ಬೆಂಗಳೂರು: ರಾಜ್ಯಾದ್ಯಂತ ಈಗಾಗಲೇ ಸರ್ಕಾರದ ಆದೇಶದಂತೆ ನೈಟ್ ಕರ್ಫ್ಯೂ ಆರಂಭವಾಗಿದೆ. ಮಂಗಳವಾರದಿಂದ ಆರಂಭವಾಗಿರುವ ನೈಟ್ ಕರ್ಫ್ಯೂ ಜನವರಿ 7 ರವರೆಗೂ ಪ್ರತೀ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಜಾರಿಯಲ್ಲಿರಲಿದೆ.
ಕರ್ಫ್ಯೂ ಆರಂಭದ ಮೊದಲ ದಿನವೇ ಪೋಲೀಸರು ಅಲರ್ಟ್ ಆಗಿದ್ದರು. ಕಾನೂನು ಸುವ್ಯವಸ್ಥೆ ಪಾಲನೆ, ನೈಟ್ ಕರ್ಫ್ಯೂ ಸಮರ್ಪಕ ಜಾರಿ ಸಂಬಂಧ ರಾಜ್ಯಾದ್ಯಂತ ಪೋಲೀಸರು ಮುನ್ನೆಚ್ಚರಿಕೆ ವಹಿಸಿದ್ದರು.
ಮೆಡಿಕಲ್ ಸ್ಟೋರ್, ಆಸ್ಪತ್ರೆ ಹಾಗೂ ತುರ್ತು ಸೇವೆಗೆ ಪೂರ್ವಾನುಮತಿ ಪಡೆದ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ರಾತ್ರಿ 10 ಗಂಟೆಯ ಮೊದಲು ಎಲ್ಲಾ ಅಂಗಡಿ ಮುಂಗಟ್ಟು, ಹೋಟೆಲ್, ರೆಸ್ಟೋರೆಂಟ್ , ಬಾರ್ ಗಳನ್ನು ಮುಚ್ಚಿಸುವ ಕಾರ್ಯದಲ್ಲಿ ಪೋಲೀಸರು ನಿರತರಾಗಿದ್ದರು.
ಎಲ್ಲಾ ಮೇಲ್ಸೇತುವೆ ಮೇಲೆ ಬ್ಯಾರಿಕೇಡ್ ನಿರ್ಮಿಸಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.