||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎನ್.ಎಸ್. ವಾಮನ್ ಶತಮಾನೋತ್ಸವ ಪುಸ್ತಕ ಪ್ರಶಸ್ತಿ: 'ವಂದೇ ಗುರು ಪರಂಪರಾಮ್' ಕೃತಿಗೆ ಪ್ರಥಮ ಬಹುಮಾನ

ಎನ್.ಎಸ್. ವಾಮನ್ ಶತಮಾನೋತ್ಸವ ಪುಸ್ತಕ ಪ್ರಶಸ್ತಿ: 'ವಂದೇ ಗುರು ಪರಂಪರಾಮ್' ಕೃತಿಗೆ ಪ್ರಥಮ ಬಹುಮಾನ

 

ಮೈಸೂರು: ಇಲ್ಲಿನ ಅನುಭವಗಳ ಹಂಚಿಕೆಯ ವೇದಿಕೆಯಾದ 'ಅಭಿರುಚಿ ಬಳಗ' ಹಾಗೂ 'ಆಸಕ್ತಿ ಪ್ರಕಾಶನ'ಗಳ ಸಂಯುಕ್ತ ಆಶ್ರಯದಲ್ಲಿ ಈ ವರ್ಷವನ್ನು, ಬಾನುಲಿ ಹಾಗೂ ರಂಗಭೂಮಿಗಳ ನಟ ಹಾಗೂ ನಿರ್ದೇಶಕ ಎನ್.ಎಸ್.ವಾಮನ್ ಅವರ ಶತಮಾನೋತ್ಸವ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 2022ರ ಜನವರಿ 2ರಂದು ಭಾನುವಾರ ಮೈಸೂರಿನ ಕಿರು ರಂಗಮಂದಿರ, ಕರ್ನಾಟಕ ಕಲಾಮಂದಿರದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಅಭಿರುಚಿ ಬಳಗ -ಆಸಕ್ತಿ ಪ್ರಕಾಶನ ಮೈಸೂರು ಹಾಗೂ ಚೈತ್ರ ಫೌಂಡೇಶನ್ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಎನ್.ಎಸ್.ವಾಮನ್ ಅವರ ಬಗ್ಗೆ ವಿಚಾರ ಸಂಕಿರಣ, ವಸ್ತುಪ್ರದರ್ಶನ ಹಾಗೂ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ.


ಇದೇ ಸಂದರ್ಭದಲ್ಲಿ ಎನ್.ಎಸ್.ವಾಮನ್ ಶತಮಾನೋತ್ಸವ ಪುಸ್ತಕ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಮೊದಲ, ಎರಡನೇ ಹಾಗೂ ಮೂರನೇ ಬಹುಮಾನವನ್ನು ತಲಾ ಮೂರು ಜನರಿಗೆ ಹಂಚಲಾಗಿದೆ. ಆಯ್ಕೆ ಸಮಿತಿ ಆಯ್ಕೆ ಮಾಡಿರುವ ಪುಸ್ತಕಗಳು, ಲೇಖಕರು ಹಾಗೂ ಬಹುಮಾನದ ವಿವರಗಳು ಹೀಗಿವೆ ಎಂದು ಕಾರ್ಯಕ್ರಮದ ಆಯೋಜಕರಾದ ಅಭಿರುಚಿ ಬಳಗ ಹಾಗೂ 'ಆಸಕ್ತಿ ಪ್ರಕಾಶನ'ದ ಅಧ್ಯಕ್ಷ ಎನ್.ವಿ.ರಮೇಶ್ ತಿಳಿಸಿರುತ್ತಾರೆ.


ಮೊದಲ ಬಹುಮಾನ ವಿಜೇತರು: ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಪ್ರಕಟಿಸಿರುವ ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಮಹತ್ವ ಸಾರುವ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅವರ 'ವಂದೇ ಗುರು ಪರಂಪರಾಮ್ ಲೇಖನಗಳ ಸಂಕಲನಕ್ಕೆ, ಕಾರವಾರ ಜಿಲ್ಲೆ ಕೈಗಾದ ಎ.ಎನ್.ರಮೇಶ್ ಗುಬ್ಬಿ ಅವರ 'ಕಾಡುವ ಕವಿತೆಗಳು' ಎಂಬ ಕವನ ಸಂಕಲನ, ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನ ಲಕ್ಷ್ಮಿಕಾಂತ್ ಮಿರಜಕರ್ ಅವರ 'ಗಝಲ್‌ಗಳು' ಗಝಲ್‌ಗಳ ಸಂಕಲನಕ್ಕೆ ಸಂದಿದೆ.


ಎರಡನೇ ಬಹುಮಾನ ವಿಜೇತರು: ಮುಂಬಯಿಯ ಡಾ. ಕೊ.ಗೋವಿಂದ ಭಟ್ ಅವರ ‘ನೆಲಸಂಪಿಗೆ’ ಕಥಾ ಸಂಕಲನ, ನಂಜನಗೂಡಿನ ಡಾ. ಸೌಗಂಧಿಕಾ ಜೋಯಿಸ್ ಅವರ 'ಪುನ್ನಾಗ' ಕವನ ಸಂಕಲನ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಂಜುನಾಥ ಬನಸೀಹಳ್ಳಿ ಅವರ 'ಸ್ನೇಹ ಬಂಧನ' ಕಾದಂಬರಿ.


