||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನ

ಧರ್ಮಸ್ಥಳ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನ


ಸಾಹಿತ್ಯದಿಂದ ಸುಸ್ಥಿರ ಸಮಾಜ ನಿರ್ಮಾಣ : ಸಚಿವ ಡಾ. ಕೆ. ಸುಧಾಕರ್


ಉಜಿರೆ: ದೀಪ ಬೆಳಕಿನ ಸಂಕೇತ. ಲಕ್ಷದೀಪೋತ್ಸವ ಕೇವಲ ಉತ್ಸವ ಅಲ್ಲ. ಶಿಕ್ಷಣ, ಮಾಹಿತಿ ಮತ್ತು ಜಾಗೃತಿಯೊಂದಿಗೆ ಭಕ್ತಿ ಮತ್ತು ಶರಣಾಗತಿ ಮೂಲಕ ದೇವರಿಗೆ ಕೃತಜ್ಞತೆ ಸಲ್ಲಿಸುವ ಉತ್ಸವವಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.


ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.


ದೇವರಿಗೆ ದೀಪ ಹಚ್ಚುವುದು ಭಾರತೀಯ ಸಂಸ್ಕೃತಿಯ ಲಕ್ಷಣವಾಗಿದೆ. ಲಕ್ಷದೀಪೋತ್ಸವ ಸಂಸ್ಕೃತಿ ಉಳಿಸುವ, ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಸುಗಂಧವನ್ನು ಪಸರಿಸುವ ಮತ್ತು ಸಾಹಿತ್ಯವನ್ನು ಪೋಷಿಸುವ ಉತ್ಸವವಾಗಿದೆ. ಜ್ಞಾನ, ಭಕ್ತಿ ಮತ್ತು ಆಧ್ಯಾತ್ಮದ ಬೆಳಕಿನಲ್ಲಿ ಸಕಲ ಸಂಕಷ್ಟಗಳ ನಿವಾರಣೆಯಾಗಲಿ ಎಂದು ಹಾರೈಸುವ ಉತ್ಸವವಾಗಿದೆ ಎಂದು ಸಚಿವರು ಹೇಳಿದರು.


ದಕ್ಷಿಣ ಕನ್ನಡ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ಸೊಗಡನ್ನು ಶ್ಲಾಘಿಸಿದ ಅವರು ಸಾಹಿತ್ಯ ಕ್ಷೇತ್ರಕ್ಕೆ ಮಹಾಕವಿ ರತ್ನಾಕರವರ್ಣಿ, ಮಂಜೇಶ್ವರ ಗೋವಿಂದ ಪೈ, ಕೆ.ಶಿವರಾಮ ಕಾರಂತ ಮೊದಲಾದವರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಯಕ್ಷಗಾನ, ಭೂತದ ಕೋಲ, ಕಂಬಳ ಮೊದಲಾದ ಜಾನಪದ ಕ್ರೀಡೆಗಳು ಹಾಗೂ ಕಲೆಗಳ ಸೊಗಡನ್ನು ಅವರು ಶ್ಲಾಘಿಸಿದರು. ಕರ್ನಾಟಕದ ಏಕೀಕರಣದಿಂದಾಗಿ ನವಕರ್ನಾಟಕ ಉದಯವಾಗಿದೆ. ಕರ್ನಾಟಕದ ಎಂಟು ಮಂದಿ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪಡೆದಿರುವುದನ್ನು ಅವರು ವಿಶೇಷವಾಗಿ ಶ್ಲಾಘಿಸಿ ಅಭಿನಂದಿಸಿದರು.


ಸಾಹಿತಿಗಳು ಸಮಾಜವನ್ನು ತಿದ್ದುವ ದಾರ್ಶನಿಕರು. ತಾನು ಸಾಹಿತಿ ಅಲ್ಲವಾದರೂ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅಭಿಮಾನ ಮತ್ತು ಗೌರವ ಇದೆ. ಸಾಹಿತ್ಯದಿಂದ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದ ಸಚಿವರು ಇಂದು ಎಲ್ಲರಲ್ಲಿಯೂ ಪುಸ್ತಕ ಹವ್ಯಾಸ ಕಡಿಮೆಯಾಗಿದೆ ಎಂದು ವಿಷಾದಿಸಿದರು. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಸಲ್ಲದು ಎಂದು ಹೇಳಿದ ಅವರು ಸರ್ಕಾರ ಕೂಡಾ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.


ಮುಖ್ಯಮಂತ್ರಿ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆ ಎದುರಿಸುವ ಬಗ್ಗೆ ಸಭೆ ನಡೆಯುತ್ತಿದ್ದರೂ ಮಧ್ಯದಲ್ಲಿಅವರ ವಿಶೇಷ ಅನುಮತಿ ಪಡೆದು ಧರ್ಮಸ್ಥಳಕ್ಕೆ ಬಂದಿದ್ದೇನೆ. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಸರ್ಕಾರ ಮೂರನೇ ಅಲೆಯನ್ನು ಸಮರ್ಪಕವಾಗಿ ಎದುರಿಸಿ ರೋಗ ನಿಯಂತ್ರಣಕ್ಕೆ ಬದ್ಧವಾಗಿದೆ ಹಾಗೂ ಸಿದ್ಧವಾಗಿದೆ. ಯಾವುದೇ ಸಾವು - ನೋವು ಉಂಟಾಗದಿರಲಿ ಎಂದು ಅವರು ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು.


ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮ ಮತ್ತು ಸಾಹಿತ್ಯ ಸಮಸ್ತ ಮಾನವ ಸಮಾಜದ ಏಳಿಗೆಗೆ ಪೂರಕ ಮತ್ತು ಪ್ರೇರಕವಾಗಿದೆ. ವ್ಯಕ್ತಿ ಮತ್ತು ಸಮಾಜಕ್ಕೆ ಹಿತವನ್ನುಂಟು ಮಾಡುವುದೇ ಸಾಹಿತ್ಯ ಎಂದು ಹೇಳಿದರು.


ಸಾರ್ಥಕ ಉದ್ದೇಶವನ್ನು ಹೊಂದಿರುವ ಸಾಹಿತ್ಯ ಕೃತಿಗಳು ಆರೋಗ್ಯಪೂರ್ಣ ಸಮಾಜವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದುದರಿಂದ ಉತ್ತಮ ಸಾಹಿತ್ಯವನ್ನು ರಚಿಸುವ ಲೇಖಕರನ್ನು, ಪ್ರಕಾಶಕರನ್ನು ಹಾಗೂ ಓದುಗರನ್ನು ನಾವು ಸದಾ ಕೃತಜ್ಞತೆಯೊಂದಿಗೆ ಸ್ಮರಿಸಬೇಕಾಗಿದೆ. ಕನ್ನಡ ನಾಡಿಯಲ್ಲಿಎಂಟು ಮಂದಿ ಜ್ಞಾನಪೀಠ ಪುರಸ್ಕೃತರ ಸಾಹಿತ್ಯ ಸೇವೆ ಇತರರಿಗೆ ಮಾರ್ಗದರ್ಶಿಯಾಗಿದೆ.


ಕೊರೊನಾ ಸಂದರ್ಭದಲ್ಲಿ ಸಾಹಿತ್ಯಾಭಿರುಚಿ ಹೆಚ್ಚಾಗಿದೆ. ಪತ್ರಿಕೆಗಳು ಕೂಡಾ ನಷ್ಟವನ್ನು ಅನುಭವಿಸಿದರೂ, ಪ್ರಸಾರದಲ್ಲಿ ಹಾಗೂ ವಿತರಣೆಯಲ್ಲಿ ಕೊರತೆಯಾಗದಂತೆ ಎಚ್ಚರ ವಹಿಸಿವೆ ಎಂದು ಹೆಗ್ಗಡೆಯವರು ಹೇಳಿದರು.


