|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪ್ರಸನ್ನತೀರ್ಥ ಸದ್ಗುರುವರೇಣ್ಯ - ಪ್ರಸನ್ನ ಶ್ರೀಕೃಷ್ಣ ಭಕ್ತಾಗ್ರಗಣ್ಯ

ಪ್ರಸನ್ನತೀರ್ಥ ಸದ್ಗುರುವರೇಣ್ಯ - ಪ್ರಸನ್ನ ಶ್ರೀಕೃಷ್ಣ ಭಕ್ತಾಗ್ರಗಣ್ಯ

 

ಶ್ರೀವ್ಯಾಸರಾಜರ ಕಾಲದಲ್ಲಿ ಉನ್ನತಸ್ಥಿತಿಗೆ ಬಂದಿದ್ದ ದಾಸ ಸಾಹಿತ್ಯವು ಶ್ರೀವಿದ್ಯಾಪ್ರಸನ್ನತೀರ್ಥರ ಕಾಲದಲ್ಲಿ ಪುನರುತ್ಥಾನವಾಯಿತು. ಸಂಸ್ಕೃತದ ಜ್ಞಾನವಿಲ್ಲದ ಪಾಮರರಿಗೆ ಇವರ ದೇವರನಾಮಗಳ ಮೂಲಕ ಸುಲಭವಾಗಿ ಶಾಸ್ತ್ರಗಳ ಪರಿಚಯವಾಯಿತು. ಇವರಿಂದ ಉಪಕೃತರಾದ ಗುರುಕುಲದ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು "ಶ್ರೀವಿದ್ಯಾಪ್ರಸನ್ನತೀರ್ಥ ಸ್ಮಾರಕ ಸಮಿತಿ"ಯನ್ನು ರಚಿಸಿ ಅವರ ಕೃತಿಗಳ ಗಾಯನ ಸ್ಪರ್ಧೆ, ಇವರ ಕೃತಿಗಳ ಸಂಗೀತ ಕಾರ್ಯಕ್ರಮ ಹಾಗೂ ಇವರ ಆರಾಧನಾ ಮಹೋತ್ಸವವನ್ನು ಸುಮಾರು 35 ವರ್ಷಗಳಿಂದ ನಡೆಸುತ್ತಾ ಬಂದಿದ್ದಾರೆ. ಇದರಿಂದ ಇವರ ದೇವರನಾಮಗಳು ಎಲ್ಲಾ ಮಾಧ್ಯಮಗಳಲ್ಲೂ ಪ್ರಚಾರಗೊಳ್ಳುತ್ತಿವೆ.


"ದಾಸ ಸಾಹಿತ್ಯ" ಯಾರೂ ಹುಟ್ಟು ಹಾಕಿದುದಲ್ಲ. ಮಾಧ್ವತತ್ವಗಳಲ್ಲಿ ಪ್ರಪ್ರಥಮವೆನಿಸಿದ "ಹರಿಯೇ ಸರ್ವೋತ್ತಮ" ಎಂಬುದರ ಜೊತೆಯಲ್ಲೇ ಹುಟ್ಟಿ ಬಂದಿರುವಂತಹುದು. ಕಾರಣ, ತಾರತಮ್ಯವಿಲ್ಲದಿದರೆ ಶ್ರೇಷ್ಠತ್ವ - ಸರ್ವೋತಮತ್ವ ಪ್ರಕಾಶಕ್ಕೆ ಬರುವಂತೆಯೇ ಇಲ್ಲ. ಸಾಮಾನ್ಯವಾಗಿ ಜನತೆಯಲ್ಲಿ ರೂಢಿಯಲ್ಲಿರುವಂತೆ ಶ್ರೀ ನರಹರಿತೀರ್ಥರನ್ನು ಈ ಪೀಳಿಗೆಯ ಪ್ರಥಮರೆನ್ನುತ್ತಾರಾದರೂ, ಶ್ರೀಮದಾಚಾರ್ಯರ ಮೂರು ಅವತಾರಗಳೂ ದಾಸತ್ವದ ಶ್ರೇಷ್ಠತೆಯ ಪ್ರತಿಪಾದಕವೇ ಆಗಿವೆ. ಮೂರನೆಯ ಅವತಾರವಂತೂ ಯತಿಗಳಾಗಿಯೇ ವ್ಯಾಸರ ಸೇವೆ ಮಾಡಿ, 'ದಾಸತ್ವ'ವೆಂದರೇನು ಎಂಬುದನ್ನು ತೋರಿಸುವಂತಹುದಾಗಿದೆ. ಶ್ರೀಮುಷ್ಣಮಹಾತ್ಮೆಯ, "ಶ್ರೀ ಮಧ್ವಃ ಕಲ್ಪವೃಕ್ಷಶ್ಚ ಜಯಾಚಾರ್ಯಾಸ್ತು ಧೇನವಃ| ಚಿಂತಾಮಣಿಸ್ತು ವ್ಯಾಸಾರ್ಯಝ ಮುನಿತ್ರಯ ಮುದಾಹೃತಮ್||" ಎಂಬುದನ್ನು ಸ್ಮರಿಸಿಕೊಂಡಾಗ ದಾಸಸಾಹಿತ್ಯದ ಮೂಲ ಯತಿಗಳೇ ಎಂಬುದಕ್ಕೆ ನಿದರ್ಶನವಾಗಿದೆ.


