|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಹಾರದ ರೂಪದಲ್ಲಿ ಅರಿವಿಲ್ಲದೆ ಒಳಸೇರುವ ವಿಷ!

ಆಹಾರದ ರೂಪದಲ್ಲಿ ಅರಿವಿಲ್ಲದೆ ಒಳಸೇರುವ ವಿಷ!


ಜಗತ್ತು ಮಿತಿ ಮೀರಿದೆ ಎನ್ನುವಂತೆ ಸುಧಾರಿಸಿದೆ! ಆಹಾರದಲ್ಲಿ ನಾವು ಬಳಸುವ ಉತ್ಪನ್ನಗಳು "genetically modified" ಅಂದರೆ ಕೃತಕ ಸುಧಾರಿತ ತಳಿಯಿಂದ ಪಡೆಯುವಂಥದ್ದು ಆಗಿವೆ.  ಇವುಗಳಿಂದ ನಮ್ಮ ಆರೋಗ್ಯದ ಮೇಲೆ ಆಗುವ ಪರಿಣಾಮಗಳು ಅಥವಾ ದುಷ್ಪರಿಣಾಮಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಸುಧಾರಿತ ತಳಿಯಲ್ಲಿ ಸಸ್ಯಗಳು ಹಾಗೂ ಪ್ರಾಣಿಗಳು ಒಳಗೊಳ್ಳುತ್ತವೆ. ವಂಶವಾಹಿಗಳ ತಂತ್ರಜ್ಞಾನವನ್ನು ಬಳಸಿ ಇವುಗಳ ಡಿಎನ್‌ಎ ಯನ್ನು ಬ್ಯಾಕ್ಟೀರಿಯಾ, ವೈರಸ್, ಸಸ್ಯಗಳು, ಪ್ರಾಣಿಗಳು- ಇಂಥ ಇತರ ಜೀವಿಗಳೊಂದಿಗೆ ಕಸಿ ಮಾಡುವುದು ಇದರಲ್ಲಿ ನಡೆಯುವ ಪ್ರಕ್ರಿಯೆ. ಇಂತಹ ಕೃತಕ ವಿಧಾನಗಳಿಂದ ಬಂದಂತಹ ಜೀವಿ ಅಥವಾ ಸಸ್ಯ ಪ್ರಕೃತಿಯಲ್ಲಿ  ಸಹಜವಾಗಿ ದೊರಕದೆ ಇರುವಂಥದ್ದು. ಈ ರೀತಿಯ ಸುಧಾರಿತ ತಳಿ ಮಾಡುವ ಉದ್ದೇಶ, ಬೆಳೆಗಳನ್ನು ನಾಶ ಮಾಡುವಂತಹ ಕೀಟ ಹಾಗೂ ಸೂಕ್ಷ್ಮಾಣುಗಳ ಬಾಧೆಗೆ ಒಳಗಾಗದ ತಳಿಯನ್ನು ಪಡೆಯುವುದು ಮತ್ತು ಉದ್ದೇಶಿತ ಗುಣಲಕ್ಷಣಗಳನ್ನು ಹೊಂದಿರುವ ಬೆಳೆಗಳನ್ನು ಪಡೆಯುವುದು. 1990 ನೇ ಇಸ್ವಿಯಲ್ಲಿ, ರಿಂಗ್ಸ್ ಸ್ಪಾಟ್ ಎಂಬ ವೈರಸ್  ಹವಾಯಿಯಲ್ಲಿ ಅರ್ಧದಷ್ಟು ಬೆಳೆಗಳನ್ನು ನಾಶಗೊಳಿಸಿತು. 1998 ನೇ ಇಸ್ವಿಯಲ್ಲಿ ವಿಜ್ಞಾನಿಗಳು ಜೆನೆಟಿಕ್ ತಾಂತ್ರಿಕತೆಯನ್ನು ಬಳಸಿ ರೈನ್ಬೋ ಪಾಪಾಯ ಎಂಬ ತಳಿಯನ್ನು ಹುಟ್ಟುಹಾಕಿದರು. ಇದು ಆ ವೈರಸ್ ಗಳಿಗೆ  ನಿರೋಧಕತೆಯನ್ನು ಬೆಳೆಸಿಕೊಂಡ ತಳಿ. ಈಗ ಹವಾಯಿ ರಾಜ್ಯದಲ್ಲಿ 77 ಶೇಕಡಾದಷ್ಟು ಪಾಪಾಯ ಹಣ್ಣುಗಳು ಸುಧಾರಿತ ತಾಂತ್ರಿಕ ತಳಿಯಿಂದ ಸಿಗುವಂಥದ್ದು.


