||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿಂತನ-ಮಂಥನ: ಶರಣರ ಗುಣವನ್ನು ಮರಣದಲ್ಲಿ ಕಾಣು...

ಚಿಂತನ-ಮಂಥನ: ಶರಣರ ಗುಣವನ್ನು ಮರಣದಲ್ಲಿ ಕಾಣು...


ಇದೊಂದು ವಾಕ್ಯಕ್ಕೆ ಹಲವಾರು ಅರ್ಥಗಳುಂಟು. ಶರಣರು ಎಂದರೆ ಸಾತ್ವಿಕರು. ಪರರ ಹಿತವನ್ನು ಬಯಸುವವರು. ಸಮಾಜದ ಅದರಲ್ಲೂ ಸಾತ್ವಿಕ ಸಮಾಜದ ಒಳಿತನ್ನೇ ಬಯಸುವವರು. ಇಂಥವರ ಮರಣವಾದರೆ ಅದು ಸಮಾಜಕ್ಕೆ ಬಹುದೊಡ್ಡ ನಷ್ಟವೇ. ಹಾಗೆಂದು ಅವರಿಗೂ ಜನನ ಮರಣ ಬಿಟ್ಟಿದ್ದಲ್ಲ. ಅಂಥ ಮಹನೀಯರು ಇದ್ದಾಗ ಅವರ ಮಹತ್ವವನ್ನು ಅರಿಯುವವರು ಕೆಲವರು ಮಾತ್ರ. ಆದರೆ ಅವರು ಮರಣಿಸಿದಾಗ ಅಲ್ಲಿ ಆದಂಥ ಕೊರತೆಯನ್ನು ತುಂಬುವ ಬೇರೆ ಯಾವುದೂ ಸಾಧನವಿರದಾಗ ಅವರ ಗುಣದ ಮಹತ್ವ ಅರಿವಾಗುತ್ತದೆ.


ಇಲ್ಲಿ ಶರಣರು ಎಂದರೆ ಎಲ್ಲವನ್ನು ತ್ಯಜಿಸಿದ ಸಾಧು ಸನ್ಯಾಸಿಗಳೆಂದು ತಿಳಿದುಕೊಳ್ಳಬೇಕಾಗಿಲ್ಲ. ಸಂಸಾರದೊಳಗಿದ್ದು ಸಂನ್ಯಾಸಿಯಂತೆ ಅಥವಾ ಯೋಗಿಯಂತೆ ಬಾಳಿದವರೂ ಶರಣರಿಗೆ ಕಡಿಮೆಯಲ್ಲ. ಅಂಥವರ ಮರಣವೂ ಶರಣರ ಮರಣದಂತೆಯೇ ಶೂನ್ಯವನ್ನುಂಟುಮಾಡುತ್ತದೆ. ಯಾರು ತನ್ನ ಜೀವಿತ ಕಾಲದಲ್ಲಿ ಶರಣರಂತೇ ಬದುಕಿದ್ದರೋ ಅವರ ಮರಣವು ಕೆಲವೊಂದು ಬಾರಿ ಅತಿ ಕ್ರೂರವಾಗಿರುತ್ತದೆ. ಅಂದರೆ ಯಾವುದೋ ರೋಗಗಳಿಗೆ ಬಲಿಯಾಗಿ ಅಥವಾ ವೃದ್ಧಾಪ್ಯ ಅತಿಯಾಗಿ  ಪ್ರಾಣಪಕ್ಷಿ ಹೋಗಲು ಬಹಳವೇ ಕಷ್ಟ ಪಡುವವರಿದ್ದಾರೆ. ಹಾಗೆ ನೋಡಿದಾಗ ಅಂಥ ಮರಣಗಳಿಗೆ ಕಾರಣಗಳೇನಿರಬಹುದು? ಗೊಂದಲಗಳಾಗುವುದು ಸಹಜ ತಾನೆ. ಏನೇನೋ ದುರ್ಮಾರ್ಗಿಗಳಾಗಿ, ದುಷ್ಟತನವನ್ನೇ ಮೈಗಂಟಿಸಿಕೊಂಡು, ಲೋಕಕಂಟಕರಾಗಿ ಮೆರೆದವರು 'ಅನಾಯಾಸೇನ ಮರಣಂ' ಎನ್ನುವಂತೆ ದೇಹ ತ್ಯಾಗ ಮಾಡುವವರೂ ಇದ್ದಾರೆ. ಆದ್ದರಿಂದ ಶರಣರಂತೇ ಬದುಕಿದವರಿಗೆ ಆಯಾಸದ ಮರಣ ಬರುವುದೂ ಇದೆ. ಲೋಕಕಂಟಕನಾದರೂ ಅನಾಯಾಸದ ಮರಣ ಬರುವುದೂ ಇದೆ. ಇದಮಿತ್ಥಂ ಎಂದು ಹೇಳುವಂತಿಲ್ಲ.  


