ಒಮಿಕ್ರಾನ್ ಆತಂಕ ಬೇಡ; ಅಂಕಿ-ಅಂಶ, ಗ್ರಾಫಿಕ್ಸ್‌ ತೋರಿಸಿ ಹೆದರಿಸುವವರ ನಂಬಬೇಕಿಲ್ಲ

Arpitha
0



ಮಂಗಳೂರು: ಸಮಾಜದಲ್ಲಿ ಋಣಾತ್ಮಕತೆಯನ್ನೇ ಬಿತ್ತಿ ಬೆಳೆದು, ತಮ್ಮ ಬೇಳೆ ಬೇಯಿಸಿಕೊಳ್ಳುವ ಮಾಧ್ಯಮಗಳಿಗೆ ಪ್ರಜ್ಞಾವಂತ ಜನರು ಸರಿಯಾದ ಪಾಠವನ್ನೇ ಕಲಿಸಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.

ಕೊರೊನಾ ಹೆಸರಿನಲ್ಲಿ ಹೆಚ್ಚೂ ಕಮ್ಮಿ ಎರಡು ವರ್ಷಗಳ ಕಾಲ ಬಾಯಿಗೆ ಬಂದಂತೆ ಒದರುತ್ತ, ಸ್ಟುಡಿಯೋದಲ್ಲೇ ಕುಳಿತು ಗ್ರಾಫಿಕ್ಸ್‌ಗಳನ್ನು ಸೃಷ್ಟಿಸಿಕೊಂಡು ಜನರಲ್ಲಿ ಭಯ-ಆತಂಕಗಳನ್ನೇ ಸೃಷ್ಟಿಸುತ್ತ, ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಟಿವಿ ಸುದ್ದಿ ವಾಹಿನಿಗಳು ಮತ್ತು ಅವುಗಳನ್ನೇ ಅನುಸರಿಸಿ ಬದುಕುವ ದಾರಿ ಕಂಡುಕೊಳ್ಳುತ್ತಿರುವ ವೆಬ್ ಮಾಧ್ಯಮಗಳ ಕುರಿತು ಜನರಲ್ಲಿ ವಾಸ್ತವ ಪ್ರಜ್ಞೆಯನ್ನು ಮೂಡಿಸಲೇಬೇಕಾಗಿದೆ.

ಇವರಿಗೆಲ್ಲ ಈಗ ದೊರೆತಿರುವ ಹೊಸ ಅಸ್ತ್ರ ಕೊರೊನಾದ ಹೊಸ ರೂಪವಾದ ಒಮಿಕ್ರಾನ್. ವಾಸ್ತವದಲ್ಲಿ ಇವೆಲ್ಲ ಆಗಿಂದಾಗ್ಗೆ ರೂಪ ಬದಲಾಯಿಸಿಕೊಳ್ಳುವ ನೆಗಡಿ-ಕೆಮ್ಮು-ದಮ್ಮುಗಳನ್ನು ತರುವ ವೈರಾಣುಗಳೇ ಆಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ಆತನ ದೇಹ ಪ್ರಕೃತಿ, ರೋಗನಿರೋಧಕ ಶಕ್ತಿಗಳ ದೃಢತೆಯನ್ನು ಅವಲಂಬಿಸಿ ಸೌಮ್ಯವಾದ ಅಥವಾ ತೀವ್ರವಾದ ಪರಿಣಾಮಗಳನ್ನು ಬೀರುವ ವೈರಾಣುಗಳು ಇವು ಎಂದು ವೈದ್ಯ ವಿಜ್ಞಾನ ಈಗಾಗಲೇ ಸಾಬೀತುಪಡಿಸಿದೆ.

ಅಷ್ಟಾಗಿಯೂ ಒಮಿಕ್ರಾನ್‌ ಸೋಂಕು ತಗುಲಿಸಿಕೊಂಡವರು ಯಾರೂ ಸತ್ತಿಲ್ಲ, ಅಥವಾ ಅದರಿಂದಾಗಿ ಮುಂದೆ ಸಾವು ಬರಬಹುದಾದ ಪರಿಣಾಮವನ್ನು ಯಾರ ಮೇಲೂ ಉಂಟುಮಾಡಿಲ್ಲ ಅನ್ನುವುದು ವೈದ್ಯರ ಸ್ಪಷ್ಟ ಅಭಿಮತ. ಹೀಗಿರುವಾಗ ರಾಜ್ಯದಲ್ಲಿ, ದೇಶದಲ್ಲಿ ಅಷ್ಟು ಒಮಿಕ್ರಾನ್ ಕೇಸುಗಳು ಪತ್ತೆಯಾದವಂತೆ, ಇಷ್ಟು ಮಂದಿಗೆ ಹೊಸದಾಗಿ ಸೋಂಕು ತಗುಲಿತಂತೆ ಎಂದೆಲ್ಲ ವರದಿಗಳನ್ನು ಪ್ರಕಟಿಸಿ, ಜನರು ಭಯಪಡದಿದ್ದರೂ ಭಯ ಹುಟ್ಟಿಸುವ ಮಾಧ್ಯಮಗಳಿಗೆ ಜನರೇ ಪಾಠ ಕಲಿಸಬೇಕು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿರುವ ಐದು ಹೊಸ ಪ್ರಕರಣಗಳಲ್ಲಿ ಮೂವರು ಇದುವರೆಗೆ ಲಸಿಕೆ ಹಾಕಿಸಿಕೊಳ್ಳದವರು, ಮತ್ತು ಇಬ್ಬರು ಲಸಿಕೆ ಹಾಕಿಸಿಕೊಂಡವರಾಗಿದ್ದಾರೆ. ಆದರೆ ಅಷ್ಟೂ ಮಂದಿಗೆ ಯಾವ ಆರೋಗ್ಯ ಸಮಸ್ಯೆಯೂ ಕಾಣಿಸಿಕೊಂಡಿಲ್ಲ. ಅವರೆಲ್ಲರೂ ಆರಾಮವಾಗಿದ್ದಾರೆ ಎಂದು ದ.ಕ ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಜಗದೀಶ್ ತಿಳಿಸಿದ್ದಾರೆ.

