|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಕರ್ಷಣ: ಸೃಷ್ಟಿ-ಸ್ಥಿತಿ-ಲಯ ಎಲ್ಲದಕು ಕಾರಣ

ಆಕರ್ಷಣ: ಸೃಷ್ಟಿ-ಸ್ಥಿತಿ-ಲಯ ಎಲ್ಲದಕು ಕಾರಣಈ ಪ್ರಪಂಚ ನಡೆಯುವುದೇ ಆಕರ್ಷಣೆಯಲಿ. ಇಲ್ಲಿ ಪ್ರತಿಯೊಂದು ಚರಾಚರಗಳು ಪರಸ್ಪರ ಆಕರ್ಷಣೆಗೊಳಗಾಗಿಯೇ ಸದಾ ಇರುತ್ತವೆ ಹಾಗೂ ಇರಲೂಬೇಕು. ಗ್ರಹಗಳಾದಿ ಸೌರಮಂಡಲವೇ ಇರಲಿ, ನಕ್ಷತ್ರಾದಿ ಆಕಾಶಗಂಗೆಯೇ ಇರಲಿ ಕೊನೆಗೆ ಕೃಷ್ಣರಂಧ್ರದವರೆಗೂ ಆಕರ್ಷಣೆಯಿಂದಲೇ ವ್ಯವಹಾರ ಪೂರ್ಣಗೊಳ್ಳುವುದು. ನಮ್ಮ ವ್ಯಾಪ್ತಿಯಲ್ಲಿ ನೋಡುವುದಾದರೆ ಗಂಡು ಹೆಣ್ಣಿನ ಆಕರ್ಷಣೆ, ತಾಯಿ ಮಗುವಿನ ಆಕರ್ಷಣೆ, ಕುಟುಂಬ ಬಂಧು ಬಳಗ ಆಕರ್ಷಣೆ, ಗುರು ಶಿಷ್ಯರ ಆಕರ್ಷಣೆ, ಮಾತೃಭೂಮಿ ಮಾತೃಧರ್ಮದ ಆಕರ್ಷಣೆ, ದುಂಬಿಗೆ ಹೂವಿನ ಆಕರ್ಷಣೆ, ಬಳ್ಳಿಗೆ ಮರದ ಆಕರ್ಷಣೆ, ನೀರಿಗೆ ಗುರುತ್ವದಾಕರ್ಷಣೆ... ಈ ರೀತಿ ಬೆಳೆಯುವ ಪಟ್ಟಿಗೆ ಅಂತ್ಯವಿಲ್ಲ.


ಹುಟ್ಟಿನಿಂದ ಪ್ರಾರಂಭವಾದ ಈ ಪ್ರಕ್ರಿಯೆ ಸಾವಿನವರೆಗೂ ಮುಂದುವರೆಯುತ್ತದೆ. ಮಾತ್ರವಲ್ಲ ಪುನರ್ಜನ್ಮಕ್ಕೂ ಹೇತುವಾಗಿಯೇ ಉಳಿಯುತ್ತದೆ. ಎಲ್ಲ ಸಂಗವನ್ನು ತ್ಯಾಗ ಮಾಡಿದಂಥ ಯೋಗಿಗಳಿಗೂ ಇದು ಬಿಟ್ಟಿಲ್ಲ. ಯಾಕೆಂದರೆ ಅವರಿಗೂ ಆಧ್ಯಾತ್ಮದ ಅಥವಾ ದೇವನೆಂಬ ಮಹತ್ ಶಕ್ತಿಯ ಆಕರ್ಷಣೆ ಸದಾ ಇರುತ್ತದೆ. ಈ ಆಕರ್ಷಣೆ ಎನ್ನುವುದು ಕೆಲವು ಕಡೆಗಳಲ್ಲಿ ಜೀವನಕ್ಕೆ ಅಥವಾ ಸಾಧನೆಗೆ ಪೂರಕವಾದರೆ ಕೆಲವು ಕಡೆಗಳಲ್ಲಿ ಅಧಃಪತನಕ್ಕೂ ಕಾರಣವಾಗುತ್ತದೆ. ಉದಾಹರಣೆಗೆ ಹೆಂಡ, ಜೂಜು, ದುಷ್ಟರ ಸಹವಾಸ ಅಂದರೆ ತಾಮಸ ಸ್ವಭಾವದ ಆಕರ್ಷಣೆಯಿಂದ ಯಾವ ಮನಜನೂ ಉನ್ನತಿಯನ್ನು ಕಂಡದ್ದೇ ಇಲ್ಲ ದೀಪದ ಆಕರ್ಷಣೆಗೊಳಗಾದ  ಹಾತೆಯಂತೆ. ಅದೇರೀತಿ ಸಾತ್ವಿಕ ಚಿಂತನೆಗಳ, ಸಜ್ಜನರ, ಸಾಹಿತ್ಯ ಸಂಗೀತ ನೃತ್ಯ ಮೊದಲಾದ ಕಲೆಗಳ, ಪರೋಪಕಾರ ಮುಂತಾದ ಆಕರ್ಷಣೆಗೆ ಒಳಗಾದವರು ಸಾಧಕರೇ ಆಗಿಬಿಡಬಹುದು ಹಾಗೂ ಜೀವನದಲ್ಲಿ ಮಹೋನ್ನತಿಯನ್ನು ಕಾಣಬಹುದು ಗಣಪನ ಆಕರ್ಷಣೆಯಿಂದ ಇಲಿಯೂ ದೈವತ್ವವನ್ನು ಕಂಡಂತೆ. ಯಾವುದೇ ಜೀವಿಯೂ ಯಾವ ಕ್ಷಣದಲ್ಲಿ ಕೂಡ ಶೂನ್ಯನಾಗಿ ಇರಲಾಗದು. ಯಾವುದೋ ಒಂದು ಆಕರ್ಷಣೆಗೆ ಒಳಪಟ್ಟಿರಲೇಬೇಕು. ಆದ್ದರಿಂದ ಮಾನವನೆಂಬ ಜೀವಿಗೆ ಮಾತ್ರ ಆಯ್ಕೆಯೆಂಬ ಅವಕಾಶವನ್ನು ದೇವರು ಪಾಲಿಸಿದ್ದರಿಂದ ನಮ್ಮ ಆಕರ್ಷಣೆಯ ದಿಕ್ಕನ್ನು ಬದಲಾಯಿಸಿಕೊಂಡು ಜಾಣರಾಗಬಹುದು. ಆದರೆ ಆಕರ್ಷಣೆ ಎನ್ನುವುದು ವಿವೇಕವನ್ನೇ ಬುಡಮೇಲು ಮಾಡುವಷ್ಟು ಪ್ರಬಲವಾದ್ದರಿಂದ ಆಯ್ಕೆ ಎಂಬ ಅವಕಾಶವೂ ವ್ಯರ್ಥವಾಗಬಹುದು. 


