4 ಕೋಟಿ ರೂ.ಗಳ ವೆಚ್ಚದಲ್ಲಿ ಸ್ವಚ್ಛವಾಯ್ತು ನೀರ ಸೆಲೆ;
ಶಾಸಕ ವೇದವ್ಯಾಸ ಕಾಮತರ ಕಾಳಜಿಗೆ ಸ್ಥಳೀಯರ ಕೃತಜ್ಞತೆ
ಮಂಗಳೂರು: ಜನಪ್ರತಿನಿಧಿಗಳು ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ಪ್ರದರ್ಶಿಸಿದರೆ ಯಾವ ಕಾರ್ಯವೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಪ್ರಮುಖ ಕೆರೆಯಾಗಿರುವ ಗುಜ್ಜರಕೆರೆಯ ಅಭಿವೃದ್ಧಿಯೇ ಸಾಕ್ಷಿಯಾಗಿದೆ. ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ವಿಶೇಷ ಮುತುವರ್ಜಿ ವಹಿಸಿ, ಸ್ಥಳೀಯ ಕಾರ್ಪೊರೇಟರ್‌ಗಳು, ಸಂಘ ಸಂಸ್ಥೆಗಳು, ಉತ್ಸಾಹಿ ಕಾರ್ಯಕರ್ತರ ಬೆಂಬಲದೊಂದಿಗೆ ಸ್ಮಾರ್ಟಿ ಸಿಟಿ ಯೋಜನೆಯಡಿಯಲ್ಲಿ 4 ಕೋಟಿ ರೂ.ಗಳ ವೆಚ್ಚದಲ್ಲಿ ಗುಜ್ಜರಕೆರೆಯನ್ನು ಈಗ ಅಭಿವೃದ್ಧಿಪಡಿಸಿದ್ದಾರೆ.
ದಶಕಗಳಿಂದಲೂ ಕೊಳಚೆ ನೀರು, ಕಲುಷಿತ ನೀರು, ಹೊಲಸು ತ್ಯಾಜ್ಯಗಳು, ಮತ್ತು ಕಸದಿಂದ ತುಂಬಿದ್ದ ಮಂಗಳೂರಿನ ಗುಜ್ಜರಕೆರೆಯಿಂದ ಎರಡು ಮೀಟರ್‌ಗಳಷ್ಟು ಆಳಕ್ಕೆ ಹೂಳು ತೆಗೆಯಲಾಗಿದೆ. ಇದೀಗ ಮಲಿನತೆಯನ್ನು ಕಳೆದುಕೊಂಡು ಸೌಂದರ್ಯದ ತಾಣವಾಗಿದೆ.
ಮೂರು ಎಕರೆಯಲ್ಲಿ ಹರಡಿರುವ ಗುಜ್ಜರಕೆರೆ ಮಂಗಳೂರಿನ ಅತ್ಯಂತ ಹಳೆಯ ಕೆರೆಯಾಗಿದ್ದು, ಐತಿಹಾಸಿಕ ಮಹತ್ವವನ್ನು ಹೊಂದಿದ ಅತ್ಯಂತ ದೊಡ್ಡ ಕೆರೆಯಾಗಿದೆ. ಈ ಪ್ರಾಚೀನ ಸರೋವರವನ್ನು ದಶಕಗಳಿಂದಲೂ ನಿರ್ಲಕ್ಷಿಸಲಾಗಿತ್ತು, ತ್ಯಾಜ್ಯ ವಸ್ತುಗಳನ್ನು ಸುರಿಯುವ ಸ್ಥಳವಾಗಿ ಬಳಸಲಾಗುತ್ತಿತ್ತು. ಆದರೆ ಈಗ ಇದೆಲ್ಲವೂ ಕೊನೆಗೊಂಡಿದೆ. ಕೆರೆ ಪುನರುಜ್ಜೀವನ ಯೋಜನೆಯಿಂದಾಗಿ ಗುಜ್ಜರಕೆರೆ ಕೆರೆ ಪುನರುಜ್ಜೀವನಗೊಂಡು ಹಿಂದಿನ ವೈಭವಕ್ಕೆ ಮರಳಿದೆ.