ಅಮೆರಿಕದಲ್ಲಿ ಕಾರ್ನ್ ಮತ್ತು ಸೋಯಾ, ಜೀನ್ ಸುಧಾರಿತ ತಳಿಯಿಂದ ಬೆಳೆಯುವಂತದ್ದು. ಅಲ್ಲಿನ 80 ಶೇಕಡಾದಷ್ಟು ಸಂಸ್ಕರಿತ ಆಹಾರವು ಇವುಗಳಿಂದ ತಯಾರಾಗುತ್ತವೆ. ಇಂತಹ ಆಹಾರಗಳ ಬಗ್ಗೆ ನಿಬಂಧನೆ ಹಾಗೂ ನಿಯಮಾವಳಿಗಳು ಜಗತ್ತಿನ ಸುಮಾರು 60ರಷ್ಟು ರಾಷ್ಟ್ರಗಳಲ್ಲಿ ಜಾರಿಯಲ್ಲಿದೆ. ಆಸ್ಟ್ರೇಲಿಯಾ, ಜಪಾನ್ ಹಾಗೂ ಬಹಳಷ್ಟು ಯುರೋಪಿಯನ್ ರಾಷ್ಟ್ರಗಳು ಇದನ್ನು ಒಳಗೊಂಡಿವೆ. ಆದರೆ ಯುನೈಟೆಡ್ ರಾಷ್ಟ್ರಗಳಲ್ಲಿ ಇವುಗಳು ನಿಬಂಧನೆಗಳಿಲ್ಲದೆ ಅನುಮೋದಿತ ವಾಗಿವೆ. ಏಕೆಂದರೆ ಅಲ್ಲಿ ನಡೆದ ಬಹಳಷ್ಟು  ಅಧ್ಯಯನಗಳು, ಆ ಆಹಾರಗಳಿಂದ ವ್ಯಾಪಾರ-ವಹಿವಾಟು ನಿರ್ಮಿಸಿ ಲಾಭ ಪಡೆದ ಕಂಪನಿ ಹಾಗೂ ಸಂಸ್ಥೆಗಳು ನಡೆಸಿದ್ದು. ಈ ಕಾರಣದಿಂದ ತಮಗೆ ಅನುಕೂಲಕರವಾದ ವರದಿಗಳನ್ನು ಹುಟ್ಟುಹಾಕಿದ್ದು. ಹಾಗೆಂದು ಜೆನೆಟಿಕ್ ಸುಧಾರಿತ ತಳಿಗಳೆಲ್ಲವೂ ಹಾನಿಕಾರಕವೆಂದು ಅರ್ಥವಲ್ಲ. ಆದರೆ ಅವುಗಳನ್ನು ಸೃಷ್ಟಿಸಲು ಮತ್ತು ಬೆಳೆಯಲು ಬಳಸುವ ವಿಧಾನಗಳು, ಅರ್ಥಮಾಡಿಕೊಳ್ಳಲು ಅಸಾಧ್ಯವಾದ ಮತ್ತು ನಮಗೆ ನಿಲುಕದ ಸಂದರ್ಭಗಳನ್ನು ಪರಿಣಾಮಗಳನ್ನು ಹುಟ್ಟುಹಾಕುತ್ತವೆ ಎಂಬುದಂತೂ ಸತ್ಯ.


ರೈತರು ಇಂತಹ ಸುಧಾರಿತ ತಳಿಗಳನ್ನು ಬೆಳೆಯುವಾಗ ಕಳೆಗಳನ್ನು ಕೀಳುವುದಕ್ಕೆ ಕೈಗಳನ್ನು ಅಥವಾ ಯಂತ್ರಗಳನ್ನು ಬಳಸುವುದಿಲ್ಲ. ಬದಲಿಗೆ ಗ್ಲೈಫೋಸೇಟ್ ನಂತಹ ರಾಸಾಯನಿಕಗಳನ್ನು ಬೆಳೆಗಳಿಗೆ ಸಿಂಪಡಿಸುವ ಮೂಲಕ ಕಳೆಗಳನ್ನು ನಾಶಪಡಿಸುತ್ತಾರೆ. ಅಷ್ಟೇ ಅಲ್ಲದೆ, ಈ ರಾಸಾಯನಿಕವನ್ನು ಬೆಳೆಗಳನ್ನು ಕೊಯ್ಯುವುದಕ್ಕೆ ಮೊದಲು ಮತ್ತು ಮುಂದಿನ  ಬೆಳೆಗೆ ಮೊದಲು ಮಣ್ಣನ್ನು ಒಣಗಿಸಲು ಉಪಯೋಗಿಸುತ್ತಾರೆ. ಈ ಕಳೆನಾಶಕಗಳಿಂದ ಬೆಳೆ ಬೆಳೆಯುವ ಗಿಡಗಳ ಮೇಲೆ ಅಪಾಯ ಉಂಟಾಗದಂತೆ ಆ ಬೆಳೆ  ಗಿಡಗಳನ್ನು  ಜೆನೆಟಿಕ್ ಸುಧಾರಿತ ವಿಧಾನದಿಂದ ಸೃಷ್ಟಿಸಿರುತ್ತಾರೆ. ಜೆನೆಟಿಕ್ ಸುಧಾರಿತ ಬಿತ್ತನೆಯ ಬೀಜಗಳು ರೈತರನ್ನು ದೊಡ್ಡ ಪ್ರಮಾಣದ ಕಳೆ ನಾಶಕಗಳ ಬಳಕೆ ಮಾಡುವುದಕ್ಕೆ ಹುರಿದುಂಬಿಸುತ್ತವೆ ಮತ್ತು ಅನುಮತಿ ನೀಡುತ್ತವೆ.