ಸೂರ್ಯನ ಆಕರ್ಷಣೆಯಿಂದ ಹನುಮ ಹಾರಿ ಶೂರನಾದರೆ,  ಹರಿಣದ ಆಕರ್ಷಣೆ ಸೀತೆಯನ್ನು ರಾಮನಿಂದ ಬೇರ್ಪಡಿಸಿತು.  ಸೀತೆಯ ಆಕರ್ಷಣೆ ರಾವಣನ ಹರಣವನ್ನು ಮಾಡಿದರೆ, ರಾಮನ ಆಕರ್ಷಣೆ ವಿಭೀಷಣನಿಗೆ ರಾಜ್ಯವನೇ ಕೊಡಿಸಿತು. ಕೃಷ್ಣನ ಆಕರ್ಷಣೆಗೆ ಜಗತ್ತೇ ಒಳಗಾದರೆ, ವಿದುರ ಸುದಾಮರಂಥವರ ಆಕರ್ಷಣೆಗೆ ಕೃಷ್ಣನೇ ಸೋತು ಹೋಗುತ್ತಾನೆ. ಹಾಗೆಯೇ ಹೆಣ್ಣು ಹೊನ್ನು ಮಣ್ಣಿನ ಆಕರ್ಷಣೆಗೆ  ದೇಶಗಳೇ ಬಿದ್ದು ಹೋಗಿವೆ ಅಥವಾ ಹೊಸದಾದ ದೇಶಗಳೇ ಹುಟ್ಟಿಕೊಂಡಿವೆ. ಆದ್ದರಿಂದ ಈ ಆಕರ್ಷಣೆ ಎನ್ನುವುದು ಒಂದು ಮಾಯಾಜಾಲವೇ ಸರಿ.    


ಇನ್ನು ಈ ಆಕರ್ಷಣೆ ಎನ್ನುವುದು ಜಡ ವಸ್ತುಗಳನ್ನೂ ಬಿಟ್ಟಿಲ್ಲ. ಉದಾಹರಣೆಗೆ  ಗ್ರಹಗಳಿಂದ ಗ್ರಹಗಳಿಗಾಕರ್ಷಣೆ ಅನಾದಿಯಿಂದ ಅನಂತದವರೇಗೂ ಇರುವಂತಹುದು. ಚಂದಿರನ ಮತ್ತು ಭೂಮಿಯ ಪರಸ್ಪರ ಆಕರ್ಷಣೆಯ ಪರಿಣಾಮವೇ ಸಮುದ್ರದ ಏರಿಳಿತಗಳು. ಭೂಮಿಯೊಳಗಣ ಚಲನೆಯೆಂಬ ಆಕರ್ಷಣೆಯೇ ಭೂಕಂಪಗಳು, ಸುನಾಮಿಗಳು. ವಾರಿಧಿಗೆ ಸೂರ್ಯನ ಆಕರ್ಷಣೆಯೇ ಮಳೆಗೆ ಕಾರಣವು. ಗಾಳಿಗೆ ಚಲಿಸುವ ಆಕರ್ಷಣೆಯೇ ಮಾರುತಗಳಿಗೆ ಕಾರಣವು... ಅಂತೆಯೇ ಕೊನೆಯಲ್ಲಿ ಈ ಆತ್ಮಗಳಿಗೆ ಪರಮಾತ್ಮನ ಆಕರ್ಷಣೆ ಉಂಟಾದಾಗಲೇ ಈ ಸುಳಿಯಿಂದ ಬಿಡುಗಡೆಯು. ಅಂದರೆ ಶೂನ್ಯದಿಂದ ಉಂಟಾದ ವಿಶ್ವ ಶೂನ್ಯದಲ್ಲೇ ಒಂದಾದಾಗ ಆಕರ್ಷಣೆ ಎನ್ನುವುದು ಒಂದು ಹಂತದಲ್ಲಿ ಮುಗಿದಂತೆಯೇ. ಆದರೆ ಈ ಬ್ರಹ್ಮಾಂಡವೆಂಬ ವ್ಯವಸ್ಥೆಯಲ್ಲಿ ಇಂಥ ಶೂನ್ಯಗಳೂ ಅನಂತವಾದ್ದರಿಂದ ಆಕರ್ಷಣೆಗಳೂ ಅನಂತವಾಗಿಯೇ ಇರುವುದೂ ಅಷ್ಟೇ ಸತ್ಯ. 

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post