ಮಂಗಳೂರು: ರಾಜ್ಯ ಸಭಾ ಸದಸ್ಯರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಶ್ರೀಯುತ ಆಸ್ಕರ್ ಫರ್ನಾಂಡಿಸ್ ಅವರ ಅಗಲಿಕೆಗೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ರಿ. ಸಂಘಟನೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ). ಇದರ ಸ್ಥಾಪಕಾಧ್ಯಕ್ಷರಾಗಿದ್ದ ಶ್ರೀಯುತ ಆಸ್ಕರ್ ಫರ್ನಾಂಡಿಸ್ ಅವರು 1979 ರಿಂದ 1982 ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದ ಶ್ರೇಯೋಭಿವೃದ್ಧಿಗೆ ಅವಿರತ ಶ್ರಮಿಸಿದ್ದರು. ಕೆಥೊಲಿಕ್ ಸಭಾ ಸಂಘಟನೆಯನ್ನು ಕೇವಲ ಕ್ರೈಸ್ತರ ಸೇವೆಗೆ ಮೀಸಲಾಗಿರಿಸದೆ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ತೊಡಗಿಸುವಂತೆ ಮಾರ್ಗದರ್ಶನ ನೀಡಿದ್ದರು.
ಐದು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ದಕ್ಷತೆಯಿಂದ ದುಡಿದ ಅವರು, ನಿಷ್ಕಳಂಕ ರಾಜಕಾರಣದ ಮೂಲಕ ಮಾದರಿ ನಾಯಕರಾಗಿದ್ದರು. ರಾಜಕೀಯದಲ್ಲಿ ಉನ್ನತ ಹುದ್ದೆಯನ್ನು ನಿರ್ವಹಿಸಿದ್ದರೂ, ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ರಾಷ್ಟ್ರ ರಾಜಕಾರಣದಲ್ಲಿ ಅಜಾತಶತ್ರುವಾಗಿದ್ದ ಫರ್ನಾಂಡಿಸ್ ಅವರ ನಿಧನದಿಂದಾಗಿ ಕೆಥೊಲಿಕ್ ಸಮುದಾಯ ಓರ್ವ ಅತ್ಯುತ್ತಮ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಬೇಡುತ್ತೇವೆ ಹಾಗೂ ಅಗಲಿಕೆಯ ನೋವನ್ನು ಭರಿಸಲು ಅವರ ಕುಟುಂಬ ಸದಸ್ಯರಿಗೆ ಭಗವಂತನು ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇವೆ ಎಂದು ಕೆಥೋಲಿಕ್ ಸಭಾ ಅಧ್ಯಕ್ಷ ಸ್ಟ್ಯಾನಿ ಲೋಬೊ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