ಮೂರನೇ ಬಹುಮಾನ ವಿಜೇತರು: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಸಹನಾ ಕಾಂತ ಬೈಲು ಅವರ 'ಆನೆ ಸಾಕಲು ಹೊರಟವಳು' ಅಂಕಣ ಸಂಕಲನ. ಹಾವೇರಿಯ ಮಾಲತೇಶ ಅಂಗೂರ ಅವರ 'ಹಾವೇರಿಯಾಂವ್' ಅಂಕಣ ಬರಹಗಳ ಸಂಕಲನ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೀರೇಕುಂಬಳಗುಂಟೆ ಗ್ರಾಮದ ಎಸ್.ಹೆಚ್. ಶಫಿಉಲ್ಲ (ಕುಟೇಶ) ಅವರ 'ಸಂಧ್ಯಾ ರಗಳೆ' ಕಥಾ ಸಂಕಲನ.


ವಿಶೇಷ ಬಹುಮಾನ ವಿಜೇತರು


ಶೆಲ್ಲಿ ಕೂಡ್ಲಿಗಿ (ಶೇಕ್ಕಾವಲಿ ಮಣಿಗಾರ್) ಅವರ 'ಎರಡು ಲೋಟದ ಹುಡುಗಿ' ಕಾದಂಬರಿ. ಬೆಂಗಳೂರಿನ ಪ್ರಭಾಕರ ಬಿಳ್ಳೂರ್ ಅವರ 'ವರ್ತಮಾನಕ್ಕೆ ಸಾಕ್ಷಿಯಾದ ಕವಿತೆಗಳು' ಕವಿತಾ ಸಂಕಲನ. ವಿಜಯಪುರದ ಪ್ರೊ. ಗಿರಿಜಾ ಮಾಲೀಪಾಟೀಲ್ ಅವರ 'ಸಾಹಿತ್ಯದ ವೈವಿಧ್ಯಮಯ ರೂಪಗಳು' ಲೇಖನಗಳ ಸಂಗ್ರಹ. ಮೈಸೂರಿನ ಶ್ರೀಮತಿ. ಯಶೋಧ ರಾಮಕೃಷ್ಣ ಅವರ 'ಅರಿವಿನ ಸೌರಭ' ಲೇಖನಗಳ ಸಂಕಲನ. ಬಾದಾಮಿಯ ಸದಾಶಿವ ಎಂ.ಮರಡಿ ಹಾಗೂ ಜಮಖಂಡಿಯ ಹಿರೇನಸಬಿ ಮಲ್ಲಿಕಾರ್ಜುನ ಮುತ್ತಪ್ಪ ಮರಡಿ ಅವರ 'ಸಮ ಹಿಮ ಚಂದ್ರಮ' ಕವನ ಸಂಕಲನ. ಕೊಪ್ಪಳ ಜಿಲ್ಲೆ ಗಂಗಾವತಿಯ ರಾಘವೇಂದ್ರ ಮಂಗಳೂರು ಅವರ 'ಲಾಟರಿ ಹುಡುಗ' ಕಥಾ ಸಂಕಲನ.


ಸಮಾಧಾನಕರ ಬಹುಮಾನ ವಿಜೇತರು


ದಾವಣಗೆರೆ ಜಿಲ್ಲೆಯ ಜೆ.ಎಸ್.ಚಂದ್ರನಾಥ ನೀಲನಹಳ್ಳಿ ಅವರ 'ಕರ್ನಾಟಕದ ದಿಗಂಬರ ಜಿನಾಲಯಗಳು' ಸಂಶೋಧನಾ ಕೃತಿ. ಬಾಗಲಕೋಟೆಯ ಬದರಿನಾಥ್ ಜಹಗೀರದಾರ್ ಅವರ 'ಸರಿಯಾವುದು ಎಂದಾರಿಸು ಮನವೇ..' ಕವನ ಸಂಕಲನ. ಹಾಸನದ ಕುಮಾರ ಛಲವಾದಿ ಅವರ 'ಏಕಾಂಗಿಯ ಹಾಡು' ಕವಿತಾ ಸಂಕಲನ. ಶಿರಸಿಯ ಸಿಂಧು ಚಂದ್ರ ಹೆಗಡೆಯವರ 'ಸೂಜು ಮೆಣಸು ಕೆಸುವಿನೆಲೆ' ಕವನ ಸಂಕಲನ. ಮಂಡ್ಯ ತಾಲೂಕು ಹನಕೆರೆಯ ಮಹೇಶಕುಮಾರ ಹನಕೆರೆ ಅವರ 'ಒಡಲಾಳದ ಪ್ರಶ್ನೆಗಳು' ಕವನ ಸಂಕಲನ. ಮೈಸೂರು ಜಿಲ್ಲೆ, ಹುಣಸೂರು ತಾಲೂಕು, ಮನುಗನಹಳ್ಳಿಯ ಎಂ.ಇಂದಿರಾ ಶೆಟ್ಟಿ ಅವರ 'ಭಾವಚಿತ್ತಾರ' ಕವನ ಸಂಕಲನ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕನಸೂರಿನ ಯಶಸ್ವಿನಿ ಮೂರ್ತಿ ಅವರ 'ರಾಗ ರಂಗೋಲಿ' ಕವನ ಸಂಕಲನ.