ಹಿಂದೆ ಶಂಕರಾಚಾರ್ಯರು ಹೇಳಿದಂತೆ 'ಪುನರಪಿ ಜನನಂ ಪುನರಪಿ ಮರಣಂ.....' ಎಂಬಲ್ಲಿಗೆ ಬಂದಾಗ ಇದಕ್ಕೊಂದು ಸಾಂತ್ವನ ದೊರಕೀತು.  ಜನನ ಮರಣ ಇವೆರಡು ನಮ್ಮ ಕಣ್ಣೆದುರಿಗೆ ನಡೆಯುವ ಘಟನೆಗಳು, ಪ್ರತ್ಯಕ್ಷ ಪ್ರಮಾಣಗಳಿವೆ. ಆದರೆ ಪುನರಪಿ ಎಂದಾಗ ಸಾಮಾನ್ಯವಾಗಿ ಯಾರಿಗೂ ಪ್ರತ್ಯಕ್ಷ  ಪ್ರಮಾಣವಿಲ್ಲ. ಅನುಮಾನವೇ ಪ್ರಮಾಣ.  ಆದರೆ ಪುನರಪಿ ಜನನ ಇದೆಯೆಂದು ಭಗವದ್ಗೀತೆಯಲ್ಲೇ ಹೇಳಿದ್ದರಿಂದ,  ನಾವು ಅದನ್ನು ಪೂರ್ಣವಾಗಿ ನಂಬಿದ್ದರಿಂದ ಬೇರೆ ಪ್ರಮಾಣಗಳ ಅಗತ್ಯವಿಲ್ಲ. (ನಂಬದವರಿಗೆ ಈ ವಾಕ್ಯ ಪ್ರಸ್ತುತವಲ್ಲ) ಹಾಗಿದ್ದಾಗ ಕರ್ಮ ಫಲಗಳು ಪ್ರತಿಯೊಂದು ಜೀವಿಗೂ ಬಿಟ್ಟಿಲ್ಲವಾದ್ದರಿಂದ ಯಾವುದೋ ಜನ್ಮಗಳ ಫಲಗಳನ್ನು  ಕ್ರಮವಾಗಿ ಅನುಭವಿಸಲೇ ಬೇಕಾಗಿರುವುದರಿಂದ ಸಂಚಿತ ಕರ್ಮಫಲಗಳೇ ಕೆಲವು ಸಾತ್ವಿಕರ ಮರಣಗಳು ಘೋರವಾಗಿ ಗೋಚರಿಸವುದಕ್ಕೆ ಕಾರಣವಿರಬಹುದು.

ಆದರೂ ಸಜ್ಜನರಿಗೆ ದುರಂತದ ಅಂತ್ಯವಾದಾಗ ಜನರು ದಾರಿ ತಪ್ಪುವ ಸಂಭವವೂ ಇದೆ. ಯಾಕೆಂದರೆ ಪುನರ್ಜನ್ಮದಲ್ಲಿ ನಂಬಿಕೆ ಇಲ್ಲದಾಗ ಈ ನ್ಯಾಯ ಅಪ್ರಸ್ತುತವಾಗುತ್ತದೆ. ಆದ್ದರಿಂದ ಪುನರ್ಜನ್ಮವನ್ನು ನಂಬಲೇ ಬೇಕು. ಅದಿಲ್ಲದಿದ್ದರೆ ಸಾತ್ವಿಕ ಜೀವನ ನಡೆಸಿದವರಿಗೆ ಅನ್ಯಾಯವಾದಂತೇ ತಾನೆ. ಭಗವಂತನ ಸನ್ನಿಧಿಯಲ್ಲಿ ಅನ್ಯಾಯದ ಖಾತೆ ಇಲ್ಲ. ಹಾಗೆಂದು ಅನ್ಯಾಯ ಮಾಡಿದವರಿಗೆ ಶಿಕ್ಷಿಸುವ ಖಾತೆ ಇದೆ. ತಿಳಿದೋ ತಿಳಿಯದೆಯೋ ಬೆಂಕಿಯನ್ನು ಮುಟ್ಟಿದರೂ ಅದರ ಪರಿಣಾಮವನ್ನು ತೋರಿಸಿಯೇ ಬಿಡುತ್ತದೆ. ಅಂತೆಯೇ ಮನುಷ್ಯ ತಿಳಿದೋ ತಿಳಿಯದೆಯೋ ಮಾಡಿದ ಕರ್ಮದ ಫಲವನ್ನು ಉಣ್ಣಲೇಬೇಕಲ್ಲವೇ?  ಹಾಗಾದರೆ ಅದು ಒಂದೇ ಜನ್ಮದಲ್ಲಿ ಮುಗಿಯುವ ವ್ಯವಹಾರವೇ? ಖಂಡಿತ ಅಸಾಧ್ಯ.  