ಒಟ್ಟಿನಲ್ಲಿ  ಜೆನೆಟಿಕ್ ಸುಧಾರಿತ ತಳಿಯಿಂದ ಪಡೆದ  ಹಾಗೂ ಸಾಂಪ್ರದಾಯಿಕ ವಿಧಾನದಿಂದ ಬೆಳೆದ ಆಹಾರ ವಸ್ತುಗಳು  ಗ್ಲೈಫೋಸೇಟ್ ಎಂಬ ಆಧುನಿಕವಾದ ಮಾರಕ ಹಾಲಾಹಲದ ಲೇಪವನ್ನು ಹೊಂದಿದೆ ಎಂಬುದೇ ನಾವು ಗಮನಿಸಬೇಕಾದ ವಿಚಾರ. ಇದು ಜೀರ್ಣಾಂಗವ್ಯೂಹ ದಿಂದ  ತೊಡಗಿ ನರಮಂಡಲದ ವರೆಗೆ  ತನ್ನ ವಿಷ ಪ್ರಭಾವವನ್ನು ಬೀರುತ್ತಲೇ ಇರುತ್ತದೆ.


1. ಅತ್ಯಂತ ತೀಕ್ಷ್ಣ ಸೂಕ್ಷ್ಮಾಣು ನಾಶಕ. ಕರುಳಿನಲ್ಲಿರುವ ಉಪಕಾರಕವಾದ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

2. ಇದು ಕರುಳಿನ ಪೊರೆಯಲ್ಲಿನ ಪ್ರಸರಣಶೀಲತೆಯನ್ನು (permeability) ಹೆಚ್ಚಿಸುವುದರ ಮೂಲಕ  ಉರಿಯೂತ (inflammation) ಉಂಟು ಮಾಡುವ ನಂಜುಕಾರಕಗಳನ್ನು ರಕ್ತಕ್ಕೆ ಸೇರುವಂತೆ ಮಾಡುತ್ತದೆ.

3. ಈಸ್ಟ್ರೋಜನ್ ಹಾರ್ಮೋನಿನಂತೆ ಕಾರ್ಯನಿರ್ವಹಿಸಿ, ಹಾರ್ಮೋನುಗಳ ದೆಸೆಯಿಂದ ಉಂಟಾಗುವ   ನಮೂನೆಯ ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ.

4. ವಿಟಮಿನ್ ಡಿ- ಇದರ ಕಾರ್ಯ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಇದರಿಂದಾಗಿ ಎಲುಬುಗಳು ದುರ್ಬಲಗೊಳ್ಳುವುದು, ರೋಗನಿರೋಧಕತೆ ಕುಂಠಿತವಾಗುವುದು.

5. ದೇಹದ ವಿಷಕಾರಿ ಅಂಶಗಳನ್ನು ತಟಸ್ಥ ಗೊಳಿಸುವ ಸಾಮರ್ಥ್ಯವು ಕುಗ್ಗುತ್ತದೆ.

6.ಟ್ರಿಪ್ಟೋಫಾನ್ ಮತ್ತು ಟೈರೋಸಿನ್- ಎಂಬ ಅಮಿನೋ ಆಮ್ಲಗಳ ಉತ್ಪಾದನೆಯನ್ನು ಕುಂಠಿತಗೊಳಿಸಿ, ಆ ಮೂಲಕ  ಇವೆರಡೂ ಅಗತ್ಯವಾಗಿರುವ ನರವಾಹಕಗಳ ಉತ್ಪಾದನೆಯು ತಗ್ಗುತ್ತದೆ. ನರಮಂಡಲ ದುರ್ಬಲಗೊಳ್ಳುತ್ತದೆ.