ದಿಲ್ಲಿಯಲ್ಲಿ ಕನ್ನಡ ಬಾವುಟ ಮೆರೆಸಿದ ಮೈಸೂರಿನ ಮಹನೀಯ ಎನ್.ಎಸ್.ವಾಮನ್


ಶಾಲಾ ದಿನಗಳಲ್ಲೇ 12ನೇ ವರ್ಷದಲ್ಲಿ ರಂಗಭೂಮಿ ಪ್ರವೇಶಿಸಿ, 1944ರಲ್ಲಿ ಹವ್ಯಾಸಿ ರಂಗಭೂಮಿಯಲ್ಲಿ ಸ್ಟೂಡೆಂಟ್ಸ್ ಡ್ರಾಮಾಟಿಕ್ಸ್ ಅಸೋಸಿಯೇಶನ್ ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಕೊಟ್ಟು, 1936ರಿಂದ ಮೈಸೂರಿನ ಒಂಟಿಕೊಪ್ಪಲಿನಲ್ಲಿ ಪ್ರೊ. ಎಂ.ವಿ.ಗೋಪಾಲಸ್ವಾಮಿ ಅವರ ಟಾಯ್ ಟ್ರಾನ್ಸ್ಮೀಟರ್ ಮನೆ ಸ್ಟುಡಿಯೋದ, ಬಾನುಲಿ ಪ್ರಸಾರದ ಹವ್ಯಾಸಿ ನಾಟಕ ಕಲಾವಿದರಾಗಿ, 1944ರಿಂದ 1979ರವರೆಗೆ ಆಕಾಶವಾಣಿಯ ನಾಟಕ ಕಲಾವಿದ ಹಾಗೂ ನಿರ್ದೇಶಕರಾಗಿ, ನಭೂತೋ ನಭವಿಷ್ಯತಿ ಎಂಬಂತೆ ಮಿನುಗಿದವರು ಎನ್.ಎಸ್.ವಾಮನ್.


1952ರಿಂದ 1955ರವರೆಗೆ, ದಿಲ್ಲಿಯ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿದ್ದಾಗ, ದಿಲ್ಲಿ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ, 1954ರಲ್ಲಿ ಅಂದಿನ ರಾಷ್ಟ್ರಪತಿ ಡಾ.ಬಾಬುರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಉತ್ಸವ ಏರ್ಪಡಿಸಿ, ಉಪರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಅವರಿಂದ ಕನ್ನಡ ಗ್ರಂಥಾಲಯ ಉದ್ಘಾಟನೆ ಮಾಡಿಸಿ, ನಾಲ್ಕು ಕನ್ನಡ ನಾಟಕಗಳನ್ನಾಡಿಸಿ, ದಿಲ್ಲಿಯಲ್ಲಿ ಕನ್ನಡದ ಧ್ವಜ ಹಾರಿಸಿದವರು ನಂಜನಗೂಡು ಶ್ರೀನಿವಾಸ ವಾಮನ್. ಬಿ.ಎಂ.ಶ್ರೀ. ಅವರ ಅಶ್ವತ್ಥಾಮನ್, ಜಿ.ಪಿ.ರಾಜರತ್ನಂ ಅವರ ಗಂಡುಗೊಡಲಿ, ಸಂಸ ಅವರ ವಿಗಡ ವಿಕ್ರಮರಾಯ ಹಾಗೂ ಏ.ಎನ್.ಮೂರ್ತಿರಾಯರ ಆಷಾಡಭೂತಿ, ನಿರ್ದೇಶಿಸಿ ಅಭಿನಯಿಸಿದರು.


ಅಂದಿನ ನಾಟಕಗಳಲ್ಲಿ ಕೆ.ಎಸ್.ಅಶ್ವಥ್ ಮುಖ್ಯ ಪಾತ್ರಗಳಲ್ಲಿದ್ದರು. ಚಿತ್ರನಟ ಸಂಪತ್ ಅವರ ಸಹಕಾರದಿಂದ, ಮೈಸೂರು ಅರಮನೆಯಿಂದ, ದೆಹಲಿಯ ನಾಟಕಗಳಿಗಾಗಿ, ರಾಜಪೋಷಾಕುಗಳು, ಕತ್ತಿ ಗುರಾಣಿಗಳು ಇವುಗಳನ್ನು ತರಿಸಿಕೊಂಡಿದ್ದರು. ಈ ಕನ್ನಡ ಉತ್ಸವವದಲ್ಲಿ ಕರ್ನಾಟಕದ ಶಾಸ್ತ್ರೀಯ ಗಾಯನ, ಸಂಗೀತ ವಾದ್ಯವಾದನ, ದೇವರ ನಾಮ, ವಚನ ಹಾಗೂ ಜಾನಪದ ನೃತ್ಯಗಳನ್ನು ಅಲ್ಲಿ ಏರ್ಪಡಿಸಿದ್ದರು. ಇದೇ ಅವಧಿಯಲ್ಲಿ, ಮಿತ್ರ ಎಂ..ಶಂಕರ್‌ಸಿಂಗ್ ಅವರ ಸಹಕಾರದಿಂದ ಅವರ ನಿರ್ದೇಶನ-ನಿರ್ಮಾಣದ ದಲ್ಲಾಳಿ ಹಾಗೂ ವರದಕ್ಷಿಣೆ ಎಂಬ 2 ಕನ್ನಡ ಚಲನಚಿತ್ರಗಳ ಪ್ರತಿಗಳನ್ನು ತರಿಸಿ, ದಿಲ್ಲಿಯಲ್ಲಿ ಥಿಯೇಟರ್ ಇರದಿದ್ದಾಗ, ಡಿಫೆನ್ಸ್ ಕಾಲನಿಯ ಕೋಣೆಯಲ್ಲಿ ಪ್ರದರ್ಶಿಸಿ, 1 ರೂಪಾಯಿಗೆ ದಿಲ್ಲಿ ಕನ್ನಡಿಗರಿಗೆ ಮೊಟ್ಟ ಮೊದಲ ಬಾರಿ ಕನ್ನಡ ಚಲನಚಿತ್ರ ತೋರಿಸಿದ ಕೀರ್ತಿ ವಾಮನ್ ಅವರದು.


