||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರೋಗಿಗಳಿಗೆ ಮೃತ್ಯುಕೂಪವಾಗುತ್ತಿರುವ ವೆನ್‌ಲಾಕ್ ಆಸ್ಪತ್ರೆ

ರೋಗಿಗಳಿಗೆ ಮೃತ್ಯುಕೂಪವಾಗುತ್ತಿರುವ ವೆನ್‌ಲಾಕ್ ಆಸ್ಪತ್ರೆ

ವೈದ್ಯರು, ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯ; ಬಡವರ ಪ್ರಾಣಕ್ಕೆ ಆಪತ್ತು 


ಡಿ. ಕುಲಾಲ್ ಮಂಗಳೂರು

ಲಕಲಕ ಹೊಳೆಯುವ ಸರಕಾರಿ ಆಸ್ಪತ್ರೆಯೊಳಗೆ ಜೀವ ತೆಗೆಯುವ ವೈದ್ಯ ದೇವರುಗಳು ಕಾಣಸಿಗಬೇಕಾದರೆ ಮಂಗಳೂರಿನ ವೆನ್ಲಾಾಕ್ ಆಸ್ಪತ್ರೆಗೆ ಒಮ್ಮೆ ಭೇಟಿ ಕೊಡಬೇಕು.


ವೆನ್ಲಾಕ್ ಆಸ್ಪತ್ರೆಯ ವೈದ್ಯರುಗಳು ಬಡ ಜನರ ಜೀವದ ಜತೆ ಆಟವಾಡುತ್ತಿದ್ದು, ರೋಗಿಗಳು ನಿರಂತರ ಬಲಿಯಾಗುತ್ತಿದ್ದಾರೆ. ಐಸಿಯುಗೆ ದಾಖಲಿಸಬೇಕಾದ ರೋಗಿಯನ್ನು ಜನರಲ್ ವಾರ್ಡ್‌ಗೆ ಹಾಕುವುದು. ಸಂಬಂಧಿತ ಕಾಯಿಲೆಯ ಪರಿಣತ ವೈದ್ಯರು ಇಲ್ಲದಿದ್ದರೆ, ಬೇರೆ ಆಸ್ಪತ್ರೆಗೆ ಶಿಫಾರಸ್ಸು ಮಾಡದಿರುವುದು ಇತ್ತೀಚಿನ ದಿನಗಳಲ್ಲಿ ವೆನ್‌ಲಾಕ್‌ನಲ್ಲಿ ಹೆಚ್ಚಾಗಿದೆ. ಈ ಕಾರಣದಿಂದಾಗಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ 

ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರೋಗಿಗಳ ಬಗ್ಗೆ ವೈದ್ಯರಿಗೆ ಕಾಳಜಿ ಇಲ್ಲದಿರುವುದು, ಬಡವರ ಬಗ್ಗೆ ದಿವ್ಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಈ ಹಿನ್ನೆಲೆಯಿಂದಲೇ ನಿರಂತರವಾಗಿ ಇಲ್ಲಿ ಗಲಾಟೆಗಳು ನಡೆಯುತ್ತಲೇ ಇರುತ್ತವೆ. ಆದರೂ ಜನಪ್ರತಿನಿಧಿಗಳಾಗಲೀ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮಕ್ಕೆ ಮುಂದಾಗದೆ ದಿವ್ಯ ಮೌನಕ್ಕೆ ಶರಣಾಗಿರುವುದು ಅಚ್ಚರಿ ವಿಷಯವಾಗಿದೆ.