ನನ್ನಂಥ ಅಲ್ಪಜ್ಞನಿಗೆ ಅನಿಸುವುದು ಹೇಗೆಂದರೆ.. ನಮ್ಮ ಲೌಕಿಕ ವ್ಯವಹಾರ ಮೂರು ತೆರದಲ್ಲಿದೆ. ಸಾತ್ವಿಕ, ರಾಜಸ ಮತ್ತು ತಾಮಸವೆಂದು. ಒಬ್ಬ ಕೃಷಿಕನಾದವನು ಅಥವಾ ರೈತನಾದವನು ಬೆಳೆಸುವ ಬೆಳೆಯು ತನಗಾಗಿ ಮಾತ್ರವಲ್ಲ ಲೋಕದ ಹಿತಕ್ಕಾಗಿ. ಆದ್ದರಿಂದ ಅಂಥ ಕರ್ಮ ಸಾತ್ವಿಕವೇ ಆಗಿರುತ್ತದೆ. ಉದಾಹರಣೆಗೆ ತೋಟಕ್ಕೋ ಹೊಲಕ್ಕೋ ಗೊಬ್ಬರ ಹೊತ್ತಾಗ ಮೈ ಕೈ ಕೊಳೆಯಾಗುವುದು ಸಹಜ. ಉದ್ದೇಶ ಒಳ್ಳೆಯದಾದರೂ ಕೊಳೆಯಾಗುವುದನ್ನು ಕಳೆಯಲೇಬೇಕು. ಹೇಗೆ ತನ್ನಲ್ಲಿರುವ ಕೊಳೆಯನ್ನು ಕಳೆಯದೆ, ಶುಭ್ರನಾಗದೆ ಮನೆಯೊಳಗೋ ಅಥವಾ ಹೊರಗೋ ಹೋಗಲಾಗುವುದಿಲ್ಲವೋ ಅದೇರೀತಿ ಸಾತ್ವಿಕ ಜೀವನ ಮಾಡುವವರಿಗೂ ಕೆಲವು ಕರ್ಮ ಲೇಪಗಳು ಅಂಟಿಕೊಂಡಿರುತ್ತವೆ. ಅದನ್ನು ಕಳೆಯುವುದೆಂದರೆ ಆತ್ಮಕ್ಕೆ ಅಂಟಿದ ದೇಹವು  ರೋಗದಿಂದ ಕಲ್ಮಶವಾದ ದೇಹವನ್ನು ತ್ಯಜಿಸಿ ಆತ್ಮ ಶುದ್ಧವಾಗಿ ಮುಂದಿನ ಪಯಣಕ್ಕೆ ಅಣಿಯಾದಂತೆ. ಪುನರಪಿ ಜನ್ಮವಿದ್ದರೆ ಮನೆಯೊಳಗೆ ಪ್ರವೇಶ. ಮೋಕ್ಷವಾದರೆ ಹರಿಯ ನಿವಾಸ. ಅಂತು ಸಾತ್ವಿಕರಿಗೆ ಮರಣಕಾಲದಲ್ಲಿ  ಅತಿ ಕಷ್ಟವಾದರೆ ಬಹುಷಃ ಅವರ ಉತ್ಕರ್ಷೆಗೆ ಅದು ನಾಂದಿಯೆಂದು ನನಗನಿಸುತ್ತದೆ. ಕೆಲವರು ಹಲವಾರು ಕಲ್ಮಶಗಳನ್ನು ಹಚ್ಚಿಕೊಂಡಿದ್ದರೂ ಅದ್ಯಾವುದನ್ನೂ ತೊಳೆಯದೆ,  ಅಂದರೆ  ಯಾವುದೇ ಕಷ್ಟಗಳನ್ನು ಅನುಭವಿಸದೆ ಹೊರಟು ಹೋಗುತ್ತಾರೆಂದರೆ ಬಹುಷಃ ಅವರು ಕಲ್ಮಷಗಳ ಮೇಲೆಯೇ ಹೊಸಬಟ್ಟೆ ಧರಿಸಿ ದಿಢೀರನೆ ಹೊರಟಂತೆ. ಆದರೆ ಅಂಥವರು ಎಲ್ಲಿ ಸೇರಬೇಕೋ ಅಲ್ಲಿ ಪ್ರವೇಶ ದೊರೆಯದೆ ಪುನರಪಿ ಜನನಂ ಎಂಬಲ್ಲಿಗೇ ಬರುತ್ತಾರೆ.