50ರ ದಶಕದಲ್ಲಿ, ಅಂದು ಕಲಾಜೀವನದ ಆರಂಭದಲ್ಲಿದ್ದ, ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಗಳ ಭಾವೀ ಉಜ್ವಲ ತಾರೆಯರಾಗಲಿದ್ದ ಡಾ.ರಾಜಕುಮಾರ್ ಅವರಂತಹ ನೂರಾರು ಕಲಾವಿದರನ್ನು, ಆಕಾಶವಾಣಿ ಮೈಕಿನ ಮುಂದೆ ತಂದು, ಅವರಿಗೆ ರೇಡಿಯೋ ನಾಟಕ ಸಂಭಾಷಣೆ ಹೇಳುವ ಶೈಲಿಯನ್ನು ಕಲಿಸಿ ತರಬೇತಿಗೊಳಿಸಿದರು. ಇವರ ಪಟ್ಟ ಶಿಷ್ಯರಾದ ಕೆ.ಎಸ್.ಅಶ್ವಥ್ ಹಾಗೂ ಮಾಸ್ಟರ್ ಹಿರಣ್ಣಯ್ಯ, ವಾಮನ್ ಅವರೇ ಹುಡುಕಿ ತಂದು ಕಲಾಸಾಕ್ಷಾತ್ಕಾರ ಕೊಟ್ಟು, ತರಬೇತಿ ನೀಡಿ ಬೆಳಗಿಸಿದ ಅಮರ ನಕ್ಷತ್ರಗಳು. ಸಾಂಪ್ರದಾಯಿಕ, ತಮಿಳು ಅಯ್ಯರ್ ಕುಟುಂಬದಲ್ಲಿ ಜನಿಸಿ, ಅರಮನೆ ಸಂಸ್ಕೃತ ವಿದ್ವಾಂಸರಾಗಿದ್ದ ತಾತಾ ವೆಂಕಟಾಚಲ ಶಾಸ್ತ್ರಿಗಳ ಸಂಸ್ಕೃತಮಯ ಮನೆ ವಾತಾವರಣದಲ್ಲೂ, ಇವರ ಕನ್ನಡ ಭಾಷೆಯ ಮೇಲಿನ ಮಮತೆ ಅಪೂರ್ವ.


ಇವರ ತಂದೆ ಶ್ರೀನಿವಾಸ ಅಯ್ಯರ್ ನಂಜನಗೂಡಿನಲ್ಲಿ ರಸಬಾಳೆ ಹಣ್ಣಿನ ತೋಟದಲ್ಲಿ ಕೃಷಿಕರಾಗಿದ್ದರು. ತಾಯಿ ತಂಗಮ್ಮ ಗೃಹಿಣಿ. ತಾತನ ಮನೆಯಲ್ಲಿ ಸುಬ್ಬರಾಯನ ಕೆರೆಯ ಕಾಲೇಜು ರಸ್ತೆಯ 144ನೇ ನಂಬರಿನ ಮನೆಯಲ್ಲಿ ವಾಸವಾಗಿದ್ದ ವಾಮನ್‌ಗೆ. ತನ್ನ 7 ಏಳು ತಲೆಮಾರಿನಲ್ಲಿ ಯಾರಿಗೂ ಇಲ್ಲದ ನಾಟಕದ ಹುಚ್ಚು. ಆಗ ನಾಟಕ ಕಲೆ ಅಬ್ಬಾ ಪೋಲಿಗಳಿಗೆ ಎಂಬ ಭಾವನೆ ಹೊಂದಿದ್ದ ತಾತ, ಇವರನ್ನು ಹೆದರಿಸಿ ಮಡಿಕೋಲಿನಿಂದ ಹೊಡೆದು ಕೋಣೆಯಲ್ಲಿ ಕೂಡಿ ಹಾಕಿದರೂ, ವಾಮನ್ ಕದ್ದು ಮುಚ್ಚಿ ಸತತ ನಾಟಕಗಳನ್ನು ನೋಡಿದರು.


ಅಂದಿನಿಂದ ಕನ್ನಡ ನಾಡಿನ ಎಲ್ಲ ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯ ದಿಗ್ಗಜಗಳೆಲ್ಲರೊಂದಿಗೆ ನಿಕಟ ಸಂಪರ್ಕ, ಇವರು ನೋಡದ ಅಂದಿನ ನಾಟಕವಿಲ್ಲ. ಇವರಿಗೆ ಆತ್ಮೀಯ ಪರಿಚಯವಿರದ ಕಂಪನಿ ಮಾಲೀಕರು, ಕಲಾವಿದರು, ಇರಲೇ ಇಲ್ಲ. 1940ರಲ್ಲಿ, ವಾಮನ್ ಮೈಸೂರಿನ ಮಹಾರಾಜ ಕಾಲೇಜು ಸೇರಿದರು. ಆ ನಾಲ್ಕು ವರ್ಷಗಳ ಅವಧಿಯಲ್ಲಿ, ವಿದ್ಯಾರ್ಥಿ ಸಂಘ ಹಾಗೂ ಇತರ ಸಾಂಸೃತಿಕ ಸಂಘಗಳ ಸಹಕಾರದೊಂದಿಗೆ ಸುಮಾರು 26 ನಾಟಕಗಳನ್ನು ನಿರ್ದೇಶಿಸಿ, ಪಾತ್ರ ವಹಿಸಿ ಅಂದಿನ ರಸಿಕ ವಿದ್ಯಾರ್ಥಿ, ಶಿಕ್ಷಕ, ಪಾಲಕರಿಗೆ ನೂರಾರು ಪ್ರದರ್ಶನಗಳ ಮೂಲಕ ಅಪಾರ ಸಂತಸ, ಕಲಾ ಪ್ರಜ್ಞೆ ನೀಡಿದರು.