ಹಾಳಾದ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ: ಬಡ ರೋಗಿಗಳಿಗೆ ವರದಾನವಾಗಲಿ ಎಂದು ಸರಕಾರ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಎಂಆರ್‌ಐ ಯಂತ್ರ ನೀಡಿದ್ದರೆ, ಅದೂ ಕೂಡ ಬಡ ರೋಗಿಗಳಿಗೆ ಸಿಗದಂತಾಗಿದೆ. ಇಲ್ಲಿ ಎಂಆರ್‌ಐ ಸ್ಕ್ಯಾನ್ ಮೆಷಿನ್ ಹಾಳಾಗಿ ವಾರವೇ ಕಳೆದಿದೆ. ಇದರಿಂದಾಗಿ ತುರ್ತು ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳು ಖಾಸಗಿ ಆಸ್ಪತ್ರೆಗೆ ತೆರಳಿ ದುಬಾರಿ ಹಣ ಪಾವತಿಸಿ ಎಂಆರ್‌ಐ ಸ್ಕ್ಯಾನ್ ಮಾಡಿಕೊಂಡು ಬರಬೇಕಾಗಿದೆ. ಕೈಯಲ್ಲಿ ದುಡ್ಡಿಲ್ಲದೆ ಕಂಗಾಲಾಗಿರುವ ಬಡ ರೋಗಿಗಳು ಸುಮಾರು ಒಂದು ವಾರದಿಂದ ಎಂಆರ್‌ಐ ಸ್ಕ್ಯಾನ್‌ಗಾಗಿ ಜನರಲ್ ವಾರ್ಡ್‌ಗಳಲ್ಲಿ ದುರಸ್ತಿಗಾಗಿ ಎದುರು ನೋಡುತ್ತಿದ್ದಾರೆ.  


ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡದ ವೈದ್ಯರು:

ಸರಕಾರ ಬಡಜನರಿಗೆ ಉತ್ತಮ ಚಿಕಿತ್ಸೆ ಸಿಗಲಿ ಎನ್ನುವ ಉದ್ದೇಶಕ್ಕಾಾಗಿ ಆಯುಷ್ಮಾನ್ ಕಾರ್ಡ್ ಮುಖಾಂತರ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಆದರೆ ಈ ಸೌಲಭ್ಯ ರೋಗಿಗಳಿಗೆ ಸಿಗಬೇಕಾದರೆ ಸರಕಾರಿ ಆಸ್ಪತ್ರೆಯ ವೈದ್ಯರು ರೆಫರ್ ಮಾಡಬೇಕು. ಆದರೆ ವೆನ್ಲಾಕ್‌ನ ವೈದ್ಯರು ರೋಗಿಗಳು ಅಂಗಲಾಚಿದರೂ ರೆಫರೆನ್ಸ್ ಲೆಟರ್ ಕೊಡುವುದಿಲ್ಲ. ಇದರಿಂದ ಬಡವರಿಗೆ ಬದುಕುವ ನಿರೀಕ್ಷೆಯೇ ಇಲ್ಲದಂತಾಗಿದೆ. ಮೂಲಗಳ ಪ್ರಕಾರ ನರ ಸಂಬಂಧಿಸಿದ ವೈದ್ಯರು ವೆನ್ಲಾಕ್ ಆಸ್ಪತ್ರೆಗೆ ಮೂರು ದಿನಕ್ಕೊಮ್ಮೆ ಭೇಟಿ ನೀಡುತ್ತಿದ್ದಾರೆ. ನರ ಸಮಸ್ಯೆಯಿಂದ ಬಳಲುತ್ತಿರುವ ಬಡರೋಗಿಗಳು ಎಲ್ಲಿಯಾದರೂ ಬೇರೆ ದಿನ ತುರ್ತು ಚಿಕಿತ್ಸೆಗೆ ಬಂದರೆ ಸಾವು ಖಚಿತ. ಇಲ್ಲಿ ಕೆಲವು ಸೌಲಭ್ಯ ಇದೆ. ಆದರೆ ವೈದ್ಯರೇ ಇಲ್ಲ. ಬೇರೆ ಆಸ್ಪತ್ರೆಗೆ ಶಿಫಾರಸ್ಸು ಮಾಡಲು ಆಗುವುದಿಲ್ಲ ಎನ್ನುವುದು ಇಲ್ಲಿನ ವೈದ್ಯರ ವಿತಂಡ ವಾದ. 