1,800 ವರ್ಷಗಳ ಇತಿಹಾಸ ಹೊಂದಿರುವ ಪವಿತ್ರ ಸರೋವರ:
ಗುಜ್ಜರಕೆರೆ ಸರೋವರವು ಮಚ್ಚೇಂದ್ರನಾಥ ಮತ್ತು ಗೋರಕ್ಷನಾಥ ಎಂಬ ಇಬ್ಬರು ಪ್ರಸಿದ್ಧ ಸಂತರಿಗೆ ಸೇರಿದ್ದಾಗಿತ್ತು. ಇದನ್ನು ನಿರ್ಮಿಸಿದವರು ಸಂತ ಗೋರಕ್ಷನಾಥರು ಎಂದು ಸ್ಥಳಪುರಾಣಗಳು ಹೇಳುತ್ತವೆ. ಸರೋವರದ ನೀರು ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಚರ್ಮದ ಸೋಂಕುಗಳು ಸೇರಿದಂತೆ ಹಲವಾರು ರೋಗಗಳನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದೆ. ಶುದ್ಧ ತಿಳಿನೀರಿನ ಒರತೆಯ ಮೂಲಗಳಿಂದಾಗಿ ಸರೋವರ ಸದಾ ಕಾಲವೂ ತುಂಬಿರುತ್ತಿತ್ತು. ಸ್ಥಳೀಯರು ಇದರ ನೀರನ್ನು ಕುಡಿಯಲು ಬಳಸುತ್ತಿದ್ದರು. ನೆರೆಯ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಹಳೆಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನ, ಬೋಳಾರ್ ಮತ್ತು ಶ್ರೀ ಗೋರಕ್ಷನಾಥ ದೇವಸ್ಥಾನ, ಗೋರಕ್ಷದಂಡಗಳಿಗೆ ಈ ಕೆರೆಯ ಜತೆಗೆ ನಿಕಟ ಸಂಬಂಧವಿದೆ. ಜಾತ್ರೆಯ ಸಂದರ್ಭದಲ್ಲಿ ದೇವರಿಗೆ ಜಳಕ (ಪವಿತ್ರ ಸ್ನಾನ) ಮಾಡಿಸಲು ಈ ಕೆರೆಗೆ ಕರೆತರಲಾಗುತ್ತಿತ್ತು. ಆದರೆ ಕಳೆದ ಶತಮಾನದಲ್ಲಿ, ಈ ಧಾರ್ಮಿಕ ಚಟುವಟಿಕೆಗಳು ಸಂಪೂರ್ಣವಾಗಿ ನಿಂತುಹೋದವು ಮತ್ತು ಈ ಪ್ರದೇಶದ ಸುತ್ತಲೂ ಕೈಗಾರಿಕೆಗಳು ಬರಲಾರಂಭಿಸಿದವು, ಕೆರೆಯ ನೀರು ಹೆಚ್ಚು ಕಲುಷಿತವಾಯಿತು. ಮಂಗಳೂರು ಮಹಾನಗರ ಪಾಲಿಕೆಯೂ ಇದನ್ನು ತ್ಯಾಜ್ಯ ಸುರಿಯುವ ಸ್ಥಳವೆಂದು ಪರಿಗಣಿಸಲು ಆರಂಭಿಸಿತು. ಈ ಹಿಂದೆ ಗುಜ್ಜರೆಕೆರೆಯ ಸ್ವಚ್ಛತಾ ಕಾರ್ಯ ಆರಂಭವಾದಾಗ ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೆರೆಯಲ್ಲಿ ಅನೇಕ ಆಮೆಗಳನ್ನು ಬೇಟೆಯಾಡಿ ಸಾಯಿಸಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಸ್ಥಳೀಯ ಯುವಕರು ಒಟ್ಟಾಗಿ 2002ರಿಂದಲೂ ಈ ಕೆರೆಯ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಗುಜ್ಜರಕೆರೆ ತೀರ್ಥ ಸಂರಕ್ಷಣಾ ಸಮಿತಿ ಎಂಬ ಸಂಘಟನೆ ಮಾಡಿಕೊಂಡು ಯೋಗೀಶ್ ಕುಮಾರ್ ಜೆಪ್ಪು, ನೇಮು ಕೊಟ್ಟಾರಿ ಮುಂತಾದ ಸಾಮಾಜಿಕ ಕಳಕಳಿಯ ಕಾರ್ಯಕರ್ತರು ತಮ್ಮ ಊರಿನ ಕೆರೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ.
