ಭೂಲೋಕಾಮೃತ ತುಳಸಿ: ನವೆಂಬರ್ 15 ಉತ್ಥಾನ ದ್ವಾದಶೀ– ತುಳಸಿ ಹಬ್ಬ

Chandrashekhara Kulamarva
0


ಕಾರ್ತೀಕವೆಂದರೆ ಅಕ್ಷರಶಃ ದೀಪೋತ್ಸವದ ತಿಂಗಳು. ಪೌರ್ಣಮಿಯಂದು ಕೃತ್ತಿಕಾ ನಕ್ಷತ್ರವಿರುವುದರಿಂದ ಈ ಮಾಸಕ್ಕೆ ‘ಕಾರ್ತೀಕ’ ವೆಂಬ ಹೆಸರು. ದೀಪಾವಳಿ ನಂತರ ಬರುವ ಇನ್ನೊಂದು ಹಬ್ಬ ‘ಉತ್ಥಾನ ದ್ವಾದಶಿ’  ಲಕ್ಷ್ಮೀ ಏಳುವ ದಿನ ದೀಪಾವಳಿಯಾದರೆ, ನಾರಾಯಣನು ಏಳುವ ದಿನ ಉತ್ಥಾನ ದ್ವಾದಶಿ. ಪರಮಾತ್ಮನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಏಳುವ ದಿನವಾದ್ದರಿಂದ ‘ಕ್ಷೀರಾಬ್ದಿ ವ್ರತ’ವೆಂದು ಕರೆಯುತ್ತಾರೆ. ಅಂದೇ ಸನ್ಯಾಸಿಗಳ ಚಾತುರ್ಮಾಸ್ಯ ವ್ರತ ಸಮಾಪ್ತಿ. ಈ ದೇವೋತ್ಥಾನದ ದಿನ ನಾರಾಯಣನೊಡನೆ ತುಳಸಿ ವಿವಾಹ ಮಾಡುವ ಪದ್ದತಿಯಿದೆ.


ಭಾರತೀಯ ಪರಂಪರೆಯಲ್ಲಿ ತುಳಸಿಗೆ ವಿಶಿಷ್ಟವಾದ ಸ್ಥಾನವಿದೆ. ಅರ್ಚನೆಯಿಂದ ಹಿಡಿದು ಮನೆ ಮದ್ದಿನವರೆಗೂ ಇದರ ಬಳಕೆಯ ವ್ಯಾಪ್ತಿಯಿದೆ. ಮನೆಯಂಗಳದ ತುಳಸಿ ಕಟ್ಟೆಯು ವಾಸ್ತವವಾಗಿ ಒಂದು ಎಮರ್ಜನ್ಸಿ ಕ್ಲಿನಿಕ್, ಅಪರಿಮಿತ ಗುಣಗಳ ಗಣಿ ತುಳಸಿ. ದುಷ್ಟಶಕ್ತಿಗಳನ್ನು ದೂರೀಕರಿಸುವುದರಲ್ಲೂ, ಭಕ್ತಿ ಭಾವವನ್ನು ಪ್ರೇರೇಪಿಸುವುದರಲ್ಲೂ ವಿಶ್ವದ ಸಸ್ಯರಾಶಿಗಳಲ್ಲಿಯೇ ತುಳಸಿಯಷ್ಟು ಪ್ರಭಾವ ಬೀರುವ ಗಿಡ ಬೇರೊಂದಿಲ್ಲ.

  

