ಪರಿಪೂರ್ಣ ಸಂಗೀತ... ಆನಂದದ ತಕಧಿಮಿತ

Upayuktha
0


ಸಂಗೀತಕ್ಕೆ ಮರುಳಾಗದವರು ಬಹುಷಃ ಯಾರೂ ಇಲ್ಲವೆಂದೇ ಹೇಳಬಹುದು. ಅದು ಪ್ರಕಾರ ಯಾವುದೇ ಇರಲಿ. ತಂತಿ ವಾದ್ಯಗಳೋ, ಬಾನ್ಸುರಿ, ಕೊಳಲು, ನಾಗಸ್ವರ, ಸ್ಯಾಕ್ಸೋಫೋನ್ ಮುಂತಾದ ಬಾಯಿಯ ಶ್ವಾಸದ ಹಿಡಿತದ ಮುಖಾಂತರ ನುಡಿಸುವ ವಾದ್ಯಗಳೋ, ಮೃದಂಗ, ತಬ್ಲಾ ಮುಂತಾದ ಚರ್ಮ ವಾದ್ಯಗಳೋ.. ಹೀಗೆ ಹಲವಾರು ಮಾಧ್ಯಮಗಳ ಮೂಲಕ ಸಂಗೀತವನ್ನು ನಾವು ಕೇಳಿ ಆನಂದಿಸುತ್ತೇವೆ. ಅವರವರ ಕ್ಷೇತ್ರದಲ್ಲಿ ಅವರವರು ಪರಿಪೂರ್ಣ ಕಲಾವಿದರೆ. ಅಥವಾ ಅತಿಯಾದ ಸಾಧನೆಯಿಂದ ಇನ್ನು ಕೆಲವರು ಅಸಾಧಾರಣ ಉನ್ನತಿಗೇರಿದವರೆ. ಪ್ರಶ್ನೆ ಇಲ್ಲ. 


ಸಂಗೀತ ಎಂದಾಗ ರಾಗ, ತಾಳ, ಲಯ ಮುಂತಾದ ವಿಚಾರದ ಜತೆಗೆ ಸಾಹಿತ್ಯ ಎನ್ನುವುದು ಕೂಡ ಅತಿ ಮುಖ್ಯ. ಮಾತ್ರವಲ್ಲ ಸಂಗೀತದ ಜೀವಾತ್ಮವೂ ಸಾಹಿತ್ಯವೇ ಎನ್ನಬಹುದು. ಆದ್ದರಿಂದ ಇತರ ಎಲ್ಲ ಪ್ರಕಾರಗಳಿಗಿಂತ ಹಾಡುಗಾರಿಕೆ ಎನ್ನುವಂಥದ್ದು ಸಂಗೀತದ ಪರಿಪೂರ್ಣ ಸ್ಥಿತಿ ಎನ್ನಬಹುದು. ಉದಾಹರಣೆಗೆ ಪುರಂದರದಾಸರ 'ಆಡಿಸಿದಳೆ ಯಶೋದಾ' ಎಂಬ ಹಾಡನ್ನು ನಾವೆಲ್ಲರೂ ಬಲ್ಲವರೇ. ಇದರ ಸಾಹಿತ್ಯ ನಮಗೆಲ್ಲರಿಗೂ ಪರಿಚಯವಿರುವಂಥದ್ದೇ. ಆದ್ದರಿಂದ ಇದನ್ನು ಯಾವುದೇ ವಾದ್ಯಗಳಲ್ಲಿ ನುಡಿಸಿದರೂ ನಮಗೆ ಅದು ಸಹ್ಯವೇ ಆಗುತ್ತದೆ. ಒಂದು ವೇಳೆ ಈ ಹಾಡಿನ ಸಾಹಿತ್ಯ ಗೊತ್ತಿಲ್ಲದಿದ್ದಲ್ಲಿ ಅಷ್ಟರ ಮಟ್ಟಿಗೆ ಅದರ ಸೌಂದರ್ಯವನ್ನು ನಾವು ಕಳಕೊಂಡಂತೆಯೇ. ಒಳ್ಳೆಯ ರಾಗ, ಒಳ್ಳೆಯ ಸಂಯೋಜನೆ, ಕೇಳಲು ಬಹಳ ಖುಶಿ ಎಂದು ಮುಂತಾಗಿ ಹೇಳಬಹುದೇ ಹೊರತು ನುಡಿಸಿದ ಸಾಹಿತ್ಯದ ಭಾವ ನಮಗರ್ಥವಾಗದು. ಯಾವುದೇ ಭಜನೆ ಇರಬಹುದು, ಗಜಲ್ಗಳಿರಬಹುದು, ಸಿನೆಮಾ ಹಾಡುಗಳಿರಬಹುದು, ಜಾನಪದ ಗೀತೆಗಳಿರಬಹುದು ಅಥವಾ ಇನ್ಯಾವುದೇ ಸಂಗೀತವಿರಬಹುದು ಸಾಹಿತ್ಯ ಅರ್ಥವಾಗದಿದ್ದರೆ ಅದು ಅಪರಿಪೂರ್ಣವೇ.  