"ದಾಸಸಾಹಿತ್ಯ" ಎಂಬ ಐದು ಅಕ್ಷರದ ಈ ಪದವೂ ಸಹ ಒಂದು ಸೂತ್ರವೇ ಇರಬೇಕೆನಿಸುತ್ತದೆ. "ದಾಸ ಸಾಹಿತ್ಯ" - ಈ ಪಂಚಾಕ್ಷರಿಯ ಮೊದಲೆರಡು ವರ್ಣಗಳಿಂದ 'ದಾಸ' ಶಬ್ಧವು ಅಂಕೆಗಳಲ್ಲಿ "37"ನ್ನು ಸೂಚಿಸುವುದರ ಮೂಲಕ ಶ್ರೀಮದಾಚಾರ್ಯರ ಮೂವತ್ತೇಳು ಗ್ರಂಥಗಳ ಅಮೃತಸಾರವೇ ಆಗಿದೆಯೆಂಬುದನ್ನು ಪ್ರತಿಪಾದಿಸುತ್ತದೆ. ಈ ಮೊದಲೇ ಹೇಳಿದಂತೆ ದಾಸಸಾಹಿತ್ಯದ ಉಗಮ ಯತಿಗಳು ಅದರಲ್ಲೂ ಮುನಿತ್ರಯರಲ್ಲಿ 'ಚಿಂತಾಮಣಿ' ಎನಿಸಿದ ವ್ಯಾಸರಾಜರ ಪರಂಪರೆಯಲ್ಲೇ ಅವರ ಮಾರ್ಗದಲ್ಲೇ ಕ್ರಮಿಸಿ ಬಂದ ಶ್ರೀವಿದ್ಯಾಪ್ರಸನ್ನರು ಮುನಿತ್ರಯರ ಕೀರ್ತಿಪತಾಕೆಯನ್ನು ಇನ್ನೂ ಎತ್ತರಕ್ಕೆ ಏರಿಸಿದವರೆಂಬುದರಲ್ಲಿ ಅನುಮಾನವಿಲ್ಲವೆಂಬುದನ್ನು ಪ್ರತಿಪಾದಿಸುತ್ತದೆ. ತಮ್ಮ ಕೈಯಲ್ಲಿರುವ ಈ ಕೃತಿ. ಅವರ ಹೆಸರೇ ಹೇಳುವಂತೆ ವಿದ್ಯಾಧಿದೇವತೆಯ ಪ್ರಸನ್ನತೆಯನ್ನು ಗಳಿಸಿ ತೀರ್ಥಶ್ರೇಷ್ಠರೆನಿಸಿದ್ದಾರೆಂದರೆ ಅತಿಶಯೋಕ್ತಿಯಾಗದು.


