ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಮಹಿಳಾ ಕಲಾವಿದರು ಕಾಣಲು ಸಿಗುತ್ತಾರೆ. ಇಂತಹ ಕಲಾವಿದರ ಸಾಲಿನಲ್ಲಿ ಮಿಂಚುತ್ತಿರುವ ಮಹಿಳಾ ಕಲಾವಿದೆ ಶ್ರೀಮತಿ ನಿರ್ಮಲಾ ಮಂಜುನಾಥ ಹೆಗಡೆ.
06.09.1973 ರಂದು ಶ್ರೀಮತಿ ರುಕ್ಮಿಣಿ ಭಟ್ಟ ಹಾಗೂ ಶ್ರೀ ಶಂಭು ಭಟ್ಟ ಇವರ ಮಗಳಾಗಿ ಜನನ. ಪಿಯುಸಿ ವರೆಗೆ ವಿದ್ಯಾಭ್ಯಾಸ. ಚಿಕ್ಕಂದಿನಿಂದಲೂ ಯಕ್ಷಗಾನ ಎಂದರೆ ಅತೀವ ಪ್ರೀತಿ, ಆಸಕ್ತಿ ಹೊಂದಿದ್ದ ಇವರಿಗೆ ಯಕ್ಷಗಾನ ಕ್ಷೇತ್ರದ ಪ್ರತಿಯೊಬ್ಬರೂ ಪ್ರೇರಣೆಯಾಗಿದ್ದಾರೆ. ಯಕ್ಷಗಾನ ಸಂಘಟನೆಯನ್ನು ಮಾಡಬೇಕೆಂದು ಆಲೋಚಿಸಿ, ಶ್ರೀಯುತ ಸುಬ್ರಾಯ ಭಟ್ಟ ಗಡಿಗೆಹೊಳೆ ಇವರ ನೇತೃತ್ವದ ತಂಡಕ್ಕೆ ಆಸಕ್ತಿಯಿರುವ ಇವರನ್ನು ಆಹ್ವಾನಿಸಿದವರು ಇವರ ಸಹೋದರಿ (ಚಿಕ್ಕಪ್ಪನ ಮಗಳು) ಶ್ರೀಮತಿ ಸುಮಾ ಹೆಗಡೆ ಗಡಿಗೆಹೊಳೆ.
ಸಾಹಿತ್ಯ ಹಾಗೂ ಸಂಘಟನಾ ಗುರು:- ವಿದ್ವಾನ್ ಶ್ರೀ ಸುಬ್ರಾಯ ಭಟ್ಟ ಗಡಿಗೆಹೊಳೆ. ನೃತ್ಯ ಗುರುಗಳು:- ಶ್ರೀ ಗಣಪತಿ ಭಾಗವತ ಕವಾಳೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಮೊದಮೊದಲು ಸಾಹಿತ್ಯವನ್ನು ಬರೆದು ಉರು ಹೊಡೆಯುವುದೇ ಆಗಿತ್ತು. ಯಾಕೆಂದರೆ ಯಕ್ಷಗಾನ ಕ್ಷೇತ್ರಕ್ಕೆ ಬಂದದ್ದೇ 32 ವರ್ಷದ ನಂತರ. ಆಗ ಕಥಾಭಾಗದ ಅರಿವು ಕಡಿಮೆ ಇತ್ತು. ನಂತರ ಹೊಸ ಹೊಸ ಪ್ರಸಂಗಗಳನ್ನು, ಪಾತ್ರಗಳನ್ನು ಅಭಿನಯಿಸುತ್ತಿರುವಂತೆ ಅದರ ಕುರಿತಾದ ತಿಳುವಳಿಕೆ ಹೆಚ್ಚಿತು. ಇನ್ನೂ ತಿಳಿದುಕೊಳ್ಳಬೇಕೆಂಬ ಮಹದಾಕಾಂಕ್ಷೆ ಹುಟ್ಟಿತು. ಮೊದಲು ಮಾಡಿದ ಪಾತ್ರವೇ ಆಗಿದ್ದರೆ ಆ ಪಾತ್ರವನ್ನು ತಾಳಮದ್ದಲೆ ಕಲಾವಿದರು ಹಾಗೂ ಯಕ್ಷಗಾನ ಕಲಾವಿದರು ಹೇಗೆ ಚಿತ್ರಿಸಿದ್ದಾರೆ ಎನ್ನುವುದನ್ನು ಕೇಳುವುದು, ನೋಡುವುದು. ಅದನ್ನು ಮಾರ್ಗದರ್ಶನವಾಗಿಟ್ಟುಕೊಂಡು ಅದರಿಂದ ನಾವು ಹೊಸ ಕಲ್ಪನೆಯನ್ನು ಮಾಡುವುದಕ್ಕೆ ಸಾಧ್ಯತೆ ಇದೆಯೇ ಎನ್ನುವುದರ ಬಗ್ಗೆ ಹಿರಿಯ ಕಲಾವಿದರೊಡನೆ ಚರ್ಚಿಸುವುದು. ಹೊಸ ಪಾತ್ರ ಸಿಕ್ಕಾಗಲೂ ಅಷ್ಟೆ. ಕಲಿಯಬೇಕಾದರೆ ಹಿರಿಯ ಕಲಾವಿದರ ಅನುಸರಣೆ ತಪ್ಪಲ್ಲ ಎನ್ನುವುದು ನನ್ನ ಅನಿಸಿಕೆ. ಅನುಕರಣೆ ಆಗಬಾರದಷ್ಟೆ. ವೇಷ ಮಾಡುವ ದಿನ ಅಂದಿನ ಪಾತ್ರವನ್ನು ಬೆಳಿಗ್ಗೆಯಿಂದಲೇ ಅನುಭವಿಸಲು ಪ್ರಯತ್ನಿಸುವುದು ಚಿಂತನೆಯಲ್ಲಿ ತೊಡಗಿಸಿಕೊಳ್ಳುವುದು.
ಹವ್ಯಾಸಿ ಕಲಾವಿದೆಯಾದ ಇವರು ಕಾಶ್ಯಪ ಪ್ರತಿಷ್ಠಾನ ಗಡಿಗೆಹೊಳೆ ಮೇಳದ ವಿದ್ಯಾರ್ಥಿನಿಯಾದ ಇವರು ಅಲ್ಲಿಯ ಮುಖ್ಯ ಕಲಾವಿದೆಯಾಗಿ ಗುರುತಿಸಿಕೊಂಡ್ಡಿದ್ದಾರೆ. ಬೇರೆ ಯಾವುದೇ ಮೇಳದ ಯಕ್ಷಗಾನ ಇದ್ದರೂ ಇವರ ಮೇಳದ ಯಕ್ಷಗಾನ ಇದ್ದರೆ ಬೇರೆ ಕಡೆಗೆ ಹೋಗುವುದಿಲ್ಲ. ಇದು ಇವರ ಬದ್ಧತೆ.
ಇನ್ನು ಯಕ್ಷಸಿರಿ ಬೆಂಗಳೂರು, ಸಾಯಿಕಲಾ ಪ್ರತಿಷ್ಠಾನ ಶಿವಮೊಗ್ಗ, ಸಿರಿಕಲಾ ಮೇಳ, ಹೀಗೆ ಹಲವಾರು ಮಹಿಳಾ ಮೇಳದಲ್ಲಿ ಭಾಗವಹಿಸಿದ್ದೇನೆ. ಪ್ರತಿಯೊಂದು ಪಾತ್ರ ಹಾಗೂ ತಿರುಗಾಟ ಹೊಸ ಹೊಸ ಅನುಭವ ನೀಡಿದೆ, ನೀಡುತ್ತಲೇ ಇದೆ. ಪುರುಷರ ವೃತ್ತಿ ಮೇಳದಲ್ಲಿ ಭಾಗವಹಿಸಿಲ್ಲ ಎಂದು ನಿರ್ಮಲಾ ಅವರು ಹೇಳುತ್ತಾರೆ.
