ಮಂಗಳಗಂಗೋತ್ರಿ: ಎಲುಬಿಲ್ಲದ ನಾಲಿಗೆ ಏನು ಬೇಕಿದ್ದರೂ ಮಾತಾಡಬಹುದು, ಆದರೆ ಮಾತನಾಡುವವನು ಸಂವೇದನಾಶೀಲನಾಗಿದ್ದಾಗ ಪ್ರತಿ ಮಾತು ಕೂಡ ಶ್ಲೋಕವಾಗುತ್ತದೆ ಎಂಬುದಕ್ಕೆ ವಾಲ್ಮೀಕಿಯ ರಾಮಾಯಣವೇ ಸಾಕ್ಷಿ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಪಿ.ಎಸ್ ಯಡಪಡಿತ್ತಾಯ ಹೇಳಿದರು.
ಅವರು ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳೂರು ವಿವಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಹುಟ್ಟಿನಿಂದ ಯಾರೂ ದೊಡ್ಡವರಾಗುವುದಿಲ್ಲ. ಅವರವರು ಮಾಡಿದ ಸಾಧನೆಯಿಂದ ಮಾತ್ರ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ಬೇಡನಾಗಿದ್ದ ವಾಲ್ಮೀಕಿ ಸತ್ಯವನ್ನು ಅರಿತು ಮನಃಪರಿವರ್ತನೆಗೆ ಒಳಗಾಗಿ ಮಹಾನ್ ಕವಿ ಆದದ್ದು ʼಯೋಗ್ಯತೆಗೆ ಯಾವತ್ತೂ ಗೌರವವಿದೆʼ ಎನ್ನುವುದಕ್ಕೆ ಸಾಕ್ಷಿ, ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ಸೋಮಣ್ಣ ಹೊಂಗಳ್ಳಿ, ರಾಮಾಯಣವು ಇಡೀ ಭಾರತವನ್ನು ಆವರಿಸಿಕೊಂಡಿದೆ. ಜಾನಪದ ಮೂಲದಿಂದ ತೊಡಗಿ ಶಿಷ್ಠ ಪರಂಪರೆಯವರೆಗೆ ಹಲವು ರಾಮಾಯಣಗಳು ರಚನೆಗೊಂಡಿದ್ದು ಪ್ರಾದೇಶಿಕ ಭಾಷೆಗಳಲ್ಲೂ ಹಲವು ರಾಮಾಯಣಗಳು ಬಂದಿವೆ. ಎಲ್ಲ ರಾಮಾಯಣಗಳಿಗೂ ವಾಲ್ಮೀಕಿ ರಾಮಾಯಣವೇ ಮೂಲ, ಎಂದು ಹೇಳಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಮಾತನಾಡಿ, ನಿಜವಾದ ನೋವು ಕಾಡದೆ, ಕಾಣದೆ ಕಾವ್ಯ ಹುಟ್ಟುವುದಿಲ್ಲ ಎಂಬುದಕ್ಕೆ ರಾಮಾಯಣವೇ ಸಾಕ್ಷಿ. ನಮ್ಮೊಳಗಿನ ವಿಷಯಾಸಕ್ತಿಗಳನ್ನು ಮೀರಿದಾಗ ರಾಮನ ವ್ಯಕ್ತಿತ್ವ ಅರ್ಥವಾಗುತ್ತದೆ ಎಂದರು. ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಯಶು ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ನಮನಗಳನ್ನು ಸಮರ್ಪಿಸಲಾಯಿತು. ವಿವಿಧ ಪೀಠಗಳ ಸಂಶೋಧನಾ ಸಹಾಯಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