ಉಗುರುಗಳು ನಮ್ಮ ದೇಹದ ಅವಿಭಾಜ್ಯ ಅಂಗ. ಉಗುರುಗಳು ನಮ್ಮ ದೇಹದ ಕೈ ಬೆರಳು ಮತ್ತು ಕಾಲ್ಬೆರಳಿಗೆ ಅಂದವನ್ನು ನೀಡಿ ದೇಹದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅಂದವಾದ ಉಗುರು ನಮ್ಮ ದೇಹದ ಆರೋಗ್ಯದ ಸಂಕೇತ ಎಂದರೂ ತಪ್ಪಿಲ್ಲ. ನಮ್ಮ ದೇಹದಲ್ಲಿ ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣದ ಅಂಶ ಕಡಿಮೆಯಾದಾಗ ದೇಹದ ವಿವಿಧ ಅಂಗಗಳಲ್ಲಿ ಅದು ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಬಾಯಿಯಲ್ಲಿ ಹುಣ್ಣು, ಚರ್ಮ ಬಿಳಿಚಿಕೊಳ್ಳುವುದು, ಬಾಯಿಯಲ್ಲಿನ ನಾಲಿಗೆ ಬೋಳಾಗುವುದು, ಹಲ್ಲಿನಲ್ಲಿ ಬಿರುಕು, ಬಾಯಿಯಲ್ಲಿ ಉರಿ, ವಸಡಿನಲ್ಲಿ ರಕ್ತ ವಸರುವುದು, ಇವೆಲ್ಲವೂ ವಿಟಮಿನ್ ಕೊರತೆ, ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಕೊರತೆಯಿಂದ ಉಂಟಾಗುವ ಸಾಮಾನ್ಯ ಲಕ್ಷಣಗಳು. ವೈದ್ಯರು ರೋಗಿಯನ್ನು ರೋಗದ ಪತ್ತೆಗಾಗಿ ಪರೀಕ್ಷೆ ಮಾಡುವಾಗ ಮೊದಲಾಗಿ ನಾಲಗೆ ಕೆಳ ಭಾಗ, ಕಣ್ಣಿನ ರೆಪ್ಪೆಯ ಒಳ ಭಾಗ ಮತ್ತು ಉಗುರುಗಳನ್ನು ಹೆಚ್ಚಾಗಿ ಕೂಲಂಕುಷವಾಗಿ ಪರೀಕ್ಷೆ ಮಾಡುತ್ತಾರೆ. ಬಹುತೇಕ ಹೆಚ್ಚಿನ ರೋಗಗಳು ಈ ಅಂಗಗಳಲ್ಲಿ, ಒಂದಲ್ಲ ಒಂದು ರೀತಿಯಲ್ಲಿ ಪ್ರಕಟಗೊಳ್ಳುತ್ತದೆ. ಈ ನಿಟ್ಟಿನಲ್ಲಿ ರೋಗ ಪತ್ತೆ ಹಚ್ಚುವಾಗ ಉಗುರಿಗೆ ವಿಶೇಷವಾದ ಮಹತ್ವವಿರುತ್ತದೆ ಮತ್ತು ವೈದ್ಯರು ಉಗುರುಗಳನ್ನು ಹೆಚ್ಚು ಮುತುವರ್ಜಿ ವಹಿಸಿ ಪರೀಕ್ಷೆ ಮಾಡಿ ರೋಗ ಪತ್ತೆ ಹಚ್ಚುತ್ತಾರೆ. ಉಗುರುಗಳಲ್ಲಿ ಪ್ರಕಟಗೊಳ್ಳುವ ಬಹುತೇಕ ಲಕ್ಷಣಗಳು ದೇಹದ ಆರೋಗ್ಯದಲ್ಲಿನ ವೈಪರೀತ್ಯದ ಸಂಕೇತ ಆಗಿರುತ್ತದೆ ಎಂಬುದು ಸಾರ್ವಕಾಲಿಕ ಸತ್ಯವಾಗಿರುತ್ತದೆ. ಹೆಚ್ಚಿನ ಜನರು ಉಗುರಿನ ಅಂದ ಚಂದದ ಬಗ್ಗೆ ಗಮನ ಹರಿಸುತ್ತಾರೆಯೇ ಹೊರತು, ಉಗುರಿನ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ಹೆಚ್ಚಿನ ಜನರಿಗೆ ಉಗುರಿನಲ್ಲಿ ದೇಹದ ಅನಾರೋಗ್ಯ ಪ್ರಕಟವಾಗುತ್ತದೆ ಎಂಬ ವಿಚಾರವೂ ತಿಳಿದಿರುವುದಿಲ್ಲ. ಹೆಚ್ಚಿನ ರೋಗಗಳು ತ್ವಚೆಯಲ್ಲಿ ಪ್ರಕಟಗೊಂಡಂತೆ, ಉಗುರಿನಲ್ಲಿಯೂ ಪ್ರಕಟವಾಗುವ ಕಾರಣ, ದೈಹಿಕ ಪರೀಕ್ಷೆಯಲ್ಲಿ ಉಗುರಿನ ಪರೀಕ್ಷೆಗೆ ಹೆಚ್ಚಿನ ಮಹತ್ವವಿರುತ್ತದೆ.