1944ರಲ್ಲಿ ಮೈಸೂರಿನ ಹಾರ್ಡ್ವಿಕ್ ಪ್ರೌಢಶಾಲೆಯಲ್ಲಿ, ವಾಮನ್ ಶಿಕ್ಷಕರಾಗಿ 5ವರ್ಷ ವಿದ್ಯಾರ್ಥಿಗಳಿಗೆ ಪಾಠ ಕಲಿಸಿದರು. ತಮ್ಮ 25ನೇ ವಯಸ್ಸಿನಲ್ಲಿ 1944ರಲ್ಲಿ ಸ್ಟೂಡೆಂಟ್ಸ್ ಡ್ರಾಮಾಟಿಕ್ಸ್ ಅಸೋಸಿಯೇಶನ್ ಎಂಬ ವಿದ್ಯಾರ್ಥಿಗಳ ನಾಟಕ ಸಂಘ ಕಟ್ಟಿದರು. ಈ ಸಂಘದಲ್ಲಿಯೇ ಕೆ.ಎಸ್.ಅಶ್ವಥ್, ಮಾಸ್ಟರ್ ಹಿರಣ್ಣಯ್ಯ, ಎಚ್.ಪಿ.ಸರೋಜ ಮುಂತಾದವರು ತರಬೇತಿ ಪಡೆದು ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಚದುರಂಗ, ಕುವೆಂಪು, ತ.ರಾ.ಸು ನಾಟಕಗಳನ್ನು ಸತತ ಆಡಿ ಜನಪ್ರಿಯಗೊಳಿಸಿದರು. ನಾ.ಕಸ್ತೂರಿ ಅವರ ಬೆಂಬಲದಿಂದ ಬಿಡುವಿನ ವೇಳೆಯಲ್ಲಿ ಹಳ್ಳಿ ಹಳ್ಳಿ ತಿರುಗಿ ಸಾಮಾಜಿಕ ಕ್ಯಾಂಪು ಮಾಡಿ ಊರಿನಲ್ಲಿ ಶ್ರಮದಾನ, ಅಕ್ಷರ ಕಾರ್ಯಕ್ರಮ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಹಾಗೂ ನಾಟಕ ಪ್ರದರ್ಶನ ಮಾಡಿದರು.


ಆಕಾಶವಾಣಿಯಲ್ಲಿ ವಾಮನ್ 'ತರಂಗರಂಗ' ಎಂಬ ಬಾನುಲಿ ಪತ್ರಿಕೆಗೆ ಸಂಪಾದಕರಾಗಿ ಕೆಲಸ ಮಾಡಿದರು. ಡಾ.ರಾಜ್ ಹಲವಾರು ಬಾರಿ ಹೇಳಿರುವಂತೆ 'ಕೋಲಂಬಸ್' ನಾಟಕದಲ್ಲಿ ಡಾ.ರಾಜ್ ಹಾಗೂ ಅವರ ತಂಗಿ ಶಾರದಮ್ಮ ಅವರನ್ನು ಆಕಾಶವಾಣಿ ಮೈಕಿನ ಮುಂದೆ ಮೊಟ್ಟ ಮೊದಲ ಬಾರಿ ತಂದ ಕೀರ್ತಿ ವಾಮನ್ ಅವರದು. ಅದೇ ಸಮಯದಲ್ಲಿ ರಾತ್ರಿ ಕೆಂಪರಾಜ್ ಅರಸ್ ಅವರ 'ಕೃಷ್ಣಲೀಲಾ' ಚಲನಚಿತ್ರಕ್ಕೆ ಸಹಾಯಕರಾಗಿ, ನವಜ್ಯೋತಿ ಸ್ಟುಡಿಯೋದಲ್ಲಿ ಶೂಟಿಂಗ್‌ನಲ್ಲೂ ಸೇವೆ, ಮುಂದೆ ಮೈಸೂರು ಆಕಾಶವಾಣಿಯ ನಾಟಕ ವಿಭಾಗದ, ನಿರ್ಮಾಣದ ಜವಾಬ್ದಾರಿ, ವಾಮನ್ ಅವರ ಮೇಲೆ.


ಹಿಂದೆ ಮೈಸೂರು ಆಕಾಶವಾಣಿ ಶಾರ್ಟ್ವೇವ್‌ನಲ್ಲಿ ಪ್ರಸಾರ ಮಾಡುತ್ತಿದ್ದ ಕಾಲದಲ್ಲಿ, ಬಾನುಲಿ ಮೂಲಕ, ನಾಟಕಗಳ ನಿರ್ದೇಶನ, ಅಭಿನಯಕ್ಕೆ ಹಾಗೂ ಹೊಸಬರು ಹಾಗೂ ನುರಿತ ಸಾಹಿತಿಗಳಿಂದ ಬಾನುಲಿ ನಾಟಕಗಳನ್ನು ಬರೆಯಿಸಿ, ತಮ್ಮ ಕೊಡುಗೆ ಸಲ್ಲಿಸಿದ್ದಾರೆ. ಅಂದಿನ ಇವರ ನಾಟಕಗಳು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ತನಕ, ಕನ್ನಡದ ಕಂಪು ಹರಡಿ, ಈ ನಾಟಕಗಳಿಗೆ ಅಲ್ಲಿಯ ಕನ್ನಡಿಗರೆಲ್ಲರ ಮೆಚ್ಚುಗೆ ಪಡೆದಿದ್ದರು. ಕುವೆಂಪು ಅವರ ಬಳಿ ವಿವರಣೆ ಪಡೆದು, ಸಂದೇಹ ನಿವಾರಣೆ ಮಾಡಿಕೊಂಡು ಅವರ ಸಾಲು ಸಾಲು ಸರಳ ರಗಳೆ, ಗೀತ ನಾಟಕಗಳನ್ನು ನಿರ್ದೇಶಿಸಿದರು.