"ಹನುಮನ ಮತದಲಿ ಅನುಮಾನ ಬೇಡವೋ" ಎಂಬ ಕೃತಿಯಲ್ಲಿ ಪ್ರಮೇಯ ನವಮಾಲಿಕಾವನ್ನು ಕೇವಲ ಮೂರು ನುಡಿಗಳಲ್ಲಿ ಪೋಣಿಸಿ ಮಾಲೆಯನ್ನಾಗಿ ಮಾಡಿ ಶ್ರೀಹರಿಗೆ ಅರ್ಪಿಸಿದ್ದಾರೆ, ಶ್ರೀ ಶ್ರೀಗಳವರು. ಹರಿಯೇ ಸರ್ವೋತ್ತಮ; ಸಕಲ ಜಗಂಗಳು ನಿಜ, ವಿಧಿಭವಾದಿಗಳೆಲ್ಲ ಅನುಚರರು ಇವನಿಗೆ; ವಿವಿಧ ತಾರತಮ್ಯ ನಿರುತ ಪೊಂದಿರುವರು; ಮುಕುತಿ ಎಂಬುದ ನಿಜಾನಂದದ ಅನುಭವ; ಭಕುತಿಯೇ ಪಡೆಯಲು ಸಾಧನ; ನಯನಕ ಗೋಚರ; ನಿಗಮಗಳಿಂದಲೇ ಅರಿತ ಜ್ಞಾನಿಗೆ ಪ್ರಸನ್ನನಾಗುವನೆಂದು ಭರದಿಂದ ಸಾರುವ ಎಂದು ಸರಳ ಸುಂದರ ಕನ್ನಡದಲ್ಲಿ ತಿಳಿಸಿದ್ದಾರೆ.


ಈ ಸುಮಮಾಲಿಕೆಯಾದರೋ 'ಮೃಚ್ಛಕಟಿಕಾ'ದಲ್ಲಿ ಚಾರುದತ್ತನಿಗೆ ವಧಾಸ್ಥಾನಕ್ಕೆ ಕರೆದುಕೊಂಡು ಹೋಗುವಾಗ ಹಾಕಿದ ನಿರ್ಗಂಧ ಕೆಂಪು ಕಣೆಗೆಲೆ ಅಲ್ಲ; ಇದು ಪರಿಮಳದ ಹೂವು, ಕೃಷ್ಣನ ತೋಟದಲ್ಲಿಂದ ತಂದುದು. ಅಷ್ಟೇ ಅಲ್ಲ; ಎಲ್ಲ ವಿಧದ ಮನಕ್ಲೇಶವ ಕಳೆಯುವ ಹೂಗಳು. ದಾರದಲ್ಲಿ ಕಟ್ಟಿದುದಲ್ಲ; ಮಾರು ಹಾಕಿ ಅಳೆಯುವಂತಹುದಲ್ಲ; ಭೂರಿ ಭಕುತಿಯೆಂಬ ಭಾರಿಯ ಬೆಲೆಯ ಹೂ; ಪ್ರಸನ್ನಮಾಧವನಂಘ್ರಿಸಂಗದಿ ಮಂಗಳಕರವಾದ ಹೂಗಳಿಂದ ಕಟ್ಟಿದ ಮಾಲಿಕೆ, ಶ್ರೀಗಳವರ ಉದಾರಹೃದಯವನ್ನು ಕಾಣಬೇಕೆಂದರೆ ಅವರ "ಹನುಮಾನ ಮನೆಯವರು ನಾವೆಲ್ಲರು" ಎಂಬ ಕೃತಿಯ ಪೂರ್ಣಪಾಠವನ್ನು ತಿಳಿಯಬೇಕು.


ನಮ್ಮ ಊರ್ಧ್ವಪುಂಡ್ರವ ನೋಡಿ, ಶ್ರದ್ಧೆಭಕುತಿ ನೋಡಿ, 'ಹೃದ್ಗತವಾದ' ತತ್ವಗಳನ್ನೇ ನೋಡಿ, ಸತ್ಯವನ್ನು ಮಿಥ್ಯೆ ಎಂಬುವರಲ್ಲಾ ಎಂದು ಹೇಳಿಕೊಳ್ಳುತ್ತಾ ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ ಎಂದು ಹೇಳುವಲ್ಲಿ ಅವರು ವ್ಯಾಸರಾಜಮಠೀಯರೆಂಬುದನ್ನು ನೇರ ತೋರಿಕೊಳ್ಳದೆ ಮಧ್ವಮತದವರು ಎಂಬುದಕ್ಕೆ ಪ್ರಾಶಸ್ತ್ಯ ನೀಡಿರುವುದು ಅವರ ಔದಾರ್ಯದ ದ್ಯೋತಕವಾಗಿದೆ. ಸತ್ಯ-ಮಿಥ್ಯೆಗಳಿಗೆ ಅಂತರ ಬಲ್ಲೆವು; ಉತ್ತಮ-ನೀಚರೆಂಬ ತಾರತಮ್ಯ ಬಲ್ಲೆವು ಎಂದು ಹೇಳುತ್ತಾ ಹರಿಯೇ ಸರ್ವೋತ್ತಮನೆಂಬುದನ್ನು ಬಲ್ಲೆವು ಎಂದು ತೋರಿಸಿರುವುದು ಮಾತ್ರವಲ್ಲ. ನಮ್ಮನ್ನು ಇಲ್ಲಿಗೆ ಕಳುಹಿಸಿದವರೇ ಅಲವಬೋಧರು ಎಂದಿದ್ದಾರೆ.


