ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಜಂಟಿ ಆಶ್ರಯದಲ್ಲಿ ಆಳ್ವಾಸ್ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಮಂಗಳೂರು ವಿವಿ ಅಂತರ್ ವಲಯ ಮಟ್ಟದ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್ ಹಣಾಹಣಿಯಲ್ಲಿ ಸಂತ ಫಿಲೋಮಿನಾ ಕಾಲೇಜು ತಂಡವು ಸಂತ ಅಲೋಶಿಯಸ್ ತಂಡವನ್ನು 1 - 0 ಅಂತರದಿಂದ ಸೋಲಿಸಿ ಚಾಂಪಿಯನ್ ಎನಿಸಿತು.
ಇದಕ್ಕೂ ಮೊದಲು ನಡೆದ ಮಂಗಳೂರು ವಿವಿ ಅಂತರ್ ವಲಯ ಮಟ್ಟದ ಸೆಮಿಫೈನಲ್ ಪಂದ್ಯದಲ್ಲಿ ಫಿಲೋಮಿನಾ ಕಾಲೇಜು ತಂಡವು ಆಳ್ವಾಸ್ ಕಾಲೇಜು ತಂಡವನ್ನು ಸೋಲಿಸಿದರೆ, ಅಲೋಶಿಯಸ್ ಕಾಲೇಜು ನಿಟ್ಟೆ ಕಾಲೇಜನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜಾ ಹಾಗೂ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಮಧು ಜಿ. ಆರ್ ಉಪಸ್ಥಿತರಿದ್ದರು. ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆನಂದ ವೇಲು ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ವಲಯ ಮಟ್ಟದಲ್ಲಿ ಆಳ್ವಾಸ್ ಚಾಂಪಿಯನ್
ಮಂಗಳೂರು ವಿವಿ ಉಡುಪಿ ವಲಯ ಮಟ್ಟದ ಫೈನಲ್ ಪಂದ್ಯದಲ್ಲಿ ಆಳ್ವಾಸ್ ಕಾಲೇಜು ತಂಡ ನಿಟ್ಟೆ ಕಾಲೇಜು ತಂಡವನ್ನು 2-0 ಅಂಕಗಳಿಂದ ಸೋಲಿಸಿ ಪ್ರಥಮ ಸ್ಥಾನಿಯಾಗಿ ಅಂತರ್ ವಲಯ ಮಟ್ಟಕ್ಕೆ ಅರ್ಹತೆ ಪಡೆಯಿತು.
ಇದಕ್ಕೂ ಮೊದಲು ನಡೆದ ಉಡುಪಿ ವಲಯ ಮಟ್ಟದ ಸೆಮಿಫೈನಲ್ ನಲ್ಲಿ ಆಳ್ವಾಸ್ ಕಾಲೇಜು ತಂಡವು ಶ್ರೀ ಧವಳ ಕಾಲೇಜು ತಂಡವನ್ನು 5-0 ಅಂತರದಿಂದ ಸೋಲಿಸಿದರೆ, ನಿಟ್ಟೆ ಕಾಲೇಜು ತಂಡವು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ತಂಡವನ್ನು 2-0 ಅಂತರದಿಂದ ಸೋಲಿಸಿ ಫೈನಲ್ ತಲುಪಿತ್ತು.
ಮಂಗಳೂರು ವಿವಿ ಅಂತರ್ ವಲಯ ಮಟ್ಟದ ಫುಟ್ಬಾಲ್ ಚಾಂಪಿಯನ್‌ಶಿಪ್ ನಲ್ಲಿ ಸಂತ ಫಿಲೋಮಿನಾ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿತು. ಸಂತ ಅಲೋಶಿಯಸ್ ಕಾಲೇಜು ರನ್ನರ್ ಅಪ್ ಆದರೆ, ಆಳ್ವಾಸ್ ಕಾಲೇಜು ಹಾಗೂ ನಿಟ್ಟೆ ಕಾಲೇಜು ಕ್ರಮವಾಗಿ ತೃತೀಯ ಹಾಗೂ ಚತುರ್ಥ ಸ್ಥಾನ ಪಡೆಯಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