ಪತ್ರಿಕೆಗಳು ಕೂಡಾ ಇಂದು ಸಾಹಿತ್ಯ ಸೇವೆಯಲ್ಲಿ ತೊಡಗಿವೆ. ಸುದ್ದಿ, ಸಮಾಚಾರಗಳ ಪ್ರಕಟಣೆಯ ಜೊತೆಗೆ ಮೌಲಿಕ ಲೇಖನಗಳು, ಚಿಂತನೆಗಳು, ವಿಮರ್ಶಾತ್ಮಕ ಲೇಖನಗಳನ್ನೂ ಪ್ರಕಟಿಸುತ್ತಿವೆ. ರೇಡಿಯೊ ಮತ್ತು ದೂರದರ್ಶನಗಳಲ್ಲಿ ಕೂಡಾ ಯೋಗ, ಆರೋಗ್ಯ, ಆಹಾರ ಸೇವನೆ ಇತ್ಯಾದಿ ಸಮಾಜಮುಖಿ ಕಾರ್ಯಕ್ರಮಗಳ ಪ್ರಸಾರ ಮೂಲಕ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಿವೆ.


ಎಸ್.ಡಿ.ಎಂ.ಪ್ರಸ್ತಕ ಪ್ರಕಾಶನ ಮಾಲೆಯ ಮೂಲಕ ಅನೇಕ ಕೃತಿಗಳನ್ನು ಪ್ರಕಟಿಸಿ ಓದುವ ಹವ್ಯಾಸ ಬೆಳೆಸಲು ಪ್ರೋತ್ಸಾಹ ನೀಡಲಾಗುತ್ತದೆ. ಧರ್ಮಸ್ಥಳದಿಂದ ''ಮಂಜುವಾಣಿ'' ಮತ್ತು ''ನಿರಂತರ'' ಎಂಬ ಎರಡು ಮಾಸ ಪತ್ರಿಕೆಗಳನ್ನು ಪ್ರಕಟಿಸಿ ಜ್ಞಾನದಾಸೋಹ ನೀಡಲಾಗುತ್ತದೆ. ''ಸುಜ್ಞಾನ ನಿಧಿ'' ಯೋಜನೆಯಡಿಯಲ್ಲಿ 37,194 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾಹಿತ್ಯ ಪ್ರಸಾರಕ್ಕೂ ಒತ್ತು ನೀಡಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ.


ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ಗ್ರಂಥಾಲಯದಲ್ಲಿ ಅನೇಕ ಪುರಾತನ ಹಸ್ತಪ್ರತಿಗಳು, ಅಮೂಲ್ಯ ಗ್ರಂಥಗಳು ಹಾಗೂ ಅನುವಾದಿತ ಕೃತಿಗಳ ಸಂಗ್ರಹವಿದ್ದು ಆಸಕ್ತರು ಇದರ ಸದುಪಯೋಗ ಪಡೆಯಬಹುದು. ಭಾಷಾ ಸಾಮರಸ್ಯ, ಸಹಬಾಳ್ವೆ ಹಾಗೂ ಭಾಷಾಭಿಮಾನದ ಜೊತೆಗೆ ಸಾಹಿತ್ಯದ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳದಿಂದ ನಿರಂತರ ಪ್ರೋತ್ಸಾಹ, ಸಹಕಾರ ನೀಡಲಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು.