ಹಾಗೆಂದು ಇತರ ವಾದ್ಯಗಳ ಸಾಧನೆಯನ್ನು ಕಡೆಗಣಿಸುವಂತಿಲ್ಲ. ಹತ್ತಾರು ಜನ್ಮಗಳ ಸಾಧನೆಯೋ ಎಂಬಂತೆ ಗಂಧರ್ವ ಲೋಕವನ್ನೇ ನಮ್ಮೆದುರು ತಂದು ನಿಲ್ಲಿಸುವವರಿದ್ದಾರೆ. ಅವರೆಲ್ಲರೂ ಸಾಧನೆಯ ದೃಷ್ಟಿಯಿಂದ ಅದ್ಭುತರೇ. ವಾದ್ಯಕಾರರು ನುಡಿಸುವ ಸಾಹಿತ್ಯ ನಮಗೆ ಗೊತ್ತಿದ್ದರೆ ಆ ವಿಚಾರ ಬೇರೆ.  ಇನ್ನೊಂದು ಉದಾಹರಣೆ ಹೇಳುವುದಾದರೆ ತ್ಯಾಗರಾಜರ ಪಂಚರತ್ನ ಕೃತಿಗಳು. ಇವುಗಳನ್ನು ಹಾಡುವಾಗ ಆಗುವ ಆನಂದ ವಾದ್ಯಗಳಲ್ಲಿ ನುಡಿಸುವಾಗ ಆಗಲಾರದು. 'ಎಂದರೋ ಮಹಾನುಭಾವುಲು' ಕೃತಿಯಲ್ಲಿ ಸ್ವರಗಳನ್ನು ಹಾಡಿ ಅದೇ ಸ್ವರಗಳಿಗೆ ಸಾಹಿತ್ಯವನ್ನು ಹಾಡುವ ಸೊಗಸು ವಾದ್ಯಗಳಲ್ಲಿ ಸಿಗದು. ವಾದ್ಯಗಳಲ್ಲಿ ಸ್ವರಗಳನ್ನೇ ಅಥವಾ ಸಾಹಿತ್ಯವನ್ನೇ ಎರಡು ಸಲ ನುಡಿದಂತೆ ಭಾಸವಾಗುತ್ತದೆ. ಅದೇರೀತಿ ಜಾನಪದ ಗೀತೆಗಳು, ಭಾವಗೀತೆಗಳು ಸಾಹಿತ್ಯದ ಹೊರತಾಗಿ ಅನುಭವಿಸುವಂತೆಯೇ ಇಲ್ಲ. ಸಾಹಿತ್ಯದ ಅಗಾಧ ಸಿರಿತನ ಇದರಲ್ಲಡಗಿರುವುದರಿಂದ ಇವೆಲ್ಲವೂ ಗಾಯನಕ್ಕೆ ಮಾತ್ರ ಹೇಳಿ ಮಾಡಿಸಿದಂತಿವೆ.   