ಭೀಷ್ಮವಿಜಯ, ದುಷ್ಯಂತ ಶಕುಂತಲೆ, ಗದಾಪರ್ವ ಇವರ ನೆಚ್ಚಿನ ಪ್ರಸಂಗಗಳು ಹಾಗೂ ಹೆಸರಿಸುತ್ತ ಹೋದರೆ ಬಹಳಷ್ಟು ಇವೆ. ಇನ್ನೊಂದು ಹೇಳಬೇಕೆಂದರೆ ಯಕ್ಷಗಾನವನ್ನು ಆರಾಧಿಸುವ ಇವರಿಗೆ ಪ್ರತಿಯೊಂದು ಪ್ರಸಂಗವು ನೆಚ್ಚಿನದ್ದೇ ಎಂದು ಹೇಳುತ್ತಾರೆ.
ಅಂಬೆ, ಶಕುಂತಲೆ, ಕೌರವ, ಕೃಷ್ಣ, ಇವರ ನೆಚ್ಚಿನ ವೇಷಗಳು. ಪುರುಷ, ಸ್ತ್ರೀ ಎಲ್ಲಾ ವೇಷಗಳನ್ನೂ ನಿಭಾಯಿಸಬಲ್ಲ ಇವರಿಗೆ ಹಾಸ್ಯ ಪಾತ್ರ ಮಾಡುವುದು ಕಷ್ಟ ಅನಿಸಿದೆ ಎಂದು ಹೇಳುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನದ ಭವಿಷ್ಯ ಮುಗಿದೇ ಹೋಯಿತು ಎನ್ನುವ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಅದು ಸುಳ್ಳು. ಅತ್ಯಂತ ಪ್ರಾಚೀನ ಕಲೆಯಾದ ಯಕ್ಷಗಾನಕ್ಕೆ ಅಳಿವಿಲ್ಲ. ಅದು ಹೇಗಿರಬೇಕು ಅದರ ಗೌರವವನ್ನು ಹೇಗೆ ಕಾಪಾಡಬೇಕು ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ. ಯಕ್ಷಗಾನದ ವೇಷಭೂಷಣಗಳನ್ನು ಸಿನಿಮಾ ಹಾಡುಗಳಿಗೆ ಬಳಸುವುದು, ಕೇವಲ ಪ್ರಚಾರಕ್ಕಾಗಿ ಹಪಹಪಿಸುವುದು, ಯಕ್ಷಗಾನ ಪ್ರಸಂಗಗಳಲ್ಲಿ ಸಿನಿಮೀಯ ಘಟನೆಗಳನ್ನು ತರುವುದು, ಹೀಗೆ ಒಂದಷ್ಟು ಬದ್ಧತೆಯನ್ನು ಹಾಕಿಕೊಂಡು ಅದನ್ನು ಮೀರದೇ ಇದ್ದರೆ ಯಕ್ಷಗಾನದ ಶ್ರೇಷ್ಠತೆ ಸದಾ ಉಳಿಯುತ್ತದೆ. ಆ ಕುರಿತ ಚಿಂತನೆ ಪ್ರತಿಯೊಬ್ಬ ಕಲಾವಿದನಿಗೆ ಬೇಕು. ಪೌರಾಣಿಕ ಹಿನ್ನೆಲೆಯುಳ್ಳ ಕಥಾವಸ್ತುಗಳು ಪರಿಣಾಮ ಕೊಡುವಷ್ಟು ಸಾಮಾಜಿಕ ಕಥೆಗಳು ಯಕ್ಷಗಾನದಲ್ಲಿ ವಿಜೃಂಭಿಸಲು ಸಾಧ್ಯವಿಲ್ಲ. ಅದಕ್ಕೆಭವಿಷ್ಯವೂ ಇಲ್ಲ. ಬದಲಾವಣೆ ಯಾವ ರೀತಿಯಲ್ಲಿ ಬೇಕು ಎನ್ನುವ ಚಿಂತನೆ ಸದಾ ಅಗತ್ಯ ಎಂದು