ಆ ನಾಟಕಗಳಲ್ಲಿ ಕೆ.ಎಸ್.ಅಶ್ವಥ್, ಮಾಸ್ಟರ್ ಹಿರಣ್ಣಯ್ಯ, ಹೆಚ್.ಎಲ್.ನಾರಾಯಣರಾವ್ (ವಿಷ್ಣುವರ್ಧನ್ ತಂದೆ) ಹುಣಸೂರು ಕೃಷ್ಣಮೂರ್ತಿ, ಹೆಚ್.ಪಿ.ಸರೋಜಾ, ಎಂ.ನರೇಂದ್ರಬಾಬು ಮುಂತಾದ ಕಲಾವಿದರು ಉತ್ತಮ ಅವಕಾಶ, ತರಬೇತಿ ಪಡೆದರು. ಡಾ.ರಾಜ್ ಸ್ಮರಿಸಿಕೊಂಡ ಇನ್ನೊಂದು ನಾಟಕ 'ನಂದಿನಿ'. ಅದರಲ್ಲಿ ಡಾ.ರಾಜ್ ಇತರರೊಂದಿಗೆ ನೇರ ಪ್ರಸಾರದಲ್ಲಿ ಅಭಿನಯಿಸುವಾಗ, ಇದ್ದಕ್ಕಿದ್ದಂತೆ ವಸಿಷ್ಠನ ಪಾತ್ರದ ಉಪೇಂದ್ರಾಚಾರ್ ಅವರಿಗೆ ಗಾಬರಿಯಲ್ಲಿ ಮಾತು ಮರೆತೇ ಹೋಯ್ತು. ನೇರ ಪ್ರಸಾರದಲ್ಲಿ ನಾಟಕ ನಿಂತರೆ ದೇವರೇ ಗತಿ!. ಆಗ ನಿರ್ದೇಶಕ ಎನ್.ಎಸ್.ವಾಮನ್ ಯಾರಿಗೂ ಗೊತ್ತಾಗದಂತೆ ಆ ಪಾತ್ರಧಾರಿ ಬಾಯಿಮುಚ್ಚಿ ತಕ್ಷಣ ತಾವೇ ಆ ಪಾತ್ರದ ಸಂಭಾಷಣೆ ಹೇಳಿ ಅಭಿನಯಿಸಿದರು.


ಇದು ಬೇರಾರಿಗೂ ಗೊತ್ತಾಗಲಿಲ್ಲ. ಆ ಸಮಯ ಪ್ರಜ್ಞೆ, ಚಾಣಾಕ್ಷತನ, ಜಾಣ್ಮೆ, ಕಲಾವಿದತನ ಮರೆಯಲಾಗದು. ಕೆ.ಎಸ್.ಅಶ್ವಥ್ ಅವರು ಆಗಾಗ ಎಲ್ಲೆಡೆ ಹೇಳಿದ್ದಂತೆ ಅವರಿಗೆ ನಾಟಕ ಕಲೆಯ ಹುಚ್ಚು ಹಿಡಿಸಿದ ಕಲಾಗುರು ಎನ್.ಎಸ್.ವಾಮನ್. ಹುಣಸೂರು ಕೃಷ್ಣಮೂರ್ತಿ, ತ.ರಾ.ಸು, ಅ.ನ.ಕೃ. ಹೆಚ್.ಕೆ.ಯೋಗಾನರಸಿಂಹ ಅವರಿಂದ ಸಾಲು ಸಾಲು ನಾಟಕಗಳನ್ನು ಬರೆಯಿಸಿ ನಿರ್ದೇಶಿಸಿದರು. ಒಂದು ಕಾಲದಲ್ಲಿ ಪ್ರತಿ ನಾಟಕಕ್ಕೆ ಅವರ 5 ರೂ. ಜತೆಗೆ ಇತರರಿಂದ ಸಹ 5-5 ರೂ. ಕೊಡಿಸಿ. ಹುಣಸೂರು ಅವರನ್ನು ಪೋಷಿಸಿದರು.


ಬಾಲಕೃಷ್ಣ, ನರಸಿಂಹರಾಜು, ರತ್ನಾಕರ, ಸೋರಟ್ ಅಶ್ವತ್ಥ್, ಇವರೆಲ್ಲ ಹೇಳುತ್ತಿದ್ದಂತೆ, ಅವರಿಗೆ ಆಕಾಶವಾಣಿ ನಾಟಕಗಳಲ್ಲಿ ಹಾಗೂ ಹೊರಗಡೆ ಅವಕಾಶ ನೀಡಿ, ನಿರ್ದೇಶಿಸಿ, ಪ್ರೋತ್ಸಾಹಿಸಿ ದುಡ್ಡು ಕೊಡಿಸಿದ ಅನ್ನದಾತ. ಜತೆಗೆ ಮನೆಯ ಅನ್ನಪೂರ್ಣೇಶ್ವರಿ, ಗಿರಿಜಾ ವಾಮನ್ ಅವರ ಕೈನ ರುಚಿ ಕಟ್ಟಾದ ಪೊಗದಸ್ತಾದ ತಿಂಡಿ ಊಟವನ್ನು, 1994ರಲ್ಲಿ ಬಾಲಕೃಷ್ಣ ಅಂತಿಮ ದಿನಗಳಲ್ಲೂ ಸ್ಮರಿಸಿದರು. ಎನ್.ಎಸ್‌ವಾಮನ್ ಅವರಿಗೆ ಹಿಂದಿ ಚಲನಚಿತ್ರರಂಗದ ಬಲರಾಜ್ ಸಹಾನಿ, ಪೃಥ್ವಿರಾಜ್‌ ಕಪೂರ್‌ರವರ ಸ್ನೇಹ. ಹೀಗಾಗಿ ಮೈಸೂರು ಆಕಾಶವಾಣಿಗೆ ಪೃಥ್ವಿರಾಜ್‌ಕಪೂರ್‌ರವರನ್ನು ಹಾಗೂ ಅವರ ತಂಡವನ್ನು ಕರೆತಂದು, "ಶಾಕುಂತಲಾ" ನಾಟಕವನ್ನು ಮೈಸೂರು ಬಾನುಲಿ ಕೇಂದ್ರದಿಂದ ಅಭಿನಯಿಸುವಂತೆ ಮಾಡುವಲ್ಲಿ, ಇವರ ಪ್ರಯತ್ನವೂ ಅವಸ್ಮರಣೀಯ.


