ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಬಿ.ಕಾಂ ತರಗತಿಗಳ ಉದ್ಘಾಟನೆ

Upayuktha
0


 

ವಾಣಿಜ್ಯ ಉದ್ಯೋಗಾವಕಾಶ ಪ್ರಾಪಂಚಿಕವಾಗಿ ಬೆಳೆದಿದೆ : ಡಾ.ಪರಮೇಶ್ವರ ಭಟ್


ಪುತ್ತೂರು: ವಾಣಿಜ್ಯ ಅಧ್ಯಯನ ವಿಷಯ ಇಂದು ಕೇವಲ ಸ್ಥಳೀಯ ಸಂಗತಿಗಳನ್ನಷ್ಟೇ ಕೇಂದ್ರೀಕರಿಸದೆ ಜಾಗತಿಕ ವಿಚಾರಗಳನ್ನೂ ಒಳಗೊಂಡು ಬೆಳೆದಿದೆ. ಇದರಿಂದಾಗಿ ವಿದ್ಯಾರ್ಥಿಗಳ ಉದ್ಯೋಗಾವಕಾಶವೂ ಪ್ರಾಪಂಚಿಕ ನೆಲೆಯಿಂದ ವಿಸ್ತಾರಗೊಂಡಿದೆ. ಹಾಗಾಗಿ ಎಂದೋ ನಮ್ಮ ಹಿರಿಯರು ರೂಪಿಸಿದ ಸಿದ್ಧ ಮಾದರಿಯ ನೋಟ್ಸ್ಗಳನ್ನಷ್ಟೇ ಆಧಾರ ಗ್ರಂಥವಾಗಿರಿಸಿಕೊಂಡು ಮುಂದುವರಿದರೆ ಯಶಸ್ಸು ದೊರಕುವುದು ಕಷ್ಟ ಸಾಧ್ಯ ಎಂದು ವಿಶ್ರಾಂತ ವಾಣಿಜ್ಯ ಪ್ರಾಧ್ಯಾಪಕ ಡಾ.ಪರಮೇಶ್ವರ ಭಟ್ ಎನ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಪ್ರಸ್ತುತ ವರ್ಷದಿಂದ ನೂತನವಾಗಿ ಆರಂಭಿಸಲಾಗಿರುವ ಜನರಲ್ ಬಿ.ಕಾಂ ಹಾಗೂ ಇಂಟಗ್ರೇಟೆಡ್ ಬಿ.ಕಾಂ ಕೋರ್ಸ್ ಗಳನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.


ಇಂದು ವಾಣಿಜ್ಯ ವಿದ್ಯಾರ್ಥಿಗಳಿಗೆ ಅಪರಿಮಿತ ಅವಕಾಶಗಳು ತೆರೆದುಕೊಂಡಿವೆ. ಅಂತಹ ಅವಕಾಶಗಳನ್ನು ತಮ್ಮದಾಗಿಸುವ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಪ್ರಯತ್ನ ಪಡಬೇಕಿದೆ. ಅವಕಾಶಗಳು ಇದೆಯೆಂದ ಮಾತ್ರಕ್ಕೆ ಅವು ಸುಲಭಕ್ಕೆ ಒಲಿಯುತ್ತವೆ ಎಂದರ್ಥವಲ್ಲ. ಅನೇಕ ಸವಾಲುಗಳನ್ನು ಎದುರಿಸಿಯೇ ಗೆಲ್ಲಬೇಕಾದಂತಹ ಅನಿವಾರ್ಯತೆ ಇದೆ ಎಂಬುದು ಗಮನಾರ್ಹ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲುವು ಕಂಡುಕೊಳ್ಳುವುದಕ್ಕೆ ಆತ್ಮವಿಶ್ವಾಸ ಅತ್ಯಂತ ಮುಖ್ಯ ಎಂದು ಕಿವಿಮಾತು ಹೇಳಿದರು.


ಪ್ರತಿಯೊಬ್ಬನೂ ತನ್ನಲ್ಲಿ ತಾನು ನಂಬಿಕೆ ಇಟ್ಟುಕೊಳ್ಳಬೇಕು. ಸೋಲಿನ ಬಗೆಗೆ ಯಾವತ್ತೂ ಚಿಂತಿಸುತ್ತಾ ಕುಳಿತುಕೊಳ್ಳಬಾರದು. ಬದಲಾಗಿ ಗೆಲ್ಲುವ ಸಾಧ್ಯತೆಯ ಬಗೆಗೆ ಯೋಚಿಸುತ್ತಿರಬೇಕು. ಸರಿಯಾದ ಯೋಜನೆಯೊಂದಿಗೆ ಕಾರ್ಯಪ್ರವೃತ್ತರಾದಾಗ ಎಲ್ಲವೂ ಸುಲಭಸಾಧ್ಯ ಎನಿಸುತ್ತದೆ. ಹೊಸ ಹೊಸ ಆಲೋಚನೆಗಳು, ಸೃಜನಶೀಲ ಚಿಂತನೆಗಳು ನಮ್ಮನ್ನು ಎತ್ತರಕ್ಕೊಯ್ಯುತ್ತವೆ ಹಾಗೂ ಜಗದಗಲ ಕರೆದುಕೊಂಡು ಹೋಗುತ್ತವೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸದಸ್ಯ ಸುರೇಶ ಶೆಟ್ಟಿ ಮಾತನಾಡಿ ಭಾರತೀಯ ವಿದ್ಯಾರ್ಥಿಗಳು ಜಗತ್ತಿನ ಎಲ್ಲಾ ಭಾಗಗಳಲ್ಲೂ ಅತ್ಯಂತ ಹೆಚ್ಚು ಗೌರವವನ್ನು ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿರುವ ಬುದ್ಧಿವಂತಿಕೆ, ಜಾಣತನಗಳೇ ಇದಕ್ಕೆ ಕಾರಣವಾಗಿವೆ. ಕಠಿಣ ಪರಿಶ್ರಮದೊಂದಿಗೆ ಉತ್ಕೃಷ್ಟತೆಯನ್ನು ಮೆರೆಯುವುದಕ್ಕೆ ಸಾಧ್ಯವಾಗುವುದಾದರೆ ಎಲ್ಲೆಡೆಯಿಂದಲೂ ಬೇಡಿಕೆ ನಮ್ಮೆಡೆಗೆ ಹರಿದುಬರುತ್ತದೆ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಉತ್ಸಾಹವೊಂದು ನಮ್ಮ ಜತೆಗಿದ್ದರೆ ಮರುಭೂಮಿಯಲ್ಲಿ ಹೂತುಹಾಕಿದರೂ ಮೇಲೆದ್ದು ಬಂದು ಸಾಧಿಸುವುದಕ್ಕೆ ಸಾಧ್ಯ. ಭಾರತದ ಆರ್ಥಿಕತೆಯ ಹಿಂದೆ ಸಿಎ ಪೂರೈಸಿದ ಅನೇಕರಿದ್ದಾರೆ. ಹಾಗಾಗಿ ಅತ್ಯುತ್ತಮ ಸಿಎಗಳನ್ನು ಕಾಮರ್ಸ್ ವಿಭಾಗ ಕೊಡಬೇಕಾಗಿದೆ. ಭಾರತ ಸರ್ಕಾರವನ್ನು ಘನಸರ್ಕಾರವನ್ನಾಗಿ ಮಾಡುವ ಹೊಣೆ ವಾಣಿಜ್ಯ ರಂಗಕ್ಕಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಚೈತನ್ಯ, ಶ್ರೀಹರ್ಷ ಹಾಗೂ ಮಹಿಮ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಸಂಧ್ಯಾ ಎಂ ವಂದಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ ಕಾರ್ಯಕ್ರಮ ನಿರ್ವಹಿಸಿದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top