|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅವಿಭಕ್ತ ಕುಟುಂಬ- ಭಾರತದ ಅಸ್ಮಿತೆ

ಅವಿಭಕ್ತ ಕುಟುಂಬ- ಭಾರತದ ಅಸ್ಮಿತೆಅವಿಭಕ್ತ ಕುಟುಂಬ.. ಇದು ಭಾರತದ ಅಸ್ಮಿತೆ. ಭಾರತೀಯ ಸಂಸ್ಕೃತಿ ಉಳಿದದ್ದೇ ಈ ಅವಿಭಕ್ತ ಕುಟುಂಬದ ಕಲ್ಪನೆಯಿಂದ. ಯಾವಾಗ ಈ ಕಲ್ಪನೆಗೆ ವಿರೋಧವಾಗಿ ಜನರ ವ್ಯವಹಾರಗಳು ಪ್ರಾರಂಭವಾದವೋ ಅಲ್ಲಿಗೆ ಭಾರತೀಯತೆಗೆ ಚ್ಯುತಿ ಬರಲಾರಂಭಿಸಿತೆಂದೇ ತಿಳಿಯಬೇಕಾಗುತ್ತದೆ. ಏನು ಇದು ಅವಿಭಕ್ತ ಕುಟುಂಬ.?  ತಂದೆ, ತಾಯಿ, ಮಕ್ಕಳು, ಅಜ್ಜ, ಅಜ್ಜಿ, ಮೊಮ್ಮಕ್ಕಳು ಇತ್ಯಾದಿ ಎಲ್ಲರೂ ಒಟ್ಟಿಗೆ ಒಂದೇ ಸೂರಿನಡಿ ಬದುಕುತ್ತಿರುವ ಸುಂದರ ವ್ಯವಸ್ಥೆಗೇ ಅವಿಭಕ್ತ ಕುಟುಂಬ ಎನ್ನುವುದು. 


ಅವಿಭಕ್ತ ಕುಟುಂಬದೊಳಗೆ ಬೆಳೆದಂಥ ಒಂದು ಮಗು ದೊಡ್ಡವನಾದಾಗ ಅಥವಾ ದೊಡ್ಡವಳಾದಾಗ ಕಲಿಯುವ ಪಾಠಗಳು ಯಾವ ಶಾಲೆಯೂ ನೀಡದಷ್ಟಿರುತ್ತದೆ. ಪರಸ್ಪರ ಹೊಂದಾಣಿಕೆ, ಹಂಚಿ ತಿನ್ನುವ ಗುಣ, ನಿಸ್ವಾರ್ಥದ ಭಾವ, ಸುಖ ಕಷ್ಟದ ಅರಿವು, ಸಂಸ್ಕಾರ, ಜತೆಗೆ ಹಿರಿಯರಿಂದ ದೊರಕುವ ಅನುಭವಗಳು ಇವೆಲ್ಲವೂ ಅವಿಭಕ್ತ ಕುಟುಂಬದ ಅನನ್ಯ ಕೊಡುಗೆಯೇ ಆಗಿರುತ್ತದೆ. ಅದರ ಜತೆಗೇ ಸಾಕುಪ್ರಾಣಿಗಳಾದ ದನ ಕರು, ಬೆಕ್ಕು, ನಾಯಿ ಇತ್ಯಾದಿ ಪ್ರಾಣಿಗಳೊಡನೆ ಪ್ರೀತಿಯ ಸಂಬಂಧದ ಪರಿಚಯವೂ ಆಗುತ್ತದೆ. ಇದೆಲ್ಲವೂ ಬಾಲ್ಯದಲ್ಲಿಯೇ ಮಗುವಿಗೆ ದೊರೆತರೆ ಆ ಮಗು ಮುಂದೆ ಉತ್ತಮ ಪ್ರಜೆಯಾಗುವುದರಲ್ಲಿ ಸಂಶಯವೇ ಇಲ್ಲ.  