'ಜನುಮಜನುಮದಲಿ ಎನಗಿರಲಿ' ಎಂಬ ಕೀರ್ತನೆಯಲ್ಲಿ ಹನುಮ ಭೀಮ ಮಧ್ವಮುನಿಗಳ ಸೇವೆಯನ್ನು ಕೇಳಿಕೊಳ್ಳುತ್ತಾ, "ಮಾತರಿಶ್ವ ನೀ ಪ್ರೀತನಾಗೆ ಅಜತಾತನು ಸುಲಭದಿ ಒಲಿಯುವನು" ಎನ್ನುವ ಮೂಲಕ ವಾಯು ಜೀವೋತ್ತಮತ್ವ, ಹರಿಸರ್ವೋತ್ತಮತ್ವವನ್ನು ಎತ್ತಿ ಹಿಡಿದಿದ್ದಾರೆ. ನಮ್ಮ ಸಿದ್ಧಾಂತದ ಪದ್ಧತಿ ಅನಿರುದ್ಧನಿಗನುಮತವಾದುದು ಎಂದು ಸಾರಿದ್ದಾರೆ. ಅನೇಕ ಸಂಗೀತಗಾರರು ತಪ್ಪದೆ ನುಡಿಸುವ "ಕವಳ ತಾಯಿ" ಎಂಬ ಕೀರ್ತನೆಯ ಮೊದಲ ನುಡಿಯಲ್ಲಿ ಶ್ರೀ ಹರಿನಿವೇದಿತವಾದ 'ಅಮೃತ'ವನ್ನೇ ನಮ್ಮ ಜೋಳಿಗೆಗೆ ಹಾಕಿ ಎನ್ನುತ್ತಾ, ಮುಂದಿನ ನುಡಿಯಲ್ಲಿ ರಮಾನಿವೇದಿತ ಪ್ರಸಾದವೇ ತಮಗೆ ಅಮೃತವಾಗುತ್ತದೆಂದು ಹೇಳುತ್ತಾ, ಪ್ರತಿದಿನವೂ ಹರಿನಿವೇದಿತ ಪದಾರ್ಥವನ್ನೇ ಕರುಣಿಸಬೇಕೆಂದು ಕೋರುವುದನ್ನು ನೋಡಿದಾಗ ಅನಿವೇದಿತ ಪದಾರ್ಥ ಸ್ವೀಕಾರಾರ್ಹವಲ್ಲ ಎಂಬ ಅರಿವು ಮೂಡಿಸುತ್ತಿರುವವರೆನಿಸುತ್ತದೆ.


ಗೋವಿಂದನಾಮ ಮಕರಂದದ ಸವಿಯ ಬಗ್ಗೆ ಹೇಳುತ್ತಾ, ಎಷ್ಟು ಪೇಳಲಿ ಆನಂದವನು; ಹಸಿವು ತೋರದೆನಗೆ, ತೃಷೆಯು ತೋರದೆನಗೆ, ದ್ವೇಷವು ತೋರದು, ರೋಷವು ತೋರದು ಎಂದು ಹೇಳುತ್ತಾ ಭಯವು ತೊಲಗುವುದು, ಜಯವು ತೋರುವುದು, ನಯನಗಳಲಿ ಸುಖಜಲವು ಸುರಿಯುವುದು ಎನ್ನುವುದರ ಮೂಲಕ ನಾಮಸ್ಮರಣೆಯ ಸವಿಯನ್ನು ತಿಳಿಸಿದ್ದಾರೆ.


