ಬೆಂಗಳೂರು: ಅತ್ಯಂತ ಮೌಲಿಕ ವಿಚಾರಗಳ ಖಣಿಯಾಗಿರುವ ಸಾಂಸ್ಕೃತಿಕ ಪರಂಪರೆಯ ಪವಿತ್ರ ಚೇತನ, ಕನ್ನಡಕ್ಕೆ ಆಡು ಮಾತಿನ ಸೊಬಗನ್ನು, ಸೊಗಡನ್ನು ಕನ್ನಡ ಸಾರಸ್ವತ ಲೋಕಕ್ಕೆ ತುಂಬಿಕೊಟ್ಟ ಮಹಿಮಾನ್ವಿತ ಪುರಂದರದಾಸರ ಬಗ್ಗೆ ಅಧ್ಯಯನ ಮಾಡಲು ರಾಜ್ಯ ವಿಶ್ವವಿದ್ಯಾಲಯವೊಂದರಲ್ಲಿ ಅವರ ಹೆಸರಿಲ್ಲಿ ಅಧ್ಯಯನ ಪೀಠ ಆರಂಭಿಸಬೇಕು ಎಂದು ಹಿರಿಯ ಪತ್ರಕರ್ತ ಸುಧೀಂದ್ರ ರಾವ್ ಒತ್ತಾಯಿಸಿದರು.
ಅವರು, ಬಸವನಗುಡಿಯ ಉತ್ತರಾದಿಮಠದ ಶ್ರೀ ಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು. ಶ್ರೀ ಶ್ರೀನಿವಾಸ ಉತ್ಸವ ಬಳಗ, ದಾಸ ಸಾಹಿತ್ಯ ಪ್ರಚಾರ ಮಾಧ್ಯಮ ಬೆಂಗಳೂರು ಹಾಗೂ ಶ್ರೀ ಉತ್ತರಾದಿ ಮಠದ ಸಂಯುಕ್ತ ಆಶ್ರಯದಲ್ಲಿ ಈ ಉತ್ಸವ ಆಯೋಜಿಸಲಾಗಿತ್ತು.
‘ದಾಸರೆಂದರೆ ಪುರಂದರದಾಸರಯ್ಯ’ ವೆಂಬ ಹೆಗ್ಗಳಿಕೆಗೆ ಪಾತ್ರರಾದ ಪುರಂದರದಾಸರ ಸಮಗ್ರ ಸಾಹಿತ್ಯದ ಕುರಿತು ಸಂಗೀತಾಸಕ್ತರು ಅಧ್ಯಯನ ಮಾಡುವ ಸಲುವಾಗಿ ರಾಜ್ಯದ ವಿಶ್ವವಿದ್ಯಾಲಯವೊಂದರಲ್ಲಿ ಪುರಂದರದಾಸ ಅಧ್ಯಯನ ಪೀಠ ಸ್ಥಾಪಿಸುವ ಮೂಲಕ ದಾಸ ಸಾಹಿತ್ಯ ಪ್ರಭೆಯನ್ನು ಜಗತ್ತಿಗೆ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನವನ್ನು ಸಮರ್ಥವಾಗಿ ಮಾಡುವಂತಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಪ್ರತಿಕ್ರಿಯೆ ನೀಡಿ, ವಿಧಾನ ಮಂಡಲದ ಅಧಿವೇಶನದಲ್ಲಿ ಇದರ ಕುರಿತು ಸರ್ಕಾರದ ಗಮನ ಸೆಳಯುವುದಾಗಿ ತಿಳಿಸಿದರು.
ಅಯೋಜಕರಾದ ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷ ಡಾ.ಟಿ ವಾದಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಸನಾತನ ಸಂಸ್ಕೃತಿಯ ಜೀವಸ್ವರವಾಗಿರುವ ಸಾಹಿತ್ಯ ಮತ್ತು ಸಂಗೀತ ಪೋಷಣೆಯಲ್ಲಿ ಮತ್ತು ಸಾಮಾಜಿಕ ಸೇವಾ ಕೈಂಕರ‍್ಯದಲ್ಲಿ ತೊಡಗಿರುವ ಶ್ರೀನಿವಾಸ ಉತ್ಸವ ಬಳಗಕ್ಕೆ ಈಗ ದಶಮಾನೋತ್ಸವದ ಸಂಭ್ರಮ. ಕರ್ನಾಟಕ ಸಂಗೀತ ಪಿತಾಮಹ ದಾಸಶ್ರೇಷ್ಠ ಪುರಂದರದಾಸರ ಸ್ಮರಣೆ ನಿತ್ಯ ನಿರಂತರವಾಗುವಂತೆ ಬೆಂಗಳೂರು ಉತ್ತರಾದಿಮಠದ ದಿಗ್ವಿಜಯ ಲಕ್ಷ್ಮೀನರಸಿಂಹ ದೇವರ ಸನ್ನಿಧಿಯ ಆವರಣದಲ್ಲಿ ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ಪೂಜ್ಯ ಶ್ರೀಸತ್ಯಾತ್ಮತೀರ್ಥರಿಂದ ಸ್ಥಾಪಿತ ಪುರಂದರದಾಸರ ಏಕಶಿಲಾ ವಿಗ್ರಹ ಅನಾವರಣಗೊಂಡಿದ್ದು ಬೆಂಗಳೂರಿನ ಹೆಗ್ಗುರುತಾಗಿ ಸಜ್ಜನರ ಪಾವನ ತಾಣವಾಗಿದೆ ಎಂದು ತಿಳಿಸಿದರು.