ಲಕ ಲಕ ಹೊಳೆಯುವ ಆಸ್ಪತ್ರೆ: ಸುಸಜ್ಜಿತ ಕಟ್ಟಡ, ಆಧುನಿಕ ಸೌಕರ್ಯಗಳು, ಅಂತಸ್ತುಗಳಿಗೆ ತೆರಳಲು ಎರಡೆರೆಡು ಲಿಫ್ಟ್‌ಗಳು, ವಿಶಾಲವಾದ ರೂಮುಗಳು.... ಹೀಗೆ ಹಲವು ಉತ್ತಮ ಮೂಲ ಸೌಕರ್ಯಗಳಿದ್ದರೂ ದಕ್ಷ  ವೈದ್ಯರು ಇಲ್ಲದಿರುವುದು ಶೋಚನೀಯ ವಿಷಯವಾಗಿದೆ.


ಮೆಡಿಕಲ್ ಕಾಲೇಜಿನ ಅನುಭವ: ನೀವು ತುರ್ತು ಚಿಕಿತ್ಸೆಗಾಗಿ ಎಮರ್ಜೆನ್ಸಿ ರೂಮಿಗೆ ಹೋದರೆ ಸಾಕು ಅದು ಮೆಡಿಕಲ್ ಕಾಲೇಜಿನ ಪ್ರಯೋಗಾಲಯದಂತಾಗಿದೆ. ರೋಗಿಗಳು ಹೋದ ತಕ್ಷಣ ಬಿಳಿ ಕೋಟು ಹಾಕಿ 

ಸ್ಟೆತಸ್ಕೋಪು ಕುತ್ತಿಗೆಗೆ ಹಾಕಿರುವ ಕಲಿಯುವ ವೈದ್ಯರು ಮುತ್ತಿಗೆ ಹಾಕುತ್ತಾರೆ. ಎಲ್ಲ ವಿವರಗಳನ್ನು ಕೇಳುತ್ತಾರೆಯೇ ಹೊರತು ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಿಲ್ಲ.

ವೈದ್ಯರ ನಿರ್ಲಕ್ಷ್ಯಕ್ಕೆ ಜೀವಂತ ಸಾಕ್ಷಿ: ಐಸಿಯುವಿಗೆ ದಾಖಲಿಸಬೇಕಾದ ರೋಗಿಯನ್ನು ಜನರಲ್ ವಾರ್ಡ್‌ನಲ್ಲೇ ಉಳಿಸಿಕೊಳ್ಳುತ್ತಾರೆ. ರೋಗಿಯ ಸ್ಥಿತಿ ಗಂಭೀರವಾಗಿದ್ದರೂ, ವೈದ್ಯರು ದಿವ್ಯ ನಿರ್ಲಕ್ಷ್ಯ ತಾಳುತ್ತಿದ್ದಾರೆ ಎಂಬವುದು ರೋಗಿಗಳ ಸಂಬಂಧಿಕರ ಅಳಲು.


ವೆನ್ಲಾಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕ್ಕೆ ಇಲ್ಲಿದೆ ಜೀವಂತ ಸಾಕ್ಷಿ:

ಜನವರಿ 12ರಂದು ಮಡಿಕೇರಿಯ ಚಂದ್ರ ಎಂಬವರಿಗೆ ಅನಾರೋಗ್ಯವುಂಟಾಗಿ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸುತ್ತಾರೆ. ಆ ಆಸ್ಪತ್ರೆಯಲ್ಲಿ ರೋಗಿಯನ್ನು ಪರೀಕ್ಷಿಸಿ, ಸಿ.ಟಿ.ಸ್ಕ್ಯಾನ್ ರಿಪೋರ್ಟ್ ನೋಡಿದ ವೈದ್ಯರು ಈ ರೋಗಿಗೆ ಎಂಆರ್‌ಐ ಸ್ಕ್ಯಾನ್ ಮಾಡಿ ತುರ್ತು ಚಿಕಿತ್ಸೆೆ ನೀಡಬೇಕಾಗುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್ ಇಲ್ಲ ನೀವು ಮಂಗಳೂರಿನ ಜಿಲ್ಲಾ ಆಸ್ಪತ್ರೆ ವೆನ್ಲಾಕ್‌ಗೆ ಹೋಗಿ ಎಂದು ಬರೆದು ಕೊಡುತ್ತಾರೆ. ಇದನ್ನು ತೆಗೆದುಕೊಂಡ ಆ ಬಡ ಕುಟುಂಬ ವೆನ್ಲಾಕ್ ಆಸ್ಪತ್ರೆಗೆ ಇದೇ ಜನವರಿ 12ರಂದು ರಾತ್ರಿ 8 ಗಂಟೆಗೆ ದಾಖಲಾಗುತ್ತಾಾರೆ.


ರೋಗಿಯ ಅನಾರೋಗ್ಯದ ಬಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನೀಡಿದ ಸಿ.ಟಿ ಸ್ಕ್ಯಾನ್ ವರದಿ ಮತ್ತು ಸುಳ್ಯದ ಆಸ್ಪತ್ರೆಯ ವೈದ್ಯರು ಬರೆದು ಕೊಟ್ಟಿರುವ ವರದಿಗಳನ್ನು ವೆನ್ಲಾಕ್ ಆಸ್ಪತ್ರೆಯ ವೈದ್ಯರಿಗೆ ತೋರಿಸಿ ನಮ್ಮ ರೋಗಿಗೆ ತುರ್ತು ಚಿಕಿತ್ಸೆಯ ಅಗತ್ಯ ಇದೆ ಎಂದು ಹೇಳಿದರೂ, ಆ ರೋಗಿಯನ್ನು ಐಸಿಯುಗೆ ದಾಖಲು ಮಾಡುವುದರ ಬದಲು ಜನರಲ್ ವಾರ್ಡ್‌ನಲ್ಲಿ ದಾಖಲಿಸಿಕೊಳ್ಳುತ್ತಾರೆ. ಆದರೆ ಜನವರಿ 13ರ ಸಂಜೆಯವರೆಗೂ ಯಾವುದೇ ಪರಿಣತ ವೈದ್ಯರನ್ನು ಕರೆಸುವುದಾಗಲಿ, ಅಥವಾ ಸೂಕ್ತ ಚಿಕಿತ್ಸೆ ನೀಡುವುದಕ್ಕೆ ಇಲ್ಲಿನ ಸಿಬ್ಬಂದಿ ಮುಂದಾಗಿಲ್ಲ. ಪರಿಣಾಮ ರೋಗಿಯು ಜನವರಿ 13ರಂದು ಸಾವನ್ನಪ್ಪುತ್ತಾರೆ.


ಇಂತಹ ಘಟನೆಗಳು ಇನ್ನು ಮುಂದೆ ಆಗದಂತೆ ತಡೆಯುವ ಕೆಲಸವಾಗಬೇಕಾಗಿದೆ. ಸಂಬಂಧಪಟ್ಟ ವೈದ್ಯಾಧಿಕಾರಿಗಳು, ಶಾಸಕರು ಈ ಕುರಿತು ಗಮನಹರಿಸಬೇಕಾಗಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.