ತಜ್ಞರ ಪ್ರಕಾರ, ಬಹುಶಹ ವ್ಯಾಪಕವಾಗಿ ಗ್ಲೈಫೋಸೇಟ್ ಬಳಕೆಯಿಂದ ಜೀರ್ಣಾಂಗವ್ಯೂಹದ ಉಪಕಾರಕ ಸೂಕ್ಷ್ಮಾಣು ಸಮೂಹ ಹದಗೆಟ್ಟು, ಆ ಮೂಲಕ ಇದು ಮೂಲಕಾರಣವಾಗಿ ಉಳ್ಳ ಬೊಜ್ಜಿನ ಸಂಖ್ಯೆಯು  ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


2015 ರಲ್ಲಿ, ಈ ಅಂಶವು ಅಮೆರಿಕಾದ ಆಸ್ಪತ್ರೆಗಳಲ್ಲಿ ಬಳಸುವ pediasure enteral formula  ಎಂಬ ಉತ್ಪನ್ನದಲ್ಲಿ  ಕಂಡುಬಂತು. ಅದನ್ನು ತುರ್ತು ನಿಗಾ ಘಟಕದಲ್ಲಿ ಪೋಷಕಾಂಶದ ಅಗತ್ಯವಿರುವ ಶಿಶುಗಳಿಗೆ ನೀಡಲಾಗುತ್ತಿತ್ತು. ಆ ಅಂಶವನ್ನು ಮದ್ಯ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಹತ್ತಿಯ ಕಾರ್ಖಾನೆಗಳಲ್ಲಿ ಬಳಸುವ ಕಾರಣ, ಸಾನಿಟರಿ ಉತ್ಪನ್ನಗಳಲ್ಲೂ ಇದು ಕಂಡುಬರುತ್ತದೆ. Dr. Stephanie Senef ಎಂಬವರ ಪ್ರಕಾರ, ತಮ್ಮ ಜೀವನವಿಡಿ ಮಾಡಿದ ಅಧ್ಯಯನದ ಆಧಾರದಲ್ಲಿ ಒಂದು ಕಿವಿ ಮಾತನ್ನು ಹೇಳುತ್ತಾರೆ-" ಗೋಧಿಯನ್ನು ಕುಯ್ಯುವ ಪೂರ್ವದಲ್ಲಿ ಗಣನೀಯ ಪ್ರಮಾಣದಲ್ಲಿ ಗ್ಲೈಫೋಸೇಟ್  ರಾಸಾಯನಿಕವನ್ನು ಸಿಂಪಡಿಸಲಾಗುತ್ತದೆ. ಗೋಧಿಯಲ್ಲಿ ಸೇರಿಕೊಂಡಿರುವ ಈ ರಾಸಾಯನಿಕವು ಪ್ರೋಟೀನ್ ಜೀರ್ಣಕ್ರಿಯೆಯನ್ನು ಕುಂಠಿತಗೊಳಿಸುತ್ತದೆ ಮತ್ತು ಜೀರ್ಣಾಂಗವ್ಯೂಹದಲ್ಲಿನ ದೇಹಕ್ಕೆ ಉಪಕಾರಿಯಾದ ಸೂಕ್ಷ್ಮಾಣುಗಳನ್ನು ಧ್ವಂಸಗೊಳಿಸುತ್ತದೆ. ಜೀರ್ಣವಾಗದ ಪ್ರೋಟೀನ್ ಅಂಶವು ಜೀರ್ಣನಾಳದ ಗೋಡೆಗಳ  ಪೊರೆಯನ್ನು ಭೇದಿಸಿಕೊಂಡು, ರಕ್ತವನ್ನು ಪ್ರವೇಶಿಸಿ ಉರಿಯೂತಕಾರಕವಾದ autoimmune ಕಾಯಿಲೆಗಳಿಗೆ ಕಾರಣವಾಗುತ್ತದೆ"


