ಉಜಿರೆ: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ಸೇವಾ ಬಯಲಾಟ ಪ್ರದರ್ಶನಗಳು ಭಾನುವಾರ ಮಂಗಳೂರಿನಲ್ಲಿ ಸೇವಾ ಪ್ರದರ್ಶನದೊಂದಿಗೆ ಪ್ರಸ್ತುತ ವರ್ಷದ ತಿರುಗಾಟ ಆರಂಭಗೊಂಡಿದೆ. ಈಗಾಗಲೇ ಕೆಲವು ದಿನಗಳಲ್ಲಿ ಧರ್ಮಸ್ಥಳದಲ್ಲಿ ಸೇವಾ ಹರಿಕೆ ಬಯಲಾಟ ಪ್ರದರ್ಶನಗಳು ನಡೆದಿವೆ.
ಕಳೆದ ಆರು ವರ್ಷಗಳಿಂದ ಕಾಲಮಿತಿಯ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ಗಂಟೆ 7 ರಿಂದ 12ರ ವರೆಗೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯುತ್ತದೆ. ಪ್ರೇಕ್ಷಕರಿಂದ, ಸೇವಾಕರ್ತರಿಂದ ಹಾಗೂ ಕಲಾವಿದರಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.
ಕಲಾವಿದರಿಗೆ ವಿಶ್ರಾಂತಿ, ಆರೋಗ್ಯ ರಕ್ಷಣೆ ಹಾಗೂ ವೃತ್ತಿ - ಪ್ರವೃತ್ತಿಯಲ್ಲಿ ಹೆಚ್ಚಿನ ಸಾಧನೆ ಮಾಡಲು ಕಾಲಮಿತಿ ಯಕ್ಷಗಾನ ಪ್ರದರ್ಶನ ಅನುಕೂಲಕರವಾಗಿದೆ ಎಂದು ಮೇಳದ ಹಿರಿಯ ಕಲಾವಿದ ಕೆ.ಗೋವಿಂದ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ವರ್ಷದ ಹರಿಕೆ ಸೇವಾ ಬಯಲಾಟ ಪ್ರದರ್ಶನದ ತಿರುಗಾಟಕ್ಕೆ ಭಾನುವಾರ ಧರ್ಮಸ್ಥಳ ಛತ್ರದಲ್ಲಿ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಬಳಿಕ ಮೇಳದ ತಿರುಗಾಟಕ್ಕೆ ಚಾಲನೆ ನೀಡಲಾಯಿತು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆ, ಶ್ರದ್ಧಾಅಮಿತ್ ಮತ್ತು ಡಿ. ಹಷೇಂದ್ರಕುಮಾರ್ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