|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚೌತಿ ವಿಶೇಷ: ವಿದೇಶಗಳಲ್ಲೂ ಪ್ರಖ್ಯಾತ ನಮ್ಮ 'ಗಣೇಶ'

ಚೌತಿ ವಿಶೇಷ: ವಿದೇಶಗಳಲ್ಲೂ ಪ್ರಖ್ಯಾತ ನಮ್ಮ 'ಗಣೇಶ'


 

ಕ್ರಿ. ಪೂ. ದಿಂದಲೂ ನಮ್ಮ ಭಾರತೀಯ ಸಂಸ್ಕೃತಿಯು ಇತರ ದೇಶಗಳ ಮೇಲೆ ಪ್ರಭಾವ ಬೀರುತ್ತಾ ಬಂದಿದೆ. ಅನೇಕ ರಾಷ್ಟ್ರಗಳಲ್ಲಿ ಭಾರತೀಯ ಸಂಸ್ಕೃತಿ ಇಂದು ನೆಲೆಗೊಂಡಿದೆ. ಎಲ್ಲ ದೇಶಗಳಲ್ಲಿಯೂ ನಮ್ಮ ಸಂಸ್ಕೃತಿ ಆಕರ್ಷಿಲ್ಪಟ್ಟಿತು ಎಂದರೆ ತಪ್ಪಾಗಲಾರದು. ಅಲ್ಲದೆ ಬೌದ್ಧ ಮುಂತಾದ ಮತಪ್ರಚಾರಕರೂ ಸಹ ನಮ್ಮ ಸಂಸ್ಕೃತಿಯನ್ನು ಪಸರಿಸಿದವರೇ ಆಗಿದ್ದಾರೆ. ಒಟ್ಟಾರೆ ನಮ್ಮ ಸಂಸ್ಕೃತಿಯು ಒಂದಲ್ಲಾ ಒಂದು ರಾಷ್ಟ್ರದಲ್ಲಿ ಕಾಣಿಸಿಕೊಂಡಿದ್ದು ಇತಿಹಾಸ. ಥೈಲ್ಯಾಂಡ್ ಮುಂತಾದ ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ನಡೆದ ಉತ್ಖನನ ಹಾಗೂ ಭೂ ಅನ್ವೇಷಣೆ ಆಗುತ್ತಿರುವುದರಿಂದ ಅಲ್ಲಿ ಭಾರತೀಯ ಸಂಸ್ಕ್ರತಿಯ ಕುರುಹುಗಳು ಗೋಚರವಾಗಿವೆ. ಆಗ್ನೇಯ ಏಷ್ಯಾದ ಪುರಾತತ್ತ್ವ ಅಧ್ಯಯನವು ಏಷ್ಯಾದ ಒಟ್ಟು ಸಾಂಸ್ಕೃತಿಕ ವೈಭವವನ್ನು ತಿಳಿಯುವಲ್ಲಿ ತೀರ ಅವಶ್ಯವಾಗಿದೆ. ಭಾರತ ಮತ್ತು ಬೇರೆ ದೇಶಗಳೊಡನೆ ಸಂಪರ್ಕದ ಪ್ರಾಚೀನತೆಯನ್ನು ಪ್ರಾಗೈತಿಹಾಸಿಕ ಕಾಲಕ್ಕೆ ತೆಗೆದುಕೊಂಡು ಹೋಗಬಹುದಾದರೂ ಕ್ರಿಸ್ತಶಕಾರಂಭದಲ್ಲಿ ವ್ಯಾಪಾರ- ಸಾಂಸ್ಕೃತಿಕ ಸಂಬಂಧಗಳು ನೆಲೆಕಂಡದನ್ನು ಫ್ರೆಂಚ್, ಡಚ್, ಅಮೇರಿಕ ಹಾಗೂ ಸ್ಥಳೀಯ ಪುರಾತತ್ತ್ವಜ್ಞರು ನಡೆಸಿದ ಉತ್ಖನನಗಳು ಸಾಬೀತು ಪಡಿಸುತ್ತವೆ.


