||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಹಿಂಸಾ ಪರಮೋಧರ್ಮ, ಆದರೆ...

ಅಹಿಂಸಾ ಪರಮೋಧರ್ಮ, ಆದರೆ...ಈ ವಾಕ್ಯವನ್ನು ಜಗತ್ತೇ ಒಪ್ಪಿಕೊಂಡಿದೆ. ಪ್ರತಿಯೊಂದು ವ್ಯಕ್ತಿಯೂ, ಪ್ರತಿಯೊಂದು ಧರ್ಮವೂ ಇದರ ಹೊರತಾಗಿ ಬೇರೊಂದು ಸುಖವಿದೆ ಎಂದು ಊಹಿಸಲೂ ಸಾಧ್ಯವಿಲ್ಲ. ಅಂತಹ ಒಂದು ಮಾನವೀಯತೆಯ ಅತ್ಯುತ್ಕೃಷ್ಟವಾದ ಮೌಲ್ಯಯುತವಾದಂಥ ಧ್ಯೇಯವಾಕ್ಯವೇ 'ಅಹಿಂಸಾ ಪರಮೋಧರ್ಮ' ಎನ್ನುವಂಥದ್ದು. ಇದರಲ್ಲಿ ಎರಡನೇಯ ಮಾತಿಲ್ಲ. ಆದರೆ ಇದು ಎಷ್ಟರ ಮಟ್ಟಿಗೆ ಪ್ರಸ್ತುತವಾಗಿದೆ ಎನ್ನುವಲ್ಲಿ ಇದರ ಸಾಫಲ್ಯತೆ ಅಡಗಿದೆ. ಅಂದು ಸಾಮ್ರಾಟ ಅಶೋಕನಿಂದ ತೊಡಗಿ ಇಂದು ಮಹಾತ್ಮಾ ಗಾಂಧೀಜಿಯವರೇಗೆ ಈ ಹಾದಿಯನ್ನು ಅನೇಕ ರಾಜ ಮಹಾರಾಜರು ತುಳಿದು ಮುನ್ನಡೆದಿದ್ದಾರೆ. ಇದರಲ್ಲಿ ಹಲವರು ಗುರಿ ಸೇರಿದವರೂ ಇರಬಹುದು. ಮತ್ತೆ ಹಲವರು ಗುರಿ ಸೇರದೆಯೂ ಇರಬಹುದು. ಹೇಗೆ ಯುದ್ಧಗಳಿಂದ ಶಾಂತಿ ಉಂಟಾಗುವುದಿಲ್ಲವೋ ಅದೇರೀತಿ ಅಹಿಂಸೆಯಿಂದಲೂ ಶಾಂತಿ ಉಂಟಾದ ಚರಿತ್ರೆ ಇಲ್ಲ. 


ನಾವು ಸ್ವಲ್ಪ ಹಿಂದಿರುಗಿ ನೋಡಿದರೆ ಧರ್ಮರಾಯ ಬಹುದೊಡ್ಡ ಸಾತ್ವಿಕ ಜೀವಿ, ಅಹಿಂಸಾವಾದಿ, ಧರ್ಮವೇ ಉಸಿರೆನ್ನುವಂಥ ವ್ಯಕ್ತಿತ್ವ. ಸಾಧ್ಯವಾದಷ್ಟು ಈ ಮಾರ್ಗದಲ್ಲೇ ನಡೆದರೂ ಆ ದಾರಿ ನಿರ್ಣಾಯಕವಾಗಿಲ್ಲ. ಕಾರಣವೆಂದರೆ ಆತನ ಅಹಿಂಸಾ ಮಾರ್ಗ ಅರ್ಥ ಮಾಡಿಕೊಳ್ಳದ ದುರ್ಯೋಧನ, ಶಕುನಿ, ದುಶ್ಶಾಸನನಂಥ ತಾಮಸ ಸ್ವಭಾವದವರಿರುವಾಗ ಧರ್ಮರಾಯ ಅಸಹಾಯಕನಾದದ್ದು ಚರಿತ್ರೆ. ಆವಾಗ ಕೃಷ್ಣ, ಅರ್ಜುನ, ಭೀಮಸೇನನಂಥವರಿಂದ ಹಿಂಸೆಯನ್ನೇ ಬಯಸುವ ಯುದ್ಧವೇ ನಿರ್ಣಾಯಕವಾಗಿದ್ದು ಮರೆಯಲುಂಟೇ?


