ಕನ್ನಡದ ಅಸ್ಮಿತೆ ಉಳಿಸುವುದು ಯುವಜನರ ಹೊಣೆ: ಭಾಸ್ಕರ ರೈ ಕುಕ್ಕುವಳ್ಳಿ

Upayuktha
0

ಕನ್ನಡ ಕಾವ್ಯಾಂಜಲಿ- ಅಮೃತ ಗೀತೋತ್ಸವ



ಮಂಗಳೂರು: 'ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರಿಂದ ತೊಡಗಿ ಕರ್ನಾಟಕ ರಾಜ್ಯ ಪುನರ್ನಾಮಕರಣ ವಾಗುವಲ್ಲಿವರೆಗೆ ಕನ್ನಡ ನಾಡು- ನುಡಿಗಾಗಿ ಹೋರಾಡಿದ ಪ್ರಭೃತಿಗಳೆಲ್ಲ ನಿತ್ಯ ಸ್ಮರಣೀಯರು. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳಿಂದ ಕನ್ನಡ ದೂರವಾಗುತ್ತಿರುವ ಪ್ರಚಲಿತ ಸಂದರ್ಭ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಯುವ ಜನರ ಹೊಣೆಯಾಗಬೇಕು. ಅದಕ್ಕಾಗಿ ಕನ್ನಡಪರ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ಅಗತ್ಯವಿದೆ' ಎಂದು ಕರ್ನಾಟಕ ಜಾನಪದ, ಯಕ್ಷಗಾನ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.


ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರ ಕೊಲ್ಯ, ಶಾರದಾ ಸಮೂಹ ಸಂಸ್ಥೆಗಳು ಮಂಗಳೂರು ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಇತ್ತೀಚೆಗೆ ನಗರದ ಶಾರದಾ ಕಾಲೇಜು ಸಭಾಂಗಣದಲ್ಲಿ ಭಾರತ ಸ್ವಾತಂತ್ರ್ಯ ಅಮೃತವರ್ಷಾಚರಣೆ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜರಗಿದ 'ಕನ್ನಡ ಕಾವ್ಯಾಂಜಲಿ ಹಾಗೂ ಅಮೃತ ಗೀತೋತ್ಸವ' ಕಾರ್ಯಕ್ರಮದಲ್ಲಿ ಅವರು ಆಶಯ ಭಾಷಣ ಮಾಡಿದರು. 'ಭಾರತ ಜನನಿಯ ತನುಜಾತೆಯಾದ ಕರ್ನಾಟಕದ 66ನೇ ರಾಜ್ಯೋತ್ಸವವು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ವಿಶಿಷ್ಟವಾಗಿ ಆಚರಿಸಲ್ಪಡುತ್ತಿದೆ. ನಾವು ಭಾರತಾಂತರ್ಗತ ಕರ್ನಾಟಕವನ್ನು ಹೊಸ ಆಲೋಚನೆಗಳಿಂದ ಸದೃಢವಾಗಿ ಕಟ್ಟಬೇಕಾಗಿದೆ' ಎಂದವರು ನುಡಿದರು.


ಕನ್ನಡ ಶಾಲೆ ಉಳಿಯಲಿ: ಪುನರೂರು

ಸಮಾರಂಭವನ್ನು ದೀಪ ಬೆಳಗಿ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ 'ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಯಬೇಕಾದರೆ ಪ್ರಾಥಮಿಕ ಹಾಗೂ ಪ್ರೌಢ ಮಟ್ಟದ ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕೆ ವಿಶೇಷ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು' ಎಂದು ನುಡಿದರು.


ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಮುಖ್ಯ ಅತಿಥಿಗಳಾಗಿ ಮಾತನಾಡಿದರು.


ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರದ ನಿರ್ದೇಶಕ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಾಂಸ್ಕೃತಿಕ ಸಂಘಟಕ ಸುಧಾಕರ ರಾವ್ ಪೇಜಾವರ ವಂದಿಸಿದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ಮತ್ತು ಖ್ಯಾತ ಕವಿಗಳು ಮತ್ತು  ಗಾಯಕರಿಂದ ಕವಿಗೋಷ್ಠಿ ಕಾವ್ಯಗಾಯನ ಜರಗಿತು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top