ಅಂತೆಯೇ ಪದ್ಯಗಳ ಸಾಹಿತ್ಯ ಅದೆಷ್ಟು ಮಾರ್ಮಿಕವಾಗಿ ಇರುತ್ತದೆ ಎಂದರೆ, ನಾಲ್ಕೈದು ಚರಣಗಳ ಪದ್ಯಗಳಲ್ಲಿ ಕೊನೆಯ ಒಂದು ಚರಣದ ಪಂಚ್ ಅಥವಾ ರೋಮಾಂಚನವಾಗುವ ತಿರುವುಗಳು ಬಹಳ ಸುಖ ಕೊಡುತ್ತವೆ. ಅದೆಲ್ಲವನ್ನು ಹಾಡುಗಾರಿಕೆ ಮಾತ್ರ ನೀಡಬಲ್ಲುದು. ಕನಕದಾಸರ, ಪುರಂದರದಾಸರ ಪದ್ಯಗಳು ಬಹುತೇಕ ಕೊನೆಯ ಚರಣದವರೆಗೂ ಕುತೂಹಲವನ್ನು ಕಾಪಿಡುವಂಥವು. ಸಾಹಿತ್ಯದ ಹೊರತಾಗಿ ಇದನ್ನು ಅನುಭವಿಸುವುದು ಕಷ್ಟವೇ. ನಾವು ಚಿಕ್ಕವರಿರುವಾಗ ರೇಡಿಯೋಗಳಲ್ಲಿ ಹೆಚ್ಚಾಗಿ ಕನ್ನಡ ಪದ್ಯಗಳನ್ನೇ ಕೇಳುತ್ತಿದ್ದೆವು. ಹಿಂದಿ ಅರ್ಥವಾಗದೆಂದು ಅದರ ಗೊಡವೆಗೇ ಹೋಗುತ್ತಿರಲಿಲ್ಲ. ಕ್ರಮೇಣ ದೊಡ್ಡವರಾಗುತ್ತಿದ್ದಂತೆ ಹಿಂದಿ ಪದ್ಯಗಳ ಆಕರ್ಷಣೆ ಜಾಸ್ತಿಯಾಗಿ ಹಲವಾರು ಪದ್ಯಗಳು ಬಾಯಿಪಾಠ ಆಗಿದ್ದವು ಕೇಳಿ ಕೇಳಿ. ಆಗ ಬರಿದೆ ಕಿವಿಗಳಿಗೆ ಇಂಪಾಗುತ್ತಿತ್ತೇ ವಿನಹ ಅರ್ಥವಾಗುತ್ತಿರಲಿಲ್ಲ. ಆದರೆ ಈಗ ಅದರ ಸಾಹಿತ್ಯ ಅರ್ಥವಾಗುವಾಗ ಅದರ ಸೌಂದರ್ಯರ್ಯವನ್ನು ವರ್ಣಿಸಲು ಸಾಧ್ಯವೇ? ಎಷ್ಟೊಂದು ಶ್ರೀಮಂತ ಸಾಹಿತ್ಯವನ್ನು ನಾವು ಕಳಕೊಂಡಿದ್ದೆವು ಎಂಬ ಅರಿವು ಅದು ಅರ್ಥವಾದಾಗ ಮಾತ್ರ ತಿಳಿಯುವಂಥದ್ದು. ಅದೇ ರೀತಿ ಪಂಕಜ್ ಉದಾಸ್, ಜಗಜಿತ್ ಸಿಂಗ್ ಮುಂತಾದವರು ಹಾಡುವ ಗಜಲ್ ಗಳ ಅರ್ಥ ನಮಗಾದರೆ ಮಾತ್ರ ನಮಗೆ ಆ ಹಾಡಿನ ಪೂರ್ಣ ಆನಂದ ದೊರಕುವುದು. ಅದಕ್ಕೆಂದೇ ನನಗನಿಸುವುದು ಸಂಗೀತ ಪರಿಪೂರ್ಣ ಆನಂದ ಅಥವಾ ಸುಖ ಸಿಗುವುದು ಹಾಡುಗಾರಿಕೆಯಲ್ಲಿ ಮಾತ್ರ. ಹೇಗೆ ಯಕ್ಷಗಾನ ಎನ್ನುವಂಥದ್ದು ಒಂದು ಪರಿಪೂರ್ಣ ಕಲೆಯೋ ಅದೇ ರೀತಿ ಸಂಗೀತವನ್ನು ಹಾಡುವಂಥ ಹಾಡುಗಾರ ಪರಿಪೂರ್ಣ ಸಂಗೀತಗಾರ ಎನಿಸಲಾರದೆ..? 

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top