ಅದಕ್ಕೂ ಹಿಂದೆ ನಡೆದದ್ದು ರಾಮಾಯಣ. ಶ್ರೀರಾಮಚಂದ್ರನಿಗಿಂತ ದಯಾಳುವಾದ ವ್ಯಕ್ತಿತ್ವ ಬಹುಷಃ ಯಾರೂ ಕಂಡು ಕೇಳರಿಯಲಾರರು. ಆದರೆ ಅಂಥ ದಯಾಳುವಾದಂಥ ಶ್ರೀರಾಮಚಂದ್ರನಿಗೂ ಮಾರೀಚರಾದಿಯಾಗಿ ದಶರಥನವರೇಗೆ ಅನೇಕ ಲೋಕಕಂಟಕರನ್ನು ನಿಭಾಯಿಸಲು ಆತನ ದಯಾಗುಣ ಸಹಾಯಕ್ಕೆ ಬರಲೇ ಇಲ್ಲ. ಅಲ್ಲಿ ಕೂಡ ಶ್ರೀರಾಮಚಂದ್ರ ದಯೆಯೆಂದು ಅಥವಾ ಅಹಿಂಸೆಯೆಂದು ಇರುತ್ತಿದ್ದರೆ ಲೋಕಕಂಟಕರೇ ದೇಶದೊಳಗೆ ತುಂಬಿರುತ್ತಿದ್ದರು. ಹೆಚ್ಚೇಕೆ ಸಾಮ್ರಾಟ ಅಶೋಕನ ಕಾಲದಲ್ಲೂ ಅಶೋಕನು ದೇಶ ರಕ್ಷಣೆಗೋಸ್ಕರ ಯುದ್ಧಗಳನ್ನು ಮಾಡುತ್ತಿರುವಲ್ಲಿವರೇಗೆ ದೇಶಕ್ಕೆ ಭದ್ರತೆಯೂ ಇತ್ತು, ಗೌರವವೂ ಇತ್ತು. ಯಾವಾಗ ಆತ ಅಹಿಂಸೆಯೆಂಬ ಮಾರ್ಗ ತುಳಿದನೋ ಆವಾಗಲೇ ಭಾರತದ ಪತನ ಪ್ರಾರಂಭವಾದದ್ದೂ ನಮಗೆ ತಿಳಿದ ವಿಚಾರ. 