ಹೇಳುತ್ತಾರೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಕಲಾವಿದ ಏನನ್ನು ಕೊಡುತ್ತಾನೋ ಅದನ್ನು ಪ್ರೇಕ್ಷಕರು ಸ್ವೀಕರಿಸುತ್ತಾರೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇಂದಿನ ಪ್ರೇಕ್ಷಕರು ಪ್ರಬುದ್ಧರು. ಹಾಗಾಗಿ ಕಲಾವಿದನಾದವನು ಉತ್ತಮ ಪ್ರಸ್ತುತಿ ನೀಡಿದರೆ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯ. ಚಪ್ಪಾಳೆ, ಸೀಟಿಗಳ ಗೀಳಿಗೆ ಬಿದ್ದು ಗಿಮಿಕ್ ಮಾಡುವುದು ಕೇವಲ ಕ್ಷಣಿಕ ಸಂತೋಷ ಕೊಡುತ್ತದೆ. ಸಂಪ್ರದಾಯ ಬದ್ಧವಾದ ಲಯಬದ್ಧ ನೃತ್ಯ, ಮಾತು ಸದಾ ಪ್ರೇಕ್ಷಕನ ಮನದಲ್ಲಿ ಉಳಿಯುತ್ತದೆ ಎಂಬುದು ಕಲಾವಿದೆಯಾಗಿ ಹಾಗೂ ಒಬ್ಬ ಪ್ರೇಕ್ಷಕಳೂ ಆಗಿ ಇದು ನನ್ನ ನೇರ ಅಭಿಪ್ರಾಯ ಎನ್ನುತ್ತಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನ ರಂಗಕ್ಕೆ ಬಂದು ಈಗಾಗಲೇ 15 ವರ್ಷ ಕಳೆಯುತ್ತ ಬಂತು. ನನ್ನನ್ನು ಈ ಹಂತಕ್ಕೆ ಏರಿಸಿದ ಯಕ್ಷಗಾನಕ್ಕೆ ನನ್ನಿಂದಾಗುವ ಸೇವೆಯನ್ನು ಕೊಡಬೇಕು ಎಂದು ಶಿರಸಿಯಲ್ಲಿ ಯಕ್ಷಗೆಜ್ಜೆ(ರಿ) ಎಂಬ ಯಕ್ಷಗಾನ ತರಬೇತಿ ಕೇಂದ್ರವನ್ನು ಪ್ರಾರಂಭಿಸಿ ಮೂರು ವರ್ಷ ಕಳೆಯಿತು. ಪ್ರತಿ ವರ್ಷ ವಾರ್ಷಿಕೋತ್ಸವ, ಇಬ್ಬರು ಹಿರಿಯ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ, ಜೊತೆಗೆ ಪೂರ್ವರಂಗ ಸೇರಿದಂತೆ ಹೊಸ ಪೌರಾಣಿಕ ಯಕ್ಷಗಾನ ಪ್ರಸಂಗ ರಚಿಸಿ ಅದನ್ನು ಪ್ರದರ್ಶಿಸುವ ಒಂದು ಯೋಜನೆ ಪ್ರಾರಂಭವಾಗಿದೆ. ಅದನ್ನೇ ಮುಂದುವರಿಸಿಕೊಂಡು ಹೋಗುವಲ್ಲಿ ನನ್ನಿಂದಾಗುವ ಎಲ್ಲಾ ಪ್ರಯತ್ನಗಳನ್ನು ಜಾರಿಯಲ್ಲಿ ಇಟ್ಟಿರುತ್ತೇನೆ.
