ಉಜಿರೆ: ಶ್ವಾನವನ್ನೊಳಗೊಂಡಂತೆ ಎಲ್ಲ ಪ್ರಾಣಿಗಳ ಕಣ್ಣಲ್ಲಿ ದೇವರನ್ನುಕಾಣಬೇಕು ಎಂದು ಪವರ್ ಟಿವಿ ವಾಹಿನಿಯ ಮಾಜಿ ಸಂಪಾದಕ ಚಂದನ್ ಶರ್ಮ ಹೇಳಿದರು.
ಉಜಿರೆ ಎಸ್.ಡಿ.ಎಂ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ನಡೆದ, ಉಪನ್ಯಾಸಕಿ ಶ್ರುತಿಜೈನ್ ಅವರ ಚೊಚ್ಚಲ ಕೃತಿ 'ಪ್ರೀತಿಗೊಂದು ಹೆಸರು ಇದು ಝಿಪ್ಪಿಗ್ರಫಿ' ಪುಸ್ತಕ ಲೋಕಾರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ವಾನಗಳು ಬದುಕಿನ ಪಾಠವನ್ನು ಕಲಿಸುತ್ತದೆ. ಸ್ವಾರ್ಥ ಅಸೂಯೆಗಳಿಲ್ಲದೆ ಪರಿಶುದ್ಧ ಪ್ರೀತಿಯನ್ನು ಶ್ವಾನಗಳು ಮಾತ್ರ ನೀಡುತ್ತವೆ. ಮಾತು ಬರದಿದ್ದರೂ ನಮ್ಮೆಲ್ಲ ಭಾವನೆಗಳಿಗೆ ಸ್ಪಂದಿಸುವ ಗುಣ ಅವುಗಳಲ್ಲಿದೆ ಎಂದು ಹೇಳಿದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ಪುಸ್ತಕಗಳನ್ನು ಪ್ರೀತಿಯಿಂದ ಓದಲು ಆರಂಭಿಸಿದರೆ ಅದು ನಿದ್ದೆ ತರಿಸುವುದಿಲ್ಲ. ಓದುವ ಹವ್ಯಾಸ ಮತ್ತು ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಗುಣವಿಲ್ಲದಿದ್ದರೆ ಮಾಧ್ಯಮ ಜಗತ್ತಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪತ್ರಿಕೋದ್ಯಮ ಎನ್ನುವುದು ಮಾನವೀಯತೆಯ ಪ್ರತಿರೂಪವಾಗಿರಬೇಕು. ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡು ಕೆಲಸ ಮಾಡುವವನೇ ನಿಜವಾದ ಪತ್ರಕರ್ತ. ಈ ನಿಟ್ಟಿನಲ್ಲಿಎಲ್ಲರೂ ಯೋಚಿಸಬೇಕಾದ ಅನಿವಾರ್ಯತೆ ಇದೆ.
ಸದಾ ಪ್ರಯೋಗಶೀಲರಾಗಿ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಹೊಸತನಗಳನ್ನು ಮೈಗೊಡಿಸಿಕೊಳ್ಳಬೇಕು. ವೃತ್ತಿ ಕ್ಷೇತ್ರದಲ್ಲಿರುವ ಎಲ್ಲರಂತೆ ಆಗದೇ ಭಿನ್ನವಾಗಿ ಗುರುತಿಸಿಕೊಂಡು ಬೇಡಿಕೆಗಳನ್ನು ಸೃಷ್ಟಿಸಿಕೊಳ್ಳುವುದೇ ನಿಜವಾದ ಸಾಧನೆ ಎಂದು ನುಡಿದರು.
ಪುಸ್ತಕದ ಕುರಿತು ಮಾತನಾಡಿದ ಲೇಖಕಿ ಶೃತಿಜೈನ್ ಜಿಪ್ಪಿಯೊಂದಿಗಿನ 6 ವರ್ಷದ ಬಾಂಧವ್ಯವನ್ನೆ ಅಕ್ಷರ ರೂಪಕ್ಕೆ ಇಳಿಸಿದ್ದೇನೆ. ಪುಸ್ತಕದಲ್ಲಿ ಅವಳ ನೋವು ನಲಿವು, ಪ್ರೀತಿ, ತುಂಟಾಟ ಎಲ್ಲವೂ ಇದೆ. ಎಲ್ಲರೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಇದರಿಂದ ನಮ್ಮ ಯೋಚನೆ ಮತ್ತು ಮಾತುಗಳು ಅರ್ಥಪೂರ್ಣವಾಗಿರುತ್ತದೆ ಎಂದು ಹೇಳಿದರು.
ಉಜಿರೆ ಎಸ್.ಡಿ.ಎಂ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳು ತಯಾರಿಸಿದ ಪ್ರತಿಧ್ವನಿ ಪ್ರಾಯೋಗಿಕ ಪತ್ರಿಕೆಯನ್ನು ಅತಿಥಿಗಳು ಅನಾವರಣಗೊಳಿಸಿದರು. ಉದ್ಘಾಟಕರಾದ ಚಂದನ್ ಶರ್ಮ ಮತ್ತು ದಕ್ಷಿಣ ಕನ್ನಡ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್ ಅವರನ್ನು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎ ಕುಮಾರ್ ಹೆಗ್ಡೆ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಪ್ರಾದ್ಯಾಪಕರು, ಉಜಿರೆ ಸಾನಿಧ್ಯ ಸಂಸ್ಥೆಯ ಮೇಲ್ವಿಚಾರಕರಾದ ಮಲ್ಲಿಕಾ ಮತ್ತು ಹೆಲೆನ್, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಡಾ.ಭಾಸ್ಕರ್ ಹೆಗ್ಡೆ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿ ಅಭ್ಯುದಯ್ ಜೈನ್ ವಂದನಾರ್ಪಣೆ ನೆರವೇರಿಸಿದರು. ವಿದ್ಯಾರ್ಥಿ ಶಂತನು ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