ಮಂಗಳೂರು: ಮಂಗಳೂರು ಸಮಾಜಶಾಸ್ತ್ರ ಸಂಘ ಮತ್ತು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗಗಳು ಜಂಟಿಯಾಗಿ 'ಸಮಾಜಶಾಸ್ತ್ರದಲ್ಲಿ ಪಠ್ಯಕ್ರಮ(ಎನ್ಇಪಿ)' ಕುರಿತು ಒಂದು ದಿನದ ಕಾರ್ಯಾಗಾರವನ್ನು ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ತಮ್ಮ ಉದ್ಘಾಟನಾ ಭಾಷಣದಲ್ಲಿ ಎಂಎಸ್ಎ ಖಜಾಂಚಿ, ಸೈಂಟ್ ಅಲೋಶಿಯಸ್ ಕಾಲೇಜು ಸಮಾಜಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ರಿಚರ್ಡ್ ಪಾಯಸ್ ಅವರು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣದ ಹೊಸ ಸಾಧ್ಯತೆಗಳನ್ನು ಅನ್ವೇಷಿಸಬಹುದು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ ನೀಡಿ ಅವರ ಹೊರೆ ಕಡಿಮೆ ಮಾಡುತ್ತದೆ. ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಓದುವ ದೂರದ ಕನಸು ಸುಲಭವಾಗಿ ಈಡೇರುತ್ತದೆ ಎಂದರು.
ಮುಖ್ಯ ಅತಿಥಿ, ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ವೈ.ರವೀಂದ್ರನಾಥ ರಾವ್ ಎನ್ಇಪಿಯ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿ ಜಯಿಸುವುದು ಈಗಿನ ಅಗತ್ಯ. "ಬೋಧನೆ, ಕಲಿಕೆ ಮತ್ತು ಸಂಶೋಧನೆಗಳು ಜೊತೆ ಜೊತೆಗೆ ಹೋಗಬೇಕು. ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆಗಳು ನಮ್ಮ ಜ್ಞಾನವನ್ನು ವಿಸ್ತರಿಸಲು ಸಹಾಯ ಮಾಡುತ್ತವೆ. ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಲು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯ" ಎಂದು ಅಭಿಪ್ರಾಯಪಟ್ಟರು.
ಎಂಎಸ್ಎ ಅಧ್ಯಕ್ಷೆ ಪ್ರೊ. ಶಿರ್ಲಿ ರಾಣಿ ಕೆ ಮಾತನಾಡಿ, ಎನ್ಇಪಿ ಶಿಕ್ಷಣವನ್ನು ಮುಂದಿನ ಹಂತಕ್ಕೆ ಏರಿಸುತ್ತದೆ. ಇದಕ್ಕಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಾಮಾಜಿಕ ಮತ್ತು ವೈಯಕ್ತಿಕ ಜೀವನದಲ್ಲಿ ಒತ್ತಡವನ್ನು ನಿಭಾಯಿಸಲು ಸ್ಮಾರ್ಟ್ ವರ್ಕ್ ಕಲಿಯಬೇಕು. ಜೊತೆಗೆ ಹೊಸ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯಾ ರೈ, ಎನ್ಇಪಿ ಅನುಷ್ಠಾನ ನಮಗೆ ಸವಾಲುಗಳನ್ನು ತಂದೊಡ್ಡುತ್ತದೆ. ಈ ಹಂತದಲ್ಲಿ ವಿಷಯಪೂರ್ಣ ಚರ್ಚೆಗಳು ಪ್ರಕ್ರಿಯೆಗೆ ಸಹಾಯ ಮಾಡಬಹುದು ಎಂದು ಅಭಿಪ್ರಾಯ ಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ವಿನಯ್ ರಜತ್ ಡಿ, ಐಕಳ ಪೊಂಪೈ ಕಾಲೇಜು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಯೋಗೇಂದ್ರ ಬಿ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಸಂಯೋಜಕ ಡಾ.ದುಗ್ಗಪ್ಪ ಕಜೆಕಾರ್ ಹಾಗೂ ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಿರಿಧರ್ ರಾವ್ ವಿವಿಧ ಸೆಶನ್ ಗಳನ್ನು ನಡೆಸಿಕೊಟ್ಟರು.
ಸಮಾಜಶೋಧನ ಸಂಶೋಧನಾ ಪತ್ರಿಕೆಯ 29ನೇ ಸಂಪುಟವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು ಮತ್ತು ಎಂಎಸ್ಎ ಸಾಮಾನ್ಯ ಸಭೆಯೂ ನಡೆಯಿತು. ಡಾ.ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಗಾಯತ್ರಿ ಎನ್ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