ನಾವು ಒಂದು ಮನೆಗೆ ಹೋದಾಗ ಬೊಗಳುವ ನಾಯಿಗಳಿರಬೇಕು. ಮನೆಯೊಳಗೆ ಆಡುವ, ಅಳುವ ಮಕ್ಕಳಿರಬೇಕು. ಗೋಡೆಗಳಿಗೆ ಕಡ್ಡಿಗಳಿಂದ ಗೀಚಿದ ಗೀರುಗಳಿರಬೇಕು. ಮಕ್ಕಳಾಟಿಕೆ ಕಸ ಕಡ್ಡಿಗಳು ತುಂಬಿರಬೇಕು.  ಕೆಮ್ಮುತ್ತಿರುವ ವೃದ್ಧರಿರಬೇಕು. ಕಾಲ್ಗೆಜ್ಜೆ ಸಪ್ಪಳ ಮಾಡುತ್ತಿರುವ ಗೃಹಿಣಿ ಇರಬೇಕು. ಅಂಬಾ ಹೇಳುವ ದನಕರುಗಳ ಹಟ್ಟಿ ಇರಬೇಕು. ಹಟ್ಟಿಯಿಂದ ಗೊಬ್ಬರದ ಪರಿಮಳ ಬರುತ್ತಿರಬೇಕು. ಮಿಯಾವ್ ಎನ್ನುವ ಬೆಕ್ಕುಗಳಿರಬೇಕು. ಆಳುಕಾಳುಗಳು ಕೆಲಸ ಮಾಡುತ್ತಿರಬೇಕು. ಅಲ್ಲಲ್ಲಿ ಭತ್ತ, ಹುಲ್ಲು, ತೆಂಗು, ಅಡಿಕೆ ರಾಶಿಗಳು ಅಂಗಳದಲ್ಲಿ ಇರಬೇಕು. ಸೊಳ್ಳೆ ಓಡಿಸಲೆಂದು ಹಾಕಿದಂಥ ಹೊಗೆಯು ಮೇಲೇರುತ್ತಿರಬೇಕು. ಮಳೆಗಾಲವಾದರೆ ಅಲ್ಲಲ್ಲಿ ಸೋರುತ್ತಿರಬೇಕು. ನೀರು ಸೋರುವಲ್ಲಿ ಪಾತ್ರೆಗಳನ್ನು ಇಟ್ಟಿರಬೇಕು. ಇದೆಲ್ಲವನ್ನೂ ನೋಡಿಕೊಳ್ಳುತ್ತಿರುವ ಒಬ್ಬ ಯಜಮಾನನಿರಬೇಕು... ಇಷ್ಟೆಲ್ಲ ವ್ಯವಸ್ಥೆ ಇದ್ದಾಗಲೇ ಅದು ಅವಿಭಕ್ತ ಕುಟುಂಬ ಎನಿಸುವುದು.


ಒಂದು ಕಾಲದಲ್ಲಿ ಹಳ್ಳಿಗಳೆಂದರೆ ಇಂತಿರುವ ಕುಟುಂಬಗಳೇ ಇರುತ್ತಿದ್ದವು. ಆದ್ದರಿಂದ ಯಾರಿಗೂ ಒಂಟಿತನ ಕಾಡುತ್ತಿರಲಿಲ್ಲ. ಭದ್ರತೆಗೆ ಕೊರತೆ ಇರಲಿಲ್ಲ. ಸಾವು ಮುಂತಾದ ಅನಪೇಕ್ಷಿತ ಘಟನೆಗಳು ಸಂಭವಿಸಿದಾಗ ದುಃಖಾತಿರೇಕಗಳಿಗೆ ಸಾಂತ್ವನ ಹೇಳುವಂಥವರು ಜತೆಗೇ ಇರುವುದರಿಂದ ನೋವುಗಳು ಶಾಶ್ವತವಾಗಿರುತ್ತಿರಲಿಲ್ಲ. ಎಲ್ಲ ವಯೋಮಾನದವರೂ ಪರಸ್ಪರ ಸಂಪರ್ಕದಲ್ಲಿರುವುದರಿಂದ ಯಾರ್ಯಾರೊಡನೆ ಯಾವ ಯಾವ ರೀತಿಯಲ್ಲಿ ವರ್ತಿಸಬೇಕೆನ್ನುವ ಪಾಠಕ್ಕೂ ಕೊರತೆ ಇರಲಿಲ್ಲ. ಎಲ್ಲರೂ ಅವರವರ ಪಾಲಿಗೆ ಬಂದಂಥ ಕೆಲಸಗಳನ್ನು ಮಾಡಲೇಬೇಕಾದುದರಿಂದ ಯಾವ ಕೆಲಸಗಳೂ ಬಾಕಿಯಾಗುತ್ತಿರಲಿಲ್ಲ. ಅಂಥ ಸುಂದರ ವ್ಯವಸ್ಥೆ ಯಾಕೆ ಬೇಡವಾಯಿತು? ಇವತ್ತಿನ ಅತಂತ್ರ ಸ್ಥಿತಿಗೆ ಕಾರಣರಾರು? ಮುಂದೆ ಇದು ಯಾವ ಮಟ್ಟಕ್ಕೆ ಮುಟ್ಟಬಹುದು? ಗೊತ್ತಿಲ್ಲ.. ಕಾಲವೇ ಉತ್ತರಿಸಬೇಕು.  


