ಯಶಸ್ಸು ನಾವು ಅದನ್ನು ಎಷ್ಟು ಶ್ರಮದಿಂದ ಸಾಧಿಸಲು ಬಯಸುತ್ತೇವೆ ಎಂಬುದರ ಮೇಲೆ ಅವಲಂಬಿತ: ಕಾರ್ಗಿಲ್ ವೀರ ಯೋಧ ನವೀನ್ ನಾಗಪ್ಪ

Upayuktha
0

‘ಆಳ್ವಾಸ್ ಆಗಮನ 2021-22’  ನಾಲ್ಕನೇ ದಿನದ ಕಾರ್ಯಕ್ರಮ


ಮೂಡುಬಿದಿರೆ: ನಮ್ಮ ಮನಸ್ಸನ್ನು ಗುರಿಯೆಡೆಗೆ ಕೇಂದ್ರೀಕರಿಸಿ ಕಾರ್ಯಪ್ರವೃತ್ತರಾದರೆ ಈ ಜನತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ. ಯಶಸ್ಸು ನಾವು ಅದನ್ನು ಎಷ್ಟು ಶ್ರಮದಿಂದ ಸಾಧಿಸಲು ಬಯಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಕಾರ್ಗಿಲ್ ವೀರ ಯೋಧ ನವೀನ್ ನಾಗಪ್ಪ ತಿಳಿಸಿದರು.  


ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶಾತಿ ಕಾರ್ಯಕ್ರಮ - ‘ಆಳ್ವಾಸ್ ಆಗಮನ 2021-22’ ರ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 


ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಏನನ್ನು ಸಾಧಿಸಲು ಬಯುಸುತ್ತೀರಿ ಎಂಬುದನ್ನು ಈಗಲೇ ನಿರ್ಧರಿಸಿ. ಆ ಗುರಿಯನ್ನು ಸಾಧಿಸಲು ತನ್ನಿಂದ ಅಸಾಧ್ಯ ಎಂಬ ಭಾವನೆ ಎಂತಹ ಪರಿಸ್ಥಿತಿಯಲ್ಲೂ ಬರಕೂಡದು. ನಿಮ್ಮ ಅಧಮ್ಯ ಶಕ್ತಿಯ ಮೇಲೆ ನಿಮಗೆ ನಂಬಿಕೆ ಇರಲಿ ಎಂದರು.  


ತಾನು ಇಂಜಿನಿಯರಿಂಗ್ ಮುಗಿಸಿ ಭಾರತೀಯ ಸೈನ್ಯಕ್ಕೆ ಅಧಿಕಾರಿಯಾಗಿ ಸೇರ್ಪಡೆಗೊಂಡಾಗ ಹಲವರು ತನ್ನ ಆಯ್ಕೆಯನ್ನು ಹೆದರಿಸಿ ಮೂದಲಿಸಿದವರಿಗೆ ತಾನು ಸೈನ್ಯ ಸೇರಿ ಹಣ, ಐಶ್ವರ್ಯ, ಅಂತಸ್ತನ್ನು ಸಂಪದಿಸುತ್ತೇನೋ ಗೊತ್ತಿಲ್ಲ. ಆದರೆ ಭಾರತ ಮಾತೆಗೆ ಸೇವೆ ಮಾಡುವ ಅವಕಾಶ ದೊರೆತು ತನ್ನ ಬಳಿಯಲ್ಲಿ ಕೆಲಸ ಮಾಡುವ 100 ಸೈನಿಕರಿಂದ ಸೆಲ್ಯೂಟ್‌ನ್ನು ಪಡೆಯಲು ಹೆಮ್ಮೆ ಪಡುತ್ತೇನೆ ಎಂದು ತಿರುಗೇಟು ನೀಡಿದ ಪ್ರಸಂಗವನ್ನು ನೆನಪಿಸಿಕೊಂಡರು.  


ನಂತರ ಕಾರ್ಗಿಲ್ ಯುದ್ಧದಲ್ಲಿ ಹೇಗೆ ಭಾರತೀಯ ಸೇನೆ ಪಾಕಿಸ್ಥಾನಿ ಸೈನಿಕರನ್ನು ಹಿಮ್ಮೆಟ್ಟಿಸಿ ವಿಜಯ ಸಾಧಿಸಿತು. ಆ ಯುದ್ಧದಲ್ಲಿ ತನ್ನ ಪಾತ್ರದ ಕುರಿತು ವಿವರಿಸಿದರು. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನು ಹೊಂದಿದ 527 ವೀರ ಯೋಧರು ಹಾಗೂ ಯುದ್ಧದಲ್ಲಿ ಗಂಭೀರ ಗಾಯಗೊಂಡ 1300ಕ್ಕೂ ಅಧಿಕ ಸೈನಿಕರಿಗೆ ನಮ್ಮ ಚಪ್ಪಾಳೆ ಸದಾ ಸಲ್ಲಬೇಕು ಎಂದರು.  


ಭಾರತೀಯ ಸೇನೆ ಕಾರ್ಗಿಲ್‌ ಯುದ್ಧದಲ್ಲಿ ಜಯಿಸಿದ್ದು, ಭಾರತೀಯ ಪಡೆಯಲ್ಲಿ ಸೈನಿಕರ ಸಂಖ್ಯೆ ಅಧಿಕವಿತ್ತು ಎಂಬ ಕಾರಣ ಒಂದೇ ಅಲ್ಲ. ಆದರೆ ಭಾರತ ಎಂದೂ ನೈತಿಕ ಮಾರ್ಗವನ್ನು ಬಿಟ್ಟು ಕರ‍್ಯಪ್ರವೃತ್ತರಾಗಿರಲಿಲ್ಲ ಎಂದರು 


ಭೌಗೋಳಿಕವಾಗಿ ಅತೀ ಚಿಕ್ಕ ರಾಷ್ಟ್ರವಾದ ಇಸ್ರೇಲ್, ಸೇನೆಯ ನೆಲೆಯಲ್ಲಿ ಬಲಿಷ್ಠವಾಗಿದೆ. ಆದರೆ ಭೌಗೋಳಿಕವಾಗಿ, ಆರ್ಥಿಕವಾಗಿ, ತಾಂತ್ರಿಕವಾಗಿ ಭಾರತ ಸದೃಡವಾಗುತ್ತಿದ್ದರೂ, ಇನ್ನೂ ಶಸ್ತ್ರಾಸ್ತ್ರಗಳನ್ನುಗಳನ್ನು ಪಾಶ್ಚಿಮಾತ್ಯ ದೇಶದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಏಕೆ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ‘ನಾವು ಭಾರತೀಯರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು’ ಎಂದರು.  


ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯ ಯುವಜನತೆ ದೇಶ ಸೇವೆ ಮಾಡಲು ಮುಂದೆ ಬರುವಂತಾಗಲೂ, ಹುಬ್ಬಳ್ಳಿ ಅಥವಾ ಬೆಂಗಳೂರಿನಲ್ಲಿ ಆರ್ಮಿ ಟ್ರೆನಿಂಗ್ ಸೆಂಟರ್‌ನ್ನು ತೆರೆದು, ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡುವ ಹಂಬಲವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಇಂದ್ರಜಾ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top