ಸಾರಿ ಹೇಳಿದೆ ನೀನು ಬಟ್ಟೆ ಸವೆದಿದೆ ಎಂದು
ಧರಿಸಲಾಗದು ಮುಂದೆ ಸಡಿಲವಾಗುವುದೆಂದು
ಉದುರಿ ಹೋಗುವ ಮುನ್ನ ಬಿಗಿಯಗೊಳಿಸಲೆ ಬೇಕು
ಬಟ್ಟೆಯೊಳಗಿನ ಮೋಹ ಬಿಟ್ಟು ಹೋಗದು ಎಂದು.
ಅರಿವೆ ಹೊಸತೆಂಬಂಥ ಅರಿವೆನ್ನದಾಗಿತ್ತು
ಅವಧಿ ಮೀರದೆ ಸವೆದು ಹೋಗದಿರುವಂತಿತ್ತು
ಅನುದಿನವು ಅರಿವೆಯನು ಎನಿತೆನಿತು ತೊರೆವಂಥ
ವಾಸ್ತವದ ಅರಿವಿರದ ಭಾವ ನನ್ನೊಳಗಿತ್ತು
ಆ ಒಂದು ದಿನದಲ್ಲಿ ಅರಿವೆ ಹರಿದುದ ಕಂಡೆ
ನುರಿತ ದರ್ಜಿಯ ಕಂಡು ಹೊಲಿದುಕೊಡು ಇದನೆಂದೆ
ದರ್ಜಿಯಾದರೊ ಅರಿವೆ ಹೊಲಿಯಬಲ್ಲನೆ ಹೊರತು
ಸವೆದ ಅರಿವೆಗೆ ಹೊಲಿಗೆ ಹಾಕಬಲ್ಲನೆ ಅವನು
ಆದರೂ ಅನುಭವದ ಮೂಟೆಯನು ತಡಕಾಡಿ
ತೇಪೆಯನು ಹಾಕಿದನು ಮತ್ತೆ ಉಡುವಂತೆಯೇ.
ಚಿಂದಿಯಾಗುತಲಿರುವ ಬಟ್ಟೆಯಲಿ ವ್ಯಾಮೋಹ
ಎನಿತೆನಿತು ಕಳಕೊಂಡೆ ದಿನವು ಕಳೆದಂತೆಯೇ.
ಹೊಸ ಬಟ್ಟೆ ಉಡುವಂಥ ಸಂಭ್ರಮದಲಿ ನೀನಿರಲು
ಹಳೆ ಬಟ್ಟೆ ಮೋಹದ ಪಾಶದಲಿ ನಾನಿದ್ದೆ
ಹೊಸ ಅರಿವೆ ನೀ ಧರಿಸೆ ನಾನೆಂತು ಗುರುತಿಸಲಿ
ಆದರೂ ಹರುಷವಿದೆ ಹೊಸ ಉಡುಗೆ ಉಡುವುದಕೆ.
ಹೊಸತಾದ ಉಡುಗೆಯನು ಉಡುವ ಆ ಸಂಭ್ರಮದಲಿ
ಕೊಳೆಯಾಗದಿರುವಂಥ ಕಾಯಕವು ನಿನಗಿರಲಿ
ಹರಿಯದೇ ಇರುವಂತೆ ಮಾಸದೇ ಇರುವಂತೆ
ಅವಧಿ ಮೀರುವವರೆಗೆ ಧರಿಸುತಿರು ಸುಖದಲ್ಲಿ.
**********
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