ಆದರೆ ಇದರಲ್ಲಿ ನಮ್ಮ ಪಾಲು ಬಹಳವಾಗಿದೆ. ಮಾನವ ಹೆಚ್ಚು ಹೆಚ್ಚು ಶಾಲಾ ವಿದ್ಯಾಭ್ಯಾಸ ಕಲಿತಂತೆ ಸ್ವಾತಂತ್ರ್ಯದ ಕಲ್ಪನೆಯ ದಿಕ್ಕು ಬದಲಾಯಿತು. ಅವಿಭಕ್ತ ಕುಟುಂಬದಲ್ಲಿ ಎಲ್ಲವೂ ಅನುಕೂಲವಾಗಿಯೇ ಇರುತ್ತದೆ ಎಂದಿಲ್ಲ. ಕೆಲವೊಮ್ಮೆ ಅತಿಯಾದ ಸ್ವಾತಂತ್ರ್ಯ ಬಯಸುವವರಿಗೆ ಕಿರಿ ಕಿರಿಯೂ ಆಗುವುದಿದೆ. ಆದರೆ ಮಾನವನ ಸರ್ವತೋಮುಖದ ಅಭಿವೃದ್ಧಿಗೆ ಇದನ್ನು ಸಹಿಸಲೇಬೇಕು. ಅದರ ಜತೆ ಜತೆಗೆ ಕುಟುಂಬ ಯೋಜನೆ ಎಂಬ ಪರಿಕಲ್ಪನೆ ಅವಿಭಕ್ತತೆಗೆ ಮಾರಕವಾಯಿತು. ಬರಬರುತ್ತ ಮಾನವನು ದನಕರುಗಳ ಸಾಕಣೆಯನ್ನು ಕಷ್ಟವೆಂದು ಬಿಡಲಾರಂಭಿಸಿದ. ಕ್ರಮೇಣ ಹತ್ತಾರು ದನಕರುಗಳಿದ್ದ ದೇವಸ್ಥಾನದಂಥ ಹಟ್ಟಿ ಹಾಳು ಮೂಳು ಹಾಕಿಡುವ ತೊಟ್ಟಿಯಾಯಿತು. ನಾಲ್ಕಾರು ನಾಯಿಗಳ ವಾಸಸ್ಥಾನ ಒಂದು ಪುಟ್ಟ ಗೂಡಿಗೆ ಬಂದಿತು. ಅಲ್ಲಲ್ಲಿ ತಿರುಗಾಡುತ್ತಿರುವ ಬೆಕ್ಕುಗಳು ರಗಳೆಯಾಗತೊಡಗಿದವು. ಅಂತೆಯೇ ಮನೆಯೊಳಗೆ ಮಕ್ಕಳ ಅಳು, ನಗು, ಜಗಳ, ಲೂಟಿ ಒಂದೇ ಮಗುವಿನ ಸಂಸಾರದಲ್ಲಿ ಶಾಶ್ವತವಾಗಿ ನಿಂತು ಹೋಯಿತು. ಆಳು ಕಾಳು ಅವರವರದ್ದೇ ತಾಪತ್ರಯದಲ್ಲಿ ಸಿಕ್ಕಿಹಾಕಿಕೊಂಡಾಯಿತು. ಜಾನುವಾರು ಇಲ್ಲದೆ, ಸೆಗಣಿ ಗೊಬ್ಬರ ಇಲ್ಲದೆ, ಹಾಲು ಕರೆಯುವ ದನಗಳಿಲ್ಲದೆ ಎಲ್ಲವೂ ಭಣಗುಟ್ಟ ತೊಡಗಿದಾಗ ವ್ಯವಸಾಯ ಎಂಬ ವ್ಯವಹಾರ ನೇಪಥ್ಯಕ್ಕೆ ಸೇರಿ ಹೋಯಿತು.  