ತುಳಸಿಗೆ ಕೈ ಮುಗಿಯುವುದೆಂದರೆ ಪ್ರಕೃತಿಗೆ ನಮಿಸಿದಂತೆ. ಪ್ರಕೃತಿ ಪೂಜೆ ಹಾಸು ಹೊಕ್ಕಾಗಿರುವ ನಮ್ಮ ಸಂಸ್ಕøತಿಯಲ್ಲಿ ತುಳಸಿ ದಿನಚರಿಯ ಒಂದು ಭಾಗವಾಗಿ ಬೆಳೆದು ಬಂದಿದೆ. ಪ್ರಕೃತಿ ಸಹಜವಾಗಿಯೇ ತುಳಸಿ ನಿರಾಭರಣ ಸುಂದರಿ. ಮುಂಭಾಗದಲ್ಲಿ ತುಳಸಿಕಟ್ಟೆಯಿಂದ ಶೋಭಿತವಾದ ಮನೆಯನ್ನು ಸಾಮಾನ್ಯವಾಗಿ ಸದಾಚಾರ ಸಂಪನ್ನರ ಮನೆಯೆಂದೇ ತಿಳಿಯಲಾಗುವುದು. ಆದರೆ ಮನೆಯ ಮುಂದೆ ತುಳಸಿ ವೃಂದಾವನವಿದ್ದೂ ಕೂಡ ಆ ಮನೆಯವರು ದುರ್ಮಾರ್ಗಿಗಳಾಗಿದ್ದರೆ ಅಂಥವರಿಗಾಗಿಯೇ ಹುಟ್ಟಿಕೊಂಡಿರುವ ಗಾದೆ ‘ಮಾಡುವುದು ಅನಾಚಾರ, ಮನೆ ಮುಂದೆ ಬೃಂದಾವನ’.


ತುಳಸಿಯ ಪೌರಾಣಿಕ ಪ್ರಖ್ಯಾತಿ ತುಂಬಾ ವಿಸ್ತಾರವಾದದು. ಶ್ರೀಮದ್ಭಾಗವತದಲ್ಲಿ ಉಲ್ಲೇಖಿಸಿದಂತೆ ಸಮುದ್ರ ಮಥನಕಾಲದಲ್ಲಿ ಅಮೃತ ಬಂತು .ಅದನ್ನು ಪಡೆಯಲು ದೇವತೆಗಳು ಮತ್ತು ದಾನವರಿಗೂ ಯುದ್ದ ನಡೆಯಿತು. ಆಗ ಹೊರಗೆ ಬಿದ್ದ ಅಮೃತ ಬಿಂದುಗಳಿಂದ ತುಳಸಿಯ ಜನನವಾಯ್ತು. ತನ್ನ ಆನಂದಾಶ್ರುವಿನಿಂದ ಉದ್ಭವಿಸಿದ ತುಳಸಿಯ ಮೇಲೆ ಭಗವಂತನಿಗೆ ಇನ್ನಿಲ್ಲದ ಪ್ರೀತಿ.


ಶ್ರೀಹರಿಯ ಪೂಜೆಗೆ ತುಳಸಿಯೆ ಮುಖ್ಯ ಸಾಧನ. ಈ ಗಿಡಕ್ಕೆ ತುಲನೆ (ಹೋಲಿಕೆ) ಇಲ್ಲದ್ದರಿಂದ ಇದಕ್ಕೆ ತುಳಸಿ ಎಂದು ಹೆಸರು. ಹತ್ತು ಸಹಸ್ರ ಪುಷ್ಪಾರ್ಚನೆಗೆ ಒಂದು ತುಳಸಿ ಪತ್ರೆಯ ಪೂಜೆಯು ಸಮ. ಸತ್ಕಾರ್ಯಗಳ ಕೊನೆಯಲ್ಲಿ ತುಳಸಿದಳದಿಂದ ಬ್ರಹ್ಮಾರ್ಪಣ ನೀಡದಿದ್ದರೆ ಸಾಫಲ್ಯವಿಲ್ಲವೆಂಬ ವೈದಿಕ ನಂಬಿಕೆಯಿದೆ.  

ಮನಬಂದಂತೆ ತುಳಸಿಯನ್ನು ಕುಯ್ಯುಬಾರದಂತೆ, ಅಶುಚಿಯಾಗಿರುವವರು ಕೈಯಿಂದ ಸ್ಪರ್ಶಿಸಬಾರದು, ಸಂಜೆ  ಕೊಯ್ಯುವಂತಿಲ್ಲ. ಉಗುರಿನಿಂದ ಚಿವುಟದೆ ಬೆರಳ ತುದಿಯಿಂದ ಪ್ರತಿದಳವನ್ನು ಶ್ರೀಹರಿ ಎಂದು ಜಪಿಸುತ್ತ ಕೊಯ್ಯದಿದ್ದರೆ ವಿಷ್ಣುವಿಗೆ ಬೇಸರವಾಗುತ್ತದೆ ಎಂದಿದೆ ಶಾಸ್ತ್ರಗಳು. ತುಳಸಿಯ ಕಾಷ್ಟದಿಂದ ತಯಾರಿಸಿದ ಮಣಿಗಳ ಹಾರವನ್ನು ಕೊರಳಿಗೆ ಧರಿಸಿ ಅದರ ಮೂಲಕ ಮಾಡುವ ನಾಮ ಜಪ ಹೆಚ್ಚು ಸಿದ್ಧಿಪ್ರದವೆಂಬುದೂ ಇನ್ನೊಂದು ನಂಬಿಕೆ.


ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವು

ಇಂದಿರಾರಮಣ ಗರ್ಪಿತವೆನಲು ವಂದೇ ಮನದಿಂದ

ಸಿಂಧುಶಯನನು ತಾನು ಎಂದಿಗೂ ವಾಸಿಪನು

ಹೃನ್ಮಂದಿರದೊಳು ||


ಶ್ರೀಕೃಷ್ಣನ ತುಲಾಭಾರದ ಸಮಯದಲ್ಲಿ ಸತ್ಯಭಾಮಾದೇವಿಯು ಖಜಾನೆಯಲ್ಲಿದ್ದ ನಗನಾಣ್ಯವನ್ನೆಲ್ಲಾ ಹಾಕಿದರೂ, ಕೃಷ್ಣನ ತೂಕಕ್ಕೆ ಅದು ಸರಿಹೊಂದುವುದಿಲ್ಲ. ಆದರೆ ರುಕ್ಮಿಣಿಯು ಭಕ್ತಿ ಭಾವದಿಂದ ಹಾಕುವ ಒಂದೇ ಒಂದು ದಳ ತುಳಸಿ, ಕೃಷ್ಣನ ತೂಕಕ್ಕೆ ಸಮನಾಗುತ್ತದೆ. ಇದು ತುಳಸಿಯ ಹಿರಿಮೆ ಸಾರುವ ಒಂದು ದೃಷ್ಟಾಂತ .

ಹೀಗಾಗಿ ತುಳಸಿ ದರ್ಶನದಿಂದ ಪಾಪ ಪರಿಹಾರವೂ, ಸ್ಪರ್ಶ ಮಾತ್ರದಿಂದ ಪಾತಿವ್ರತ್ಯವೂ, ವಂದಿಪುದರಿಂದ  ರೋಗ ಪರಿಹಾರವೂ, ತುಳಸಿ ಜಲಪ್ರೋಕ್ಷಣೆಯಿಂದ ಆಯುಷ್ಯವೃದ್ದಿಯೂ, ಮನೆಯಲ್ಲೊಂದು ತುಳಸಿಗಿಡ ನೆಡುವುದರಿಂದ ಕೃಷ್ಣ ಸಾನ್ನಿಧ್ಯವೂ, ತುಳಸಿ ಅರ್ಚನೆಯಿಂದ ಮೋಕ್ಷವೂ ದೊರೆಯುತ್ತದೆ ಎಂಬುದು ಸನಾತನ ನಂಬಿಕೆ.


ವೈಷ್ಣವೀ, ವೃಂದಾ, ಸುಗಂಧಾ, ಗಂಧಹಾರಿಣಿ, ಪವಿತ್ರಾ, ಸುರವಲ್ಲರೀ, ಅಮೃತಾ ಮುಂತಾದ ಹೆಸರುಗಳುಳ್ಳ ತುಳಸಿಯನ್ನು ಸಸ್ಯಶಾಸ್ತ್ರಜ್ಞರು ಒಸಿಯಂ ಸ್ಯಾಂಕ್ಟಂ ಎಂದು ಗುರುತಿಸುತ್ತಾರೆ. ತುಳಸಿಯು ನಾಲಿಗೆಗೆ ಖಾರವೂ, ಸ್ವಲ್ಪ ಕಹಿಯೂ ಆಗಿದ್ದು ಗುಣದಲ್ಲಿ ಉಷ್ಣವಾಗಿರುತ್ತದೆ. ತುಳಸಿಯು ಪಚನಶಕ್ತಿಯನ್ನು ವರ್ಧಿಸುವುದಲ್ಲದೆ, ಚರ್ಮವ್ಯಾಧಿ, ಕೆಮ್ಮು, ದಮ್ಮು, ಪಕ್ಕೆ ನೋವು, ಜ್ವರ ಬಿಕ್ಕಳಿಕೆ ಮುಂತಾದ ವ್ಯಾಧಿಗಳಿಗೆ ರಾಮಬಾಣವಾಗಿದೆ. ವ್ಯವಹಾರದಲ್ಲಿ ತುಳಸಿಯು ಶ್ರೀತುಳಸಿ ಮತ್ತು ಕೃಷ್ಣ ತುಳಸಿ ಎಂದು ಎರಡು ಬಗೆಯಾದರು, ಎರಡಕ್ಕೂ ಸಮಾನವಾದ ಗುಣಕರ್ಮಗಳಿವೆ.


