ಮಂಗಳೂರು: ತುಳುನಾಡು ಎಂಬ ಒಂದು ಭೌತಿಕ ಕಲ್ಪನೆಯನ್ನು ಪ್ರದೇಶ ಮತ್ತು ಜನಾಂಗದ ವರ್ಣನೆ ಮಾಡುವುದರ ಮೂಲಕ ಶತಮಾನಗಳ ಹಿಂದೆಯೇ ಕಟ್ಟಿಕೊಟ್ಟವರು ಪಾಡ್ದನದ ಕವಿಗಳು. ಅನಂತರ ಕನ್ನಡ ಮತ್ತು ತುಳು ಭಾಷೆಯ ಕವಿಗಳು ಆ ಕಲ್ಪನೆಯನ್ನು ಮುಂದುವರಿಸಿ ಅದಕ್ಕೆ ಜೀವ ತುಂಬಿದರು. ಇಂದಿಗೂ ಕವಿಗಳು ಆ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಮಂಗಳೂರು ತಾಲೂಕು ಅಧ್ಯಕ್ಷ ಹಾಗೂ ಕವಿ ಸಾಹಿತಿ ಡಾ. ವಸಂತಕುಮಾರ ಪೆರ್ಲ ಹೇಳಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಮಂಗಳೂರು ವಿಶ್ವವಿದ್ಯಾನಿಲಯದ ತುಳುಪೀಠ ಮತ್ತು ವಿ. ವಿ. ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಜರಗಿದ 'ಗೇನ ಪೊಲಬುದ ಪರಿಪು' (ಜ್ಞಾನವಾಹಿನಿಯ ಹರಿವು) ಎಂಬ ಅಂತರ್ ಜಾಲ ಉಪನ್ಯಾಸ ಮಾಲಿಕೆಯಲ್ಲಿ ’ತುಳು ಕನ್ನಡ ಕಬಿತೆಲೆಡ್ ತುಳುನಾಡ್ದ ವರ್ಣನೆ' ಎಂಬ ವಿಷಯದ ಕುರಿತು ಅವರು ಮಾತಾಡಿದರು.
ತುಳುವಿನಲ್ಲಿ ಕವಿತೆಗಳ ಸೃಷ್ಟಿಗೆ ಹೋಲಿಸಿದರೆ ಗದ್ಯ ಸಾಹಿತ್ಯದ ರಚನೆ ಆದುದು ಕಡಿಮೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಒಳ್ಳೆಯ ಸಾಹಿತ್ಯ ರಚನೆಯಾಗಿ ತಳಪಾಯ ಗಟ್ಟಿಗೊಂಡರೆ ಮಾತ್ರ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತುಳುವಿಗೆ ಸ್ಥಾನಮಾನ ಸಿಕ್ಕಲು ಸಾಧ್ಯ ಎಂದು ಡಾ. ಪೆರ್ಲ ಅವರು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಅಧ್ಯಕ್ಷತೆ ವಹಿಸಿದ್ದರು. ತುಳು ಒಂದು ಸಮೃದ್ಧ ಜಾನಪದ ಮತ್ತು ಸಾಹಿತ್ಯಿಕ ಭಾಷೆಯಾಗಿದ್ದು ಅದನ್ನು ಎತ್ತರಿಸಿ ನಿಲ್ಲಿಸಲು ಪ್ರಯತ್ನಿಸುತ್ತಿರುವ ಮಂಗಳೂರು ವಿ. ವಿ. ಯ ತುಳುಪೀಠದ ಕೆಲಸವನ್ನು ಅವರು ಶ್ಲಾಘಿಸಿದರು.
ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಪುತ್ತೂರಿನ ಪ್ರಸನ್ನ ದರ್ಬೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ತುಳುಪೀಠದ ಸಂಯೋಜಕರಾದ ಡಾ. ಮಾಧವ ಎಂ. ಕೆ., ಕಾರ್ಯಕ್ರಮ ಸಂಯೋಜಕರಾದ ಪ್ರಶಾಂತಿ ಶೆಟ್ಟಿ ಇರುವೈಲು ಮತ್ತು ಡಾ. ವಿನೋದಾ ಮೊದಲಾದವರು ಉಪಸ್ಥಿತರಿದ್ದರು.
ತುಳು ಲೇಖಕ ಹಾಗೂ ತುಳು ಎಂ. ಎ. ವಿದ್ಯಾರ್ಥಿ ಚಂದ್ರಹಾಸ ಕಣಂತೂರು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಪ್ರಶಾಂತಿ ಶೆಟ್ಟಿ ಇರುವೈಲು ವಂದಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