ರೋಗಗಳು ಹೇಗೆ ಉಗುರಿನಲ್ಲಿ ಪ್ರಕಟವಾಗುತ್ತದೆ?
ಉಗುರು ನಮ್ಮ ದೇಹದ ಅವಿಭಾಜ್ಯ ಅಂಗ. ಉಗುರು ಕತ್ತರಿಸಿದಷ್ಟೂ ಬೆಳೆಯುತ್ತಲೇ ಇರುತ್ತದೆ. ಉಗುರಿನ ಆರೋಗ್ಯಕ್ಕೆ ಕ್ಯಾಲ್ಸಿಯಂ, ಕಬ್ಬಿಣ, ಖನಿಜಾಂಶ ಮತ್ತು ವಿಟಮಿನ್‍ಗಳು ಅತ್ಯಗತ್ಯ. ಈ ಅಂಶಗಳಲ್ಲಿ ಯಾವುದಾದರೂ ಒಂದರಲ್ಲಿ ಕೊರತೆಯಾದರೂ ಉಗುರಿನ ಅಂದಗೆಡುತ್ತದೆ ಮತ್ತು ಉಗುರಿನ ಬಣ್ಣ, ರಚನೆ ಮತ್ತು ಬೆಳವಣೆಗೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ.
ಉಗುರಿನ ರಚನೆ, ಬಣ್ಣ ಹಾಗೂ ಆಕೃತಿಯನ್ನು ಆಧರಿಸಿ ರೋಗಗ್ರಸ್ಥ ಉಗುರನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ.
1. ಬಿರುಕು ಉಗುರು
2. ಸೋಂಕಿತ ಉಗುರು ಅಥವಾ ಪಾರಾನೀಕಿಯಾ
3. ಬಣ್ಣದ ಉಗುರು
4. ಲ್ಯೂಕೋನಿಕಿಯಾ
5. ಕೊಯಿಲೊನಿಕಿಯಾ / ಚಟ್ಟೆ ಉಗುರು
6. ಟೆರ್ರಿ ಉಗುರು
7. ಉಗುರು ಕಳಚಿಕೊಳ್ಳುವುದು
1. ಬಿರುಕು ಉಗುರು:
ಉಗುರುಗಳಲ್ಲಿ ಬಿರುಕು ಬೀಳುವುದು, ಓಡೆದು ಹೋಗುವುದು, ಸಾಮಾನ್ಯವಾಗಿ ವಯಸ್ಸಾದವರಲ್ಲಿ ಹೆಚ್ಚು ಕಂಡು ಬರುತ್ತದೆ. ಉಗುರಿನಲ್ಲಿ ಎಣ್ಣೆ ಅಂಶ ಕಡಿಮೆಯಾದಾಗ ಈ ರೀತಿ ಬಿರುಕು ಬರುತ್ತದೆ. ಬ್ಯೂಲೈನ್ ಅಂದರೆ ದಪ್ಪಗಿನ ಗೆರೆಗಳ ಉಗುರಲ್ಲಿ ಕಾಣಿಸಿಕೊಳ್ಳುತ್ತದೆ. ಉಗುರಿನಲ್ಲಿ ಕುಳಿಗಳು ಕಂಡುಬರುತ್ತದೆ. ಪೋಷಕಾಂಶಗಳ ಕೊರತೆ, ಉಗುರಿನ ಬುಡದಲ್ಲಿ ಸೋಂಕು, ಕ್ಯಾನ್ಸರಿಗೆ ಕಿಮೋಥೆರಪಿ ಚಿಕಿತ್ಸೆ ಸಂದರ್ಭದಲ್ಲಿ ಈ ರೀತಿ ಬ್ಯೂಲೈನ್ ಕಂಡುಬರುತ್ತದೆ. ಹೆಚ್ಚಾಗಿ ಪೋಷಕಾಂಶಗಳ ಕೊರತೆಯಿಂದ ಈ ರೀತಿ ಬಿರುಕು ಉಗುರು ಕಂಡು ಬರುತ್ತದೆ.
