'ಸಿರಿ' ಗ್ರಾಮೋದ್ಯೋಗ ಸಂಸ್ಥೆಯಿಂದ ಗ್ರಾಮೀಣ ಮಹಿಳೆಯರ ಸಬಲೀಕರಣ
ಉಜಿರೆ: ಶ್ರೀ ಧರ್ಮಸ್ಥಳದ “ಸಿರಿ” ಗ್ರಾಮೋದ್ಯೋಗ ಸಂಸ್ಥೆಯಿಂದ 45 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ನೀಡಿ ಸ್ವಾವಲಂಬಿ ಜೀವನಕ್ಕೆ ಮಾಹಿತಿ, ಮಾರ್ಗದರ್ಶನ ಮತ್ತು ಪ್ರೇರಣೆ ನೀಡಿ ಗ್ರಾಮೀಣ ಮಹಿಳೆಯರ ಸಬಲೀಕಣ ಮಾಡಲಾಗಿದೆ. ಇದರಿಂದಾಗಿ ಇಂದು ಲಕ್ಷಾಂತರ ಗ್ರಾಮೀಣ ಮಹಿಳೆಯರು ಮನೆ ಮತ್ತು ಕುಟುಂಬದ ಸುಗಮ ನಿರ್ವಹಣೆಯೊಂದಿಗೆ ಆರ್ಥಿಕವಾಗಿಯೂ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಬ್ಯಾಂಕ್ ಆಫ್ ಬರೋಡ ವತಿಯಿಂದ 'ಸಿರಿ' ಗ್ರಾಮೋದ್ಯೋಗ ಸಂಸ್ಥೆಗೆ ಸಂಚಾರಿ ಮಾರಾಟ ಮಳಿಗೆ ವಾಹನ ಹಸ್ತಾಂತರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆಯರು ಇಂದು ಮನೆಯಿಂದ ಹೊರಗೆ ಬಂದು ವ್ಯವಹಾರ ಕುಶಲರಾಗಿ ಸಮಾಜದ ಮುಖ್ಯವಾಹಿನಿಯೊಂದಿಗೆ ಬೆರೆತು ಉತ್ತಮ ಸೇವೆ, ಸಾಧನೆ ಮಾಡುತ್ತಿದ್ದಾರೆ. ಈ ದಿಸೆಯಲ್ಲಿ ಹೇಮಾವತಿ ಹೆಗ್ಗಡೆಯವರ ಪ್ರೋತ್ಸಾಹವನ್ನೂ ಅವರು ಶ್ಲಾಘಿಸಿದರು.
ಮಹಿಳೆಯರು ಉತ್ಪಾದಿಸಿದ ವಸ್ತುಗಳಿಗೆ “ಸಿರಿ” ಸಂಸ್ಥೆ ಮೂಲಕ ಮಾರುಕಟ್ಟೆ ವ್ಯವಸ್ಥೆ ಮಾಡುತ್ತಿದ್ದು 'ಸಿರಿ' ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು.
ಬ್ಯಾಂಕ್ ಆಫ್ ಬರೋಡದ ಆಡಳಿತ ನಿರ್ದೇಶಕ ಅಜಯ ಕೆ. ಕುರಾನ ಮಾತನಾಡಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸೇವಾ ಕಳಕಳಿ ಮತ್ತು ಸಾಮಾಜಿಕ ಬದ್ಧತೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಶಾಂತಿವನದಲ್ಲಿ ಪ್ರಶಾಂತ ಪರಿಸರದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವಿನ್ಯಾಸ, ಸೇವೆ ಮತ್ತು ಸೊಗಡನ್ನು ಅವರು ಪ್ರಶಂಸಿಸಿದರು.
'ಸಿರಿ' ಸಂಚಾರಿ ಮಾರಾಟ ಮಳಿಯನ್ನು 'ಸಿರಿ' ಉತ್ಪನ್ನಗಳ ಜೊತೆಗೆ ಬ್ಯಾಂಕ್ ಪರಿಕರ ಹಾಗೂ ಉತ್ಪನ್ನಗಳ ಮಾರಾಟಕ್ಕೆ ಜಂಟಿಯಾಗಿ ಬಳಸಲಾಗುವುದು ಎಂದು ಅವರು ಹೇಳಿದರು.
ಬ್ಯಾಂಕ್ ಆಫ್ ಬರೋಡದ ಮಹಾ ಪ್ರಬಂಧಕರಾದ ಆರ್. ಗಾಯತ್ರಿ ಶುಭಾಶಂಸನೆ ಮಾಡಿದರು. ಡಿ.ಜಿಎಂ. ಆರ್. ಗೋಪಾಲಕೃಷ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಉಪಸ್ಥಿತರಿದ್ದರು.
'ಸಿರಿ' ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್ ಸ್ವಾಗತಿಸಿದರು. ಬ್ಯಾಂಕ್ ಆಫ್ ಬರೋಡ ಧರ್ಮಸ್ಥಳ ಶಾಖೆಯ ಪ್ರಬಂಧಕ ವಿಜಯ ಪಾಟೀಲ್ ಧನ್ಯವಾದವಿತ್ತರು. ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