|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭವಿಷ್ಯದ ಆಹಾರ ಭದ್ರತೆಯ ಆಗರ- ಕೀಟಸಾಗರ

ಭವಿಷ್ಯದ ಆಹಾರ ಭದ್ರತೆಯ ಆಗರ- ಕೀಟಸಾಗರ

 ವಿಶ್ವ ಆಹಾರ ದಿನ- 16 ಅಕ್ಟೋಬರ್ 2021



ಪ್ರಪಂಚದ ಶೇ. 70 ಕೃಷಿ ಭೂಮಿಯು ಈಗಾಗಲೇ ನೇರವಾಗಿ ಅಥವಾ ಪರೋಕ್ಷವಾಗಿ ಮಾಂಸ ಉತ್ಪಾದನೆಗೆ ಮೀಸಲಾಗಿದೆ. ಹೆಚ್ಚಾಗುತ್ತಿರುವ ವಿಶ್ವ ಜನಸಂಖ್ಯೆ ಮತ್ತು ಗ್ರಾಹಕರ ಬೇಡಿಕೆಗೆ ಭವಿಷ್ಯದಲ್ಲಿ ನಾವು ಇನ್ನೂ ಹೆಚ್ಚು ಪ್ರಾಣಿ ಪ್ರೋಟೀನ್ ಉತ್ಪಾದಿಸಬಹುದೇ? ತುರ್ತಾಗಿ ನಾವು ಪರ್ಯಾಯ ಪ್ರೋಟೀನ್ ಮೂಲಗಳನ್ನು ಗುರುತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಪಂಚದ ಮೇಲಿನ ಕೋಟ್ಯಾಂತರ ಹಸಿದ ಬಾಯಿಗಳಿಗೆ ಮುಂದಿನ ದಿನಗಳಲ್ಲಿ ಹಸಿವ ತಣಿಸ ಬಲ್ಲುದೇ ಕೀಟ ಜಗತ್ತು? ಹೌದೆನ್ನುತ್ತಾರೆ ವಿಜ್ಞಾನಿಗಳು. 2050ರ ಹೊತ್ತಿಗೆ ಭೂ ಗ್ರಹವು ಒಂಬತ್ತು ಬಿಲಿಯನ್ ಜನರಿಂದ ತುಂಬುತ್ತದೆ. ಕಡಿಮೆ ಹಾಗೂ ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಆರ್ಥಿಕತೆ ಹಾಗೂ ಜನಸಂಖ್ಯೆ ಬೆಳೆದಂತೆ ಪ್ರಾಣಿ ಉತ್ಪನ್ನಗಳ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಶತಕೋಟಿ ಹಸಿದ ಬಾಯಿಗಳಿಗೆ ಸಾಕಷ್ಟು ಪ್ರೋಟಿನ್ ಉತ್ಪಾದಿಸುವ ಗುರಿ ನಮ್ಮ ಮುಂದಿದೆ.