2. ಪಾರಾನೀಕಿಯಾ ಅಥವಾ ಸೋಂಕಿತ ಉಗುರು
ನೀವು ನಿಮ್ಮ ಉಗುರನ್ನು ಸ್ವಚ್ಚವಾಗಿ ಇಟ್ಟುಕೊಳ್ಳದಿದ್ದರೆ ಉಗುರಿನ ಬುಡದಲ್ಲಿ ಮತ್ತು ಸಂಧಿಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳು ಮನೆ ಮಾಡಿ ಸಂಸಾರ ನಡೆಸುತ್ತದೆ. ಆಗ ಉಗುರಿನ ಬುಡದಲ್ಲಿ ನೋವು, ಊತ, ಕೀವು ತುಂಬಿಕೊಳ್ಳುತ್ತದೆ. ಒದ್ದೆ ಸಾಕ್ಸ್, ಕಾಲು ಯಾವತ್ತೂ ಒದ್ದೆ ಇಡುವುದು, ಶೀತದಲ್ಲಿ ಬರಿಗಾಲಲ್ಲಿ ಹೆಚ್ಚು ಓಡಾಡುವುದರಿಂದ ಬೇಗನೆ ಸೋಂಕು ತಗಲುತ್ತದೆ. ನೀವು ಮಧುಮೇಹದಿಂದ ಬಳಲುತ್ತಿದ್ದರೆ ನೀವು ಬಹುಬೇಗ ಸೋಂಕಿಗೆ ತುತ್ತಾಗುತ್ತೀರಿ. ಉಗುರುಗಳನ್ನು ನಿರಂತರ ಆರೈಕೆ ಮಾಡಿ ಒದ್ದೆ ಇರದಂತೆ ನೋಡಿಕೊಳ್ಳಬೇಕು. ಉಗುರಿನ ಬುಡದಲ್ಲಿ ಸ್ಯೂಡೋಮೊನಾಸ್ ಎಂಬ ಬ್ಯಾಕ್ಟೀರಿಯಾ ಸೋಂಕು ಇದ್ದಲ್ಲಿ, ಉಗುರಿನ ಬಣ್ಣ ಹಸಿರಾಗಿ ಬದಲಾಗಬಹುದು. ಶಿಲೀಂದ್ರ ಸೋಂಕು ಇದ್ದಲ್ಲಿ ಕಪ್ಪಾಗಲೂಬಹುದು. ತಕ್ಷಣವೇ ಚಿಕಿತ್ಸೆ ಪಡೆಯದಿದ್ದಲ್ಲಿ ಉಗುರು ತನ್ನಿಂತಾನೆ ಕಳಚಿ ಬೀಳುವ ಸಾಧ್ಯತೆಯೂ ಇರುತ್ತದೆ.
3. ಬಣ್ಣದ ಉಗುರು:
ಅರ್ಸೆನಿಕ್ ವಿಷ ತಗಲಿದಲ್ಲಿ ಉಗುರಿನಲ್ಲಿ ಬಿಳಿ ಗೆರೆಗಳು, ಅಧಿಕವಾಗಿ ಇರುತ್ತದೆ. ಅದೇ ರೀತಿ ಅತಿಯಾದ ಸಿಲ್ವರ್ ಸೇವನೆಯಿಂದ ಉಗುರು ನೀಲಿ ಬಣ್ಣಕ್ಕೆ ತಿರುಗುತ್ತದೆ. ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆಯಾದಲ್ಲಿ ಉಗುರು ಬಿಳಿಚಿಕೊಂಡು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಪ್ರೋಟಿನ್, ವಿಟಮಿನ್, ಕ್ಯಾಲ್ಸಿಯಂ ಕೊರತೆಯಿಂದ ಉಗುರಿನ ಬೆಳವಣೆಗೆ ಕುಂಠಿತವಾಗಿ, ಬಣ್ಣ ಬದಲಾಗುತ್ತದೆ. ರೋಗದ ತೀವ್ರತೆಗೆ ಅನುಗುಣವಾಗಿ ಬಣ್ಣ ಬದಲಾಗುತ್ತದೆ.
