ಹೆಬ್ರಿಯಲ್ಲಿ ನೂತನ ಗೋಶಾಲೆಗೆ ಭೂಮಿ ಪೂಜೆ
ಸಚಿವ ಸುನಿಲ್ ಕುಮಾರ್ 5 ಲಕ್ಷ ದೇಣಿಗೆ ಘೋಷಣೆ
ಉಡುಪಿ: ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ರಾಜ್ಯದ ಕರಾವಳಿ ಪ್ರದೇಶದಲ್ಲಿ ಗೋಶಾಲೆಗಳನ್ನು ಸ್ಥಾಪಿಸಿ, ಕಸಾಯಿಖಾನೆಗೆ ಸಾಗುತ್ತಿದ್ದ ಅಥವಾ ಒಂದಿಲ್ಲೊಂದು ಕಾರಣದಿಂದ ಅನಾಥವಾದ ಸಾವಿರಾರು ಹಸುಗಳನ್ನು ಪೋಷಿಸುವ ಮಹತ್ಕಾರ್ಯವನ್ನು ಸಮಾಜದ ಸದ್ಭಕ್ತರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸುತ್ತಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಈ ಕ್ರಾಂತಿಕಾರ್ಯದಲ್ಲಿ ಶುಕ್ರವಾರ ಮತ್ತೊಂದು ಹೆಜ್ಜೆಯನ್ನಿಟ್ಟಿದ್ದಾರೆ.
ಶ್ರೀ ಮಠದ ಭಕ್ತರಾಗಿರುವ ಶ್ರೀ ಪದ್ಮನಾಭ ಆಚಾರ್ಯರು ಹೆಬ್ರಿಯ ಗಿಲ್ಲಾಳಿಯಲ್ಲಿ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಏಳು ಎಕರೆ ಭೂಮಿಯನ್ನು ಈ ಉದ್ದೇಶಕ್ಕೆ ದಾನವಾಗಿ ನೀಡಿದ್ದಾರೆ. ಶ್ರೀಗಳ ನೇತೃತ್ವದಲ್ಲಿ ಶ್ರೀ ವಿಶ್ವೇಶಕೃಷ್ಣ ಗೋಸೇವಾ ಟ್ರಸ್ಟ್ ಸ್ಥಾಪಿಸಲಾಗಿದೆ.
ಇಲ್ಲಿ ಸ್ಥಾಪಿಸಲಾಗುವ ಗೋಶಾಲೆಗೆ ಶುಕ್ರವಾರ ಭೂಮಿ ಪೂಜೆ ನೆರವೇರಿತು.
ಶ್ರೀಪಾದರು ಸಾನ್ನಿಧ್ಯ ವಹಿಸಿ ಶಿಲಾನ್ಯಾಸ ನೆರವೇರಿಸಿ ಸಂದೇಶ ನೀಡಿದರು. ರಾಜ್ಯ ಇಂಧನ ಕನ್ನಡ ಸಂಸ್ಕೃತಿ ಇಲಾಖೆ ಮಂತ್ರಿ ವಿ ಸುನಿಲ್ ಕುಮಾರ್ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದು ಶ್ರೀಗಳ ಗೋರಕ್ಷಣೆಯ ಕಾರ್ಯ ಅತ್ಯಂತ ಸ್ತುತ್ಯರ್ಹವಾಗಿದ್ದು ತನ್ನ ಕ್ಷೇತ್ರ ವ್ಯಾಪ್ತಿಯಲ್ಲೇ ಶ್ರೀಗಳು ಎರಡನೇ ಗೋಶಾಲೆಯನ್ನು ಸ್ಥಾಪಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಆದ್ದರಿಂದ ಈ ಗೋಶಾಲೆಗಳಿಗೆ ಎಲ್ಲ ರೀತಿಯ ಸಹಕಾರವನ್ನು ಸರ್ಕಾರದ ಮತ್ತು ವೈಯಕ್ತಿಕ ನೆಲೆಯಲ್ಲೂ ಸದಾ ನೀಡುವುದಾಗಿ ತಿಳಿಸಿ ಆರಂಭದ ದೇಣಿಗೆಯಾಗಿ ವೈಯಕ್ತಿಕವಾಗಿ 5 ಲಕ್ಷ ರೂ ನೀಡುವುದಾಗಿ ಘೋಷಿಸಿದರು.