ಯಾಕೆಂದರೆ ದೇವರ ಬಳಿ ಹೋಗುವವರು ಮನದ ಒಳಗೂ ಹೊರಗೂ ಶುಭ್ರರಾಗಿಯೇ ಹೋಗಬೇಕು. ಬದಲಾಗಿ ಶುಭ್ರತೆಯ ಮುಖವಾಡ ಧರಿಸಿದರೆ ಆತನಲ್ಲಿ ಪ್ರವೇಶವಿಲ್ಲ. ಮಾತ್ರವಲ್ಲ ಮುಖವಾಡ ಧರಿಸಿದ್ದಕ್ಕೆ ದಂಡವನ್ನೂ ಅನುಭವಿಸಬೇಕಾಗುತ್ತದೆ. ಅದಕ್ಕೆಂದೇ ನನಗನಿಸುವುದು ಮರಣದಲ್ಲಿ ಪಡುವ ಯಾತನೆಯೋ ಅಥವಾ ಅನಾಯಾಸದ ಮರಣವೋ ಯಾವುದೂ ಮರಣಿಸಿದ ವ್ಯಕ್ತಿಯ ಗುಣವನ್ನು ತಿಳಿಸುವ ಮಾನದಂಡವಾಗದು. ಶರಣರ ಗುಣವನ್ನು ಮರಣದಲ್ಲಿ ಕಾಣುವುದಾದರೆ ಅದಕ್ಕೆ ಒಳಗಣ್ಣು ಬೇಕಾದೀತು. ಬಾಹ್ಯ ಕಣ್ಣಿಂದ ಕಂಡಾಗ ಅದರ ಒಳ ಅರ್ಥ ಕಾಣದು. ಆದರೆ ಒಂದಂತು ಸತ್ಯ ಶರಣರು ಅಥವಾ ಶರಣರಂತೆ ಬದುಕಿದವರು ಗತಿಸಿದಾಗ ಅಲ್ಲೊಂದು ಶೂನ್ಯ ಸೃಷ್ಟಿಯಾಗುತ್ತದೆ. ಅಂಥ ಶೂನ್ಯಕ್ಕೆ ಸಾಕ್ಷಿಯಾಗಿ ಒಂದಷ್ಟು ಜನ ಸೇರುತ್ತಾರೆ. ಹಾಡಿ ಹೊಗಳುತ್ತಾರೆ. ಮತ್ತೆ ಕೆಲವು ಸಮಯದ ನಂತರ ಕಾಲವು ಎಲ್ಲವನ್ನೂ ಮರೆಸುತ್ತದೆ. ಮತ್ತೆಲ್ಲೋ ಒಬ್ಬರು ಶರಣರು ಹುಟ್ಟುತ್ತಾರೆ. ಮತ್ತದೇ ವರ್ತುಲ.. ಎಲ್ಲಿವರೆಗೆ ಮನುಷ್ಯಕುಲವಿರುತ್ತದೋ ಅಲ್ಲಿವರೆಗೆ ಇಂಥ ವ್ಯವಹಾರಗಳು ಅನಿವಾರ್ಯವೇ. ಅದಕ್ಕೆಂದೇ ಕೃಷ್ಣ ಹೇಳಿದ್ದು ವರ್ತಮಾನದಲ್ಲಿ ಬದುಕಿ ಎಂದು. ನಮ್ಮ ವರ್ತಮಾನ ಸರಿಯಾಗಿದ್ದರೆ ಮುಂದಿನ ಭವಿಷ್ಯವೆಲ್ಲವೂ ಸುಂದರವೇ? ಪ್ರಶ್ನೆಗೆ ಉತ್ತರ ಸರಳವಲ್ಲ.  ಆದರೆ ಯಾವುದೇ ಉತ್ತರಕ್ಕೂ ನಾವು ಜವಾಬ್ದಾರರಾಗುವುದಿಲ್ಲ. ಆದ್ದರಿಂದ  ವರ್ತಮಾನ ನಮ್ಮದಾದರೆ ಭವಿಷ್ಯ ದೇವರು ಕೊಟ್ಟದ್ದು. ಆತ ಕೊಟ್ಟದ್ದನ್ನನುಭವಿಸುವುದೇ ಆಗಿನ ವರ್ತಮಾನ.... ಅದಕ್ಕೆಂದೇ ಶರಣರ ಗುಣವನ್ನು ಮರಣದಲ್ಲಿ ಕಂಡಾದರು ಶರಣರಂತೆ ಬಾಳುವುದನ್ನು ಕಲಿತಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಅದಿಲ್ಲ ಬರಿದೆ ಕಂಡದ್ದರಿಂದ ಏನೂ ಪ್ರಯೋಜನವಿಲ್ಲ. 


-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post