ಅಷ್ಟಕ್ಕೂ ಈ ಪರೀಕ್ಷಾ ಫಲಿತಾಂಶಗಳು ಇಂದು-ನಿನ್ನೆಯ ಸ್ಯಾಂಪಲ್‌ಗಳ ಪರೀಕ್ಷೆಯದ್ದಲ್ಲ. 20-30 ದಿನಗಳ ಹಿಂದಿನ ಪರೀಕ್ಷೆಗಳ ಫಲಿತಾಂಶಗಳು ತಡವಾಗಿ ಪ್ರಕಟವಾಗಿವೆ ಅಷ್ಟೆ. ತಿಂಗಳ ಹಿಂದೆ ಸೋಂಕು ತಗುಲಿ ವೈದ್ಯಕೀಯ ಪರಿಭಾಷೆಯಲ್ಲಿ ಪಾಸಿಟಿವ್ ಆಗಿದ್ದರೂ ಈ ಹೊತ್ತಿಗೆ ಅವರೆಲ್ಲ ಆರೋಗ್ಯ ಸಮಸ್ಯೆಗಳಿಲ್ಲದೇ ಗುಣಮುಖರಾಗಿದ್ದಾರೆ.

ಅದೇ ರೀತಿ ಉಡುಪಿ ಜಿಲ್ಲೆಯಲ್ಲೂ ವೈದ್ಯಕೀಯ ಪರಿಭಾಷೆಯಲ್ಲಿ ಪಾಸಿಟಿವ್‌ ಎಂದು ವರದಿಯಾದ ಪ್ರಕರಣಗಳು 70-80 ವಯಸ್ಸಿನ ವೃದ್ಧರದು. ಇಬ್ಬರೂ ಕೋವಿಶೀಲ್ಡ್‌ ಲಸಿಕೆ ಎರಡು ಡೋಸ್‌ ಪಡೆದುಕೊಂಡವರು. ಆದ್ದರಿಂದ ಅವರಲ್ಲೂ ಯಾವುದೇ ತೀವ್ರ ತರದ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಭಾರತೀಯ ಲಸಿಕೆಗಳು ಹೊಸ ರೂಪದಲ್ಲಿ ಬರುವ ವೈರಾಣುಗಳನ್ನು ನಿಯಂತ್ರಿಸುವಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ.

ಋಣಾತ್ಮಕ ಧೋರಣೆಯ ಮಾಧ್ಯಮಗಳು ಎಬ್ಬಿಸುವ ಗದ್ದಲದಿಂದಾಗಿಯೇ ಸರಕಾರವೂ ಒತ್ತಡಕ್ಕೆ ಸಿಲುಕಿ ಜನರ ಮೇಲೆ ಅನಗತ್ಯ ನಿರ್ಬಂಧಗಳನ್ನು ಹೇರುವ ಅನಿವಾರ್ಯತೆಗೆ ಸಿಲುಕುತ್ತಿದೆ. ಆಗಲೂ ಸರಕಾರವನ್ನು ದೂಷಿಸುವುದು ಇದೇ ಮಾಧ್ಯಮಗಳು. ಈ ಪರಿಸ್ಥಿತಿ ಬದಲಾಗಬೇಕು. ಬದಲಾವಣೆಯ ಸರಪಣಿಯನ್ನು ಜಾಗೃತ ಜನರೇ ಚಾಲನೆಗೊಳಿಸಬೇಕು.

****

ಆರೋಗ್ಯ ಸಚಿವರೇ ನೀಡಿದ ವಾಸ್ತವ ಮಾಹಿತಿ ಇಲ್ಲಿದೆ ನೋಡಿ...

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳು ಕೆಲವೊಂದು ಕಡೆ ಕಾಣಿಸಿಕೊಳ್ಳುತ್ತಿದೆ. ಎರಡು ದಿನದ ಹಿಂದಷ್ಟೇ ಮಂಗಳೂರಿನಲ್ಲಿ ಆರು ಪ್ರಕರಣಗಳು ಪತ್ತೆಯಾಗಿದೆ. ಇದೀಗ ಮತ್ತೆ ರಾಜ್ಯದಲ್ಲಿ ಐದು ಒಮಿಕ್ರಾನ್ ಪ್ರಕರಣ ಪತ್ತೆಯಾಗಿವೆ.

ರಾಜ್ಯದಲ್ಲಿ ಐದು ಪ್ರಕರಣಗಳು ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.

ಉಡುಪಿ, ಭದ್ರಾವತಿ, ಮಂಗಳೂರು ಮತ್ತು ಧಾರವಾಡದಲ್ಲಿ  ಡಿಸೆಂಬರ್ 19 ರಂದು ಹೊಸ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಇದೀಗ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 19 ಕ್ಕೆ ಏರಿಕೆಯಾಗಿದೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top