|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಧರ್ಮಸ್ಥಳದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್

 


ಉಜಿರೆ:
ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಸದ್ಯದಲ್ಲಿಯೇ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭರವಸೆ ನೀಡಿದರು. ಮಂಗಳವಾರ ಧರ್ಮಸ್ಥಳಕ್ಕೆ ಆಗಮಿಸಿದ ಅವರು ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿ ಶುಭ ಹಾರೈಸಿದರು.


ಶಾಲೆಯಲ್ಲಿ ಆರಂಭಿಸಿದ “ಚಿಣ್ಣರ ಚಿಲುಮೆ”ಯ ಮಾದರಿ ತರಗತಿಯನ್ನು ಸಚಿವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಅಕ್ಷರ ಮಾಲೆ, ಇಂಗ್ಲೀಷ್ ಅಕ್ಷರಗಳು, ಗ್ರಹಗಳು ಮತ್ತು ನಕ್ಷತ್ರಗಳು, ಗಣಿತದ ಚಿಹ್ನೆಗಳು ಇತ್ಯಾದಿಗಳನ್ನು ಮಕ್ಕಳು ನಲಿ-ಕಲಿ ತತ್ವದಡಿ ಕಲಿಯುವ ಪ್ರಾತ್ಯಕ್ಷಿಕೆಗಳನ್ನು ಸಚಿವರು ವೀಕ್ಷಿಸಿ ಶ್ಲಾಘಿಸಿದರು.


ಬಳಿಕ ಮಾತನಾಡಿದ ಸಚಿವರು, ಮಂಗಳವಾರದಿಂದ ರಾಜ್ಯದಲ್ಲಿಒಂದರಿಂದ ಹತ್ತನೆ ತರಗತಿವರೆಗೆ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಪ್ರಾರಂಭವಾಗಿದ್ದುಎಲ್ಲಾ ಶಿಕ್ಷಕರು ಪ್ರೀತಿ-ವಿಶ್ವಾದಿಂದ ಮಕ್ಕಳನ್ನು ಶಾಲೆಗೆ ಆಕರ್ಷಿಸಬೇಕು, ಅವರಲ್ಲಿರುವ ಭಯ, ಆತಂಕ ನಿವಾರಿಸಿ ಲವಲವಿಕೆಯಿಂದ ಶಾಲೆಗೆ ಬರುವಂತೆ ಶಿಕ್ಷಕರು ಪ್ರೇರೇಪಿಸಬೇಕು ಎಂದು ಸಚಿವರು ಸಲಹೆ ನೀಡಿದರು.


ಶಾಲೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಮುಂದಿನ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು. ಧರ್ಮಸ್ಥಳವು ದೇಶಕ್ಕೆ ಮಾದರಿ ಸಂಸ್ಥೆಯಾಗಿದ್ದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಸಚಿವರು ಶ್ಲಾಘಿಸಿ ಅಭಿನಂದಿಸಿದರು.


ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಧರ್ಮಸ್ಥಳದ ವತಿಯಿಂದ ಜ್ಞಾನದೀಪ ಕಾರ್ಯಕ್ರಮದಡಿ ಈ ವರ್ಷ 600 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಧಾರವಾಡ ಜಿಲ್ಲೆಯ ಹತ್ತು ಶಾಲೆಗಳ ಸರ್ವತೋಮುಖ ಪ್ರಗತಿಗೆ ನೆರವು ನೀಡಲಾಗಿದೆ. ಶಾಲೆಗಳಿಗೆ ಕಟ್ಟಡ, ಶೌಚಾಲಯ, ಕ್ರೀಡಾ ಸಾಮಾಗ್ರಿ ಮೊದಲಾದ ಮೂಲಭೂತ ಸೌಕರ್ಯ ಒದಗಿಸಲು ಈ ವರೆಗೆ 20.70 ಕೋಟಿ ರೂ. ಪೂರಕ ಅನುದಾನ ನೀಡಲಾಗಿದೆ ಎಂದು ಹೇಳಿದರು.


ಹಾವೇರಿ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ 311 ಶಾಲೆಗಳಿಗೆ 2370 ಬೆಂಚು – ಡೆಸ್ಕ್ ಗಳನ್ನು ಮಂಜೂರು ಮಾಡಿದ್ದು ಶಿಕ್ಷಣ ಸಚಿವ ನಾಗೇಶ್ ಬಿ.ಸಿ. ಪೀಠೋಪಕರಣಗಳನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈವರೆಗೆ ರಾಜ್ಯದ 30 ಜಿಲ್ಲೆಗಳ 9,776  ಶಾಲೆಗಳಿಗೆ 63,553 ಜೊತೆ ಡೆಸ್ಕ್ - ಬೆಂಚ್ ಪೂರೈಕೆ ಮಾಡಿದ್ದುಇದಕ್ಕಾಗಿ 20.17 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಹೆಗ್ಗಡೆಯವರು ಹೇಳಿದರು.


ಶಾಸಕ ಹರೀಶ್ ಪೂಂಜ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮತ್ತು ಯೋಜನಾಧಿಕಾರಿ ಪುಷ್ಪರಾಜ್‌ ತಹಶೀಲ್ದಾರ್ ಮಹೇಶ್‌ ಜೆ. ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಉಪಸ್ಥಿತರಿದ್ದರು.


ಆರಂಭದಲ್ಲಿ ವಿದ್ಯಾರ್ಥಿಗಳು ಸಚಿವರಿಗೆ ಗುಲಾಬಿ ಹೂ ನೀಡಿ  ಗೌರವಿಸಿದರು. ಬಳಿಕ ಸಚಿವರು ವಿದ್ಯಾರ್ಥಿಗಳಿಗೆ ಹೂ ಗುಚ್ಛ ನೀಡಿ ಶುಭ ಹಾರೈಸಿದರು. ನಿವೃತ್ತ ಮುಖ್ಯ ಶಿಕ್ಷಕ ವಸಂತ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ರಾವ್ ಸ್ವಾಗತಿಸಿದರು. ಶಿಕ್ಷಕಿ ಪೂರ್ಣಿಮಾ ಜೋಶಿ ಧನ್ಯವಾದವಿತ್ತರು. ಮನೋರಮಾ ತೋಳ್ಪಾಡಿತ್ತಾಯ ಕಾರ್ಯಕ್ರಮ ನಿರ್ವಹಿಸಿದರು.  


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post