ಬಾಲ್ಯದ ಮುಗ್ಧತೆಯೇ ಬದುಕಿನ ಸಿದ್ಧತೆಯ ತಳಹದಿ: ಡಾ.ವಿನಾಯಕ ಭಟ್ಟ
ಪುತ್ತೂರು: ಕಾವ್ಯಗಳ ಶಕ್ತಿ ಅನಂತವಾದದ್ದು. ಅನೇಕ ಬಹುಶ್ರುತ ಸಾಧಕರು ಕಾವ್ಯಗಳ ಮೂಲಕ ಅತ್ಯುತ್ಕೃಷ್ಟ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಎಂದೋ ಮೂಡಿದ ಕಾವ್ಯಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಿಗಳಾಗಿ ನಮ್ಮ ಮುಂದಿವೆ. ಅಂತಹ ಉತ್ಕೃಷ್ಟ ಕಾವ್ಯ ಪ್ರಪಂಚವನ್ನು ಸೃಷ್ಟಿಸಿದವರಲ್ಲಿ ಆದಿ ಶಂಕರಾಚಾರ್ಯರೂ ಒಬ್ಬರು ಎಂದು ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಹೇಳಿದರು.
ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸುವ ಅನುಪಮ ಪ್ರತಿಭಾ ವೇದಿಕೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ 'ನನ್ನ ಇಷ್ಟದ ಹಾಡು' ವಿಷಯದ ಕುರಿತಾಗಿ ಶುಕ್ರವಾರ ಮಾತನಾಡಿದರು.
ಬಾಲ್ಯದ ಮುಗ್ಧತೆಯೇ ಬದುಕಿನ ಸಿದ್ಧತೆಯ ತಳಹದಿ. ಆದರೆ ಬೆಳೆಯುತ್ತಾ ಸಾಗಿದಂತೆ ಮುಗ್ಧತೆ ಮಾಯವಾಗಿ ಬಿಡುತ್ತದೆ. ಪ್ರೀತಿ-ಪ್ರೇಮ-ಪ್ರಣಯಗಳ ಬಲೆಯೊಳಗೆ ಸಿಲುಕಿ ಅನೇಕ ಯುವಕ ಯುವತಿಯರು ನಿಜವಾದ ಸತ್ವವನ್ನೂ, ಬದುಕಿನ ತತ್ತ್ವವನ್ನೂ ಮರೆತು ಮುಂದುವರೆಯುತ್ತಾರೆ. ಆದರೆ ನಿಜವಾದ ಪ್ರೇಮವೆಂದರೆ ತಾಯಿಯ ಪ್ರೇಮ. ವ್ಯಕ್ತಿಯ ಜನನ ಪೂರ್ವದಿಂದಲೇ ಆತನನ್ನು ಪ್ರೀತಿಸುವ ಒಂದು ಜೀವವಿದ್ದರೆ ಅದು ಅಮ್ಮ. ಈ ಸತ್ಯವನ್ನು ಶಂಕರಾಚಾರ್ಯರು ತಮ್ಮ ಕಾವ್ಯಗಳಲ್ಲಿ ವ್ಯಕ್ತಪಡಿಸಿದ್ದಾರೆ. ಇಂತಹ ಸಂದೇಶಗಳನ್ನು ಅರಿಯುವಲ್ಲಿ ಕಾವ್ಯಗಳು ನಮಗೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಯಾವುದಾದರೂ ಒಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸುವ ಹಾಗೂ ಅವಕಾಶ ಕಲ್ಪಿಸಿಕೊಡುವ ವ್ಯವಸ್ಥೆ ಇರಬೇಕು. ಇದುವರೆಗೂ ವೇದಿಕೆಯೇರದವರೂ ವೇದಿಕೆಗೆ ಬರುವಂತಾಗುವುದೇ ಕಾರ್ಯಕ್ರಮದ ನಿಜವಾದ ಸಾರ್ಥಕ್ಯ. ಆ ನೆಲೆಯಲ್ಲಿ ಅನುಪಮ ವೇದಿಕೆ ಕಾರ್ಯನಿರ್ವಹಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಪ್ರತಿಭೆಗೆ ವೇದಿಕೆ ದೊರೆತಾಗ ಮಾತ್ರ ಅದು ಅರಳುವುದಕ್ಕೆ ಸಾಧ್ಯ. ಪ್ರತಿಭೆಯನ್ನು ಗುರುತಿಸುವ ಮತ್ತು ಅರಳಿಸುವ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕು. ಅನುಪಮ ಪ್ರತಿಭಾ ವೇದಿಕೆ ಪ್ರತಿಭೆಗೆ ಕೇವಲ ವೇದಿಕೆಯಷ್ಟೇ ಆಗದೆ ಪ್ರತಿಭಾ ಪುರಸ್ಕಾರವನ್ನೂ ನಡೆಸುವ ಮಟ್ಟಕ್ಕೆ ಬೆಳೆಯಬೇಕು. ವಿವಿಧ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗೆ ಗೌರವ ಸಂದಾಯವಾದಾಗ ಅದು ಮತ್ತಷ್ಟು ಸತ್ವಯುತವಾಗಿ ಬೆಳೆದುಬರುವುದಕ್ಕೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಪಂಚಮಿ ಬಾಕಿಲಪದವು, ಪ್ರಿಯಾ, ಪ್ರಕೃತಿ, ನಿಶ್ಚಿತ, ಮೋಹನ ಆಚಾರ್ಯ, ಶೇಖರ, ಸ್ಪೂರ್ತಿ, ಮೇಘಾ ಡಿ, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ವಿವಿಧ ಹಾಡುಗಳನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಾದ ನವೀನ್ ಹಾಗೂ ಸಾಯಿಶ್ವೇತಾ ತಮ್ಮ ಇಷ್ಟದ ಹಾಡಿನ ಬಗೆಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ, ಇಂಗ್ಲಿಷ್ ಉಪನ್ಯಾಸಕಿ ಸಂಧ್ಯಾ ಎಂ, ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿ.ತೇಜಶಂಕರ ಸೋಮಯಾಜಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ, ಅನುಪಮ ಪ್ರತಿಭಾ ವೇದಿಕೆಯ ಕಾರ್ಯದರ್ಶಿ ವೈಷ್ಣವೀ ಜೆ ರಾವ್ ಉಪಸ್ಥಿತರಿದ್ದರು.
ತೃತೀಯ ವರ್ಷದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯರಾದ ಶ್ರೀಲಕ್ಷ್ಮಿ ಸ್ವಾಗತಿಸಿ, ಅದಿತಿ ವಂದಿಸಿದರು. ತೃತೀಯ ವರ್ಷದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಮನೀಶ್ ವಿ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