4. ಲ್ಯೂಕೋನಿಕಿಯಾ:
ಇದು ಉಗುರಿನಲ್ಲಿ ಕಾಣಿಸಿಕೊಳ್ಳುವ ಬಿಳಿ ಕಲೆಗಳು. ಇದು ಸಾಮಾನ್ಯವಾಗಿ ಹೆಚ್ಚಿನ ಜನರಲ್ಲಿ ಕಂಡುಬರುತ್ತದೆ ಮತ್ತು ನಿರುಪದ್ರವಿಯಾಗಿರುತ್ತದೆ. ಹೆಚ್ಚಾಗಿ ಕ್ಯಾಲ್ಸಿಯಂ ಕೊರತೆಯಿಂದ ಈ ಸಮಸ್ಯೆ ಕಂಡು ಬರುತ್ತದೆ. ಕೆಲವೊಮ್ಮೆ ನಾವು ಸೇವಿಸುವ ಔಷಧಿಗಳಿಂದಲೂ ಈ ಸಮಸ್ಯೆ ಉಂಟಾಗಬಹುದು. ಉಗುರಿನ ಸೋಂಕಿನಿಂದ ಉಗುರಿನ ರಕ್ತ ಸಂಚಾರಕ್ಕೆ ಅಡ್ಡಿಯಾಗಿ ಉಗುರು ಬಿಳಿಚಿಕೊಳ್ಳಬಹುದು.
5. ಕೊಯಿಲೋನಿಕಿಯಾ:
ಇದೊಂದು ವಿಚಿತ್ರವಾದ ಚಮಚದ ಆಕಾರದ ಉಗುರಿನ ರಚನೆ ಆಗಿರುತ್ತದೆ. ಉಗುರಿನ ಎರಡೂ ಬದಿಗಳು ಎತ್ತರಕ್ಕೆ ಬೆಳೆದು ಮಧ್ಯಭಾಗದಲ್ಲಿ ಗುಳಿ ಉಂಟಾಗುತ್ತದೆ. ಇದು ಹೆಚ್ಚಾಗಿ ಕಬ್ಬಿಣದ ಕೊರತೆಯಿಂದ ಉಂಟಾಗುತ್ತದೆ. ವಿಟಮಿನ್ ಡಿ ಕೊರತೆಯಿಂದ ಉಗುರುಗಳು ಒಣಗುವುದು, ಕಪ್ಪಗಾಗುವುದು, ಓರೆ ಕೋರೆಯಾಗುವುದು ಕಂಡುಬರುತ್ತದೆ
6. ಟೆರ್ರಿ ಉಗುರು:
ಪ್ರತಿ ಉಗುರಿನ ತುದಿಯಲ್ಲಿ ದಪ್ಪಗಾದ…ಬ್ಯಾಂಡ್ ಇದ್ದರೆ ಅದನ್ನು ಟೆರ್ರಿ ಉಗುರು ಎನ್ನಲಾಗುತ್ತದೆ. ಹೆಚ್ಚಾಗಿ ವಯಸ್ಕರಲ್ಲಿ ಕಂಡುಬರುತ್ತದೆ.
ಯಾವ ಯಾವ ರೋಗಗಳಲ್ಲಿ ಉಗುರಿನ ಸಮಸ್ಯೆಗಳು ಕಂಡುಬರುತ್ತದೆ
ಹೃದಯದ ತೊಂದರೆ, ಶ್ವಾಸಕೋಶದ ತೊಂದರೆ, ಕಿಡ್ನಿ ತೊಂದರೆ, ಲಿವರ್ ತೊಂದರೆ, ಥೈರಾಯಿಡ್ ತೊಂದರೆಯಿಂದ ಉಗುರುಗಳ ಗಾತ್ರ, ರಚನೆ ಮತ್ತು ಬಣ್ಣದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಆರಂಭದ ಹಂತದಲ್ಲಿ ರೋಗ ಇದ್ದರೆ ಉಗುರುಗಳಲ್ಲಿ ಯಾವುದೇ ಸೂಚನೆ ಸಿಗಲಾರದು. ಆದರೆ ಧೀರ್ಘಕಾಲದ ಸಮಸ್ಯೆ ಇದ್ದಲ್ಲಿ ಖಂಡಿತವಾಗಿಯೂ ಉಗುರಿನ ರಚನೆ, ಗಾತ್ರ ಮತ್ತು ಬಣ್ಣದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಸೋರಿಯಾಸಿಸ್ ಎಂಬ ಚರ್ಮದ ರೋಗದಲ್ಲಿಯೂ ಉಗುರಿನ ಆಕಾರದಲ್ಲಿ ವ್ಯತ್ಯಾಸವಾಗಿ ಉಗುರುಗಳ ಕಳಚಿಕೊಂಡು ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಟ್ಟಿನಲ್ಲಿ ರಕ್ತದಲ್ಲಿ ಕಲ್ಮಶಗಳು ಜಾಸ್ತಿಯಾದಂತೆ, ಆ ಕಲ್ಮಶಗಳು ಉಗುರಿನ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಇನ್ನು ಮಧುಮೇಹ ರೋಗಿಗಳಲ್ಲಿ ರಕ್ತ ಸಂಚಾರದ ವ್ಯತ್ಯಾಸದಿಂದಾಗಿ ಬೇಗನೆ ಸೋಂಕಿಗೆ ತುತ್ತಾಗುತ್ತಾರೆ.
ಯಾವಾಗ ವೈದ್ಯರನ್ನು ಕಾಣಬೇಕು:
ನಿಮ್ಮ ಉಗುರು ನೀಲಿ ಬಣ್ಣಕ್ಕೆ ತಿರುಗಿದಾಗ, ನಿಮ್ಮ ಉಗುರು ತಮ್ಮ ಮೂಲ ರೂಪವನ್ನು ಕಳೆದುಕೊಂಡು ಚರ್ಮದಂತೆ ಬಿಳಿಚಿಕೊಂಡಾಗ, ನಿಮ್ಮ ಉಗುರಿನಲ್ಲಿ ದಪ್ಪ ದಪ್ಪ ಗುಳಿಗಳು ಕಾಣಿಸಿಕೊಂಡಾಗ, ನಿಮ್ಮ ಉಗುರಿನಲ್ಲಿ ಬಿಳಿ ಮಚ್ಚೆಗಳು ಮೂಡಿದಾಗ, ನಿಮ್ಮ ಉಗುರಿನ ಬಣ್ಣ ಬಿಳಿಚಿಕೊಂಡಾಗ, ನಿಮ್ಮ ಉಗುರಿನ ಬುಡದಲ್ಲಿ ಸೋಂಕು ತಗಲಿ ಕೀವು ತುಂಬಿದಾಗ, ನಿಮ್ಮ ಉಗುರಿನ ಬುಡದಲ್ಲಿ ಊತ ಉಂಟಾದಾಗ, ನಿಮ್ಮ ಉಗುರುಗಳು ಒಳ ಭಾಗಕ್ಕೆ ತಿರುಚಿಕೊಂಡು ಬೆಳೆಯಲು ಆರಂಭಿಸಿದಾಗ, ನಿಮ್ಮ ಉಗುರುಗಳು ಕಾರಣವಿಲ್ಲದೆ ಬೀಳಲು ಮುಂದಾದಾಗ, ನಿಮ್ಮ ಉಗುರಿನಲ್ಲಿ ಬಿರುಕುಗಳು ಮೂಡಿದಾಗ, ನಿಮ್ಮ ಉಗುರಿನಲ್ಲಿ ದಪ್ಪ ದಪ್ಪ ಅಡ್ಡ ಗೆರೆಗಳು ಮೂಡಿದಾಗ, ನಿಮ್ಮ ಉಗುರಿನ ಬುಡದಲ್ಲಿ ರಕ್ತ ಒಸರಿದಾಗ ನೀವು ವೈದ್ಯರನ್ನು ತಕ್ಷಣ ಕಾಣಬೇಕು.