ಇನ್ನು ನಮ್ಮ ಮಹಾತ್ಮರಾದಂಥ ಗಾಂಧೀಜಿಯವರೂ ಶ್ರೀರಾಮಚಂದ್ರನಂತೆ, ಧರ್ಮರಾಯನಂತೆ ಕಂಡರೆ ಉತ್ಪ್ರೇಕ್ಷೆಯಲ್ಲ. ಅವರ ಅಹಿಂಸಾ ವಾದವೂ ತಪ್ಪಲ್ಲ. ಯಾವಾಗ ಅಹಿಂಸಾ ಧರ್ಮದಿಂದಲೇ ದೇಶೋದ್ಧಾರವಾಗಬಹುದೋ ಆವಾಗ ಖಂಡಿತ ಅದು ಪ್ರಸ್ತುತವೇ. ಭಾರತಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಹಲವು ಮಾರ್ಗಗಳಿದ್ದವು. ಅದರಲ್ಲಿ ಅಹಿಂಸಾ ಮಾರ್ಗವೂ ಒಂದು. ಆದರೆ ಅಹಿಂಸಾ ಮಾರ್ಗದಿಂದಲೇ ಸ್ವಾತಂತ್ರ್ಯ ಸಿಕ್ಕಿದೆ ಎಂದರೆ ಕ್ರೂರಿ ಬ್ರಿಟೀಷರು ಅಷ್ಟು ಬೇಗ ಸಾತ್ವಿಕರಾಗಲು ಸಾಧ್ಯವೇ ಇಲ್ಲ. ಮಾತ್ರವಲ್ಲ ಗಾಂಧೀಜಿಯವರ ತತ್ವಗಳು ಅವರಿಗೆ ಅರ್ಥವಾಗಲೂ ಸಾಧ್ಯವಿಲ್ಲ. ಹಾಗಾದರೆ ಗಾಂಧೀಜಿಯವರ ಅಹಿಂಸಾ ಮಾರ್ಗ ಸರಿಯಲ್ಲವೇ ಎಂಬ ಪ್ರಶ್ನೆ ಬರಬಹುದು, ಅಥವಾ ಬಂದೇ ಬರುತ್ತದೆ. ವಿಚಾರ ಮಾಡಿದರೆ... ಇಲ್ಲ ಗಾಂಧೀಜಿಯವರ ಎತ್ತರಕ್ಕೆ ಏರಿದರೆ ಅಹಿಂಸಾ ಮಾರ್ಗ ಸಾರ್ವಕಾಲಿಕವಾದ ಸತ್ಯ. ಮಾನವನ ಸುಗಮವಾದ ಜೀವನಕ್ಕೆ ಅಥವಾ ಮನುಷ್ಯತ್ವದ ಉತ್ಕರ್ಷಕ್ಕೆ ಅದಕ್ಕಿಂತ ಸಾತ್ವಿಕ ಮಾರ್ಗ ಪ್ರಪಂಚದಲ್ಲೇ ಬೇರೆ ಇರದು.


ನಮ್ಮ ದೌರ್ಬಲ್ಯವೆಂದರೆ ಗಾಂಧೀಜಿಯವರನ್ನು ಅಥವಾ ಗಾಂಧಿ ತತ್ವವನ್ನು ನಾವು ಅರ್ಥೈಸಿಕೊಳ್ಳದೇ ಇರುವಂಥದ್ದು. ಪ್ರತಿಯೊಬ್ಬರೂ ಅಹಿಂಸಾ ಪ್ರಿಯರಾದರೆ ಗಾಂಧೀಜಿಯವರ ಮಾರ್ಗಕ್ಕೆ ಪರ್ಯಾಯವೇ ಇಲ್ಲ.  ಆದರೆ ಯಾವಾಗ ಹಿಂಸೆ, ಕ್ರೌರ್ಯ ಹಾಗೂ ದೇಶದ್ರೋಹದಂಥ ವಿಚ್ಛಿದ್ರಕಾರಿ ಪ್ರವೃತ್ತಿಗಳು ವಿಜ್ರಂಭಿಸಲಾರಂಭಿಸುವವೋ ಆವಾಗ ಮಾತ್ರ ಶ್ರೀರಾಮಚಂದ್ರನ ಇನ್ನೊಂದು ಮುಖ, ಶ್ರೀಕೃಷ್ಣನ ಯುದ್ಧದ ಚಾತುರ್ಯ ಖಂಡಿತ ಬೇಕಾಗುತ್ತದೆ. ಯಾಕೆಂದರೆ ಪ್ರಸ್ತುತ ಕ್ರೌರ್ಯವು ಎಷ್ಟು ತುಂಬಿ ಹೋಗಿದೆ ಎಂದರೆ, ಒಂದು ಕೆನ್ನೆಗೆ ಮಾತ್ರವಲ್ಲ ಇನ್ನೊಂದು ಕೆನ್ನೆಗೂ ಹೊಡೆದು ಅವಕಾಶ ಸಿಕ್ಕಿದರೆ ಸರ್ವಾಂಗಕ್ಕೂ ಹೊಡೆದುರುಳಿಸುವಷ್ಟು.