ಶ್ರೀ ಶ್ರೀನಿವಾಸ ಉತ್ಸವ ಬಳಗವು ಸಂಗೀತ ಕ್ಷೇತ್ರ, ಸಮಾಜ ಸೇವೆ, ದಾಸಸಾಹಿತ್ಯ ಸಂಶೋಧನೆ, ಮುಂತಾದ ವಿಭಾಗಗಳಲ್ಲಿ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ನಾಡಿನ ಮಹನೀಯರನ್ನು ಬರಮಾಡಿಕೊಂಡು ‘ಹರಿದಾಸ ಅನುಗ್ರಹ ಪ್ರಶಸ್ತಿ’ಯನ್ನು ಕಳೆದ ಹತ್ತು ವರ್ಷಗಳಿಂದ ಕೊಡಮಾಡುತ್ತಿದೆ. ಈ ಬಾರಿ ‘ದಶಮಾನೋತ್ಸವ’ ಸಂಭ್ರಮದಲ್ಲಿ ನಾಡಿನ 14 ವಿದ್ವಾಂಸರನ್ನು ಆಮಂತ್ರಿಸಿ ‘ಹರಿದಾಸ ಅನುಗ್ರಹ ಪ್ರಶಸ್ತಿ’ಯನ್ನು ನೀಡುವ ಇಂಗಿತ ಈ ಬಳಗದ್ದಾಗಿದೆ. ಮುಂಬರುವ ಮಾರ್ಚ್ ತಿಂಗಳಲ್ಲಿ ಅದ್ಧೂರಿಯಿಂದ ‘ಪುರಂದರೋತ್ಸವ’ವನ್ನು ಆಯೋಜಿಸಿ, ಎಲ್ಲಾ ಮಹನೀಯರಿಗೆ, ಈ ವರ್ಷದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ವಿವರಿಸಿದರು.
ಕಾರ‍್ಯಕ್ರಮದ ಆರಂಭದಲ್ಲಿ ಯಲಹಂಕ ವಿಶ್ವ ಮಧ್ವ ಮಹಾಪರಿಷತ್ ನವರಿಂದ ಭಜನೆ, ರೇಖಾ ಪದಕಿ ತಂಡದವರಿ೦ದ ಭಜನೆ, ಜಯನಗರದ ಹಿರಣ್ಮಯಿ ಸಂಗೀತ ಶಾಲೆ, ಸಂತವಾಣಿ ಸುಧಾಕರ್ ತಂಡವರಿ೦ದ ಸಮೂಹ ಗಾಯನ, ಶ್ರೀ ಪುರಂದರ ಇಂಟರ್‌ನ್ಯಾಷನಲ್ ಟ್ರಸ್ಟ್ ನ ಡಾ. ಸುವರ್ಣ ಮೋಹನ್ ತಂಡದವರಿ೦ದ ಸಮೂಹ ಗಾಯನ ನಡೆಯಿತು.
ಸಭಾ ಕಾರ‍್ಯಕ್ರಮವನ್ನು ಶ್ರೀ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಡಾ. ಸತ್ಯಧ್ಯಾನಾಚಾರ‍್ಯ ಕಟ್ಟಿ ಅವರು ಕಾರ‍್ಯಕ್ರಮ ಉದ್ಘಾಟಿಸಿದರು. ಉಡುಪಿ ಪುತ್ತಿಗೆ ಮಠ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ಬಿ. ಗೋಪಾಲಾಚಾರ‍್ಯ ಅವರು ಉಪನ್ಯಾಸ ನೀಡಿದರು.
ಖ್ಯಾತ ಗಾಯಕ ಶಶಿಧರ ಕೋಟೆ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ಉತ್ಸವ ಬಳಗ ಕೆ ಆರ್ ಗುರುರಾಜ ರಾವ್, ಬಿ ಆರ್ ವಿ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ನಂತರ ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಗೀತಗಾಯನ ಕಾರ‍್ಯಕ್ರಮದೊಂದಿಗೆ ಸಂಪನ್ನವಾಯಿತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