*******
ದೇವನೆಲ್ಲಿ ಇರುವನೆಂದು
ಮನುಜ ನೀನು ಕೇಳುತಿರುವೆ.
ಯಾಕೆ ಕಾಣದಾಗಿ ಹೋಯ್ತು
ಇರುವ ದೇವ ಹೃದಯದೊಳಗೆ.
ಸಾಗರದೊಳಗಿದ್ದುಕೊಂಡು
ಸಾಗರ ತೋರೆನುವಂತೆಯೆ.
ಕತ್ತಲಿನೊಳಗಿದ್ದುಕೊಂಡು
ಕತ್ತಲ ತೋರೆನುವಂತೆಯೆ.
ಗೀತೆಯಲ್ಲಿ ಹೇಳಿದಂತೆ
ಪ್ರಕೃತಿ ಇದು ದೇವ ಕಾಯ.
ಅದನು ತಿಳಯದಿರುವೆ ಮನುಜ
ನಿನಗೆಲ್ಲವು ಗೊಂದಲಮಯ.
ವಸ್ತುವಿಂದ ಬೇರ್ಪಟ್ಟರೆ
ವಸ್ತು ಕಾಣುವಂತೆ ನಮಗೆ
ದೇವನಿಂದ ಬೇರ್ಪಡದೆ
ದೇವ ಕಾಣಲುಂಟೆ ನಮಗೆ.
ದೇವನಿರದ ಜಾಗವಿಲ್ಲ
ಬೇರ್ಪಡಿಸುವ ಮಾತೆ ಇಲ್ಲ.
ಕುರುಡ ಕರಿಯ ಮುಟ್ಟುವಂತೆ
ದೇವನನ್ನು ತಿಳಿಯಬೇಕು
ಕಂಡದ್ದೂ ಸತ್ಯವಿಹುದು
ಕಾಣದ್ದೂ ಸತ್ಯವಿಹುದು.
ನಮ್ಮ ಅರಿವು ಎಷ್ಟೊ ಅಷ್ಟೆ
ದೇವ ನಮಗೆ ಗೋಚರಿಸುವ.
ಅಣುವಿಗಿಂತ ಅಣುವು ಅವನು
ಮಹತಿಗಿಂತ ಮಹತ್ತವನು.
ನೋಡದವನ ಬಿಟ್ಟ ಕಣ್ಣು
ನೋಡು ಅವನ ಮುಚ್ಚಿ ಕಣ್ಣು.
*********
-ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