ಗಾಂಧೀಜಿಯವರಂಥ ಮಹಾನ್ ವ್ಯಕ್ತಿತ್ವ ಅರ್ಥಾಗಿಸುವ ನಿಟ್ಟಿನಲ್ಲಿ ನಮ್ಮ ರಕ್ಷಣೆ ಕೂಡ ಮುಖ್ಯ ತಾನೆ. ಮಕ್ಕಳು ತಪ್ಪು ಮಾಡಿದಾಗ ಛಡಿ ಏಟು ಕೊಟ್ಟು ಸರಿ ದಾರಿಗೆ ತರುವಂತೆ ಪುಂಡು ಪೋಕರಿಗಳು ಹೆಚ್ಚಾದಾಗ ಸ್ವಲ್ಪ ಹಿಂಸೆಯೂ ಬೇಕಾಗುತ್ತದೆ. ಅದು ದೇಶದ ಹಿತಕ್ಕೋಸ್ಕರ ಮಾತ್ರವೇ ಆಗಿರಬೇಕು. ಉದಾಹರಣೆಗೆ ಭಾರತದ ಸೇನೆಯಂತೆ. ಅನಾದಿ ಕಾಲದಿಂದಲೂ ಭಾರತವು ಶಾಂತಿಪ್ರಿಯ ರಾಷ್ಟ್ರ. ಆದರೂ ಭಾರತದಲ್ಲಿ ಸಕಲ ಸಜ್ಜಿತವಾದ ಸೇನೆ ಸರ್ವದಾ ಸಿದ್ಧವಾಗಿದೆ. ಯಾಕೆಂದರೆ ನಾವು ಶಾಂತಿಯಿಂದಿದ್ದರೂ, ನಮ್ಮ ಶಾಂತಿಗೆ ಭಂಗವಾದಾಗ ಅಥವಾ ನಮ್ಮ ರಕ್ಷಣೆಯ ವಿಚಾರ ಬಂದಾಗ ಯುದ್ಧವೂ ಬೇಕು, ತತ್ಪರಿಣಾಮವಾಗಿ ಅಹಿಂಸೆಯೂ ಬೇಕು. ಇದು ಅಹಿಂಸೆಯಾದರೂ ದೇಶದ ಶಾಂತಿಗೋಸ್ಕರ, ನಮ್ಮ ರಕ್ಷಣೆಗೋಸ್ಕರ.


ಆದ್ದರಿಂದ ಅಹಿಂಸಾ ಮಾರ್ಗದ ಜತೆಗೆ ಬೇಕಾದಾಗ ಬೇಕಾದಲ್ಲಿ ಅಹಿಂಸೆಯನ್ನು ಊರ್ಜಿತಗೊಳಿಸಲೂ ಹಿಂಸೆಯೂ ಬೇಕಾಗುತ್ತದೆ. ಆದರೆ ಇದು ಹಿಂಸೆಯಲ್ಲ ಚಿಕಿತ್ಸೆ. ವೈದ್ಯ ಶಸ್ತ್ರಚಿಕಿತ್ಸೆಯಿಂದ ಜೀವ ಉಳಿಸುವಂತೆ ಕೆಲವಾರು ಹಿಂಸೆಯೆಂಬ ಚಿಕಿತ್ಸೆಯಿಂದ ಭಾರತಾಂಬೆಯನ್ನುಳಿಸಬೇಕಾದರೆ ಇದು ಅನಿವಾರ್ಯ. ಸಾಧ್ಯವಾದಷ್ಟು ಸತ್ಯದ ಅಹಿಂಸಾ ಮಾರ್ಗವೇ ನಮ್ಮ ಆಯ್ಕೆಯಾಗಬೇಕು. ಆವಾಗ ಗಾಂಧೀಜಿಯವರ ನೆನಪಾಗಬೇಕು. ಅಸಾಧ್ಯವಾದಲ್ಲಿ ಗಾಂಧೀಜಿಯವರ ಮಾರ್ಗವನ್ನುಳಿಸಲು ಶ್ರೀಕೃಷ್ಣನನ್ನೂ ಅನುಸರಿಸಬೇಕು.

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post