ಈಗಾಗಲೇ ದುಷ್ಯಂತ ಶಕುಂತಲೆ, ಗಜಾನನ ಜನನ, ಶಂಕರ ವಿಜಯ, ರಾಮಾಯಣ ರೂಪಕಗಳನ್ನು ಸ್ವತಃ ರಚಿಸಿ ನಿರ್ದೇಶಿಸಿ ಮಕ್ಕಳಿಂದ ಪ್ರದರ್ಶನ ಮಾಡಿಸಿರುವೆ. ಇದಕ್ಕೆ ಸಹಕರಿಸಿದವರು ಹಲವರು. ಅವರೆಲ್ಲರನ್ನೂ ಕೃತಜ್ಞತೆಯಿಂದ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ. ಮುಂದಿನ ವಾರ್ಷಿಕ ಕಾರ್ಯಕ್ರಮಕ್ಕೆ ಶಿಬಿ ಚಕ್ರವರ್ತಿ, ಶ್ರೀಕೃಷ್ಣ ರೂಪಕ ಸಿದ್ಧವಾಗಿವೆ. ಇದೇ ಪ್ರಯತ್ನ ಸದಾ ಇರುತ್ತದೆ. ಸರ್ವರ ಹಾರೈಕೆ, ದೇವರ ಆಶೀರ್ವಾದ ನನ್ನ ಮೇಲಿರಲಿ ಎಂದು ನಮ್ರಳಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳುತ್ತಾರೆ.
ಯಕ್ಷಗಾನದ ಅಥವಾ ತಾಳಮದ್ದಲೆಯಲ್ಲಿ ಪಾತ್ರ ನಿರ್ವಹಿಸಿ ನೋಡಿದ ಪ್ರೇಕ್ಷಕನೊಬ್ಬ ಮೆಚ್ಚುಗೆ ವ್ಯಕ್ತಪಡಿಸಿದರೆ ಅದೇ ಕಲಾವಿದನಿಗೆ ಬಹು ದೊಡ್ಡ ಸನ್ಮಾನ. ಆದರೂ ಉಲ್ಲೇಖ ಮಾಡಬೇಕೆಂದರೆ, ಮೇದಿನಿ ರಂಗಪ್ರತಿಷ್ಠಾನ ಪ್ರಶಸ್ತಿ, ರಂಗಬಳಗ ಮತ್ತಿಘಟ್ಟ, ಕಲಾಶಾರದೆ ಪ್ರಶಸ್ತಿ ಶ್ರೀಕೃಷ್ಣ ಮಠ ಉಡುಪಿ, ಪುತ್ತೂರು ಸಾಹಿತ್ಯ ವೇದಿಕೆ, ನ್ಯೂ ರಿವೆಂಟೋ ಪ್ರಶಸ್ತಿ ಕಾರವಾರ, ಹಳಿಯಾಳದಲ್ಲಿ ಮರಾಠಿ ಮಕ್ಕಳಿಗೆ (ಚಿಬ್ಬಲಗೇರಿ, ಪ್ರೌಢಶಾಲೆ) ಯಕ್ಷಗಾನ ಕಲಿಸಿ ಪ್ರದರ್ಶನ ಮಾಡಿಸಿದ ಕಾರಣ ಅಲ್ಲಿನ ಎರಡು ಸಂಸ್ಥೆಗಳು ಸನ್ಮಾನ, ಮತ್ತು ಪ್ರಶಸ್ತಿಯಿತ್ತು ಗೌರವಿಸಿವೆ. (ನೇತೃತ್ವ- ಸಿದ್ದಪ್ಪ ಬಿರಾದಾರ್). ಹೀಗೆ ಯಕ್ಷಗಾನದ ಸೇವೆಗಾಗಿ ಹಲವಾರು ಸನ್ಮಾನಗಳು ಬಂದಿವೆ ಎಂದು ಹೇಳುತ್ತಾರೆ ಶ್ರೀಮತಿ ನಿರ್ಮಲಾ ಮಂಜುನಾಥ ಹೆಗಡೆ.
ಮೊದಲನೇ ಪ್ರಾಶಸ್ತ್ಯ ಯಕ್ಷಗಾನಕ್ಕೇ ಸಲ್ಲುತ್ತದೆ. ನಂತರ ಕವನ, ಭಾವಗೀತೆ, ಯಕ್ಷಗಾನ ಪ್ರಸಂಗ ರಚನೆ, ಲೇಖನ, ಸಾಹಿತ್ಯ ಬರವಣಿಗೆ, ನಾಟಕ ಇವರ ಹವ್ಯಾಸಗಳು.