ಪ್ರಸ್ತುತ ಇರುವ ಜಾನುವಾರು ಉದ್ಯಮವನ್ನು ಇನ್ನು ಹೆಚ್ಚಿಸುವುದು ಖಂಡಿತ ಪರಿಹಾರವಾಗಿ ಕಾಣುತ್ತಿಲ್ಲ. ಏಕೆಂದರೆ ಪ್ರಸ್ತುತ ಆ ಉದ್ಯಮವು ಅತಿ ಹೆಚ್ಚು ನೀರು ಹಾಗೂ ಭೂಮಿಯನ್ನು ಬೇಡುತ್ತಿದ್ದು, ಪ್ರಾಣಿ ತ್ಯಾಜ್ಯ ಹಾಗೂ ಬಳಕೆಯಾಗುತ್ತಿರುವ ಔಷಧಿಗಳು ಜಲಮೂಲಗಳನ್ನು ಕಶ್ಮಲಗೊಳಿಸುತ್ತಿವೆ. ಈ ಉದ್ಯಮದಿಂದ ಹೊರಸೂಸುತ್ತಿರುವ ಹಲವು ಅನಿಲಗಳು ವಾತಾವರಣಕ್ಕೆ ಮಾರಕವಾಗಿ ಪರಿಣಮಿಸಿವೆ. ಇದಕ್ಕೆಲ್ಲಾ ಪರಿಹಾರವೆಂದರೆ ಕೀಟ ಭಕ್ಷಣೆಯೊಂದೇ ಪರಿಹಾರವೆನ್ನುತ್ತಾರೆ ಕೀಟ ವಿಜ್ಞಾನಿಗಳು. ಕೀಟಗಳು ಅಧಿಕ ಪ್ರೋಟೀನ್ ನಿಂದ ಕೂಡಿದ್ದು, ಕಬ್ಬಿಣ ಮತ್ತು ಸತುವಿನಂತಹ ಸೂಕ್ಷ್ಮ ಪೋಶಕಾಂಶಗಳಿಂದ ಸಮೃದ್ದವಾಗಿವೆ. ಕೀಟಗಳನ್ನು ಬೆಳೆಸಲು ಅಧಿಕ ಜಾಗದ ಅವಶ್ಯಕತೆ ಇಲ್ಲ. ಹೆಚ್ಚು ಹಸಿರು ಮನೆ ಅನಿಲಗಳನ್ನು ಹೊರಸೂಸುವುದಿಲ್ಲ. ಸುಮಾರು ಒಂದು ಕೆಜಿ ಗೋಮಾಂಸದಲ್ಲಿ ದೊರೆಯುವ ಪ್ರೋಟೀನ್‌ಗಿಂತ 12 ಪಟ್ಟು ಅಧಿಕ ಪ್ರೋಟೀನ್ ಚಿಮ್ಮಂಡೆ (ಛರಿಚಕೆತ) ಕೀಟಗಳಿಂದ ದೊರೆಯುತ್ತದೆ. ಕೆಲವು ಕೀಟಗಳು ಬರಸಹಿಷ್ಣುತೆಯನ್ನು ಹೊಂದಿದ್ದು ಅವುಗಳ ಉತ್ಪಾದನೆಗೆ ಆಕಳು, ಹಂದಿ ಅಥವಾ ಕುಕ್ಕುಟ ಉದ್ಯಮಕ್ಕಿಂತ ಕಡಿಮೆ ನೀರನ್ನು ಬೇಡುತ್ತವೆ. ಕೀಟ ಆಹಾರವು ಜಾನುವಾರು ಉದ್ಯಮದಲ್ಲಿ ಅವಲಂಬಿಸಿರುವ ಸೋಯಾಬೀನ್ ಮೀಲ್ ಅಥವಾ ಫಿಶ್ ಮೀಲ್ ಗಳನ್ನು ಬದಲಿಸಬಹುದು. ಹೀಗೆ ಆಗುವುದರಿಂದ ಜಾನುವಾರು ಉತ್ಪನ್ಬಗಳ ಬೆಲೆ ಕಡಿಮೆ ಆಗುತ್ತದೆ ಮತ್ತು ಮಾನವ ಬಳಕೆಗೆ ಆಹಾರ ಬೆಳೆಗಳು ಲಭ್ಯವಾಗುತ್ತವೆ. ಕೀಟಸಾಕಣೆಯಿಂದ ತ್ಯಾಜ್ಯಗಳು ಕಡಿಮೆಯಾಗಿ ಹಾಗು ಮರುಬಳಕೆಯಾಗಿ ಪ್ರಪಂಚದ ಪ್ರೋಟೀನ್ ಪೂರ್ಯಕೆಯನ್ನು ಹೆಚ್ಚಿಸಬಹುದು.  


ಪ್ರಸ್ತುತ ಪ್ರಪಂಚದಾದ್ಯಂತ ಕನಿಷ್ಠ ಎರಡು ಬಿಲಿಯನ್ ಜನ ಕೀಟಾಹಾರಕ್ಕೆ ಒಗ್ಗಿ ಹೋಗಿದ್ದಾರೆ ಎನ್ನುತ್ತದೆ ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ. ಪ್ರಸ್ತುತ ಕೀಟ ಆಹಾರ ಖಾದ್ಯಗಳ ಪಟ್ಟಿಯಲ್ಲಿ ನೀರೂರಿಸುವ 1900 ಖಾದ್ಯಗಳು ಇವೆ. ಹಳದಿ ಜಾಕೆಟ್ ಕಣಜಗಳ ಮರಿಗಳು ಜಪಾನ್ ನಲ್ಲಿ ಜನಪ್ರಿಯವಾದರೆ, ಚಿಮ್ಮಂಡೆಗಳು ಮಲಾವಿಯಲ್ಲಿ, ನೇಕಾರ ಇರುವೆಗಳು ಥೈಲ್ಯಾಂಡ್ನಲ್ಲಿ, ಗೆದ್ದಲುಗಳನ್ನು ಆಫ್ರಿಕನ್ ರಾಷ್ಟ್ರಗಳಲ್ಲಿ ಪ್ರಿಯವಾದ ಆಹಾರವಾಗಿ ಸೇವಿಸುತ್ತಾರೆ. ಕೆಂಪಿರುವೆಗಳು ನಮ್ಮ ರಾಜ್ಯದಲ್ಲಿಯೂ ಹಲವರ ಆಹಾರ. ಚಿಗಳಿ ಚಟ್ನಿ ಮಲೆನಾಡಿನ ಹಲವರ ಮಳೆಗಾಲದ ಖಾದ್ಯ. ಜಾಗತಿಕವಾಗಿ 1500-2000 ಕೀಟಗಳನ್ನು ಖಾದ್ಯ ಕೀಟವಾಗಿ ಬಳಕೆ ಮಾಡಲಾಗುತ್ತಿದೆ. ಈ ಪ್ರಭೇದಗಳಲ್ಲಿ 235 ಚಿಟ್ಟೆಗಳು ಮತ್ತು ಪತಂಗಗಳು, 344 ಜೀರುಂಡೆಗಳು, 313 ಇರುವೆಗಳು, ಜೇನು ನೊಣಗಳು ಮತ್ತು ಕಣಜಗಳು, 239 ಮಿಡತೆಗಳು, ಕ್ರಿಕೆಟ್ ಗಳು ಮತ್ತು ಜಿರಲೆಗಳು, 39 ಗೆದ್ದಲುಗಳು ಮತ್ತು 20 ಡ್ರಾಗನ್ ಪ್ಲೈಗಳು ಮತ್ತು ಜೀರುಂಡೆಗಳು ಸೇರಿವೆ. ಸ್ವಿಜರ್‌ಲ್ಯಾಂಡ್‍ನಂತಹ ಹಲವು ದೇಶಗಳು ಹಲವಾರು ಆಹಾರ ಕೀಟಗಳನ್ನು ಅಧಿಕೃತವಾಗಿ ಘೋಷಿಸಿವೆ.