ಮಂಗಳೂರಿನಲ್ಲಿ ಕೆರೆಗಳ ಪುನರುಜ್ಜೀವನ ಕನಸಿನ ಯೋಜನೆಯಾಗಿದ್ದು, ಶಿಥಿಲಾವಸ್ಥೆಯಲ್ಲಿರುವ ಅಂತಹ ಎಂಟು ಕೆರೆಗಳನ್ನು ಗುರುತಿಸಿದ್ದೇವೆ. ಇದೀಗ ಗುಜ್ಜರಕೆರೆಗೆ ನಾವು ಅದರ ಹಿಂದಿನ ವೈಭವವನ್ನು ಮರಳಿಸಿದ್ದೇವೆ. ವಿಶೇಷವಾಗಿ ಅದರ ಐತಿಹಾಸಿಕ ಪ್ರಾಮುಖ್ಯತೆಯನ್ನು ಮರಳಿ ತಂದುಕೊಡಲಾಗಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳುತ್ತಾರೆ. "ಕೆರೆ ನೀರಿಗೆ ಒಳಚರಂಡಿ ನೀರು ಮಿಶ್ರಣವಾಗಿ ಇಡೀ ಕೆರೆಯೇ ತ್ಯಾಜ್ಯ ಗುಂಡಿಯಂತಾಗಿತ್ತು. ಆದರೆ ಇದನ್ನು ಸ್ವಚ್ಛಗೊಳಿಸಿ, ಅಭಿವೃದ್ಧಿಪಡಿಸುವುದು ನಮ್ಮ ಆದ್ಯತೆಯಾಗಿತ್ತು. ನಾವು ಕಸ-ಕೊಳೆಗಳನ್ನು ತೆಗೆದುಹಾಕಿ, ಕಳೆ ಮತ್ತು ಹೂಳುಗಳನ್ನು ತೆರವುಗೊಳಿಸಿದ್ದೇವೆ ಮತ್ತು ಮತ್ತಷ್ಟು ಮಾಲಿನ್ಯವನ್ನು ತಡೆಗಟ್ಟಲು ಕೆರೆಯ ಸುತ್ತಲೂ ಸ್ಟೀಲ್ ರೇಲಿಂಗ್‌ಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರಿಗೆ ಜಾಗಿಂಗ್ ಮತ್ತು ವಾಕಿಂಗ್ ಟ್ರ್ಯಾಕ್ ಅನ್ನು ಸಹ ರಚಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ದೇವಸ್ಥಾನಗಳ ಧಾರ್ಮಿಕ ಉತ್ಸವಗಳ ಸಂದರ್ಭದಲ್ಲಿ ಜಳಕಕ್ಕೆ ದೇವತೆಗಳನ್ನು ಇಲ್ಲಿಗೆ ಕರೆತರುವ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ನಾವು ಬಯಸುತ್ತೇವೆ” ಎಂದು ಅವರು ಹೇಳುತ್ತಾರೆ.
ಮಂಗಳೂರು, ಕೆರೆಗಳ ನಗರ: 8 ಕೆರೆಗಳ ನವೀಕರಣಕ್ಕಾಗಿ ಗುರುತಿಸಲಾದ ನಾಲ್ಕು ಕೆರೆಗಳ ಪೈಕಿ ಬಜಾಲ್, ಕುದ್ರೋಳಿ, ಜೆಪ್ಪಿನಮೊಗರು ಮತ್ತು ಗುಜ್ಜರಕೆರೆ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದವುಗಳ ಕಾಮಗಾರಿ ಪ್ರಗತಿಯಲ್ಲಿದೆ.
"ಜಲಮೂಲಗಳನ್ನು ಸುಸ್ಥಿತಿಯಲ್ಲಿ ಉಳಿಸಿಕೊಂಡಾಗ ಮಾತ್ರ ನಗರವೂ ಸುಸ್ಥಿತಿಯಲ್ಲಿ ಇರಲು ಸಾಧ್ಯ. ಅವು ನಾಶವಾದಾಗ, ನಗರ ಮತ್ತು ಜನಜೀವನ ದುಸ್ಥಿತಿಗಿಳಿಯುತ್ತದೆ. ಈಗ ಶಾಸಕ ವೇವದ್ಯಾಸ ಕಾಮತ್ ಅವರ ವಿಶೇಷ ಕಾಳಜಿ ಮತ್ತು ಇಚ್ಛಾಶಕ್ತಿಯಿಂದಾಗಿ ಕೆರೆಯು ಪುನರುಜ್ಜೀವನಗೊಂಡಿರುವುದು ಸಂತಸದ ಸಂಗತಿ. ನಗರದ ಒತ್ತಡದ ಜೀವನದ ಮಧ್ಯೆ ಸ್ವಲ್ಪ ಹೊತ್ತು ಶಾಂತಿಯಿಂದ ಸುಂದರ ನಿಸರ್ಗದ ನಡುವೆ ಸಮಯ ಕಳೆಯಲು ನಮಗೀಗ ಸ್ಥಳವಿದೆ” ಎಂದು ಬಜಾಲ್‌ನ ನಿವಾಸಿ ನೀನಾ ಉಮೇಶ್ ಹೇಳುತ್ತಾರೆ.