ನೇರ ಪ್ರಸಾರದಲ್ಲಿ ಸತತ ಮೂರು ಗಂಟೆ ಕಾಲ, ಒಂದು ಮದ್ಯಾಹ್ನ 2.30 ರಿಂದ ಈ ನಾಟಕ ಪ್ರಸಾರವಾದದ್ದು, ವಾಮನ್ ಅವರ ಜೀವನದ ಒಂದು ಮಹತ್ವದ ಕ್ಷಣ. ಗುಬ್ಬಿ ವೀರಣ್ಣ, ಬಿ.ಜಯಮ್ಮ, ಸ್ವರ್ಣಮ್ಮ ಮುಂತಾದ ಕಲಾವಿದರನ್ನು ಬಾನುಲಿಗೆ ನಾಟಕ ಹಾಗೂ ಸಂದರ್ಶನಗಳಿಗೆ ಎಳೆತಂದರು. ವಾಮನ್ಸ್ ಟ್ರೂಪ್ ಕಟ್ಟಿ, ನಾಡಿನಾದ್ಯಂತ ಕನ್ನಡ ನಾಟಕಗಳನ್ನು ಆಡಿ, ಆಡಿಸಿದರು. ಕ್ಷೀರಸಾಗರ, ಮಿತ್ರ ಪರ್ವತವಾಣಿ, ಎ.ಎನ್.ಮೂರ್ತಿರಾವ್ ಮುಂತಾದ ನಾಟಕಕಾರರ ನಾಟಕಗಳ ಸಹಸ್ರಾರು ಪ್ರಯೋಗಗಳನ್ನು ನಾಡಿನಾದ್ಯಂತ ಹಾಗೂ ದೆಹಲಿ, ಮದ್ರಾಸ್, ಮಧುರೈಗಳಲ್ಲೂ ಆಡಿದರು. 'ಶಾಮಣ್ಣನ ಸಾಹಸ' ಸುಬ್ಬಾಶಾಸ್ತ್ರಿ ಹೆಚ್.ಎಲ್.ಎನ್.ಸಿಂಹ, ಅವರ 'ಸಂಸಾರನೌಕ' ಇವರ ಜನಪ್ರಿಯ ನಾಟಕಗಳು.


ಆಷಾಢಭೂತಿಯಲ್ಲಿ ಅಶ್ವಥ್ - ಶಂಕರಪ್ಪ ಹಾಗೂ ವಾಮನ್ - ಸುಬ್ಬಾಶಾಸ್ತ್ರಿ ಮುಂದೆ ಇದೇ ನಾಟಕ ಚಲನಚಿತ್ರವಾದಾಗ ಅಶ್ವಥ್ ಅದೇ ಪಾತ್ರವಹಿಸಿದರು. ಮಹಮದ್ ಪೀರ್ ಸಾಹೇಬರು, ಬಿ.ಆರ್.ಪಂತುಲು ಅಮರಗೊಳಿಸಿದ 'ಸಂಸಾರನೌಕ' ವೃತ್ತಿ ರಂಗಭೂಮಿಯಲ್ಲಿ ಒಂದು ಮೈಲಿಗಲ್ಲು. ಆ ನಾಟಕದ ಸುಂದರನ ಪಾತ್ರವನ್ನು ಎನ್.ಎಸ್.ವಾಮನ್, ಅಭಿನಯದಲ್ಲಿ ಮುಂದುವರೆಸಿ, ಅಮರ ಹಾಗೂ ಜನಪ್ರಿಯಗೊಳಿಸಿದರು. ಧಾರವಾಡದ ಬಾಸೆಲ್ ಮಿಷನ್ ಶಾಲೆಯ 'ಟಾಗೋರ್ ಹಾಲ್' ಈ ಸಂಸಾರ ನೌಕ ನಾಟಕದ ಬೆನಿಫಿಟ್ ಶೋಗಳಿಂದ ಕಟ್ಟಲಾಗಿದೆ. ಈ ಸಂದರ್ಭದಲ್ಲಿ ಇವರ ಮಗ ರಮೇಶ್ ಮಗುವಿನ ಪಾತ್ರ ವಹಿಸಿದ್ದರು.


ದಿಲ್ಲಿ ಆಕಾಶವಾಣಿಯ ಕನ್ನಡ ವಾರ್ತಾ ಓದುಗ ಲಕ್ಷ್ಮಣ್‌ ಜೋಶಿ ಆಕಸ್ಮಿಕವಾಗಿ ಅಪಘಾತದಲ್ಲಿ ಮರಣ ಹೊಂದಿದಾಗ ಹುಬ್ಬಳ್ಳಿ, ಧಾರವಾಡಗಳಲ್ಲಿ ಅವರ ಕುಟುಂಬದ ನೆರವಿಗಾಗಿ 'ಆಷಾಢಭೂತಿ' ನಾಟಕದ ಬೆನಿಫಿಟ್ ಶೋಗಳು. ಇಲ್ಲಿ ಕೆ.ಎಸ್.ಅಶ್ವಥ್, ಎನ್.ಎಸ್.ವಾಮನ್ ಅವರೊಂದಿಗೆ ಅವರ ಹಿರಿಯ ಮಗ ಎನ್.ವ್ಹಿ.ರಮೇಶ್ ಸಹ ಅಭಿನಯಿಸಿದ್ದರು. ಎನ್.ಎಸ್.ವಿ. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಬಡ ಕಲಾವಿದರು ಹಾಗೂ ಕನ್ನಡ ವೃತ್ತಿ ರಂಗಭೂಮಿ ಕಂಪನಿಗಳ ಏಳಿಗೆಗಾಗಿ ಕಳಕಳಿಯ ಪ್ರಯತ್ನ ಮಾಡಿದರು.