ಆಧ್ಯಾತ್ಮದ ಬಗ್ಗೆ ಮಾತ್ರವೇ ಅಲ್ಲ; ಲೌಕಿಕದಲ್ಲೂ ಅವರ ದೃಷ್ಟಿವೈಶಾಲ್ಯ ಬೆರಗಾಗುವಂತಿದೆ. ಹುಲ್ಲುಮೆದೆಗೆ ಕಿಚ್ಚನು ಒಟ್ಟಿ ಅರಳಾರಿಸುವ ಜನರು ಆಪ್ತರಾಗುವರೇ? ಎಂದು ಹೇಳುವ ಮುನ್ನ "ಆಪ್ತರನ್ಯರ ನಂಬಿ ತಪ್ತಜೀವನನಾದೆ, ತೃಪ್ತಿ ಬೇಡುವೆ ನಿತ್ಯತೃಪ್ತ ನಿನ್ನನು ದೇವ" ಎಂದು ಆ ಸ್ವಾಮಿಯಲ್ಲಿ ಮೊರೆಯಿಟ್ಟಿದ್ದಾರೆ. ಇನ್ನೊಂದೆಡೆಯಲ್ಲಿ ಅನುದಿನವು ನಿನ್ನ ಮನಸಾರೆ ಪೂಜಿಸುವಂತೆ ಮನವು ನೆಮ್ಮದಿಯಾಗಲಿ ಎಂದು ಕೋರುತ್ತಾ ಹೊಟ್ಟೆಪಾಡಿಗೆ ಕೊರತೆ ಪಡುತಿರುವ ಜನರಲ್ಲಿ ಸಿಟ್ಟು ಬಾರದೆ ಮನಕೆ ತಾಳ್ಮೆಯಿರಲಿ ಎಂದು ಕೋರುತ್ತಾರೆ.


"ಹಿಂದೂಸ್ಥಾನವು ಸಾಲದೆಮಗೆ ಗೋವಿಂದನ ಸ್ಥಾನಕೆ ಹೊಡೆದಾಡಿ" ಎಂಬ ಕೀರ್ತನೆಯಲ್ಲಿ ಸ್ವರಾಜ್ಯವೇ ನಮ್ಮ ಗುರಿ ಎಂದು ಹೇಳುತ್ತಾ ಹೇಗೆ ಸಂಪಾದಿಸಬೇಕು ಎನ್ನುವುದನ್ನು, ಧರ್ಮದಿಂದ ಹೋರಾಡುವ ಸೇವಕರಿಗೆ ಕರ್ಮವಚನ ಶುಚಿ ಇರಬೇಕು, ಹರಿತಾಳದ ಚೇಷ್ಟೆಗಳನು ನಿಲ್ಲಿಸಿ, ಹರಿಜನಗಳ ಸೇವೆಯ ಮಾಡಿ, ಮರೆಯದೆ ಸತ್ಯವ ಚರಿಸಿರಿ ಕೃತ್ಯವ, ಹಿರಿಯರೊಳಗೆ ಭಕುತಿ ಮಾಡಿ, ಗುರಿಯನ್ನು ಮುಟ್ಟಲು ದೈನ್ಯದಿ ಮೊರೆಯಿಡಿ ಎಂದು ಮಾರ್ಗದರ್ಶನ ಮಾಡಿದ್ದಾರೆ.


ಶ್ರೀಹರಿಯ ಅಂಗಾಂಗಗಳ ವರ್ಣನೆ ಬಗ್ಗೆ ಹೇಳುತ್ತಾ ಚಿಗುರೆಲೆಯಿದೆಂದು ನಾ ತಂದೆ; ನಿನ್ನಯ ಮುಖದ ಚಿಗುರು ನೋಡಲು ಕೊಡಲು ನಾಚುತ್ತಿಹೆ; ಸಂಪಿಗೆಯ ಪುಷ್ಪವನರ್ಪಿಸೆ ನಿನ್ನ ನಾಸಿಕಾ ಚಂಪಕವ ನೋಡಿ ನಾಚುತಿಹೆ; ವರ್ಣದಲಿ ಶ್ರೇಷ್ಠ ಗುಲಾಬಿ ತಂದಿಹೆ, ನಿನ್ನ ಅರುಣ ತುಟಿಗಳ ನೋಡಿ ನಾಚುತಲಿಹೆ ಎಂದು ಸಂಕೋಚಪಟ್ಟರೂ ಮನವು ಮೆಚ್ಚಿಸಲಿಕೆ ಪ್ರೀತಿ ಸುಧೆಯೊಂದನರ್ಪಿಸುವೆ ಪ್ರಸನ್ನ ಎಂದಿದ್ದಾರೆ.