ಗುಜ್ಜರಕೆರೆ ಸರೋವರ ಅಭಿವೃದ್ಧಿ ಕಾರ್ಯ ಪೂರ್ಣಗೊಂಡ ನಂತರ, ಮಕ್ಕಳು ಮತ್ತು ಹಿರಿಯರ ಸುರಕ್ಷತೆಗಾಗಿ ಕೆರೆಯ ಸುತ್ತಲೂ ಸ್ಟೇನ್‌ಲೆಸ್ ಸ್ಟೀಲ್ ರೇಲಿಂಗ್‌ಗಳನ್ನು ಅಳವಡಿಸಲಾಗಿದೆ. ವಾಕಿಂಗ್‌ಗೆ ವಿಶಾಲವಾದ ಜಾಗವನ್ನು ಒದಗಿಸಲಾಗಿದೆ, ಇಂಟರ್‌ಲಾಕ್‌ಗಳನ್ನು ಅಳವಡಿಸಿ ವಾಕಿಂಗ್ ಅಥವಾ ಜಾಗಿಂಗ್‌ಗೆ ಆರಾಮದಾಯಕ ಪಥವನ್ನು ನಿರ್ಮಿಸಲಾಗಿದೆ. ಸರೋವರದ ಸುತ್ತಲೂ ಹೊಸ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಕೆರೆಯ ಸುತ್ತಲಿನ ಒಂದು ಭಾಗದಲ್ಲಿ ಆಟದ ಮೈದಾನ ನಿರ್ಮಿಸಲಾಗಿದೆ. ಯುವಕರಿಗೆ ವ್ಯಾಯಾಮ ಮಾಡಲು ಜಿಮ್ ಉಪಕರಣಗಳೂ ಇವೆ. ಹೊಸ ಬೆಂಚುಗಳು, ಕಸದ ಬುಟ್ಟಿಗಳು ಮತ್ತು ಹಸಿರು ಹುಲ್ಲಿನ ಹೊದಿಕೆ ಅಳವಡಿಸಲಾಗಿದೆ. ದಶಕಗಳಷ್ಟು ಹಳೆಯದಾದ ಮರಗಳನ್ನು ಹೊರತುಪಡಿಸಿ, ಸುಮಾರು 30 ಕ್ಕೂ ಹೆಚ್ಚು ಮರಗಳನ್ನು ನೆಡಲಾಗಿದೆ. ಸರೋವರದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುವ ಸಲುವಾಗಿ, ಮುಂದಿನ ದಿನಗಳಲ್ಲಿ ಸಣ್ಣ ದೋಣಿ ಮಾದರಿಯ ಏರೇಟರ್ ಅನ್ನು ಅಳವಡಿಸಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳುತ್ತಾರೆ.
ಕೆರೆಯ ಅಭಿವೃದ್ಧಿಯೊಂದಿಗೆ ಈ ಪ್ರದೇಶವು ಈಗ ಸೊಳ್ಳೆಗಳಿಂದ ಮುಕ್ತವಾಗಿದೆ, ಮಲೇರಿಯಾ ಮತ್ತು ಡೆಂಗ್ಯೂ ರೋಗಗಳ ಉತ್ಪಾದನೆ ತಾಣವಾಗಿದ್ದ ಈ ಪ್ರದೇಶ ಈಗ ಕಳಂಕಮುಕ್ತವಾಗಿದೆ. ಮಕ್ಕಳು, ಯುವಕರು ಮತ್ತು ಹಿರಿಯರು ಎಲ್ಲರೂ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ವಾಕಿಂಗ್ ಮಾಡಲು, ಆಟವಾಡಲು ಮತ್ತು ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸಲು ಆಗಮಿಸುತ್ತಾರೆ. ಬಾತುಕೋಳಿಗಳ ಗುಂಪೂ ಸಹ ಸರೋವರದಲ್ಲಿ ಸಂದರ್ಶಕರ ಮನಸ್ಸಿಗೆ ಮುದ ನೀಡುತ್ತವೆ. ಈ ಯೋಜನೆಯನ್ನು ಬೆಂಗಳೂರು ಮೂಲದ ವಿಸಾಗಾ ಸಂಸ್ಥೆಯು ಕಾರ್ಯಗತಗೊಳಿಸಿದ್ದು, ಇದು ಒಂದು ವರ್ಷದವರೆಗೆ ಅದನ್ನು ನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ, ನಂತರ ಮಂಗಳೂರು ಮಹಾನಗರಪಾಲಿಕೆ ಅದನ್ನು ನಿರ್ವಹಿಸಬೇಕಾಗಿದೆ.
ಚಿತ್ರಗಳು, ಪೂರಕ ಮಾಹಿತಿ: ಅರವಿಂದ ಗುಜ್ಜರಕೆರೆ, ಚಂದ್ರಶೇಖರ ಕುಳಮರ್ವ