ತುಳಸಿ ನಿಜ ಅರ್ಥದಲ್ಲಿ ಬಹು ವರ್ಷಾಯು ಅಲ್ಲ. ಆದರೆ ಅದರ ತುದಿ ದಳ ಮತ್ತು ತೆನೆಯನ್ನು ಆಗಾಗ ಕತ್ತರಿಸಿ ಅದನ್ನು ಹತ್ತಾರು ವರುಷ ಬದುಕಿಸಿಡಲು ಸಾಧ್ಯ. ತುಳಸಿಯಲ್ಲಿ ಆಂಟಿ ಆಕ್ಸಿಡೆಂಟ್ಸ್ ಅಂಶವಿದ್ದು ಇದು ವಿಕಿರಣದ ಪ್ರಭಾವದಿಂದ ಹಾನಿಗೊಳಗಾದ ಜೀವಕೋಶಗಳ ಪುನಶ್ಚೇತನಕ್ಕೆ ಸಹಕಾರಿ ಎಂದು ವಿಜ್ಞಾನಿಗಳ ಅಂಬೋಣ. ತುಳಸಿಯ ಚಿಕಿತ್ಸಕ ಮತ್ತು ಗುಣಾತ್ಮಕ ಮೌಲ್ಯ ವಿಶ್ವಾದ್ಯಂತ ಅಂಗೀಕೃತವಾಗಿದೆ.


ಮುಂಬೈಯಲ್ಲಿ ನೂರು ವರ್ಷಗಳ ಹಿಂದೆ ವಿಕ್ಟೋರಿಯ ಉದ್ಯಾನವನ ನಿರ್ಮಾಣದ ಕಾಲ. ಅಲ್ಲಿ ಕಡಿದು ತಟ್ಟು ಮಾಡುವ ಕಾರ್ಮಿಕರಿಗೆ ಸೊಳ್ಳೆ ಕಡಿತದ ಬಾಧೆ ವಿಪರೀತ. ಕಾರ್ಮಿಕರ ಕೊರತೆಯಿಂದ ಬ್ರಿಟಿಷ್ ಅಧಿಕಾರಿ ಕಂಗೆಟ್ಟನಂತೆ. ಕೆಲಸ ನಿಲ್ಲುವ ಪ್ರಮೇಯ. ಆಗ ಒಬ್ಬರ ಸಲಹೆಯಂತೆ ಆ ಪ್ರದೇಶ ತುಂಬ ತುಳಸಿಯ ವನ ನಿರ್ಮಾಣವಾಯಿತಂತೆ. ಅನಂತರ ಅಲ್ಲಿ ಸೊಳ್ಳೆ ಮತ್ತು ಇತರ ಕ್ರಿಮಿ ಕೀಟಗಳ ಕಾಟ ನಿವಾರಣೆ ಆಯಿತೆಂದು ಬ್ರಿಟೀಷ್ ದಾಖಲೆ ಒಂದು ವಿವರ ನೀಡುತ್ತದೆ.


-ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)

ಸಂಸ್ಕೃತಿ ಚಿಂತಕರು,

ಮೊಬೈಲ್ : 9739369621

ಇ-ಮೇಲ್: padmapranava@yahoo.com


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top