ಅಧ್ಯಕ್ಷತೆ ವಹಿಸಿದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಸಾಹಿತ್ಯದಿಂದ ಅಂತರಂಗದ ಶುದ್ಧೀಕರಣವಾಗುತ್ತದೆ. ಸಾಹಿತ್ಯ ರಚನೆಯಲ್ಲಿ ತತ್ವದ ಧಾತುಇರಬೇಕು. ಆಧ್ಯಾತ್ಮ ಸಾಹಿತ್ಯ ಮತ್ತು ರಂಜನೀಯ ಸಾಹಿತ್ಯದ ಮಧ್ಯೆ ಸಮನ್ವಯ ಅಗತ್ಯ. ಅಂತಕರಣದ ಶುದ್ಧೀಕರಣದಿಂದ ಲೋಕದ ಶುದ್ಧೀಕರಣವೂ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಸಾಹಿತ್ಯದ ಅಧ್ಯಯನದ ಮೂಲಕ ಅರಿವಿನ ಸ್ಫೋಟ ಆಗಬೇಕು. ಮಾತು ಹೆಚ್ಚಾದರೆ ಸುಳ್ಳು ಹೆಚ್ಚಾಗುತ್ತದೆ. ಮೌನ ಹೆಚ್ಚಾದರೆ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಸಾಹಿತ್ಯ ಕೇವಲ ರಂಜನೆಗಾಗಿ ಅಲ್ಲ. ಜೊತೆಗೆ ನಾವು ಕೌಶಲವನ್ನೂ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.


ಸಾಗರದ ಡಾ.ಗಜಾನನ ಶರ್ಮಾ, ''ಐತಿಹಾಸಿಕ ಸಾಹಿತ್ಯ ಸೃಷ್ಟಿಯಲ್ಲಿ ಎದುರಾಗುವ ಸವಾಲುಗಳು'' ಎಂಬ ವಿಷಯದ ಬಗ್ಗೆ, ಚಿತ್ರದುರ್ಗದ ಡಾ. ಪಿ. ಚಂದ್ರಿಕಾ, ''ಸಾಹಿತ್ಯ ಸಂವೇದನೆ ಮತ್ತು ಮಹಿಳಾ ಅಭಿವ್ಯಕ್ತಿ'' ವಿಷಯದಲ್ಲಿ ಹಾಗೂ ಬೆಂಗಳೂರಿನ ಡಾ.ಕೆ.ಪಿ.ಪುತ್ತೂರಾಯ ''ಶಿಕ್ಷಣ ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ಸಾಹಿತ್ಯದ ಪಾತ್ರ'' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.


ಉಜಿರೆ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಂ.ಸುರೇಶ್‌ ಧನ್ಯವಾದವಿತ್ತರು. ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್‌ ಕುಮಾರ್‌ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನಡೆದ ಲಕ್ಷದೀಪೋತ್ಸವ (ಗೌರಿಮಾರುಕಟ್ಟೆ ಉತ್ಸವ) ವನ್ನು ನಾಡಿನೆಲ್ಲೆಡೆಯಿಂದ ಬಂದ ಭಕ್ತಾದಿಗಳು ವೀಕ್ಷಿಸಿ ಧನ್ಯತೆಯನ್ನು ಹೊಂದಿದರು.


ಡಿ. ವೀರೇಂದ್ರ ಹೆಗ್ಗಡೆವರ ಮಾತು:


· ಹೊನ್ನಾವರದಲ್ಲಿ ಸದ್ಯದಲ್ಲಿಯೇ ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ ಸ್ಮಾರಕ ಉದ್ಯಾನ ಸದ್ಯದಲ್ಲಿಯೇ ನಿರ್ಮಾಣ.


· ಡೊಳ್ಳು, ಶಂಖ, ಕೊಂಬು, ಕಹಳೆ, ವಾಲಗ ಮೊದಲಾದ 2500 ಮಂದಿ ಜಾನಪದ ಕಲಾವಿದರಿಂದ ಆಹೋರಾತ್ರಿ ಕಲಾಸೇವೆ.


· ಶುಕ್ರವಾರ ರಾತ್ರಿ ಎರಡು ಲಕ್ಷ ಜನರಿಗೆ ಭಕ್ತರಿಂದಲೇ ಅನ್ನದಾಸೋಹ ಸೇವೆ.


· ಒಂದೂವರೆ ಲಕ್ಷ ಬಾಟಲ್ ಉಚಿತ ಕುಡಿಯುವ ನೀರಿನ ಪೂರೈಕೆ ಭಕ್ತರಿಂದಲೇ.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post