ವೃತ್ತಿ ರಂಗಭೂಮಿಯ ನೂರಾರು ನಾಟಕಗಳನ್ನು ಬಾನುಲಿಗೆ ಅಳವಡಿಸಿ ಜನಪ್ರಿಯತೆ ಗಳಿಸಿದರಲ್ಲದೆ, ವೃತ್ತಿ ರಂಗಭೂಮಿಯ ನಾಟಕಗಳಿಗೆ, ಕಲಾವಿದರಿಗೆ, ಜನಪ್ರಿಯ ಬೇಡಿಕೆ ತಂದುಕೊಟ್ಟರು. ಬಿಡುವಿನ ವೇಳೆಯಲ್ಲಿ ಕನ್ನಡ ಚಲನಚಿತ್ರ ಕಲಾವಿದರು ನಾಡಿನಾದ್ಯಂತ ಕ್ಯಾಂಪ್ ಹೂಡಿರುವ ಕಂಪನಿ ನಾಟಕಗಳಲ್ಲಿ ಅಭಿನಯಿಸುವಂತೆ ಮಾಡಿ ವೃತ್ತಿ ರಂಗಭೂಮಿಗೆ ಹಾಗೂ ಕಲಾವಿದರಿಗೆ ಹೆಚ್ಚು ಸಂಪಾದನೆ ಹಾಗೂ ರಸಿಕರಿಗೆ ಚಿತ್ರಕಲಾವಿದರ ಭೇಟಿ, ಈ ಉದ್ದೇಶಗಳನ್ನು ಸಫಲಗೊಳಿಸಿದರು.


ಉದಯಕುಮಾರ್, ನರಸಿಂಹರಾಜು, ಬಾಲಕೃಷ್ಣ, ಜಿ.ವಿ ಅಯ್ಯರ್, ಶ್ರೀನಾಥ್, ಗಂಗಾಧರ್, ಕಲಾ, ಶೃಲಶ್ರೀ, ಪಿ.ಬಿ.ಶ್ರೀನಿವಾಸ್ ಆರ್.ಎನ್.ಜಯಗೋಪಾಲ್, ಕಲ್ಪನಾ, ಹರಿಣಿ, ವಾದಿರಾಜ್ ಹಾಗೂ ಬಹು ಹಿಂದೆ ಬಿ.ಸರೋಜದೇವಿ ಅವರನ್ನು ಬಾನುಲಿ ನಾಟಕಗಳಿಗೆ ಹಾಗೂ ಸಂದರ್ಶನಕ್ಕೆ ಕರೆತಂದರು. ಬಿ.ಅರ್.ಪಂತುಲು, ಎಸ್.ಆರ್.ಪುಟ್ಟಣ್ಣ ಕಣಗಾಲ್, ಎನ್.ಲಕ್ಷ್ಮಿನಾರಾಯಣ, ಗಿರೀಶ್ ಕಾರ್ನಾಡ್, ಎಂ.ಶಂಕರಪ್ಪ ಅವರ ಚಲನಚಿತ್ರಗಳಿಗೆ ಸ್ಥಳೀಯ ಕಲಾವಿದರು ಸ್ಥಳಗಳನ್ನು ಸೂಚಿಸಿ ಧಾರವಾಡದ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ಪರವಾನಿಗೆ ಕೊಡಿಸುವುದು, ಕನ್ನಡದ ಸಾಹಿತಿಗಳು, ಕಾದಂಬರಿಕಾರರ ಕೃತಿಗಳನ್ನು ಚಲನಚಿತ್ರಕ್ಕೆ ಅಳವಡಿಸಲು ಅವರ ಒಪ್ಪಿಗೆಗಾಗಿ ಚಿತ್ರ ತಂಡವನ್ನು ಅವರಿಗೆ ಭೇಟಿ ಮಾಡಿಸುವುದು ಮುಂತಾದ ಸಹಕಾರ ನೀಡಿದರು.


ಚಕ್ರತೀರ್ಥ, ತಬ್ಬಲಿಯು ನೀನಾದೆ ಮಗನೆ ಚಿತ್ರಗಳಿಗಾಗಿ ಕೆಲವು ಗೀತೆಗಳಿಗೆ ಜಾನಪದ ದಾಟಿಯ ಪರಿಶೀಲನೆ, ಸ್ಥಳೀಯ ಹಾಡುಗಾರರಿಂದ ವಾಮನ್ ಮನೆಯಲ್ಲಿ. ಮಾಡಿ ಮಡಿದವರು ಚಿತ್ರಕ್ಕಾಗಿ ರಾಮಗೋಪಾಲ (ಕೋದಂಡರಾಮ), ಎ.ಜಿ.ನೀಲಗಾರ, ಜಿ.ವಿ.ಹಿರೇಮಠ - ವಾಮನ್ ಅವರ ಶೋಧ ಹಾಗೂ ಕೊಡುಗೆ. ಕವಿರತ್ನ ಕಾಳಿದಾಸ, ರಂಗನಾಯಕಿ, ನಮ್ಮ ಮಕ್ಕಳು, ಕ್ರಾಂತಿಯೋಗಿ ಬಸವಣ್ಣ ಮುಂತಾದ 13 ಚಲನಚಿತ್ರಗಳಲ್ಲಿ ವಾಮನ್ ಅಭಿನಯಿಸಿದ್ದಾರೆ.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post