ಪರ್ಯಾಯವಾಗಿ ಎಲ್ಲದಕ್ಕೂ ಯಂತ್ರಗಳ ಆವಿಷ್ಕಾರವಾಗಿ ಬರಿದೆ ಹಣದಿಂದ ಲಾಭ ನಷ್ಟಗಳ ಲೆಕ್ಕಾಚಾರ. ಮಾನವೀಯತೆ ದಿನದಿಂದ ದಿನಕ್ಕೆ ನಶಿಸತೊಡಗಿದಾಗ ಅವಿಭಕ್ತ ಕುಟುಂಬವೆಂಬ ಕಲ್ಪನೆಯೂ ಮಾಯವಾಗತೊಡಗಿತು. ಪರಸ್ಪರ ಸ್ನೇಹ ವಿಶ್ವಾಸ ಅನ್ಯೋನ್ಯತೆ ಸಡಿಲವಾಗತೊಡಗಿತು. ಪರಿಣಾಮವಾಗಿ ವೃದ್ಧಾಪ್ಯದಲ್ಲಿರುವವರೂ ಹೊರೆಯಾಗತೊಡಗಿದರು. ವೃದ್ಧಾಶ್ರಮಗಳೂ ಬೆಳೆಯತೊಡಗಿದವು. ವೃದ್ಧರ ಜತೆಗೆ ಅವರ ಅಪಾರ ಜ್ಞಾನ ಭಂಡಾರವೂ ಆಶ್ರಮದ ಪಾಲಾಯಿತು. ಸಣ್ಣ ಕುಟುಂಬ, ಸಣ್ಣ ವ್ಯವಹಾರ, ಸಣ್ಣ ಪ್ರಪಂಚ... ಎಲ್ಲವೂ ಸಣ್ಣತನವೇ. ಆದರೆ ಆದಾಯ ಮಾತ್ರ ಸಣ್ಣದಾಗದೆ ದಿನದಿಂದ ದಿನಕ್ಕೆ ಬೆಳೆದು ಸಮತೋಲನವನ್ನೇ ಕಳೆದುಕೊಂಡು ಎತ್ತಕಡೆ ವಾಲುವುದೆಂದು ತಿಳಿಯದ ಪರಿಸ್ಥಿತಿ ಇಂದು  ನಮ್ಮದಾಗಿದೆ. ಹೆತ್ತ ಮಕ್ಕಳೆಂಬ ಮಮಕಾರಕ್ಕೆ, ತಂದೆ ತಾಯಿ ಎಂಬ ಗೌರವಾದರಕ್ಕೆ ಎರಡು ಕಡೆಯಲ್ಲೂ ಅವಕಾಶವಿಲ್ಲದಂತಾಯಿತು. ಮುಂದೆ ಎಲ್ಲವೂ ವೈದ್ಯರ ನಾನಾ ಪರೀಕ್ಷೆಗಳು, ಕೌನ್ಸೆಲಿಂಗ್ ಗಳು, ಚಿಕಿತ್ಸೆಗಳು ಎಂಬಲ್ಲಿಗೆ ಅವಿಭಕ್ತತೆಯು ಸೇರಿಹೋಗುವುದಂತು ಖಂಡಿತ. ಎಲ್ಲಿ ಸಹಜ ಬದುಕು, ಬಾಳ್ವೆ ಸರಾಗವಾಗಿತ್ತೋ ಅದೆಲ್ಲವೂ ಇಂದು ಬದುಕಿಗೆ ತೊಡಕಾಗಿರುವುದು ಬಹುಷಃ ಕಾಲದ ಮಹಿಮೆ  ಎನ್ನೋಣವೇ,  ಅಥವಾ ಸ್ವಯಂಕೃತಾಪರಾಧ ಎನ್ನೋಣವೇ, ಇಲ್ಲ ಇದುವೇ ಸರಿ ಎನ್ನೋಣವೇ...?? 

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post