ಮಂಗಳೂರು, ನವೆಂಬರ್ 06: ನಗರದ ಪ್ರಸಿದ್ಧ ಐಸ್‌ಕ್ರೀಂ ಸಂಸ್ಥೆ ಆಗಿರುವ ಐಡಿಯಲ್ಸ್‌ನ ಸ್ಥಾಪಕ ಎಸ್.ಪ್ರಭಾಕರ ಕಾಮತ್ (79) ಅವರು ಶನಿವಾರ ಮುಂಜಾನೆ ಇಹಲೋಕ ತ್ಯಜಿಸಿದರು.
ಕೆಲದಿನಗಳ ಹಿಂದೆ ದುರದೃಷ್ಟವಶಾತ್ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರು ಪತ್ನಿ, ಪುತ್ರ ಐಡಿಯಲ್ ಐಸ್ ಕ್ರೀಂ ಮುಖ್ಯಸ್ಥ ಮುಕುಂದ ಕಾಮತ್ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮಂಗಳೂರಿನಲ್ಲಿ ಪಟಾಕಿ ವಿತರಣೆ, ಟೈಲರಿಂಗ್ ವಸ್ತುಗಳ ವಿತರಣೆ ಮಾಡಿಕೊಂಡಿದ್ದ ಪ್ರಭಾಕರ ಕಾಮತ್ ಅವರು ವರ್ಷಪೂರ್ತಿ ಬೇಡಿಕೆಯ ಉದ್ಯಮ ಪ್ರಾರಂಭಿಸಲು ಉತ್ಸುಕರಾಗಿದ್ದರು. ಅದರಂತೆ 1975ರಲ್ಲಿ ಐಡಿಯಲ್ ಐಸ್ ಕ್ರೀಂ ಪಾರ್ಲರ್ ಆರಂಭಿಸಿದರು. ಅವರೇ ಸ್ವತಃ ವಿವಿಧ ರೀತಿಯ ಐಸ್ ಕ್ರೀಂ ಗಳನ್ನು ಮನೆಯಲ್ಲಿ ತಯಾರಿಸಿದ್ದರು. ಸ್ವಪ್ರಯೋಗ ಹಾಗೂ ಹಲವು ನೂತನ ಪ್ರಯೋಗಗಳಿಂದಾಗಿ ಐಡಿಯಲ್ಸ್ ಐಸ್ ಕ್ರೀಂ ನಗರದೆಲ್ಲೆಡೆ ಮನೆಮಾತಾಗಿದೆ.
ಪ್ರಭಾಕರ ಕಾಮತ್ ಅವರನ್ನು ಜನರು ಪ್ರೀತಿಯಿಂದ ಪಬ್ಬಾ ಮಾಮ್ ಎಂದೇ ಕರೆಯುತ್ತಿದ್ದರು. ಅದೇ ಹೆಸರಿನಲ್ಲಿ ಮಂಗಳೂರಿನಲ್ಲಿ ಐಸ್ ಕ್ರೀಂ ಪಾರ್ಲರ್ ಕೂಡಾ ಅಸ್ತಿತ್ವದಲ್ಲಿದೆ. ಅವರ ಆತ್ಮೀಯರು ತಮ್ಮನ್ನು ಅಗಲಿದ ಪಬ್ಬಾ ಮಾಮ್ ಗೆ ಶ್ರದ್ಧಾಂಜಲಿ ಅರ್ಪಿಸಿ, ಚಿರಶಾಂತಿ ಕೋರುತ್ತಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