ಪುರಂದರದಾಸರ 'ಕಾಗದ ಬಂದಿದೆ' ಕೀರ್ತನೆಯಂತೆ, ಸುಖಶಾಂತಿಗಳನು ಬಯಸುವರಿಗೆ ಕೆಲ ಯುಕುತಿಗಳನು ಬರೆದಿಹೆನಿಲ್ಲಿ ಎನ್ನುತ್ತಾ 'ಕತ್ತಲಿನಲಿ ಓಡುತ್ತಲಿರುವಿರಿ, ಸತ್ತಿರುವುದೆ ನಿಮ್ಮಯ ಬಲವು, ಅತ್ತರೇನು ಫಲ ಎತ್ತಿ ನೋಡಿ ತಲೆ ಹತ್ತಿರದಿ ನಾನಿಹೆ ಸತತ ಎಂಬ ಧೈರ್ಯ ಕೊಡುತ್ತಾ ಒಗೆಯಿರಿ ಪುಕ್ಕಲ; ನಗುತನಗುತಲಿರಿ ಜಗವೇ ಹೊಸಮೊಗ ಕೋರುವುದು' ಎಂದು ಧೈರ್ಯ ತುಂಬಿದ್ದಾರೆ.


ಶ್ರವಣ ಮಾಡಬೇಕು; ಶಾಸ್ತ್ರ ಮನನ ಮಾಡಬೇಕು. ಶ್ರವಣಮನನ ನಿಧಿಧ್ಯಾಸನದಿಂದ ಪ್ರಸನ್ನ ಹರಿದಯದಿ ಸಿಗುವ’ ಮುಕುತಿಗೆ ಅಧಿಕಾರಿಯಾಗಬೇಕು ಎಂದು ಮಾರ್ಗದರ್ಶನ ಮಾಡಿದ್ದಾರೆ.


ಇಂದಿನ ಆಡಳಿತ ರೀತಿಯನ್ನು ಅಂದೇ ವರ್ಣೀಸಿದ ರೀತಿ ಇಲ್ಲಿದೆ. ಒಳಿತವನು ಜಗದಲ್ಲಿ ತಲೆ ಎತ್ತನಂತೆ; ಕಲಿಪುರುಷನಂಥವನು ಬಲು ಮೇಲೆಯಂತೆ, ಭೂಮಿ ಎಲ್ಲವು ಇನ್ನು ಉಳುವಾತಗಂತೆ, ಭೂಮಿಯೊಡೆಯಗೆ ದೊಡ್ಡ ನಾಮ ಬಿತ್ತಂತೆ, ರಾಮರಾಜ್ಯದಿ ಕಾರು ಓಡಿಸುವವಗಂತೆ, ಆ ಮದುವೆ ಕನ್ಯೆಯು ಪುರೋಹಿತಗಂತೆ. ಬಕಳಿಸುವ ನಾಯಕರೆ ಸರಕಾರವಂತೆ, ಜೈಲುವಾಸವೆ ಯೋಗ್ಯತೆಯ ಚಿಹ್ನೆಯಂತೆ, ರೈಲು ಉರುಳಿಸೆ ರಾಜ್ಯಕಧಿಕಾರಿಯಂತೆ, ಥೈಲಿಯಿದ್ದರೆ ಖೂನಿ ಮಾಡಬಹುದಂತೆ ಹೀಗೆ ಇಂದಿನ ರೀತಿನೀತಿಗಳನ್ನು ಅಂದೇ ಜನತೆಯ ಮುಂದಿಟ್ಟಿದ್ದಾರೆ ಶ್ರೀಗಳವರು. ನೀತಿಗಳು-ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಪ್ರತ್ಯೇಕವಾಗಿ ದರ್ಶನ ಮಾಡಿದ್ದಾರೆ.