ಭಾರತೀಯ ಸಂಸ್ಕೃತಿಯ ಅಂಗವೆಂಬಂತಿರುವುದು “ಗಣಪತಿ”. ಇಂದು ನಮ್ಮ ನಾಡಿನಲ್ಲಿ ಗಣೇಶನ ಮಂದಿರವಿರದ ಗ್ರಾಮವಿಲ್ಲ ಎಂದು ಹೇಳುವಷ್ಟು ಜನಪ್ರಿಯ ದೇವತೆಯಾಗಿ ಗಣಪತಿ ಇದ್ದಾನೆ. ಅಲ್ಲದೇ, ನಮ್ಮ ನೆರೆಹೊರೆಯ ದೇಶಗಳಾದ ನೇಪಾಳ, ಶ್ರೀಲಂಕಾ, ಆಫ್ಘಾನಿಸ್ತಾನ, ಮಧ್ಯ ಏಷ್ಯಾ, ಇಂಡೋ ಚೈನಾ, ಇಂಡೋನೇಷ್ಯಾಗಳೆಲ್ಲೆಲ್ಲ ಗಣಪತಿಯ ಕಲ್ಪನೆಯಿತ್ತೆಂಬುದಕ್ಕೆ ಆಧಾರಗಳಿವೆ. ಶ್ರೀಲಂಕಾದ ಮಿಹಿಂತಲೆಯ ಸಮೂಹದ ಸ್ತೂಪವೊಂದನ್ನು ಶೋಧಿಸಿದಾಗ ಅದರ ಮೇಲೆ ಅನೇಕ ಗಣಗಳ ಶಿಲ್ಪಗಳನ್ನು ಗಮನಿಸಲಾಗಿದೆ. ಇಲ್ಲಿನ ಗಜಮುಖ ಗಣಪತಿಯ ಶಿಲ್ಪ ಅತ್ಯಂತ ಪ್ರಸಿದ್ಧವಾಗಿದೆಯಂತೆ. ಪೊಲೊನ್ನರುವದಲ್ಲಿ ಪದ್ಮಾಸನದಲ್ಲಿ ಕುಳಿತಿರುವ ಗಣೇಶನ ಶಿಲ್ಪ, ಗಣೇಶ ಹೀಗೆ ಅನೇಕ ಕಡೆ ಪೂಜೆಗೊಳ್ಳುತ್ತಿದ್ದಾರೆ.


ಬರ್ಮಾದ ರಂಗೂನ್ ವಸ್ತು ಸಂಗ್ರಹಾಲಯದಲ್ಲಿ ಫ್ವೆಸಂಡಾ ಪಗೋಡದಲ್ಲಿ ಪದ್ಮಾಸನಯುಕ್ತ ಗಣಪತಿ ವಿಗ್ರಹಗಳು ಸಂರಕ್ಷಿಸಲ್ಪಟ್ಟಿವೆ. ಬರ್ಮಿಯಾ ಗಣೇಶನನ್ನು “ಮಹಾಪೀನ್ನೇ” ಎಂಬುದಾಗಿ ಪೂಜಿಸುತ್ತಾರಂತೆ. ಥೈಲ್ಯಾಂಡಿನಲ್ಲಿರುವ 13 ನೇ ಶತಮಾನದ ಮಹಾರಾಜ ಲೀಲಾ ಭಂಗಿಯಲ್ಲಿ ಕುಳಿತಿರುವ ಕಂಚಿನ ಗಣೇಶ ವಿಶಿಷ್ಟವಾಗಿದೆ ಎಂಬುದಾಗಿ ತಿಳಿದುಬರುತ್ತದೆ. ಬ್ಯಾಂಕಾಕ್ ದೇವಾಲಯವೊಂದರಲ್ಲಿರುವ ಕಂಚಿನ ಮೂರ್ತಿಯೊಂದು ಕೈಯಲ್ಲಿ ಪುಸ್ತಕವನ್ನು ಹಿಡಿದುಕೊಂಡಿದೆ. ಕಾಂಬೋಡಿಯಾದಲ್ಲಿ ಕ್ರಿ.ಶ 7 ನೇ ಶತಮಾನದ ವೇಳೆಗಾಗಲೇ ಗಣೇಶನ ಗುಡಿಗಳು ಇದ್ದಿತೆಂದು ಶಾಸನಾಧಾರವಿದೆಯಂತೆ. ಇಲ್ಲಿನ ಪ್ರಸತ್ ಬಕ್‍ನಲ್ಲಿ ಕ್ರಿ.ಶ 10 ನೇ ಶತಮಾನದ ಗಣೇಶನ ಗುಡಿ ಇಂದಿಗೂ ಇರುವುದಲ್ಲದೆ ಕುಕ್ ಟ್ರಾ ಪ್ಯಾಂಗ್ ಕುಲ್ ದೇವಾಲಯ ಸಮೀಪ ಅನೇಕ ಗಣಪತಿ ವಿಗ್ರಹಗಳನ್ನು ಪತ್ತೆ ಹಚ್ಚಿರುವುದಾಗಿ ತಿಳಿದು ಬರುತ್ತದೆ. ಕಾಂಬೋಡಿಯಾದ ಗಣೇಶನನ್ನು “ಪ್ರಾ ಕೇನೆಸ್” ಎಂದು ಕರೆಯಲಾಗುತ್ತದೆ. ಇಲ್ಲಿನ ಸ್ಪೇಕ್ ಥ್ಮಾರ್ ಕೆಂಡಲ್‍ನಲ್ಲಿ ಅತ್ಯಂತ ಗಮನಾರ್ಹವಾದ ಗಣಪತಿ ವಿಗ್ರಹಗಳು ಸುಂದರವಾಗಿವೆಯಂತೆ “ಥುರೊಲ್ ಫಾಕ್ ಕಿಂ ಕಾಂಡ” ಎಂಬಲ್ಲಿ ಆಭರಣವಿಲ್ಲದ, ಯಜ್ಞೋಪವೀತ ಇಲ್ಲದ ವಿಗ್ರಹ ಸಿಕ್ಕಿದೆಯೆಂದು ಹೇಳಲಾಗಿದೆ.


ಇಂಡೋ ಚೀನಾದ ‘ಪೊ’ ನಗರದಲ್ಲಿ ಕೈಯಲ್ಲಿ ಗಿಡದ ಟೊಂಗೆ ಅಥವಾ ಹೂವಿನ ಗೊಂಚಲಿರುವ ಗಣೇಶ ಕಂಡು ಬಂದಿದ್ದಾನೆ. ಸೈಗಾನ್ ವಸ್ತು ಸಂಗ್ರಹಾಲಯದಲ್ಲಿ, ಕ್ವಾಂಗ್-ನಮ್ ಎಂಬಲ್ಲಿರುವ ಗಣೇಶನ ಮೂರ್ತಿಗಳು ಬೌದ್ದ ಶಿಲ್ಪಗಳ ಪ್ರಭಾವ ಹೊಂದಿವೆಯೆಂದು ಹೇಳಲಾಗಿದೆ. ಜಾವಾದಲ್ಲಿ ಒಂದು ಅಪೂರ್ಣವಾದ ಗಣೇಶ ಮೂರ್ತಿಯನ್ನು ವಿದ್ವಾಂಸರು ಅತ್ಯಂತ ಪ್ರಾಚೀನದೆಂದು ತಿಳಿಸಿರುತ್ತಾರೆ. ಡೀಂಗ್ ಬಯಲು ಪ್ರದೇಶದಲ್ಲಿ ದೊರೆತಿರುವ ಗಣೇಶ ವಿಗ್ರಹ ಅತ್ಯಂತ ಪುರಾತನದೆಂದು ಹೇಳಲಾಗಿದೆ. ಇಲ್ಲಿನ ಚಂಡಿ ಬನೋನ್, ಜಂಡಿ ಪರಿಕ್ಷಿತ, ಜಂಡಿ ಸಿಂಗನಾರಿ, ಗಡಿ ರೆಜೊ, ಬಾರಾ, ಜೆಂಬೆ, ಆರ್ಡಿಮೊಯೆಲ್ ಮುಂತಾದ ಕಡೆ ಗಣೇಶನ ವಿಗ್ರಹಗಳನ್ನು ಪತ್ತೆ ಮಾಡಿದ್ದಾರೆ. ಬಾರಾದ ಗಣೇಶನ ಹಿಂದೆ ರುದ್ರ ಭಯಂಕರ ಕಾಲ ಭೈರವನ ಚಿತ್ರವೂ ಕೆತ್ತಲ್ಪಟ್ಟಿದ್ದು ವಿಶೇಷವಾಗಿದೆಯಂತೆ.


ಚೀನಾದ ಕುಂಗ್ ಹ್ಸೀನ್ ಮುಂತಾದ ಅನೇಕ ಪ್ರದೇಶಗಳಲ್ಲಿ ಗಣೇಶ ಮೂರ್ತಿ ಕೆತ್ತಲಾಗಿದೆ. ಜಪಾನ್‍ನಲ್ಲಿ ಕ್ರಿ.ಶ 9ನೇ ಶತಮಾನದ ತರುವಾಯ ಗಣೇಶನ ಕಲ್ಪನೆ ಬಂದಿತೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಅನೇಕ ಕಡೆ ಗಣೇಶನ ವಿಗ್ರಹಗಳು ಕಂಡು ಬರುತ್ತವೆ. ಆಫ್ಘಾನಿಸ್ತಾನದ ಗಾಡೆಕಜ್, ಸಕರಧಾರ್ ಮುಂತಾದ ಕಡೆ ಗಣೇಶನನ್ನು ನೋಡಬಹುದಾಗಿದೆ. ನೇಪಾಳದ ಕಠ್ಮಂಡು, ಭಟಗಾಂವ್, ಶಂಕು, ಥಾಂಕೋಟ್ ಮುಂತಾದ ಕಡೆ ಗಣೇಶ ದೇವಾಲಯ ಕಂಡುಬರುತ್ತದೆ. ಹಾಗೇಯೆ ಟಿಬೆಟ್, ಮಧ್ಯ ಏಷ್ಯಾದ ಖೋಟಾನ್, ಮಂಗೋಲಿಯಾ ಮುಂತಾದ ದೇಶಗಳಲ್ಲಿ ಗಣೇಶ ಬಲು ಜನಪ್ರಿಯನಾಗಿರುವುದಾಗಿ ತಿಳಿದು ಬರುತ್ತದೆ. ಒಟ್ಟಾರೆ ಗಣಪತಿ ಆರಾಧನೆ ಒಂದಲ್ಲ ಒಂದು ಕಾರಣಕ್ಕೆ ಬೇರೆ ಬೇರೆ ದೇಶಗಳಲ್ಲಿ ಆಗಿರುವುದು ಹಾಗೂ ಆಗುತ್ತಿರುವುದು ಕಂಡು ಬರುತ್ತದೆ. ಗಣೇಶನು ಈ ರೀತಿ ವಿಶ್ವವ್ಯಾಪಿಯಾಗಿ ಪೂಜೆಗೊಳ್ಳುತ್ತಿದ್ದು ದೇವತೆಗಳಲ್ಲಿ ವಿಶೇಷ ಸ್ಥಾನ ಪಡೆದಿದ್ದಾನೆಂದು ಹೇಳಬಹುದು.




-ಡಾ. ಪ್ರಸನ್ನಕುಮಾರ ಐತಾಳ್,

ಸಂಸ್ಕೃತ ಉಪನ್ಯಾಸಕರು

ಎಸ್.ಡಿ.ಎಂ. ಕಾಲೇಜು, ಉಜಿರೆ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



1 Comments

Post a Comment

Post a Comment

Previous Post Next Post