ಕೊನೆಮಾತು:
ಉಗುರುಗಳು ನಮ್ಮ ದೇಹದ ಆರೋಗ್ಯಕ್ಕೆ ಹಿಡಿದ ಕನ್ನಡಿ ಇದ್ದಂತೆ. ಅತಿ ಸಾಮಾನ್ಯ ನಿರ್ಜಲೀಕರಣದಿಂದ ಹಿಡಿದು, ಕ್ಯಾನ್ಸರ್‍ವರೆಗೂ ಎಲ್ಲ ರೋಗಗಳಿಗೂ ಉಗುರಿನಲ್ಲಿ ಪ್ರತಿಫಲನಗೊಳ್ಳುತ್ತದೆ. ರಕ್ತಹೀನತೆಯಿಂದ ಹಿಡಿದು ರಕ್ತದ ಕ್ಯಾನ್ಸರ್‍ವರೆಗೆ, ಹೆಚ್ಚಿನ ಎಲ್ಲಾ ರೋಗಗಳನ್ನು ಉಗುರಿನ ಆಕಾರ, ಗಾತ್ರ ಮತ್ತು ರಚನೆಯನ್ನು ಕೂಲಂಕುಷವಾಗಿ ವಿಮರ್ಶಿಸಿ, ರೋಗ ಪತ್ತೆ ಹಚ್ಚಲು ಸಾಧ್ಯವಿದೆ. ರೋಗ ಬಂದ ಕೂಡಲೇ ರಕ್ತ ಪರೀಕ್ಷೆ, ಸಿ.ಟಿ.ಸ್ಕ್ಯಾನ್ ಮಾಡಿಸುವ ಬದಲು ರೋಗಿಗಳ ಸಂಪೂರ್ಣ ದೈಹಿಕ ಪರೀಕ್ಷೆ ಮತ್ತು ರೋಗದ ಚರಿತ್ರೆ ಹಾಗೂ ಹಿನ್ನಲೆಯನ್ನು ವಿಮರ್ಶಿಸಿ ಮನನ ಮಾಡಿದಲ್ಲಿ, ಹೆಚ್ಚಿನ ಎಲ್ಲಾ ರೋಗಿಗಳ ಬಗ್ಗೆ ಕನಿಷ್ಠ ಮಾಹಿತಿ ಸಿಗಲೂಬಹುದು ಮತ್ತು ಅದರಿಂದ ರೋಗದ ಪತ್ತೆಗೆ ಸಹಾಯವಾಗುತ್ತದೆ ಎಂಬ ಪರಿಜ್ಞಾನ ವೈದ್ಯರು ಹೊಂದಿರಬೇಕು. ಅದೇ ರೀತಿ ರೋಗಿಗಲೂ ಕೂಡಾ ತಮ್ಮ ಉಗುರಿನ ಆರೋಗ್ಯ ಕಾಪಾಡಿಕೊಂಡು, ಏನಾದರೂ ವ್ಯತ್ಯಾಸ ಕಂಡು ಬಂದಲ್ಲಿ ಕೂಡಲೇ ವೈದ್ಯರ ಭೇಟಿ ಮಾಡಬೇಕು. ಡಾ|| ಗೂಗಲ್ ಮುಖಾಂತರ ತಾವೇ ಸ್ವಯಂ ಮದ್ದುಗಾರಿಕೆ ಮಾಡುವುದು ಅಕ್ಷಮ್ಯ ಅಪರಾಧ ಮತ್ತು ರೋಗ ಪತ್ತೆಯಾಗುವುದನ್ನು ನಿಧಾನಗೊಳಿಸಿ, ರೋಗ ಉಲ್ಭಣವಾಗಲು ಕಾರಣವಾಗಬಹುದು.
- ಡಾ|| ಮುರಲೀ ಮೋಹನ್ ಚೂಂತಾರು
BDS, MDS,DNB,MOSRCSEd(U.K), FPFA, M.B.A
ಮೊ : 9845135787
drmuraleechoontharu@gmail.com
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