ಶಾಸಕ ಕೆ ರಘುಪತಿ ಭಟ್ ಶುಭ ಸಂದೇಶ ನೀಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಈ ಗೋಶಾಲೆಯಲ್ಲಿ ಅತಿಥಿಗೃಹ ನಿರ್ಮಾಣಕ್ಕೆ ಪ್ರಾಧಿಕಾರದಿಂದ ಅನುದಾನ ನೀಡುತ್ತಿರುವುದಾಗಿ ತಿಳಿಸಿದರು.
ಸೆಲ್ಕೊ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗುರುಪ್ರಸಾದ್ ಶೆಟ್ಟಿ, ಟ್ರಸ್ಟ್ ನ ಅಧ್ಯಕ್ಷ ಪದ್ಮನಾಭ ಆಚಾರ್ಯ, ವಿಶ್ವಸ್ಥರಾದ ಗುರುದಾಸ್ ಶೆಣೈ ಬಾಲಕೃಷ್ಣ ನಾಯಕ್ ಲಕ್ಷ್ಮೀನಾರಾಯಣ ನಾಯಕ್, ಲಕ್ಷ್ಮಣ ಭಟ್, ರವಿ ರಾವ್, ಪುಟ್ಟಣ್ಣ ಭಟ್, ಲಕ್ಷ್ಮೀನಾರಾಯಣ ಜೋಯಿಸ್, ದಿನೇಶ್ ಪೈ, ಗಣೇಶ್ ಕಿಣಿ, ಭಾರ್ಗವಿ ಐತಾಳ್, ಶ್ರೀಕಾಂತ ಭಟ್, ಯೋಗೀಶ್ ಭಟ್ ಐತು ಕುಲಾಲ್, ಗಣೇಶ್ ಕುಮಾರ್, ತಾರಾನಾಥ ಬಲ್ಲಾಳ್, ವಿಷ್ಣುಮೂರ್ತಿ ಆಚಾರ್ಯ, ಮೊದಲಾದವರು ಉಪಸ್ಥಿತರಿದ್ದರು. ಪದ್ಮನಾಭ ಆಚಾರ್ಯ ಪ್ರಸ್ತಾವನೆ ಸಹಿತ ಸ್ವಾಗತಿಸಿದರು. ಚಂದ್ರಶೇಖರ ಭಟ್ ನಿರೂಪಿಸಿದರು. ಗುರುದಾಸ್ ಶೆಣೈ ವಂದಿಸಿದರು.
ಅರುವತ್ತನೇ ವರ್ಷಕ್ಕೆ ಆರು ಗೋಶಾಲೆ: ಪೇಜಾವರ ಶ್ರೀ ಕನಸು
ಪ್ರಸ್ತುತ 57ನೇ ವರ್ಷ ಪ್ರಾಯದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಗೋರಕ್ಷಣೆಯ ಕಾರ್ಯವನ್ನು ತಪಸ್ಸಿನಂತೆ ಮಾಡುತ್ತಿದ್ದಾರೆ.
ಈಗಾಗಲೇ ನೀಲಾವರ ಕೊಡವೂರು ಕಬ್ಬಿನಾಲೆಗಳಲ್ಲಿ ಮೂರು ಗೋಶಾಲೆಗಳನ್ನು ನಡೆಸುತ್ತಿದ್ದು ತಮ್ಮ 60ನೇ ಜನ್ಮ ವರ್ಧಂತಿಗೆ ಮತ್ತೆ ಮೂರು ಗೋಶಾಲೆಗಳನ್ನು ಸ್ಥಾಪಿಸಿ ಒಟ್ಟು ಆರು ಗೋಶಾಲೆಗಳನ್ನು ಸಮಾಜದ ಸಹಕಾರದೊಂದಿಗೆ ಮುನ್ನಡೆಸುವ ಕನಸು ಹೊಂದಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