   


ಪಶು ಆಹಾರಕ್ಕಾಗಿ ಕೀಟಗಳನ್ನು ಉತ್ಪಾದಿಸುವ ಅಗ್ರಿ ಪ್ರೊಟಿನ್ ಎಂಬ ಸಂಸ್ಥೆಯೊಂದು ಪ್ರತಿ ದಿನ 24 ಟನ್ ಕೀಡೆಗಳು ಮತ್ತು ಏಳು ಟನ್ ಮ್ಯಾಗೊಟ್ ಮತ್ತು ಮ್ಯಾಗ್ ಮೀಲ್ ತಯಾರಿಸುತ್ತದೆ. 


ಕೆಲವು ಕೀಟಗಳು ಅತಿ ವಿಷವನ್ನು ಹೊದಿರುತ್ತವೆ. ಕೆಲವು ಬಾರಿ ಶಿಲೀಂದ್ರಗಳಿಂದ ಕಲುಷಿತ ಆಹಾರ ಸೇವಿಸಿರಬಹುದು. ಕೆಲವು ಹಾನಿಕಾರಕ ಬ್ಯಾಕ್ಟೀರಿಯಾ ಅಥವಾ ಜಾನುವಾರು ಔಷಧಿಗಳನ್ನು ಒಳಗೊಂಡಿರಬಹುದು. ಕೆಲವು ಸೀಸ, ಕ್ಯಾಡ್ಮಿಯಂ ಅಂತಹ ಲೋಹಗಳನ್ನು ದೇಹದಲ್ಲಿ ಹೊಂದಿರಬಹುದು. ಇದೆಲ್ಲವನ್ನು ಸೇವಿಸುವ ಮೊದಲೇ ಖಾತ್ರಿ ಪಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಉತ್ತಮ ಆಹಾರ ಕೀಟಗಳನ್ನು ಉತ್ಪಾದಿಸಲು ತಂತ್ರಜ್ಞಾನ ಹಾಗೂ ಹಣಕಾಸಿನ ಕೊರತೆ, ತಾಪಮಾನ ನಿಯಂತ್ರಣ ವ್ಯವಸ್ಥೆ ಮೊದಲಾದ ಕ್ಷೇತ್ರಗಳಲ್ಲಿ ಸುಧಾರಣೆ ಆದರೆ ಮುಂದಿನ ದಿನಗಳಲ್ಲಿ ಕೀಟಗಳು ನಮ್ಮ ಪ್ರೋಟೀನ್ ಕೊರತೆ ನೀಗಿಸಿ ಆಹಾರ ಭದ್ರತೆ ನೀಡುವುದರಲ್ಲಿ ಸಂಶಯವಿಲ್ಲ.

-ಡಾ. ಬದರಿಪ್ರಸಾದ್ ಪಿ. ಆರ್

ವಿಜ್ಞಾನಿ (ಕೀಟಶಾಸ್ತ್ರ)

ಕೃಷಿ ಮಹಾವಿದ್ಯಾಲಯ

ಗಂಗಾವತಿ, ಕೊಪ್ಪಳ ಜಿಲ್ಲೆ

9900145705


ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم