ವೈದ್ಯಲೋಕದ ಸಂಜೀವಿನಿ – ಅಸ್ಥಿಮಜ್ಜೆ ಕಸಿ

Upayuktha
0



ಅಸ್ಥಿಮಜ್ಜೆ ಎಂದರೇನು?


ನಮ್ಮ ದೇಹದ ಮೂಳೆಯೊಳಗಿನ ಮಧ್ಯಭಾಗದ ಮೃದುವಾದ ಅಂಗಾಂಶದ ಪದರವನ್ನು ಅಸ್ಥಿಮಜ್ಜೆ (Bone Marrow)) ಎಂದು ಕರೆಯಲಾಗುತ್ತದೆ. ಈ ಅಸ್ಥಿಮಜ್ಜೆಯನ್ನು ಒಬ್ಬ ವ್ಯಕ್ತಿಯ ದೇಹದಿಂದ ದಾನವಾಗಿ ಪಡೆದು ಇನ್ನೊಬ್ಬರಿಗೆ ನೀಡುವುದನ್ನು ಅಸ್ಥಿಮಜ್ಜೆ  (Bone Marrow Transplant) ಎಂದು ಕರೆಯಲಾಗುತ್ತದೆ. ಈ ಅಸ್ಥಿಮಜ್ಜೆ ಕಸಿಯನ್ನು ಹಲವು ರೀತಿಯ ಖಾಯಿಲೆಗಳಿಗೆ ಚಿಕಿತ್ಸೆಗಾಗಿ ಉಪಯೋಗಿಸಲಾಗುತ್ತದೆ. ಮುಖ್ಯವಾಗಿ ರಕ್ತದ ಕ್ಯಾನ್ಸರ್ ಕಾಯಿಲೆಗೆ ‘ಅಸ್ಥಿಮಜ್ಜೆ ಕಸಿ’ ಸಂಜೀವಿನಿ ಇದ್ದಂತೆ ಎಂದರೂ ತಪ್ಪಲ್ಲ.


ಮೂಳೆಯ ಮಧ್ಯಭಾಗದಲ್ಲಿರುವ ಲೋಳೆಯಂತಹಾ ಅಸ್ಥಿಮಜ್ಜೆ, ನಿಜವಾಗಿಯೂ ವೈದ್ಯಲೋಕದ ಜಗತ್ತಿನ ವಿಸ್ಮಯಕಾರಿಯಾದ ದಿವ್ಯಔಷಧಿ ಎಂದರೂ ಅತಿಶಯೋಕ್ತಿಯಲ್ಲ ನಮ್ಮ ದೇಹದ ಬಿಳಿರಕ್ತಕಣ, ಕೆಂಪು ರಕ್ತಕಣ ಮತ್ತು ಪ್ಲೇಟ್‍ಲೆಟ್‍ಗಳು ಕೂಡಾ ಅಸ್ಥಿಮಜ್ಜೆಯಲ್ಲಿಯೇ ತಯಾರಾಗುತ್ತದೆ. ಈ ಎಲ್ಲಾ ರಕ್ತಕಣಗಳು ತಮ್ಮ ಜೀವಿತಾವಧಿ ಮುಗಿದ ಬಳಿಕ ಹೊಸ ಹೊಸ ಕಣಗಳು ಉತ್ಪಾದನೆಯಾಗುತ್ತಲೇ ಇರಬೇಕು. ಇದು ನಿರಂತರವಾದ ಪ್ರಕ್ರಿಯೆಯಾಗಿದ್ದು ಕಾಲ ಕಾಲಕ್ಕೆ ಹೊಸ ಹೊಸ ರಕ್ತಕಣಗಳು ಉತ್ಪಾದನೆಗೊಂಡು ರಕ್ತಕ್ಕೆ ಬಿಡುಗಡೆಯಾಗುತ್ತದೆ. ಏನಿಲ್ಲವೆಂದರೂ ದಿನವೊಂದಕ್ಕೆ ಒಂದು ಮಿಲಿಯನ್‍ಗಳಿಗಿಂತಲೂ ಅಧಿಕ ರಕ್ತದ ಜೀವಕೋಶಗಳು ರಕ್ತಕ್ಕೆ ಬಿಡುಗಡೆಗೊಳ್ಳುತ್ತದೆ. ದೇಹದ ಅತ್ಯಂತ ಅಗತ್ಯವಾದ ಮತ್ತು ನಿರ್ಣಾಯಕವಾದ ಜೀವಕೋಶಗಳಾದ ಆಕರ ಕೋಶಗಳು (Stem Cells) ಕೂಡಾ ಅಸ್ಥಿಮಜ್ಜೆಯಲ್ಲಿಯೇ ಉತ್ಪಾದನೆಯಾಗುತ್ತದೆ. ಅಕರ ಕೋಶಗಳೇ ಮುಂದೆ ಬೇರೆ ಬೇರೆ ರೀತಿಯ ಜೀವಕೋಶಗಳಾಗಿ ಮಾರ್ಪಾಡಾಗುತ್ತದೆ ಮತ್ತು ದೇಹದ ಎಲ್ಲಾ ಜೈವಿಕ ಕ್ರಿಯೆಗಳನ್ನು ನಿರ್ವಹಿಸುವಲ್ಲಿ ಮುಖ್ಯ ಭೂಮಿಕೆ ವಹಿಸುತ್ತದೆ.  


ಅಸ್ಥಿಮಜ್ಜೆ ಕಸಿಯ ಹಿಂದಿನ ಉದ್ದೇಶಗಳು



1. ಕೆಲವೊಂದು ಕಾಯಿಲೆಗಳಲ್ಲಿ ಮೂಳೆಯೊಳಗಿನ ಅಸ್ಥಿಮಜ್ಜೆ ಸಂಪೂರ್ಣವಾಗಿ ನಾಶವಾಗಿ ಉಪಯೋಗ ರಹಿತವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಉಪಯೋಗರಹಿತವಾದ ಅಸ್ಥಿಮಜ್ಜೆಯನ್ನು ತೆಗೆದು ಆರೋಗ್ಯವಂಥ ಅಸ್ಥಿಮಜ್ಜೆಯನ್ನು ಕಸಿ ಮಾಡಲಾಗುತ್ತದೆ. ದಾನಿಗಳಿಂದ ಪಡೆದ ಅಸ್ಥಿಮಜ್ಜೆಯನ್ನು ಈ ಸಂದರ್ಭಗಳಲ್ಲಿ ಬಳಸಲಾಗುತ್ತದೆ.

ಉದಾ: ರಕ್ತದ ಕ್ಯಾನ್ಸರ್ (ಲ್ಯೂಕೆಮಿಯಾ), ಎಪ್ಟಾಸ್ಟಿಕ್ ಅನೀಮಿಯ ಮತ್ತು ಸಿಕಲ್‍ಸೆಲ್ ಅನೀಮಿಯ ಇತ್ಯಾದಿ.


2. ಅದೇ ರೀತಿ ವಿವಿಧ ರೀತಿಯ ಅರ್ಬುಧ ರೋಗಗಳಲ್ಲಿ ಕೀಮೋಥೆರಫಿ ಎಂಬ ಔಷಧಿಗಳ ಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆ (ರೇಡಿಯೋ ಥೆರಫಿ)ಗಳ  ಮುಖಾಂತರ ಅನಾರೋಗ್ಯ ಪೀಡಿತ ಅಸ್ಥಿಮಜ್ಜೆಯನ್ನು ನಾಶಪಡಿಸಲಾಗುತ್ತದೆ. ಒಂದು ವೇಳೆ ಈ ರೀತಿ ನಾಶ ಪಡಿಸಲು ಸಾಧ್ಯವಾಗದೇ ಇದ್ದಾಗ ಹೊಸತಾದ ಅಸ್ಥಿಮಜ್ಜೆಯನ್ನು  ಕಸಿ ಮಾಡಿ ಅನಾರೋಗ್ಯವಂತ ಅಸ್ಥಿಮಜ್ಜೆಯನ್ನು ಶಸ್ತ್ರ ಚಿಕಿತ್ಸೆ ಮುಖಾಂತರ ತೆಗೆಯಲಾಗುತ್ತದೆ. ಕೆಲವೊಮ್ಮೆ ವಿಕಿರಣ ಚಿಕಿತ್ಸೆ ಮತ್ತು ಹಿಮೋಥೆರಫಿ ಔಷಧಿಗಳ ಸೇವನೆಯಿಂದ ರೋಗಿಯ ಆರೋಗ್ಯವಂತ ಅಸ್ಥಿ ಮಜ್ಜೆ ಕೂಡಾ ಅನಾರೋಗ್ಯವಂತ ಅಸ್ಥಿಮಜ್ಜೆಯ ಜೊತೆಗೆ ನಾಶವಾಗಬಹುದು. ಈ ಸನ್ನಿವೇಶಗಳಲ್ಲಿ ವ್ಯಕ್ತಿಯ ರೋಗ ಪ್ರತಿಬಂಧಕ ಶಕ್ತಿ ಕುಂಠಿತವಾಗಬಹುದು.  ವ್ಯಕ್ತಿಯ ಆರೋಗ್ಯಕ್ಕೆ ಆರೋಗ್ಯವಂತ ಅಸ್ಥಿಮಜ್ಜೆ ಹುಟ್ಟುಹಾಕುವುದು ಅತೀ ಅಗತ್ಯ. ಈ ಸಂದರ್ಭಗಳಲ್ಲಿ ಆರೋಗ್ಯವಂತ ಅಸ್ಥಿಮಜ್ಜೆ ಕಸಿಮಾಡಿ ನಿರಂತರವಾಗಿ ಆಕರಕೋಶಗಳು ಕೆಲಸಮಾಡುವಂತೆ ಪ್ರೇರೆಪಿಸಿ ವ್ಯಕ್ತಿಯ ಆರೋಗ್ಯವನ್ನು ವೃದ್ಧಿಸಲಾಗುತ್ತದೆ.


3. ಕೆಲವೊಂದು ಅನುವಂಶಿಕ ವಂಶವಾಹಿ ರೋಗಿಗಳಲ್ಲಿಯೂ ಅಸ್ಥಿಮಜ್ಜೆ ಸರಿಯಾಗಿ ಕೆಲಸಮಾಡುವುದಿಲ್ಲ. ಮತ್ತು ತನ್ನಿಂತಾನೆ ನಾಶವಾಗುತ್ತದೆ. ಉದಾ: ಹರ್ಲರ್ಸ್ ಸಿಂಡ್ರೋಮ್ ಈ ಸಂದರ್ಭಗಳಲ್ಲಿ ಹೊಸದಾಗಿ ಅಸ್ಥಿಮಜ್ಜೆ ಹುಟ್ಟು ಹಾಕಲು ಅಸ್ಥಿಮಜ್ಜೆಯ ಕಸಿ ಅನಿವಾರ್ಯ. 


ಅಸ್ಥಿಮಜ್ಜೆ ಕಸಿಯ ಅಗತ್ಯವಿರುವ ರೋಗಗಳು

1. ಥಾಲಸೇಮಿಯಾ, ಅಪ್ಲಾಸ್ಟಿಕ್ ಅನೀಮಿಯ ಮತ್ತು ಸಿಕಲ್‍ಸೆಲ್ ಅನೀಮಿಯ ಎಂಬ ರಕ್ತದ ಖಾಯಿಲೆಗಳು 

2. ರಕ್ತದ ಕ್ಯಾನ್ಸರ್ ರೋಗಗಳಾದ ಲ್ಯೂಕೇಮಿಯಾ

3. ಮಲ್ಟಿಪಲ್ ಮಯಲೋಮ ಎಂಬ ಅಸ್ಥಿಮಜ್ಜೆಯ ಖಾಯಿಲೆ.

4. ನ್ಯೂರೋಬ್ಲಾಸ್ಟೊಮಾ ಎಂಬ ನರಕೋಶಗಳ ಕ್ಯಾನ್ಸರ್

5. ಲಿಂಪೋಮಾ (ಹಾಡ್ಕಿನ್ ಮತ್ತು ನಾನ್ ಹಾಡ್‍ಕಿನ್ ಲಿಂಪೋಮಾ)

6. ಪುರುಷರ ವೃಷಣದ ಕ್ಯಾನ್ಸರ್ ಮತ್ತು ಮಹಿಳೆಯರ ಸ್ತನದ ಕ್ಯಾನ್ಸರ್

 

ಯಾರು ದಾನ ಮಾಡಬಹುದು? ಹೇಗೆ ದಾನ ಮಾಡಬಹುದು?

ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ 18ರಿಂದ 50 ವರ್ಷಗಳವರೆಗೆ ಅಸ್ಥಿಮಜ್ಜೆ ದಾನ ಮಾಡಬಹುದು. ನೀವು ದಾನ ಮಾಡುವುದೆಂದು ನಿರ್ಧರಿಸಿದಲ್ಲಿ ಅಗತ್ಯ ಪರೀಕ್ಷೆ ಮಾಡಿಸಿಕೊಂಡು ದಾನಿಗಳಾಗಿ ನೋಂದಾವಣೆ ಮಾಡಬೇಕು. ಯಾವುದೇ ಕಾರಣಕ್ಕೂ ಹಿಂಜರಿಕೆ ಮಾಡಬಾರದು. ಮತ್ತು ನಿಮ್ಮ ನಿರ್ಧಾರಕ್ಕೆ ಬದ್ಧರಾಗಿರಬೇಕು. ನಿಮ್ಮ ಅಧಿಕೃತ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನೊಂದಾಯಿಸಿಕೊಳ್ಳಬೇಕು. 

ಮೊದಲಾಗಿ ದಾನ ಮಾಡಲು ಸಮ್ಮತ್ತಿಸುವ ಒಪ್ಪಂದಕ್ಕೆ ಸಹಿ ಹಾಕಬೇಕು. ಹಾಗೇ ಮಾಡಿದ ಬಳಿಕ ನಿಮ್ಮ ದೇಹದಿಂದ 5ಎಂ.ಎಲ್. ರಕ್ತವನ್ನು ತೆಗೆಯಲಾಗುತ್ತದೆ. ಮತ್ತು ನಿಮ್ಮ ದೇಹದ ಬಿಳಿ ರಕ್ತಕಣಗಳ ಎಚ್.ಎಲ್.ಎ (Human Leulocyte Antigen) ಎಂಬ ರಕ್ತಕಣಗಳ ಬಗೆಯನ್ನು ನಿರ್ಧರಿಸಲಾಗುತ್ತದೆ. ನಿಮ್ಮ ರಕ್ತದ ಎಚ್.ಎಲ್.ಎ ಎಂಬ ರಕ್ತಕಣಕ್ಕೆ, ಖಾಯಿಲೆಯಿರುವ ವ್ಯಕ್ತಿಯ ಎಚ್.ಎಲ್.ಎ ರಕ್ತಕಣಗಳಿಗೆ ಹೊಂದಾಣಿಕೆಯಾದಲ್ಲಿ ನಿಮ್ಮ ಮೂಳೆಯೊಳಗಿನ ಅಸ್ಥಿಮಜ್ಜೆಯನ್ನು ದಾನವಾಗಿ ಪಡೆಯಲಾಗುತ್ತದೆ.


ಅಸ್ಥಿಮಜ್ಜೆಯ ಕಸಿಯ ವಿಧಗಳು

ಮೂರು ವಿಧಗಳಿವೆ

1. ರೋಗಿಯ ದೇಹದಿಂದ ಅಸ್ಥಿಮಜ್ಜೆಯಿಂದ ಆಕರಕೋಶಗಳನ್ನು ಬೆರ್ಪಡಿಸಿ ಪುನಃ ರೋಗಿಗೆ ನೀಡುವುದು

2. ರೋಗಿಯ ಅನುರೂಪವಾದ ಅವಳಿಯಿಂದ ಆಕರಕೋಶಗಳನ್ನು ಕಸಿಮಾಡುವುದು.

3. ರೋಗಿಯ ಸಹೋದರ, ಸಹೋದರಿ, ಪಾಲಕರ ಸಂಬಂಧಕರ ಅಥವಾ ತೀರ ಅಪರಿಚಿತರ ಆಕರಕೋಶಗಳನ್ನು ಕಸಿಮಾಡುವುದು.


ದಾನ ಮಾಡುವ ವಿಧಾನ 

ಅಸ್ಥಿಮಜ್ಜೆ ಕಸಿಯಲ್ಲಿ ಎರಡು ವಿಧಾನವಿದೆ. 

1. ರಕ್ತದ ಮುಖಾಂತರ (PBSC): ಅಸ್ಥಿಮಜ್ಜೆಯಲ್ಲಿರುವ ಆಕರಕೋಶಗಳನ್ನು ಬೇರ್ಪಡಿಸಿ (ಯಂತ್ರದ ಮುಖಾಂತರ) ದಾನಿಗಳಿಂದ ದಾನವಾಗಿ ಪಡೆದು ಸೂಕ್ತ ರೋಗಿಗಳಿಗೆ ನೀಡುವುದು

ಈ ಪ್ರಕ್ರಿಯೆಯಲ್ಲಿ ದಾನಿಗಳಿಗೆ ಯಾವುದೇ ಸಾಂಕ್ರಾಮಿಕ ರೋಗ ಇಲ್ಲವೆಂದು (ಹೆಪಟೈಟಿಸ್, ಏಡ್ಸ್) ನಿರ್ಧರಿಸಲಾಗುತ್ತದೆ ನಿಮ್ಮ ರಕ್ತಕಣದ ಎಚ್‌ಎಲ್‌ಎ, ರೋಗಿಯ ರಕ್ತಕಣದ ಎಚ್ಎಲ್ಎ ಗೆ ಹೊಂದಾಣಿಕೆಯಾದಲ್ಲಿ, ನೀವು ದಾನ ಮಾಡಲು ಸಮ್ಮತಿಸಿದ್ದಲ್ಲಿ, ನಿಮಗೆ ದಿನಕ್ಕೊಂದರಂತೆ 5 ಚುಚ್ಚು ಮದ್ದುಗಳನ್ನು 5 ದಿನ ನೀಡಲಾಗುತ್ತದೆ. ಈ ಚುಚ್ಚು ಮದ್ದು ನಿಮ್ಮ ಎಲುಬಿನ ಒಳಗಿನ ಅಸ್ಥಿಮಜ್ಜೆಯನ್ನು ಉತ್ತೇಜಿಸುತ್ತದೆ. ಮತ್ತು ಅದರೊಳಗಿನ ಆಕರಕೋಶಗಳನ್ನು ರಕ್ತಕ್ಕೆ ಸೇರುವಂತೆ ಪ್ರಚೋದಿಸುತ್ತದೆ. ಆರನೇ ದಿನ ನೀವು ಆಸ್ಪತ್ರೆಗೆ ದಾಖಲಾಗಿ ಪ್ಲಾಸ್ಮಾಪರೆಸೀಸ್ ಎಂಬ ವಿಧಾನದಿಂದ ನಿಮ್ಮ ರಕ್ತದಲ್ಲಿನ ಆಕರ ಕೋಶಗಳನ್ನು ವಿಶೇಷ ಯಂತ್ರದ ಮೂಲಕ ಬೇರ್ಪಡಿಸಿ ಸೋಸಿ ಶೇಖರಿಸಲಾಗುತ್ತದೆ. ಈ ರೀತಿ ಸಂಗ್ರಹಿಸಿದ ಆಕರಕೋಶಗಳನ್ನು ಖಾಯಿಲೆಯಿರುವ ಅಗತ್ಯ ರೋಗಿಗೆ ನೀಡಲಾಗುತ್ತದೆ. ನಿಮ್ಮ ದೇಹದಿಂದ ಒಂದು ಹನಿ ರಕ್ತವೂ ವ್ಯರ್ಥವಾಗುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿ ನೋವು ಇರುವುದಿಲ್ಲ. ಸಣ್ಣ ಚುಚ್ಚು ಮದ್ದು ಕೊಟ್ಟಾಗ ಸ್ವಲ್ಪ ನೋವಾಗಬಹುದು. ಕೆಲವರಿಗೆ ಔಷಧಿಯಿಂದಾಗಿ ತಲೆ ಸುತ್ತುವುದು, ವಾಂತಿ, ಸುಸ್ತು ಉಂಟಾಗಬಹುದು. ಮತ್ಯಾವುದೋ ಅಡ್ಡ ಪರಿಣಾಮ ಇರುವುದಿಲ್ಲ. ರಕ್ತದಾನದ ಪ್ರಕ್ರಿಯೆಯಂತೆ ನಡೆಯುವ ಈ ಕ್ರಿಯೆಗೆ ಕೇವಲ ಒಂದು ಗಂಟೆ ತಗಲುತ್ತದೆ. ನಿಮ್ಮಿಂದ ದಾನವಾಗಿ ತೆಗೆಯಲ್ಪಟ್ಟ ಆಕರಕೋಶಗಳು, ಪುನಃ ಮೂರು ವಾರಗಳಲ್ಲಿ ಉತ್ಪತ್ತಿಯಾಗುತ್ತದೆ. ಯಾವುದೇ ರೀತಿಯ ಅಡ್ಡ ಪರಿಣಾಮ ಮತ್ತು ತೊಂದರೆಗಳು ಖಂಡಿತವಾಗಿಯೂ ಸಂಭವಿಸುವುದಿಲ್ಲ. ಇದು ಅತ್ಯಂತ ವೈಜ್ಞಾನಿಕವಾದ ಮತ್ತು ಸುರಕ್ಷಿತವಾದ ವಿಧಾನವಾಗಿದೆ. ಈ ರೀತಿಯ ವಿಧಾನದಲ್ಲಿ ದಾನಿಗಳಿಗೆ ಯಾವುದೇ ರೀತಿಯ ಅರಿವಳಿಕೆಯ ಅವಶ್ಯಕತೆ ಇರುವುದಿಲ್ಲ.


2. ಅಸ್ಥಿಮಜ್ಜೆ ಕಸಿ (Bone Marrow Transplant)

ಈ ವಿಧಾನದಲ್ಲಿ ದಾನಿಗಳನ್ನು ಕುಲಂಕುಶವಾಗಿ ಪರೀಕ್ಷೆ ಮಾಡಲಾಗುತ್ತದೆ. ಅರಿವಳಿಕೆ ತಜ್ಞರ ಸಹಾಯದಿಂದ ದಾನಿಯನ್ನು ಮೂರ್ಚೆತಪ್ಪಿಸಿ ಮೂಳೆಯೊಳಗಿನ ಅಸ್ಥಿಮಜ್ಜೆಯನ್ನು ತೆಗೆಯಲಾಗುತ್ತದೆ. ದಾನಿಯ ಸೊಂಟದ ಎಲುಬಿನ (ಪೆಲ್ವಿಕ್ ಬೋನ್) ಒಳಗಿರುವ ಅಸ್ಥಿ ಮಜ್ಜೆಯನ್ನು ಸೂಜಿಯ ಮುಖಾಂತರ ತೆಗೆಯಲಾಗುತ್ತದೆ. ಮೂರುವಾರಗಳಲ್ಲಿ ಈ ಅಸ್ಥಿಮಜ್ಜೆ ಪುನಃ ಉತ್ಪತ್ತಿಯಾಗುತ್ತದೆ. ಈ ರೀತಿಯ  ಕ್ರಮ ಅತೀ ವಿರಳವಾಗಿ ನಡೆಸಲಾಗುತ್ತದೆ. ಹೆಚ್ಚಾಗಿ ಅರಿವಳಿಕೆ ನೀಡಿದೆ, ಮೂರ್ಚೆ ತಪ್ಪಿಸದೇ ಮಾಡುವ, ರಕ್ತದ ಮುಖಾಂತರ ಆಕರ ಕೋಶಗಳನ್ನು ತೆಗೆಯುವ ಸಣ್ಣ ಪ್ರಕ್ರಿಯೆ ಹೆಚ್ಚು ಜನಪ್ರಿಯವಾಗಿದೆ. ಸಾಮಾನ್ಯವಾಗಿ ಸೊಂಟದ ಎಲುಬಿನ (ಪೆಲ್ವಿಕ್ ಬೋನ್) ಕಾಲಿನ ಎಲುಬಾದ (ಟಿಬಿಯ ಬೋನ್) ಮತ್ತು ಎದೆಯ ಭಾಗದ (ಸ್ಟರ್ನಮ್ ಎಲುಬು) ಮೂಳೆಯಿಂದ ಅಸ್ಥಿಮಜ್ಜೆಯನ್ನು ತೆಗೆಯಲಾಗುತ್ತದೆ. ಹೀಗೆ ತೆಗೆದ ಅಸ್ಥಿ ಮಜ್ಜೆಯನ್ನು ಶೀತಲಿಕರಿಸಿ ಶೇಖರಿಸಲಾಗುತ್ತದೆ. ಮತ್ತು ರೋಗಿಯ ಅಗತ್ಯಕ್ಕನುಸಾರವಾಗಿ ಉಪಯೋಗಿಸಲಾಗುತ್ತದೆ. ರೋಗಿಯ ವಯಸ್ಸು, ಆರೋಗ್ಯವನ್ನು ಗಮನದಲ್ಲಿರಿಸಿ ವೈದ್ಯರು ಸೂಕ್ರ ನಿರ್ಧಾರ ತಳೆದು ಯಾವ ರೀತಿಯಲ್ಲಿ ಅಸ್ಥಿ ಮಜ್ಜೆ ಕಸಿಮಾಡಬೇಕು ಎಂದು ನಿರ್ಧರಿಸುತ್ತಾರೆ.


ಕೊನೆಮಾತು:

ವಿಶ್ವದಾದ್ಯಂತ ವರ್ಷವೊಂದರಲ್ಲಿ 75 ಸಾವಿರಕ್ಕೂ ಹೆಚ್ಚು ಆಕರಕೋಶ ಮತ್ತು ಅಸ್ಥಿಮಜ್ಜೆಯ ಕಸಿ ಮಾಡಲಾಗುತ್ತದೆ. ಪ್ರತಿವರ್ಷ ಈ ಸಂಖ್ಯೆ 20 ಶೇಕಡಾದಷ್ಟು ಪ್ರತೀ ವರ್ಷ ಹೆಚ್ಚಾಗುತ್ತಲೇ ಇದೆ. ಆದರೆ ಅಸ್ಥಿಮಜ್ಜೆ ದಾನಿಗಳ ಸಂಖ್ಯೆ ಮಾತ್ರ ಏರುತ್ತಲೇ ಇಲ್ಲದಿರುವುದೇ ದೌರ್ಭಾಗ್ಯದ ಸಂಗತಿ. ಪ್ರತಿ 10ರಲ್ಲಿ ಒಬ್ಬರಿಗೆ ಮಾತ್ರ ಅಸ್ಥಿಮಜ್ಜೆ ಅಥವಾ ಆಕರಕೋಶಗಳು ದೊರಕುತ್ತದೆ ಎಂಬುದೇ ವಿಷಾದಕರ ವಿಚಾರವಾಗಿದೆ. ಕೇವಲ 30 ಶೇಕಡಾ ಮಂದಿ ಸಂಬಂಧಿಕರ ಬಳಿಯಿಂದ ಅಸ್ಥಿಮಜ್ಜೆಯನ್ನು ಪಡೆಯುವ ಸಾಧ್ಯತೆ ಇದೆ. ಉಳಿದ 70 ಶೇಕಡಾ ಮಂದಿ ದಾನಿಗಳಿಂದಲೇ ಪಡೆಯಬೇಕಾದ ಅನಿವಾರ್ಯತೆ ಇದೆ. ಸಾಮಾನ್ಯವಾಗಿ ಒಬ್ಬ  ರೋಗಿಗೆ ಸರಿಯಾಗಿ ಹೊಂದಾಣಿಕೆಯಾಗುವ ಅಸ್ಥಿಮಜ್ಜೆ ಸಿಗಲು ಸುಮಾರು 20,000 ಮಂದಿ ದಾನಿಗಳ ರಕ್ತದೊಂದಿಗೆ ಹುಡುಕಾಡುವ ಅನಿವಾರ್ಯತೆ ಇದೆ. ಅಂತಹಾ ದಾನಿಗಳಲ್ಲಿ ನೀವೊಬ್ಬರಾಗಲೂಬಹುದು. ಈ ನಿಟ್ಟಿನಲ್ಲಿ ನಿಮ್ಮ ದೇಶದಲ್ಲಿ ಅಸ್ಥಿಮಜ್ಜೆ ದಾನಿಗಳ ನೊಂದಾವಣಾ ಕೇಂದ್ರ ಮತ್ತು ದಾಖಲಾತಿ ವಿವರದ ತರ್ತು ಅಗತ್ಯತೆ ಇದೆ. ಹಾಗಾದಲ್ಲಿ ಮಾತ್ರ ಅಗತ್ಯ ರೋಗಿಗಳಿಗೆ ಸೂಕ್ತ ಹೊಂದಾಣಿಕೆ ಆಗುವ ಅಸ್ಥಿಮಜ್ಜೆ ಸಕಾಲದಲ್ಲಿ ದೊರೆತು ರೋಗಿಯ ಜೀವ ಉಳಿಸುವಲ್ಲಿ ವೈದ್ಯರಿಗೆ ಅನುಕೂಲವಾಗಬಹುದು. ಅಮೇರಿಕಾ, ಚೈನಾ, ಯುರೋಪ್ ದೇಶಗಳಲ್ಲಿ ಮಾತ್ರ ಬಿ.ಎಂ.ಆರ್ ಅಥವಾ ಅಸ್ಥಿಮಜ್ಜೆ ದಾನಿಗಳ ನೊಂದಾವಣೆ ರಿಜಿಸ್ಟ್ರಿ ಇದೆ. ಚೀನಾ ದೇಶ ಒಂದರಲ್ಲೇ ಒಂದು ಕೋಟಿ ಅಸ್ಥಿಮಜ್ಜೆ ದಾನಿಗಳ ವಿವರ ಇರುವುದು ಸೋಜಿಗದ ಸಂಗತಿ. ಏಷ್ಯಾ ಉಪಖಂಡದಲ್ಲಿ ಸೂಕ್ತ ದಾಖಲೆಗಳೇ ಇಲ್ಲ. ಸರಿಯಾದ ದಾನಿ ಮತ್ತು ಸೂಕ್ತ ಹೊಂದಾಣಿಕೆ ಇರುವ ದಾನಿ ಸಿಗುವುದು ಬಹಳ ಕಷ್ಟ. ಮತ್ತು ತುಂಬಾ ದುಬಾರಿಯಾಗಿಯೂ ಪರಿಣಮಿಸಿದೆ.