ಅವರ ದೀರ್ಘ ಕೃತಿಗಳಾದ ವೈಕುಂಠ ವರ್ಣನೆ, ಬದರಿಕಾಶ್ರಮ ವರ್ಣನೆ, ಮಧ್ವವಿಜಯ ಸಾರಸಂಗ್ರಹಗಳಂತೂ ಅವರ ಪಾಂಡಿತ್ಯದರ್ಶನ ಮೂಡಿಸುತ್ತವೆ. ಯಾವ ಕೃತಿಯೇ ಆದರೂ ಒಂದು ಸಂದೇಶದಿಂದ ಅಲಂಕರಿಸಿ ಇತ್ತಿರುವ ಅವರ ಔದಾರ್ಯಕ್ಕೆ ಮತ್ತೊಂದು ಸಾಟಿಯಿಲ್ಲವೆನಿಸುತ್ತದೆ. ಕೇವಲ ಒಂದೆರಡು ಕೃತಿಗಳು ಅವರ ಪಾಂಡಿತ್ಯವನ್ನು ಅಳೆಯಲಾರವು. ವಾಚಕರು ಓಡಿ ಅನುಭವಿಸಿದರೆ ದೊರಕುವ ಆನಂದ ಕೇವಲ ನಾಲ್ಕಾರು ಪಂಕ್ತಿಗಳಿಂದ ಅಳೆಯಲಾಗದು. ಈ ಸಮುದ್ರದಲ್ಲಿ ಮಿಂದು ಆನಂದಾನುಭವ ಹೊಂದಿ ಧನ್ಯರಾಗಬೇಕು.


- ಡಾ.ಗುರುರಾಜ ಪೋಶೆಟ್ಟಿಹಳ್ಳಿ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


1 Comments

  1. ಮನನೀಯ ವರ‌್ಣನೆ. ಗುರುವರೇಣ್ಯರ ಹಾೆುಗಳನ್ನು ಹದನಾಗಿ ಪೋಣಿಸಿರುವ ಗುರುರಾಜ ಪೋಶರಟ್ಹಳ್ಳಿಯವರ ಜಾಣ್ಮೆ, ಅವರ ಅಭಿಜಾತ ಸಂಸ್ಕಾರದ ಫಲ. ಈ ಮಹಾಗುರುಗಳೊಡನಿನ ಸರಸ ಸಂಭಾಷಣೆಯೇ ಅತ್ಯುನ್ನತ informal ಶಿಕ್ಷಣವಾಗುತ್ತಿತ್ತು. ಕೂಡಿಸಿಕೊಂಡು ಪಾಠ ಹೇಳದಿದ್ದರೂ ತಮಾಷೆಯಾಗಿ ಅವರು ನುಡಿಯುತ್ತಿದ್ದ ಮಾತುಗಳೇ, ದೊಡ್ಡ ದೊಡ್ಡ ಪ್ರಮೇಯಾಂಶಗಳನ್ನಷ್ಟೆ ಅಲ್ಲದೆ ಲೋಕವ್ಯವಹಾರದ ಜ್ಞಾನಭಂಡಾರವನ್ನೇ ತೆರೆದಿಡುತ್ತಿತ್ತು. ಅವರಾಡುತ್ತಿದ್ದ ಮಾತುಗಳೆಲ್ಲಾ ಕಾವ್ಯವೇ. ಆ ಪೈಕಿ ಕೆಲವು ಮಾತ್ರಾ ಛಂದೋಬದ್ಧ ಕೃತಿಗಳಾಗಿ ಉಳಿದಿರುವುದು ನಮ್ಮ ಅದೃಷ್ಟ. ನನ್ನ ಮಾನಸ ಪೂಜೆಯಲ್ಲಿ, ಈ ಮೂಲಕ, ಗುರುರಾಜ ಪೋಶೆಟ್ಹಳ್ಳಿಯವರಿಗೆ, ಆಲಂಕಾರಿಕವಾಗಿ ಕಾಲು ತೊಳೆಯುತ್ತೇನೆ 🙏🙏🙏

    ReplyDelete

Post a Comment

Post a Comment

Previous Post Next Post