ಆಯುರ್ವೇದದಲ್ಲಿ ಜೀರ್ಣವಾಗದ ಅನ್ನ ರಸವನ್ನು"ಆಮ" ಎಂಬ ಪದದಿಂದ ಸಂಬೋಧಿಸಿದ್ದಾರೆ. ಮೇಲಿನ ಸಂದರ್ಭದಲ್ಲಿ ಜೀರ್ಣವಾಗದ ಪ್ರೊಟೀನ್ ಅಂಶ- ಇದನ್ನೇ ಆಯುರ್ವೇದದಲ್ಲಿ ಹೇಳಿದ "ಆಮ" ಎಂದು ಕರೆಯಬಹುದು. ಆದಕಾರಣ ಆಯುರ್ವೇದದಲ್ಲಿ ಕಾಯಿಲೆಗೆ" ಆಮಯ" ಎಂಬ ಹೆಸರು. ಆಹಾರದಿಂದ ಆರೋಗ್ಯ ಅಥವಾ ಅನಾರೋಗ್ಯ ಎಂಬುದಕ್ಕೆ ಆಯುರ್ವೇದದಲ್ಲಿ ಹೇಳಲಾದ ಕಾರಣಕ್ಕೆ ವೈಜ್ಞಾನಿಕ ಸಮರ್ಥನೆಯನ್ನು ನೀಡುವುದಕ್ಕೆ ಇದು ಒಂದು ದೃಷ್ಟಾಂತ ಅಷ್ಟೇ.


ಹಾಗಾದರೆ ಈ ಗ್ಲೈಫೋಸೇಟ್ ಕಳೆನಾಶಕ ರಾಸಾಯನಿಕದ ಬಳಕೆಗೆ ನಿರ್ಬಂಧಗಳನ್ನು, ಕಾನೂನುಗಳನ್ನು  ವಿಧಿಸಲೇಬೇಕು. 2017 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಅಲ್ಲಿನ ಸರಕಾರವು ಇದನ್ನು ಹೊಂದಿರುವ ಉತ್ಪನ್ನಗಳ ಮೇಲೆ ಎಚ್ಚರಿಕೆಯ ಲೇಬಲ್ ಮುದ್ರಿಸಿತು. ಗ್ಲೈಫೋಸೇಟ್ ಎಂಬುದು ಅತ್ಯಂತ ಪ್ರಬಲ ಕ್ಯಾನ್ಸರ್ ಜನಕ ಎಂಬುದಾಗಿ ಘೋಷಿಸಿತು. ಅದೇ ವರ್ಷದಲ್ಲಿ, ಜರ್ನಲ್ ಆಫ್  ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್- ಪ್ರಕಟಿಸಿದ ಪ್ರಕಾರ, ವರದಿಗಳು 1993-96 ಹಾಗೂ 2014-16ರ ಅವಧಿಯಲ್ಲಿ ಪರಿಶೀಲಿಸಿ ಮೌಲ್ಯಮಾಪನ ಮಾಡಿದ ಜನರಲ್ಲಿ ಗ್ಲೈಫೋಸೇಟ್ ಅಂಶವು ಅತ್ಯಧಿಕ ಪ್ರಮಾಣದಲ್ಲಿ ಇದ್ದದ್ದನ್ನು ಪ್ರಮಾಣೀಕರಿಸಿದ್ದವು. ಈ ಪ್ರಕಟಣೆಯ ನಂತರ ಅಮೆರಿಕಾ ಸರಕಾರ ಎಚ್ಚೆತ್ತುಕೊಂಡು ನಿಷೇಧಗಳನ್ನು, ನಿಬಂಧನೆಗಳನ್ನು ಅನುಷ್ಠಾನಗೊಳಿಸಿದ್ದು. ಏಕೆಂದರೆ, ಆ ಜನಗಳ ಮೂತ್ರದ ಮಾದರಿಗಳಲ್ಲಿ, ಆ ಅವಧಿಯಲ್ಲಿ ಗ್ಲೈಫೋಸೇಟ್ ಅಂಶವು 500 ಪಟ್ಟು ಹೆಚ್ಚಿದ್ದು ಕಂಡುಬಂದಿತ್ತು! ಗೋಧಿಯು ಜೆನೆಟಿಕ್ ಸುಧಾರಿತ ತಳಿ ಅಲ್ಲದಿದ್ದರೂ, ಅದಕ್ಕೆ ಈ ರಾಸಾಯನಿಕವನ್ನು ವಿಶೇಷವಾಗಿ ಸಿಂಪಡಿಸಲಾಗುತ್ತಿತ್ತು.




-ಡಾ. ಆರ್. ಪಿ. ಬಂಗಾರಡ್ಕ.

B. A. M. S. D. Pharm., M. S. (Ayu) 

ಆಯುರ್ವೇದ ತಜ್ಞ ವೈದ್ಯರು,

ಪ್ರಸಾದಿನಿ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ನರಿಮೊಗರು, ಪುತ್ತೂರು.

ಅಸಿಸ್ಟೆಂಟ್ ಪ್ರೊಫೆಸರ್, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ.

contact: www.prasadini.com

rpbangaradka@gmail.com

Mob :9740545979


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post