10.04.1992 ರಂದು ಶ್ರೀಯುತ ಮಂಜುನಾಥ ಕೇಶವ ಹೆಗಡೆ ಅವರನ್ನು ವಿವಾಹವಾಗಿ ಮಗಳು ಪೂಜಾ ಹೆಗಡೆ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ ಶ್ರೀಮತಿ ನಿರ್ಮಲಾ ಮಂಜುನಾಥ ಹೆಗಡೆ. ಯಕ್ಷಗಾನ ಕ್ಷೇತ್ರದಲ್ಲಿ ಇದುವರೆಗಿನ ಪಯಣದಲ್ಲಿ ಮುಖ್ಯವಾಗಿ ನನ್ನ ಜೊತೆಯಾಗಿ ನಿಂತು ಅಡುಗೆ ಮನೆಯಿಂದ ಅಕಾಡೆಮಿವರೆಗೆ ಬರುವಲ್ಲಿ ಸಹಕಾರ, ಪ್ರೋತ್ಸಾಹ ನೀಡಿರುವ ನನ್ನ ಪತಿ ಹಾಗೂ ಮನೆಯ ಸರ್ವ ಸದಸ್ಯರಿಗೆ ಋಣಿ ಎಂದು ಇವರು ಹೇಳುತ್ತಾರೆ.
ಯಕ್ಷಗಾನ ಪಯಣದಲ್ಲಿ ಸಹಕರಿಸಿದವರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಸದಾ ಕೃತಜ್ಞಳಾಗಿರಬೇಕಾದ ಹಲವರ ಹೆಸರನ್ನು ಇಲ್ಲಿ ಹೇಳದೇ ಇದ್ದರೆ ಅಪರಾಧ ಆದೀತು. ಯಕ್ಷಗಾನ ಕಲಿಯಲು ನಾಂದಿ ಹಾಡಿದ ವಿದ್ವಾನ್ ಸುಬ್ರಾಯ ಭಟ್ಟ ಗಡಿಗೆಹೊಳೆ, ಗಣಪತಿ ಭಾಗ್ವತ ಕವಾಳೆ, ಯಕ್ಷಗೆಜ್ಜೆ ಸಂಸ್ಥೆ ಸ್ಥಾಪಿಸಲು ಪ್ರೋತ್ಸಾಹ ನೀಡುವುದರ ಜೊತೆಗೆ ಸದಾ ಬೆನ್ನೆಲುಬಾಗಿ ನಿಂತಿರುವ ಗಜಾನನ ಭಟ್ಞ ತುಳಗೇರಿ, ಸುರೇಶ ಹೆಗಡೆ ಹಕ್ಕಿಮನೆ, ಪ್ರಸಂಗ ಬರೆಯಲು ಸಹಕರಿಸಿ ನೆರವಾದ ದಿ. ರಾಮ ಹೆಗಡೆ ಕೆರೆಮನೆ, ದಿ. ಪ್ರೊ. ಎಂ.ಎ.ಹೆಗಡೆ ದಂಟಕಲ್, ವಿದ್ವಾನ್ ಉಮಾಕಾಃತ ಭಟ್ಟ ಕೆರೇಕೈ, ನನ್ನೆಲ್ಲಾ ಆತ್ಮೀಯ ಸ್ನೇಹಿತ, ಸ್ನೇಹಿತೆಯರ ಬಳಗ, ಸಹೋದರಿಯರು, ಫೇಸ್ಬುಕ್, ವಾಟ್ಸಾಪ್ ಬಳಗದ ಸ್ನೇಹ ವರ್ಗ, ನನ್ನೆಲ್ಲಾ ಚಟುವಟಿಕೆಗಳಿಗೆ ಬಲಗೈಯಾಗಿ ನಿಂತಿರುವ ಪತಿ, ಮಗಳು ಹಾಗೂ ಮನೆಯ ಸರ್ವ ಸದಸ್ಯರು. ಇವರಿಗೆಲ್ಲ ಸದಾ ಋಣಿ ಎಂದು ಹೆಗಡೆ ಅವರು ಹೇಳುತ್ತಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
-ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
+91 8971275651
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