ಭಾರತದಂತಹ ರಾಷ್ಟ್ರಕ್ಕೆ ಬಿಎಂಆರ್ ನ ಅಗತ್ಯ ಅತಿಯಾಗಿ ಇದೆ. ನಮ್ಮ ಭಾರತದ ಜನಸಂಖ್ಯೆ 130 ಕೋಟಿಯಲ್ಲಿ ಕನಿಷ್ಠ 1 ಕೋಟಿ ದಾನಿಗಳ ದಾಖಲೆ ಇದ್ದಲ್ಲಿ ಸೂಕ್ತ. ದೌರ್ಭಾಗ್ಯವೆಂದರೆ ಎಲ್ಲಿಯೂ ಈ ದಾಖಲೆ ಲಭ್ಯವಿಲ್ಲ. ಎಚ್ ಎಲ್ ಎ ನಿಗದಿಯಾದ ದಾನಿಗಳ ನೊಂದಾವಣಾ ದಾಖಲೆ ಇದ್ದಲ್ಲಿ ಅಗತ್ಯ ರೋಗಿಗಳಿಗೆ ಸಕಾಲದಲ್ಲಿ ದಾನಿಗಳು ದೊರೆತು ರೋಗಿಯ ಜೀವ ಉಳಿಸುವಲ್ಲಿ ಸಹಕಾರಿಯಾಗಬಲ್ಲದು. 

