಹೆತ್ತವರೂ ಇರಲಾರರು. ಹಾಗಾದರೆ ವಿದ್ಯಾಭ್ಯಾಸ ಬೇಡವೇ ಎಂದರೆ, ಬೇಕು ಖಂಡಿತ ವಿದ್ಯಾಭ್ಯಾಸ ಬೇಕು. ಆದರೆ ನಾವು ಏನೇನನ್ನು ಯಾವ ಯಾವ ಕಾಲದಲ್ಲಿ ಸಹಜವಾಗಿ ಅನುಭವಿಸಬೇಕೋ ಅದನ್ನು ಸಾಧ್ಯವಾದಷ್ಟು ಅನುಭವಿಸಿ ಜತೆ ಜತೆಗೆ ತನ್ನ ಸ್ವಭಾವಕ್ಕೆ ತಕ್ಕಂಥ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಾಗ ಹರಿ ಕೊಟ್ಟದ್ದನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಯಾರನ್ನೋ ಅನುಕರಿಸಿ, ಯಾರನ್ನೋ ಮೆಚ್ಚಿಸಲು, ಯಾವುದೋ ಕಲ್ಪನೆಯ ಸುಖಕ್ಕಾಗಿ ವರ್ತಮಾನವನ್ನೇ ಬಲಿಕೊಟ್ಟು ಬದುಕುವ ನಾವು ಸಹಜ ಬದುಕನ್ನು ಬದುಕಿ ಬಾಳಲುಂಟೇ? 

ಹರಿ ಹರಿ ನೀನೇ ಗತಿ... ಕೊಡಬೇಕು ನೀನೇ ಮತಿ.. 

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top