ವೆನ್ಲಾಕ್ ನ ಹೊಸ ಕಟ್ಟಡ, ವಾರ್ಡ್‌ಗಳು ಇತರ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಂತೆ ಇದ್ದರೂ, ರೋಗಿಗಳಿಗೆ ನೀಡಿರುವ ಬೆಡ್‌ಶಿಟ್‌ಗಳು, ಹಾಸಿಗೆಗೆ ಹೊದೆಸಿರುವ ಬಟ್ಟೆಗಳು ಅತ್ಯಂತ ಕೆಟ್ಟದಾಗಿದೆ. ರೋಗಿಗಳ ಔಷಧಗಳನ್ನು ಇಡುವ ಪೆಟ್ಟಿಗೆಗಳು ಜಿರಳೆಗಳ ಗೂಡಾಗಿದೆ. ಕಟ್ಟಡವನ್ನು ಖಾಸಗಿ ಸಂಸ್ಥೆಯವರು ದೇಣಿಗೆ ರೂಪದಲ್ಲಿ ನಿರ್ಮಿಸಿಕೊಟ್ಟರೂ, ಉತ್ತಮ ಬೆಡ್‌ಶಿಟ್, ಹಾಸಿಗೆಗಳಿಗೆ ಸರಕಾರದ ಬಳಿ ಹಣವಿಲ್ಲವೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ರೋಗಿಗಳ ಪ್ರಶ್ನೆಯಾಗಿದೆ. 

  

ನನ್ನ ಮಾವ ಸಾವನ್ನಪ್ಪಲು ವೆನ್ಲಾಕ್ ಆಸ್ಪತ್ರೆಯ ವೈದ್ಯರೇ ಕಾರಣ. ಅವರಿಗೆ ಸರಿಯಾದ ಚಿಕಿತ್ಸೆ ಅಥವಾ ಇಲ್ಲಿ ಐಸಿಯು ಇಲ್ಲ, ವೈದ್ಯರಿಲ್ಲ ಎಂದು ಹೇಳಿದ್ದರೆ ನಾವು ಬೇರೆ ಕಡೆಗೆ ಕರೆದುಕೊಂಡು ಹೋಗುತ್ತಿದ್ದೆವು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಯುಷ್ಮಾನ್ ಕಾರ್ಡ್‌ನ ಪತ್ರ ಕೊಡಿ ಎಂದು ಇಲ್ಲಿದ್ದ ವೈದ್ಯರು, ಸಿಬ್ಬಂದಿಗಳ ಬಳಿ ಗೋಗರೆದರೂ ಅವರು ಕೊಡಲಿಲ್ಲ. ಇನ್ನು ಮುಂದೆ ಯಾವ ರೋಗಿಗಳಿಗೂ  ಈ ರೀತಿ ಆಗಬಾರದು.

-ಶ್ರೀನಿವಾಸ, ಸಾವನ್ನಪ್ಪಿದ ರೋಗಿಯ ಅಳಿಯ 


ನಮ್ಮ ಯಜಮಾನರಿಗೆ ಸ್ಕ್ಯಾನ್, ಎಕ್ಸರೇ ಎಲ್ಲಾ ಮಾಡಿಸಿದ್ದೇವೆ. ಆದರೂ ಎಂಆರ್‌ಐ ಸ್ಕ್ಯಾನ್ ಮಾಡಲು ವೈದ್ಯರು ಸೂಚಿಸಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಮಾಡಬೇಕಾದರೆ ದುಬಾರಿ ಹಣ ಕೊಡಲು ನಮ್ಮಲ್ಲಿ ಹಣ ಇಲ್ಲ. ಐದು ದಿನದಿಂದ ಕಾಯುತ್ತಿದ್ದೇವೆ. ಕೇಳಿದರೆ ರಿಪೇರಿ ಆಗುತ್ತಿದೆ. ಆಗದಿದ್ದರೆ ಹೊಸದೇ ಬರುತ್ತದೆ ಎನ್ನುತ್ತಿದ್ದಾಾರೆ. ಏನು ಮಾಡಬೇಕೋ ತೋಚುತ್ತಿಲ್ಲ.

-ಜಾನಕಿ, ಜನರಲ್ ವಾರ್ಡ್ ರೋಗಿಯ ಸಹಾಯಕಿ 


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ 

0 Comments

Post a Comment

Post a Comment (0)

Previous Post Next Post