ಈ ನಿಟ್ಟಿನಲ್ಲಿ ಇನ್ಪೋಸಿಸ್ ಫೌಂಡೇಶನ್‍ನ ನೆರವಿನೊಂದಿಗೆ ಬೆಂಗಳೂರು ವೈದ್ಯಕೀಯ ಕಾಲೇಜಿನ ಹಳೆ ವಿದ್ಯಾರ್ಥಿ ವೈದ್ಯರುಗಳು ಅಸ್ಥಿಮಜ್ಜೆ ದಾನಿಗಳ ನೊಂದಾವಣಾ ದಾಖಲಾತಿ ಮಾಡುತ್ತಿದೆ. ದಾನ ನೀಡಲು ಮುಂದೆ ಬರುವ ರೋಗಿಗಳ ಎಚ್ಎಲ್ಎ ನಿರ್ಧರಿಸಲು ಉಚಿತವಾಗಿ ಪರೀಕ್ಷೆ ಮಾಡಲಾಗುತ್ತದೆ. ಸಾವಿರಾರು ರೂಪಾಯಿ ತಗಲುವ ಈ ವೆಚ್ಚವನ್ನು ಉಚಿತವಾಗಿ ಭರಿಸಲಾಗುತ್ತದೆ. 4 ಕೋಟಿಯ ವೆಚ್ಚವಿರುವ  ಈ ಪ್ರೊಜೇಕ್ಟ್‍ಗೆ  ಇನ್‍ಪೋಸಿಸ್ ಈಗಾಗಲೇ 2.5 ಕೋಟಿ ಹಣವನ್ನು ನೀಡಿದೆ. ಕೆಲವೊಮ್ಮೆ ಎಚ್‌ಎಲ್ಎ ಹೊಂದಾಣಿಕೆ ಮಾಡಲು ರೋಗಿಗಳು ಲಕ್ಷಾಂತರ ರೂಪಾಯಿ ಖರ್ಚುಮಾಡುವ ಅನಿವಾರ್ಯತೆಯೂ ಇದೆ. ಒಬ್ಬ ಸರಿಯಾಗಿ ಹೊಂದಾಣಿಕೆ ಆಗುವ ದಾನಿ ಸಿಗಲು ಹಲವೊಮ್ಮೆ ನೂರಾರು ದಾನಿಗಳ ರಕ್ತದ ಜೊತೆ ಹೊಂದಾಣಿಕೆ ಮಾಡಬೇಕಾಗಲೂ ಬಹುದು. ಸೂಕ್ತ ಹೊಂದಾಣಿಕೆ ಆದ ಅಸ್ಥಿಮಜ್ಜೆ ದೊರಕಿದ ಬಳಿಕ ಕೂಡಾ ಅಸ್ಥಿಮಜ್ಜೆ ಕಸಿ ಮಾಡಲು ಪುನಃ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗಬಹುದು. ಈ ನಿಟ್ಟಿನಲ್ಲಿ ರೋಗಿಯ ಸಮಯ ಮತ್ತು ಹಣ ಉಳಿಸುವಲ್ಲಿ ಬಿ.ಎಂ.ಆರ್. ಅಥವಾ ಅಸ್ಥಿಮಜ್ಜೆ ನೊಂದಾವಣೆ ದಾಖಲಾತಿ ಅಂತ್ಯಂತ ಮಹತ್ತರ ಪಾತ್ರ ವಹಿಸುತ್ತದೆ. ಗೆಳೆಯರೇ ಇನ್ಯಾಕೆ ಹಿಂದೆ ಮುಂದೆ ಯೋಚಿಸುತ್ತಿರಾ? ನೀವೂ ನಿಮ್ಮ ಹೆಸರನ್ನು ನೊಂದಾಯಿಸಿ ಅಸ್ಥಿಮಜ್ಜೆ ದಾನ ಮಾಡಲು ಇಂದೇ ಕಟ್ಟಿಬದ್ಧರಾಗಿ ಮತ್ತು ನಿಮ್ಮ ಗೆಳೆಯರನ್ನೂ ದಾನ ಮಾಲು ಪ್ರೇರೇಪಿಸಿ. ಅಸ್ಥಿಮಜ್ಜೆ ದಾನ ಮಾಡುವ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಿ ಮತ್ತು ಎಲ್ಲರಿಗೂ ಸಂದೇಶ ತಲುಪಿಸಿ, ಹಲವರನ್ನು ಉತ್ತೇಜಿಸಿದಲ್ಲಿ ಹಲವು ಜೀವಗಳನ್ನು ಉಳಿಸಿದ ಸಾರ್ಥಕತೆ ನಿಮ್ಮದಾಗಬಹುದು. ಭಾರತದಂತಹ ಬೃಹತ್ ಜನಸಂಖ್ಯೆ ಇರುವ ಮುಂದುವರಿಯುತ್ತಿರುವ ರಾಷ್ಟ್ರಕ್ಕೆ ಈ ಕಾರ್ಯದ ತುರ್ತು ಅಗತ್ಯವೂ ಇದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ವಿಳಾಸ: 1. ಡಾ| ಕೆ ಲಕ್ಷ್ಮಣ್, ಮೊಬೈಲ್ ನಂಬರ್: 9845179891.  ವೆಬ್‍ವಿಳಾಸ: www.bonemarrowregistry.co.in ಅಥವಾ ಮಿಂಚಂಚೆ bmcbmr@gmail.com, klakshman58@gmail.com ಅಥವಾ www.facebook.com/bonemarrowregistry.

  

-ಡಾ|| ಮುರಲೀ ಮೋಹನ್ ಚೂಂತಾರು 

ಸಂಘಟನಾಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ

ನಿಟ್ಟೆ ವಿಶ್ವವಿದ್ಯಾನಿಲಯ, ಮಂಗಳೂರು

ಮೊ: 09845135787


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top